ದಸರಾ ಮಹೋತ್ಸವ -2016
ಗಜಪಯಣಕ್ಕೆ ವಿದ್ಯುಕ್ತ ಚಾಲನೆ
ಮೈಸೂರು,ಆ.21. ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಮೊದಲ ಸಾಂಸ್ಕøತಿಕ ಕಾರ್ಯಕ್ರಮ ಗಜಪಯಣದಲ್ಲಿ ಇಂದು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಮೊದಲನೇ ತಂಡದ ದಸರಾ ಆನೆಗಳನ್ನು ಸ್ವಾಗತಿಸಲಾಯಿತು..
ಹುಣಸೂರು ತಾಲ್ಲೂಕಿನ ಗುರುಪುರ ಪಂಚಾಯಿತಿಯ ನಾಗಪುರ ಗಿರಿಜನ ಆಶ್ರಮ ಶಾಲೆ ಆವರಣದಲ್ಲಿ ಅರ್ಜುನ ನೇತೃತ್ವದಲ್ಲಿ ಬಲರಾಮ, ಅಭಿಮನ್ಯು, ವಿಜಯ ಹಾಗೂ ಕಾವೇರಿ ಆನೆಗಳಿಗೆ ಲೋಕೋಪಯೋಗಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ಅವರು ಸಾಂಪ್ರದಾಯಕ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಗಜಪಯಣಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಚಾಲನೆ ನೀಡಿದ ನಂತರ ಮಾತನಾಡಿ ಮೈಸೂರಿನಲ್ಲಿ ಐತಿಹಾಸಿಕ ಹಾಗೂ ಪಾರಂಪರಿಕವಾಗಿ ನಾನೂರಕ್ಕೂ ಹೆಚ್ಚು ವರ್ಷಗಳಿಂದ ದಸರಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಮೊದಲನೇ ತಂಡದ ಆನೆಗಳನ್ನು ಮೈಸೂರು ಅರಮನೆಯೊಳಗೆ ಜಯಾ ಮಾರ್ತಾಂಡ ಧ್ವಾರದ ಮೂಲಕ ಸಾಂಪ್ರದಾಯಕವಾಗಿ ಆಗಸ್ಟ್ 26 ರಂದು ಬರಮಾಡಿಕೊಳ್ಳಲಾಗುವುದು. ಆನೆಗಳ ಜತೆಯಲ್ಲಿ ಆಗಮಿಸುವ ಮಾವುತರು, ಕಾವಾಡಿಗರು ಹಾಗೂ ಅವರ ಕುಟುಂಬದವರಿಗೆ ತಂಗಲು ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದರು.
ಯಾವುದೇ ಜಾತಿ, ಧರ್ಮದ ಚೌಕಟ್ಟಿಲ್ಲದೆ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರುವ ನಾಡಹಬ್ಬ ದಸರಾ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ತಿಳಿಸುವ ದಸರಾ ಸಾಮಾಜಿಕ ಹೊಣೆಗಾರಿಕೆಯನ್ನು ಸಹಾ ಅಭಿವ್ಯಕ್ತಿಗೊಳಿಸುತ್ತದೆ ಎಂದು ಹೇಳಿದರು. ದಸರಾವನ್ನು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಆಚರಿಲಾಗುತ್ತಿದ್ದು, ದಸರಾ ಅಂಗವಾಗಿ ಪಿರಿಯಾಪಟ್ಟಣ ತಾಲ್ಲೂಕಿನ ಬೈಲುಕುಪ್ಪೆ ಗ್ರಾಮದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣವಾದ ಗೋಲ್ಡನ್ ಟೆಂಪಲ್ ಆವರಣದಲ್ಲಿಯೂ ಸಹ ಎರಡು ದಿನಗಳ ಕಾಲ ಆಕರ್ಷಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ದಸರಾವನ್ನು ವಿಜೃಂಭಣೆಯಿಂದ ಆಚರಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ನಾಡ ಹಬ್ಬ ದಸರಾದಲ್ಲಿ ಹೆಚ್ಚಿನ ಜನರು ಭಾಗವಹಿಸಬೇಕು ಎಂದರು. ಇದೇ ಸಂದರ್ಭದಲಿ ಗಿರಿಜನ ಆಶ್ರಮ ಶಾಲೆ ಮಕ್ಕಳು, ಟಿಬೆಟಿಯನ್ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನೀಡಿದರು.
ಹುಣಸೂರು ಶಾಸಕರಾದ ಹೆಚ್.ವಿ.ಮಂಜುನಾಥ್ ಅವರು ಮಾತನಾಡಿ ದಸರಾ ಮಹೋತ್ಸವ ಈ ಬಾರಿಯ ಕೇವಲ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ದಸರಾವಾಗದೆ ಜನಸಾಮಾನ್ಯರ ದಸರಾವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮವಹಿಸಬೇಕು. ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಜನರು ಸಮಸ್ಯೆ ಎದುರಿಸುತ್ತಿದ್ದು, ಸಮಸ್ಯೆ ಮತ್ತುಷ್ಟು ಗಂಭೀರವಾಗದೆ ಜನರು ಶಾಂತಿ ನೆಮ್ಮದಿ ಬಾಳು ಬದುಕಲು ತಾಯಿ ಚಾಮುಂಡೇಶ್ವರಿ ಆರ್ಶೀವದಿಸಲಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಹೀಮಾ ಸುಲ್ತಾನ, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಲ್.ಭೈರಪ್ಪ, ಶಾಸಕರಾದ ವೆಂಕಟೇಶ್, ಜಿ.ಪಂ. ಸದಸ್ಯೆ ಪುಷ್ಪಾ ಅಮರ್‍ನಾಥ್, ಜಿಲ್ಲಾಧಿಖಾರಿ ಡಿ.ರಂದೀಪ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಮೇಶ್ವರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್, ಮುಡಾ ಆಯುಕ್ತರಾದ ಮಹೇಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಆಗಸ್ಟ್ 22 ರಂದು ಜನಸ್ಪಂದನ ಕಾರ್ಯಕ್ರಮ
ಮೈಸೂರು,ಆ.21.-ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ಹೆಚ್.ಎಸ್. ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 22 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ನಗರ ಸರ್ಕಾರಿ ಅತಿಥಿಗೃಹದ ಆವರಣದಲ್ಲಿ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ಬಗ್ಗೆ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರ್ಕಾರದ ವಿವಿಧ ಯೋಜನೆಗಳಲ್ಲಿ ಗುರುತಿಸಿರುವ ಅರ್ಹ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಮಂಜೂರಾತಿ ಪತ್ರಗಳನ್ನು ಸಹ ನೀಡಲಾಗುವುದು.
ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿಗಳೊಂದಿಗೆ ಹಾಗೂ ದಿನಾಂಕ 18-07-2016 ರಂದು ನಡೆಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತವಾಗಿದ್ದ ತಾಲ್ಲೂಕುವಾರು/ ಇಲಾಖಾವಾರು ಅರ್ಜಿಗಳ ವಿಚಾರದಲ್ಲಿ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿಯೊಂದಿಗೆ ಖುದ್ದು ಹಾಜರಾಗುವಂತೆ ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment