Sunday, 4 September 2016

ಕವಿ ಚನ್ನವೀರ ಕಣವಿ ಅವರಿಗೆ ಮೈಸೂರು ದಸರಾ ಉತ್ಸವ ಸಮಿತಿಯಿಂದ ಆಮಂತ್ರಣ ಕನ್ನಡದ ಮೂಲಕ ವಿಶ್ವದರ್ಶನವಾಗಬೇಕು: ಕಣವಿ ಅಭಿಮತ

ಕವಿ ಚನ್ನವೀರ ಕಣವಿ ಅವರಿಗೆ ಮೈಸೂರು ದಸರಾ ಉತ್ಸವ ಸಮಿತಿಯಿಂದ ಆಮಂತ್ರಣ
ಕನ್ನಡದ ಮೂಲಕ ವಿಶ್ವದರ್ಶನವಾಗಬೇಕು: ಕಣವಿ ಅಭಿಮತ

ಮೈಸೂರು. ಸೆ. 4.ಧಾರವಾಡದ ಕಲ್ಯಾಣನಗರದಲ್ಲಿರುವ ಕವಿ ನಿವಾಸ ‘ಚೆಂಬೆಳಕು’ಗೆ ಭಾನುವಾರ ಬೆಳಿಗ್ಗೆ ಮೈಸೂರು ಮಹಪೌರರಾದ ಬಿ.ಎಲ್.ಭೈರಪ್ಪ, 2016ರ ದಸರಾ ಉತ್ಸವ ಸ್ವಾಗತ ಸಮಿತಿಯ ಸದಸ್ಯ ಕಾರ್ಯದರ್ಶಿಗಳೂ ಆಗಿರುವ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್, ಉಪವಿಶೇಷಾಧಿಕಾರಿಗಳಾಗಿರುವ ಅಪರ ಜಿಲ್ಲಾಧಿಕಾರಿ ಟಿ.ವೆಂಕಟೇಶ, ಕಾರ್ಯದರ್ಶಿ ಪುಟ್ಟಶೇಷಗಿರಿ, ಧಾರವಾಡ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಮತ್ತಿತರ ಗಣ್ಯರು ಭೇಟಿ ನೀಡಿ ಅಕ್ಟೋಬರ್ 1 ರಿಂದ ಆರಂಭವಾಗುವ ಈ ಬಾರಿಯ ದಸರಾ ಉದ್ಘಾಟನೆಗೆ ಆಹ್ವಾನ ನೀಡಿದರು. ಮೈಸೂರು ಪೇಟ, ಶಾಲು, ಶ್ರೀಗಂಧದ ಹಾರ, ಫಲ ಪುಷ್ಪ ನೀಡಿ ಸತ್ಕರಿಸಿ, ಆಮಂತ್ರಣ ನೀಡಲಾಯಿತು. 
ಗೌರವ ಸ್ವೀಕರಿಸಿ ಮಾತನಾಡಿದ ಕವಿ ಚನ್ನವೀರ ಕಣವಿ, ವಿಜಯನಗರದ  ಸ್ಥಾಪನೆಗೆ ಮುನ್ನುಡಿ ಬರೆದ ಗಂಡುಗಲಿ ಕುಮಾರರಾಮ ಆರಂಭಿಸಿದ  ದಸರಾ ಉತ್ಸವವನ್ನು ಮೈಸೂರು ಅರಸರು ಮುಂದುವರೆಸಿಕೊಂಡು ಬಂದರು.ಕರ್ನಾಟಕ ಏಕೀಕರಣಗೊಂಡ ಬಳಿಕವೂ ಸರಕಾರ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬಂದಿದೆ.ಸಾಂಸ್ಕøತಿಕ ಕೇಂದ್ರವಾಗಿರುವ ಮೈಸೂರು ಬೆಳಕಿನ ಕಿಂಡಿಯಾಗಿ ಕನ್ನಡದ ಮೂಲಕ ವಿಶ್ವದರ್ಶನ ಮಾಡಿಸುತ್ತಿದೆ.ರಾಜ್ಯ ಸರಕಾರ ಮೈಸೂರು ದಸರಾ ಉತ್ಸವ ಉದ್ಘಾಟನೆಯ ಗೌರವ ನೀಡಿರುವದಕ್ಕೆ ಆಭಾರಿಯಾಗಿದ್ದೇನೆ ಎಂದು ಸಾಹಿತಿ,ನಾಡೋಜ ಚನ್ನವೀರ ಕಣವಿ ಹೇಳಿದರು.
