Saturday 3 August 2013

ಒಡನಾಡಿ ಬಾಲಕರ ಜೀವನ ನಿಮಾ೵ಣ ಕೇಂದ್ರ



ನಿಲ್ಲದ ಮಹಿಳಾ ದೌರ್ಜನ್ಯಃ ಪ್ರಸಾದ್ ವಿಷಾದ
ಮೈಸೂರು, ಆ.3-ಭಾರತ ಎಲ್ಲಾ ವಿಷಯದಲ್ಲಿ ಪ್ರಗತಿ ಸಾಧಿಸುತ್ತಿದ್ದರೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ತೀರಾ ಹಿಂದುಳಿದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ ವಿಷಾದಿಸಿದ್ದಾರೆ.
ನಮ್ಮದು ಸಂಪದ್ಭರಿತ ದೇಶ, ವಿಶ್ವದಲ್ಲಿಯೇ ಕ್ಷಿಪ್ರಗತಿಯಲ್ಲಿ ಪ್ರಗತಿ ಸಾಧಿಸುತ್ತಿರುವ ಮುಂಚೂಣಿ ದೇಶವೆಂಬ ಹೆಮ್ಮೆಯ ಸಂಗತಿ ಒಂದೆಡೆ, ನಿರಂತರ ದೌರ್ಜನ್ಯಕ್ಕೊಳಗಾಗುತ್ತಿರುವ ಮಹಿಳೆಯರು,  ಅಪೌಕಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದು, ಹೆಚ್ಚುತ್ತಿರುವ ಬಡತನ ಮತ್ತೊಂದೆಡೆ. ಇದು ಏಕಕಾಲದಲ್ಲಿ ನಡೆಯುತ್ತಿರುವ ಬೆಳವಣಿಗೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮಂಡಕಳ್ಳಿಯ ಬಿಇಎಂಎಲ್ ಲೇಔಟ್ ಪಕ್ಕದಲ್ಲಿ ಒಡನಾಡಿ ಸಂಸ್ಥೆ ನಿರ್ಮಿಸಿರುವ  ಒಡಲು ಬಾಲಕರ ಜೀವನ ನಿರ್ಮಾಣ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು ಇನ್ನೂ ಅಸಹಾಯಕ ಸ್ಥಿತಿಯಲ್ಲಿರುವ ಮಹಿಳೆಯರು, ಮಕ್ಕಳಿಗಾಗಿ ಸ್ಟ್ಯಾನ್ಲಿ ಮತ್ತು ಪರಶು ನೇತೃತ್ವದ ಒಡನಾಡಿ ಕಳೆದ 25 ವರ್ಷಗಳಿಂದ  ಸೇವೆ ಸಲ್ಲಿಸುತ್ತಿರುವ ಮಾನವೀಯ ಚಿಂತನೆ ಇರುವ ಸಂಸ್ಥೆ ಎಂದು ಶ್ಲಾಘಿಸಿದರು.
ಸುದೀರ್ಘ ಅವಧಿಯಿಂದ ಅಸಹಾಯಕ ಮಹಿಳೆಯರು, ಮಕ್ಕಳ ಹಿತಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಈ ಕಟ್ಟಡ ನಿರ್ಮಿಸುವಾಗಲೂ ಬಡ ಮಕ್ಕಳಿಗಾಗಿ ಇಷ್ಟು ದೊಡ್ಡ ಜಾಗವೇಕೆ ಎಂದು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಲೇರಿದ್ದರು. ಈಗ ಆ ಸಮಸ್ಯೆ ಬಗೆಹರಿದಿದೆ. ಆದರೆ, ಒಳ್ಳೆಯ ಕೆಲಸ ಮಾಡಿದರೂ ಕೆಲವರು ಯಾವ ರೀತಿ ಅಡ್ಡಿಪಡಿಸುತ್ತಾರೆ ಎಂಬುದನ್ನು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಪ್ರಾಸ್ತಾವಿಕ ಮಾತಿನ ಸಂದರ್ಭದಲ್ಲಿ ವಿವರಿಸಿದರು.
ಸಹಕಾರ ಸಚಿವ ಎಚ್.ಎಸ್. ಮಹಾದೇವಪ್ರಸಾದ, ನಿವೃತ್ತ ನ್ಯಾಯಾಧೀಶ ಮೈಖೇಲ್ ಸಾಲ್ಡಾನಾ, ಇಂಗ್ಲೆಂಡಿನ ಅಡ್ವೆಂಚರ್ ಆಶ್ರಮದ ಪ್ರೀತಾ ವಿನ್ಸೆಂಟ್, ರೈಸ್ ಬಾಲ್ಡ್, ರೆವರೆಂಡ್ ಗೋಲ್ಡನ್ ವಿಲಿಯಂ ರಾಬಿನ್ಸನ್, ಕೆ.ಟಿ. ಶಿವಪ್ರಸಾದ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಒಡನಾಡಿ ಸಂಸ್ಥೆಯ ಮಕ್ಕಳು ಕಿರು ನಾಟಕವನ್ನು ಪ್ರದರ್ಶಿಸಿದರು.



No comments:

Post a Comment