Friday, 9 September 2016

ಕನ್ನಡಿಗರ ಸಂಕಷ್ಟ ನ್ಯಾಯಾಲಯಕ್ಕೆ ತಿಳಿಸುವ ಸಮರ್ಥ ವಕೀಲರು ಬೇಕು-ದೇವೇಗೌಡ

ಕನ್ನಡಿಗರ ಸಂಕಷ್ಟ ನ್ಯಾಯಾಲಯಕ್ಕೆ ತಿಳಿಸುವ ಸಮರ್ಥ ವಕೀಲರು ಬೇಕು-ದೇವೇಗೌಡ
ಮಂಡ್ಯ ಯೂಥ್ ಗ್ರೂಪ್ ಸದಸ್ಯರೊಂದಿಗೆ ಮಾತುಕತೆ ವೇಳೆ ಅಭಿಪ್ರಾಯ
ದೆಹಲಿ: ಕಾವೇರಿ ವಿಚಾರದಲ್ಲಿ ಕರ್ನಾಟಕದ ವಕೀಲ ನಾರಿಮನ್ ತೋರಿದ ಮಾನವೀಯತೆಯನ್ನು ತಮಿಳುನಾಡು ದುರುಪಯೋಗ ಪಡಿಸಿಕೊಂಡಿದೆ. ಕಾವೇರಿ ವಿಚಾರದಲ್ಲಿ ದಶಕಗಳಿಂದ ಅನ್ಯಾಯ ಅನುಭವಿಸುತ್ತಾ ಬಂದಿರುವ ಕನ್ನಡಿಗರ ನೋವನ್ನು ಸುಪ್ರಿಂ ಕೋರ್ಟ್ ಮುಂದೆ ಸಮರ್ಥವಾಗಿ ಮಂಡಿಸುವ ವಕೀಲರು ಇಲ್ಲದಿರುವುದು ನಮ್ಮ ದುರಾದೃಷ್ಟ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾವೇರಿ ವಿವಾದ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್‍ಗೆ ಬೆಂಬಲವಾಗಿ ದೆಹಲಿಯ ಜಂತರ್‍ಮಂತರ್‍ನಲ್ಲಿ ಪ್ರತಿಭಟನಾ ಧರಣಿ ನಡೆಸಿದ ಮಂಡ್ಯ ಯೂಥ್ ಗ್ರೂಪ್‍ನ ಸದಸ್ಯರನ್ನು ಭೇಟಿ ಮಾಡಿದ ನಂತರ ದೇವೇಗೌಡರು ಈ ವಿಷಯ ಹೇಳಿದರು.
ಕರ್ನಾಟಕ ಕಾವೇರಿ ವಿಚಾರದಲ್ಲಿ ನಿರಂತರವಾಗಿ ಅನ್ಯಾಯ ಅನುಭವಿಸುತ್ತಾ ಬಂದಿದೆ. ಈಗಲೂ ಕೂಡ ನಾವು ತೋರಿದ ಮಾನವೀಯತೆಯನ್ನು ತಮಿಳುನಾಡು ದುರುಪಯೋಗ ಪಡಿಸಿಕೊಂಡು ರಾಜ್ಯದಿಂದ ಹೆಚ್ಚಿನ ನೀರು ಲಪಟಾಯಿಸುತ್ತಿದೆ. ತಮಿಳುನಾಡಿನಲ್ಲಿ ನೀರಿನ ಕೊರತೆ ಇರುವುದರಿಂದ ಮಾನವೀಯತೆ ಆಧಾರದ ಮೇಲೆ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುವುದಾಗಿ ನಾರಿಮನ್ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದರು. ಇದನ್ನು ಆಧಾರ ಮಾಡಿಕೊಂಡು ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ನ್ಯಾಯಾಲಯ ಆದೇಶಿಸಿದೆ. ಇದು ಕನ್ನಡಿಗರ ಗಾಯದ ಮೇಲೆ ಎಳೆದ ಬರೆ ಎಂದು ಅವರು ಬಣ್ಣಿಸಿದರು.
ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಕರ್ನಾಟಕ ಇಂತಹ ಪರಿಸ್ಥಿತಿ ಎದುರಿಸುತ್ತಿದೆ. ಕಳೆದ ಹತ್ತು ವರ್ಷದಿಂದ ಸರಾಸರಿ 300 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಟ್ಟಿದೆ. ಇಷ್ಟು ಪ್ರಮಾಣದಲ್ಲಿ ನೀರು ಬಿಟ್ಟರೂ ಸಂಕಷ್ಟ ಸಂದರ್ಭದಲ್ಲಿ ಕರ್ನಾಟಕದ ಪರ ನಿಲ್ಲುವ ಗುಣ ತಮಿಳುನಾಡಿಗೆ ಇಲ್ಲ.  ಪ್ರತಿ ಬಾರಿಯೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಕಾವೇರಿ ನದಿಗೆ ಹೆಚ್ಚಿನ ಅಚ್ಚು ಕಟ್ಟು ಪ್ರದೇಶ ಕರ್ನಾಟಕದಲ್ಲೇ ಇದೆ. ಮಂಡ್ಯ, ಮೈಸೂರು, ಕನಕಪುರ ಹಾಗೂ ಚೆನ್ನಪಟ್ಟಣ ಈ ನದಿ ನೀರಿನ ಮೇಲೆ ಕಷಿ ಹಾಗೂ ಕುಡಿಯುವ ನೀರಿಗಾಗಿ ಅವಲಂಭಿಸಿದ್ದಾರೆ. ತಮಿಳುನಾಡಿನ ಈ ವರ್ತನೆಯಿಂದ ಈ ಭಾಗದ ಜನರ ಜೀವನ ಸಂಕಷ್ಟಕ್ಕೆ ಸಿಲುಕಲಿದೆ.
ಈ ಭಾಗದ ಜನರ ಸಂಕಷ್ಟವನ್ನು ಸಮರ್ಥವಾಗಿ ನ್ಯಾಯಾಲಯಗಳ ಮುಂದೆ ಮಂಡಿಸುವ ಸಾಮಥ್ರ್ಯವುಳ್ಳ ವಕೀಲರು ಬೇಕಾಗಿದ್ದಾರೆ. ಇಲ್ಲದಿದ್ದರೆ ಕರ್ನಾಟಕದ ಹಿತವನ್ನು ಯಾರೂ ಕಾಪಾಡಲಾರರು ಎಂದು ಮಾಜಿ ಪ್ರಧಾನಿಗಳು ಬೇಸರ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಮಂಡ್ಯ ಯೂಥ್ ಗ್ರೂಪ್‍ನ ಅಧ್ಯಕ್ಷರಾದ ಡಾ. ಅನಿಲ್ ಆನಂದ್, ಉಪಾಧ್ಯಕ್ಷರಾದ ಎಚ್.ಎಸ್.ಮಂಜು, ಸದಸ್ಯರಾದ ದೇವೇಂದ್ರ ಗುಪ್ತ, ರುದ್ರಪ್ಪ ಎಸ್ ಹಾಗೂ ಡಾ. ಯಾಶೀಕಾ ಅನಿಲ್ ಮೊದಲಾದವರು ಇದ್ದರು.

No comments:

Post a Comment