ಮೈಸೂರು,ಧಾರವಾಡ,ಮಂಗಳೂರು ನಗರಗಳು ಕರ್ನಾಟಕದ ಸಾಂಸ್ಕøತಿಕ ಕೇಂದ್ರಗಳಾಗಿವೆ.ಇವು ನವೋದಯ ಸಾಹಿತ್ಯದ ಕೇಂದ್ರಗಳೂ ಆಗಿದ್ದವು.ಮೈಸೂರು ದಸರಾ ಉತ್ಸವವು ಏಕೀಕೃತ ಕರ್ನಾಟಕದ ಉತ್ಸವವಾಗಿದೆ.ಬಂಗಾಲದಲ್ಲಿ ದುರ್ಗಾಪೂಜೆಯ ಮೂಲಕ ವಂಗಭಂಗ ಚಳವಳಿ,ಮಹಾರಾಷ್ಟ್ರದಲ್ಲಿ ಗಣೇಶ ಉತ್ಸವವನ್ನು ಬಾಲ ಗಂಗಾಧರ ತಿಲಕರು ದೇಶಪ್ರೇಮ ಬಿತ್ತಲು ಬಳಸಿಕೊಂಡರು.                                                            ಕರ್ನಾಟಕದಲ್ಲಿ ದಸರಾ ಹಬ್ಬವು ನಾಡಿನ ಅಖಂಡತೆ ಸಾರಲು ಪ್ರೇರಣೆಯಾಯಿತು. ವರಕವಿ ದ.ರಾ.ಬೇಂದ್ರೆ, ಬೆಟಗೇರಿ ಕೃಷ್ಣಶರ್ಮರು ಧಾರವಾಡದಲ್ಲಿ 1925 ರಿಂದಲೇ ನಾಡಹಬ್ಬ ಆಚರಿಸುವ ಪರಂಪರೆ ಆರಂಭಿಸಿದ್ದರು ಎಂದು ಹೇಳಿದರು.
ಅನೆಗೊಂದಿಯ ಗಂಡುಗಲಿ ಕುಮಾರರಾಮ ಆರಂಭಿಸಿದ ದಸರಾ ಹಬ್ಬದ ಪರಂಪರೆ ವಿಜಯನಗರದ ಅರಸರು,ಮೈಸೂರು ಒಡೆಯರ ಮೂಲಕ ನಿರಂತರವಾಗಿ ಸಾಗಿಕೊಂಡು ಬಂದಿದೆ.ಸ್ವಾತಂತ್ರ್ಯಾನಂತರ ಅಸ್ತಿತ್ವಕ್ಕೆ ಬಂದ ಸರಕಾರಗಳು ದಸರಾ ಆಚರಣೆ ಮುಂದುವರೆಸಿಕೊಂಡು ಬಂದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.ಜಗತ್ಪ್ರಸಿದ್ಧವಾಗಿರುವ ಮೈಸೂರು ದಸರೆಯ ಮೂಲಕ ವಿಶ್ವದರ್ಶನವಾಗುತ್ತಿದೆ.ಎಲ್ಲ ಜಿಲ್ಲೆಗಳಲ್ಲಿ ಇದೇ ಮಾದರಿಯ ಸಾಂಸ್ಕøತಿಕ ಉತ್ಸವಗಳು ನಡೆಯಬೇಕು.ಅವು ಜನತೆಯ ಹಬ್ಬಗಳಾಗಬೇಕು ಎಂದರು.

