Thursday, 22 September 2016

ಮನ್‍ಮುಲ್‍ನಿಂದ ಹೈನುಗಾರಿಗೆ ರೈತರಿಗೆ ಸಿಗುವಂತ ಸೌಲಭ್ಯಗಳನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು-ಉಮೇಶ್.

ಭಾರತೀನಗರ.ಸೆ.22-ಮಂಡ್ಯ ಮನ್‍ಮುಲ್‍ನಿಂದ ಹೈನುಗಾರಿಗೆ ರೈತರಿಗೆ ಸಿಗುವಂತ ಸೌಲಭ್ಯಗಳನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನ್‍ಮುಲ್ ನಿರ್ದೇಶಕ ಉಮೇಶ್ ತಿಳಿಸಿದರು.
 ಇಲ್ಲಿಗೆ ಸಮೀಪದ ಮುಟ್ಟನಹಳ್ಳಿ ಹಾಲು ಉತ್ಪಾಧಕರ ಸಹಕಾರ ಸಂಘದ ಸರ್ವಸದಸ್ಯರ ಮಹಾಸಭೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 ಹೈನುಗಾರಿಕೆ ರೈತರಿಗೋಸ್ಕರವೇ ಎಲ್‍ಐಸಿ ಜನಶ್ರೀಭೀಮಾ ಯೋಜನೆಯಡಿ 65 ರೂ ಹಣ ಪಾವತಿಸಿದಂತ ಸದಸ್ಯರಿಗೆ ಆಕಸ್ಮಿಕವಾಗಿ ಅಂಗವಿಕಲರಾದವರಿಗೆ 70 ಸಾವಿರ ರೂ, ಅಥವಾ ಮರಣ ಹೊಂದಿದವರಿಗೆ 30 ಸಾವಿರ ರೂ ನೀಡಲಾಗುವುದು. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
  ಸಂಘದ ಕಾರ್ಯದರ್ಶಿ ಎಂ.ಬಿ.ಬೋರಯ್ಯ ಮಾತನಾಡಿ, ಪ್ರಸಕ್ತ ವರ್ಷ 5.71 ಲಕ್ಷ  ಹಾಲುಉತ್ಪಾಧಕರಿಂದ ಸಂಘಕ್ಕೆ ಆದಾಯ ದೊರಕಿದೆ. ಮುಂದಿನ ದಿನಗಳಲ್ಲಿ ಮರಣ ಪರಿಹಾರ ನಿಧಿ ಸ್ಥಾಪನೆಯನ್ನು ಸಂಘದಿಂದ ಮಾಡಲಾಗುವುದು ಎಂದರು.
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಗಂಗಾಧರ್, ರೈತರು ಗುಣಮಟ್ಟದ ಹಾಲು ವಿತರಣೆ ಮಾಡಿದರೆ ಸಂಘವನ್ನು ಮತ್ತಷ್ಟು ಅಭಿವೃದ್ದಿ ಪಡಿಸಬಹುದೆಂದರು. 
 ಸಭೆಯಲ್ಲಿ 2015-16 ನೇ ಸಾಲಿನ ನಿವ್ವಳ ಲಾಭ ವಿಲಯವಾರಿ ಮಾಡುವುದರ ಬಗ್ಗೆ ಜಮಾಖರ್ಚು, ಲಾಭನಷ್ಟ, ಆಸ್ತಿ ಜವಬ್ದಾರಿ ವರದಿಯನ್ನು ಪರಿಶೀಲಿಸಿ ಅಂಗೀಕರಿಸಲಾಯಿತು.
  ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ಮಕ್ಕಳು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದಂತಹ ವಿದ್ಯಾರ್ಥಿಗಳಿಗೆ ಹಾಗೂ ಹಸು, ಎಮ್ಮೆಯಿಂದ ಹೆಚ್ಚುಹಾಲು ವಿತರಣೆ ಮಾಡಿದಂತಹ ರೈತರಿಗೆ ಬಹುಮಾನ ವಿತರಿಸಲಾಯಿತು.
       ಹಾಲಿನ ದರ ಏರಿಕೆಗೆ ಆಗ್ರಹ:-
 ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಬರದಿಂದಾಗಿ ಪಶುಸಾಕಾಣೆ ಮಾಡಲು ತೀವ್ರಕಷ್ಟಪಡುವಂತಾಗಿದೆ. ಇದರಿಂದ ಮನ್‍ಮುಲ್‍ನವರು ಸಹಕಾರ ಸಂಘಗಳಿಗೆ ಪೂರೈಸುವ ಹಾಲಿನ ದರವನ್ನು ಪ್ರತೀ ಲೀಟರ್‍ಗೆ 2 ರೂಪಾಯಿ ಏರಿಕೆ ಮಾಡುವಂತೆ ಸಭೆಯಲ್ಲಿ ಸರ್ವ ಸದಸ್ಯರು ಆಗ್ರಹಿಸಿದರು.
  ಪ್ರಸ್ತುತ ಸಂದರ್ಭ ಬರಗಾಲದಿಂದ ರೈತರು ತತ್ತರಿಸಿದ್ದು, ಮಳೆಯಿಲ್ಲದೆ ರೈತರು ಕಳೆದ ಅಂಗಾಮಿನಲ್ಲಿ ಯಾವುದೇ ಬೆಳೆಗಳನ್ನು ಹೊಡ್ಡಿಲ್ಲ. ಭತ್ತದ ಬೆಳೆಯನ್ನು ಬೆಳೆದಿದ್ದರೆ ಒಣ ಹುಲ್ಲು ಸಿಗುತ್ತಿತ್ತು. ಸಕಾಲದಲ್ಲಿ ಮಳೆ ಬಿದ್ದಿದ್ದರೆ ಹಸಿರು ಮೇವಿನ ಕೊರತೆಯೂ ನೀಗುತ್ತಿತ್ತು. ಆದರೆ ಮಳೆಯೇ ಇಲ್ಲದೆ ಪಶುಗಳ ಸಾಕಣೆ ಮಾಡುವಲ್ಲಿ ರೈತರು ಹರಸಾಹಸಪಡುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
  ಹೈನುಗಾರಿಕೆಯನ್ನೇ ನೆಚ್ಚಿಕೊಂಡಿರುವುದರಿಂದ ಕೌಟುಂಬಿಕ ನಿರ್ವಹಣೆಯೂ ಕಷ್ಟವಾಗಿದೆ. ಆದ್ದರಿಂದ ಬೆಲೆಏರಿಕೆಯಾದಲ್ಲಿ ಸ್ವಲ್ಪವಾದರೂ ಚೇತರಿಕೆ ಕಾಣಬಹುದೆಂದು ತಿಳಿಸಿದರು.
ಇದೇ ವೇಳೆ ನಾಡಗೌಡ ಎಂ.ವೀರಯ್ಯ, ಮನ್‍ಮುಲ್ ವಿಸ್ತರಣಾಧಿಕಾರಿ ಎ.ನಂಜುಂಡಸ್ವಾಮಿ, ಸಂಘದ ಉಪಾಧ್ಯಕ್ಷ ಕೆಂಪೇಗೌಡ, ಸದಸ್ಯರಾದ ಕಾಳೇಗೌಡ, ಎಂ.ಎಸ್.ಪುರುಸೋತ್ತಮ್, ರಾಮಲಿಂಗಯ್ಯ, ಎಂ.ಟಿ.ವೆಂಕಟೇಶ್, ಎಂ.ಸಿ.ಶಿವಲಿಂಗೇಗೌಡ, ಪುಟ್ಟಾಚಾರಿ, ಕಲಾವತಿ, ಗೌರಮ್ಮ,  ಹಾಲು ಪರೀಕ್ಷಕ ಎಂ.ಪಿ.ಅರ್ಕೇಶ್, ಎಂ.ಇ.ಜವರಯ್ಯ, ಎಂ.ಸುರೇಶ್ ಸೇರಿದಂತೆ ಇತರರಿದ್ದರು.

No comments:

Post a Comment