Friday, 16 September 2016

ಕುಡಿತದ ಚಟದಿಂದ ಮುಕ್ತರಾಗಿ ನೆಮ್ಮದಿಯ ಜೀವನವನ್ನು ನಡೆಸಬೇಕು - ಎಲ್.ದೇವರಾಜ ಕರೆ

ಕುಡಿತದ ಚಟದಿಂದ ಮುಕ್ತರಾಗಿ ನೆಮ್ಮದಿಯ ಜೀವನವನ್ನು ನಡೆಸಬೇಕು - ಎಲ್.ದೇವರಾಜ ಕರೆ
ಕೃಷ್ಣರಾಜಪೇಟೆ. ಕುಡಿತದಿಂದ ಸಾಮಾಜಿಕವಾಗಿ ನಿಂದನೆಗೆ ಒಳಗಾಗಿ ಪಶ್ಚಾತ್ತಾಪ ಪಡಬೇಕಾಗುವುದಲ್ಲದೇ ಆರೋಗ್ಯವನ್ನೂ ಹಾಳು ಮಾಡಿಕೊಂಡು ನೆಮ್ಮದಿಯಿಲ್ಲದೇ ನರಳಬೇಕಾಗುತ್ತದೆ. ಆದ್ದರಿಂದ ಕುಡಿತದ ಚಟದಿಂದ ಮುಕ್ತರಾಗಿ ನೆಮ್ಮದಿಯ ಜೀವನವನ್ನು ನಡೆಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಲ್.ದೇವರಾಜ ಕರೆ ನೀಡಿದರು.
ಅವರು ತಾಲೂಕಿನ ಅಕ್ಕಿಹೆಬ್ಬಾಳಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಸಭಾಭವನದಲ್ಲಿ ಬೆಳ್ತಂಗಡಿಯ ಅಖಿಲಕರ್ನಾಟಕ ಜನಜಾಗೃತಿ ವೇದಿಕೆ, ಕರ್ನಾಟಕ ರಾಜ್ಯು ಮಧ್ಯಪಾನ ಸಂಯಮ ಮಂಡಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಮಧ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಕುಡಿತವೆಂಬ ಚಟಕ್ಕೆ ಒಮ್ಮೆ ದಾಸರಾದರೆ ಸಾಕು, ಕುಡಿತವೇ ನಮ್ಮ ಜೀವನಪರ್ಯಂತ ದಾಸನನ್ನಾಗಿ ಮಾಡಿಕೊಂಡು, ಕುಟುಂಬದ ನೆಮ್ಮದಿ, ಆರೋಗ್ಯ ಎಲ್ಲವನ್ನೂ ಹಾಳು ಮಾಡಿ ಅನಾರೋಗ್ಯದಿಂದ ನರಳುವಂತೆ ಮಾಡುತ್ತದೆ. ಆದ್ದರಿಂದ ಯುವಜನರು ಕುಡಿತ ಸೇರಿದಂತೆ ಯಾವುದೇ ದುಷ್ಛಟಗಳ ದಾಸರಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಂಡು, ಅನಾರೋಗ್ಯ ಪೀಡಿತರಾಗಿ ಅಕಾಲ ಮೃತ್ಯುವಿಗೆ ಬಲಿಯಾಗಬಾರದು ಎಂದು ದೇವರಾಜು ಕಿವಿಮಾತು ಹೇಳಿದರು.
ಯುವಜನರು ಶಿಸ್ತು, ಸಂಯಮ, ಪರೋಪಕಾರ ಸೇರಿದಂತೆ ಜೀವನದಲ್ಲಿ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿ ಜೀವನ ನಡೆಸಬೇಕು. ಸಮಾಜದ ನೆಮ್ಮದಿಯನ್ನು ಹಾಳು ಮಾಡುವ, ಯುವಜನರನ್ನು ಹಾದಿ ತಪ್ಪಿಸಿ ಸಮಾಜ ಕಂಟಕರನ್ನಾಗಿ ಮಾಡುವ ಯಾವುದೇ ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು. ಕುಡಿತಕ್ಕೆ ಬಲಿಯಾದ ವ್ಯಕ್ತಿಯನ್ನು ಸಮಾಜವು ನಿಂದಿಸಿ ಅವಹೇಳನ ಮಾಡುವುದಲ್ಲದೇ ಸಮಾಜಮುಖಿ ಕೆಲಸಗಳಿಗೆ ಭಾಗವಹಿಸದಂತೆ ತಿರಸ್ಕರಿಸುವುದರಿಂದ, ಅಂತಹ ಚಟಕ್ಕೆ ಬಲಿಯಾದ ವ್ಯಕ್ತಿಯು ಬದುಕಿದ್ದೂ ಸತ್ತಂತೆ. ಆದ್ದರಿಂದ ಗ್ರಾಮೀಣ ಭಾಗದ ಜನರು ಕುಡಿತ, ಡ್ರಗ್ಸ್ ಸೇರಿದಂತೆ ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗದೇ ಪೌಷ್ಠಿಕಾಂಶಗಳಿಂದ ಕೂಡಿರುವ ಆಹಾರ ಪದಾರ್ಥಗಳನ್ನು ಸೇವಿಸಿ, ಯೋಗಾಸನ, ಪ್ರಾಣಾಯಾಮ, ಆಟೋಟಗಳು ಸೇರಿದಂತೆ ಒಳ್ಳೆಯ ಮಾರ್ಗದಲ್ಲಿ ಸಾಗಿ ಸಮಾಜಕ್ಕೆ ಮಾದರಿಯಾಗಿ ಬದುಕು ನಡೆಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ವಿನುತ ಸುರೇಶ್, ಆಳಂಬಾಡಿಕಾವಲು ಗ್ರಾಮ ಪಂಚಾಯಿತಿ ಅದ್ಯಕ್ಷೆ ಕಲಾವತಿಶಿವಣ್ಣ,  ತಾಲೂಕು ಆರೋಗ್ಯಾಧಿಕಾರಿ ಡಾ.ಚಿಕ್ಕಾಡೆ ಅರವಿಂದ್,  ಮುಖಂಡರಾದ ಶ್ರೀನಿವಾಸ್, ನಾಗರಾಜು,  ಹಾಲು ಉತ್ಪಾಧಕರ ಸಂಘದ ಅಧ್ಯಕ್ಷ ಆನಂದ್ ಪಾಟೀಲ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸತೀಶ್‍ಹೊನ್ನವಳ್ಳಿ  ಮತ್ತಿತರರು ಭಾಗವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಸಂಯೋಜಕರಾದ ಲವಕುಮಾರ್ ಸ್ವಾಗತಿಸಿದರು, ಪತ್ರಕರ್ತ ಶ್ರೀನಿವಾಸ್ ವಂದಿಸಿ ಕಾರ್ಯಕ್ರಮ ನಡೆಸಿಕೊಟ್ಟರು.

No comments:

Post a Comment