ಮೈಸೂರು ಮಹಾನಗರ ಪಾಲಿಕೆಯ ಮಹಾಪೌರ ಬಿ.ಎಲ್.ಭೈರಪ್ಪ ಮಾತನಾಡಿ, ತಾಯಿ ಚಾಮುಂಡೇಶ್ವರಿಯ ನಾಡಹಬ್ಬವನ್ನು ಕರ್ನಾಟಕ ಸರಕಾರ ಮುಂದುವರೆಸಿಕೊಂಡು ಬಂದಿದೆ. ಉನ್ನತಾಧಿಕಾರ ಸಮಿತಿಯು ದಸರಾ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕೆಂಬ ತೀರ್ಮಾನ ಕೈಗೊಳ್ಳವ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯವನವರಿಗೆ  ವಹಿಸಿತ್ತು. ಅವರ ಸೂಚನೆಯಂತೆ ಹಿರಿಯ ಕವಿ ಚನ್ನವೀರ ಕಣವಿ ಅವರನ್ನು ಧಾರವಾಡಕ್ಕೆ ಬಂದು  ದಸರಾ ಉದ್ಘಾಟನೆಗೆ ಆಹ್ವಾನಿಸುತ್ತಿದ್ದೇವೆ.ಕಣವಿಯವರ ಮೂಲಕ ಹೊಸ ಪೀಳಿಗೆಗೆ ಮಾರ್ಗದರ್ಶನ ಸಿಗಲಿದೆ ಎಂಬ ಆಶಾಭಾವ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾಧಿಕಾರಿ ,ಮೈಸೂರು ದಸರಾ ಉತ್ಸವ ಸ್ವಾಗತ ಸಮಿತಿಯ ಸದಸ್ಯ ಕಾರ್ಯದರ್ಶಿ ಡಿ.ರಂದೀಪ ಮಾತನಾಡಿ ಅಕ್ಟೋಬರ 1 ರಂದು ಬೆಳಿಗ್ಗೆ 11.40 ಕ್ಕೆ ಮೈಸೂರು ದಸರಾ ಉತ್ಸವ ಉದ್ಘಾಟನೆಯಾಗಲಿದೆ.11 ದಿನಗಳ ಈ ಹಬ್ಬವನ್ನು ಜನತೆಯ ದಸರೆಯಾಗಿ ಆಚರಿಸಲಿದ್ದೇವೆ ಎಂದರು.

ಧಾರವಾಡ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ಕನ್ನಡದ ಹೆಮ್ಮೆಯ ಪುತ್ರ ಕವಿ ಚನ್ನವೀರ ಕಣವಿಯವರನ್ನು ದಸರಾ ಉದ್ಘಾಟನೆಗಾಗಿ ಕರ್ನಾಟಕ ಸರಕಾರ ಆಮಂತ್ರಿಸಿರುವುದು .ಸಮಸ್ತ ಧಾರವಾಡ ಜನತೆಯಲ್ಲಿ ಸಂಭ್ರಮ ತಂದಿದೆ ಎಂದರು.
ಮೈಸೂರಿನ ಅಪರ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಧಾರವಾಡದ ಪ್ರಭಾರ ಅಪರ ಜಿಲ್ಲಾಧಿಕಾರಿ ರಮೇಶ ಕೋನರಡ್ಡಿ, ಧಾರವಾಡದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ರಂಗಣ್ಣವರ ಮತ್ತಿತರರು ಉಪಸ್ಥಿತರಿದ್ದರು.

ಸೆಪ್ಟಂಬರ್ 28 ರಂದು ಕವಿ ಚನ್ನವೀರ ಕಣವಿ ಅವರು ಪುತ್ರ ಶಿವಾನಂದ ಕಣವಿ ಅವರೊಂದಿಗೆ ರೈಲಿನ ಮೂಲಕ ಮೈಸೂರಿಗೆ ತೆರಳುವರು. ಅಕ್ಟೋಬರ್ 1 ರಂದು ಬೆಳಿಗ್ಗೆ 11.40 ಕ್ಕೆ ಚಾಮುಂಡಿ ಬೆಟ್ಟದಲ್ಲಿ 2016ರ ದಸರಾ ಉತ್ಸವಕ್ಕೆ ಚಾಲನೆ ನೀಡುವರು.



No comments:

Post a Comment