Thursday, 2 July 2015

“ರೈತರ ಆತ್ಮಹತ್ಯೆ ತಡೆಗಟ್ಟಲು ನಾವೇನು ಮಾಡಬೇಕು”

ಕೃಷಿ ಸಂಶೋಧನೆಗಳು ರೈತರಿಗೆ ಭರವಸೆ ಮೂಡಿಸುತ್ತಿಲ್ಲ, ಸರ್ಕಾರದ ಬ್ಯಾಂಕುಗಳು ಕೂಡ ಕೊಡುವ ಸಾಲಕ್ಕೆ ಮರುಪಾವತಿ ಆಗುವುದನ್ನೇ ಪ್ರಮುಖ ವಿಷಯವನ್ನಾಗಿ ಮಾಡುತ್ತಿವೆ, 25 ಬೆಳೆಗಳನ್ನು ಬೆಳೆಯುವ ರೈತರಿಗೆ ಅವರು ಹಾಕಿರುವ ವೆಚ್ಚವೂ ವಾಪಸ್ ಬರುತ್ತಿಲ್ಲ ಇವೆಲ್ಲವೂ ರೈತರ ಆತ್ಮಹತ್ಯೆಗಳಿವೆ ಕಾರಣಗಳಾಗುತ್ತಿವೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಪ್ರಕಾಶ್ ಕಮ್ಮರಡಿರವರು ವಿಷಾಧಿಸಿದರು.
ನಗರದ ಪುಸ್ತಕಮನೆ ಕರ್ನಾಟಕ ಜನಶಕ್ತಿ ಸಂಘಟನೆ ವತಿಯಿಂದ ನಡೆದ “ರೈತರ ಆತ್ಮಹತ್ಯೆ ತಡೆಗಟ್ಟಲು ನಾವೇನು ಮಾಡಬೇಕು” ವಿಷಯದ ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರೈತರ ಬೆವರಿನ ಪಾಲನ್ನು ದೋಚುವ, ಲೂಟಿ ಹೊಡೆಯುವ ಬಂಡವಾಳಶಾಹಿಯ ವಂಚನೆಯ ಜಾಲಾವಿರುವುದೇ ರೈತರನ್ನು ಆತ್ಮಹತ್ಯೆಗಳತ್ತ ದೂಡುತ್ತಿದೆ ಎಂದರು.
ಇಂದು ದೇಶದಲ್ಲಿ 25ಕೋಟಿ ಟನ್‍ನಷ್ಟು ಆಹಾರ ದಾಸ್ತಾನು ಇದೆ, ಹಾಲು ಇದೆ, ತರಕಾರಿಗಳಿವೆ, ಸಕ್ಕರೆ ಇದೆ. ಕರ್ನಾಟಕ ರಾಜ್ಯದಲ್ಲಿ ಒಂದರಲ್ಲೆ ಪ್ರತಿಯೊಬ್ಬರಿಗೂ ದಿನನಿತ್ಯ 250 ಗ್ರಾಂ ತಿನ್ನುವಷ್ಟು ತರಕಾರಿಗಳನ್ನು ಬೆಳೆಯುತ್ತಿದ್ದೇವೆ. ಇಷ್ಟೆಲ್ಲಾ ಬೆಳೆದ ರೈತರಿಗೆ ನ್ಯಾಯಯುತ ಬೆಲೆ ನೀಡದ ಕಾರಣ ಬೆಳೆದ ವೆಚ್ಚ ಕೂಡ ಸಿಗುದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರಿಗೆ 1 ಕೆ.ಜಿ ಟಮೋಟಗೆ ಕೇವಲ 2ರೂ ಸಿಗುತ್ತಿದೆ. ಆದರೆ ಗ್ರಾಹಕರಿಗೆ 10-15ರೂಗೆ ಮೇಲ್ಪಟ್ಟು ಮಧ್ಯವರ್ತಿಗಳಿಂದ, ದೊಡ್ಡ ಮಾಲ್‍ಗಳಿಂದ ಕೊಳ್ಳಬೇಕಿದೆ. ಸೋನಾಮಸೂರಿ ಅಕ್ಕಿ ಕೆ.ಜಿಗೆ 10ರೂ ಮಾತ್ರ ರೈತರಿಗೆ ಸಿಗುತ್ತಿದೆ. ಗ್ರಾಹಕರು 40ರೂ ತೆರಬೇಕಿದೆ. ಅಂದರೆ ಗ್ರಾಹಕ ನೀಡುವ ಶೇ.15ಕ್ಕಿಂತ ಕಡಿಮೆ ಬೆಲೆ ಮಾತ್ರ ರೈತರನ್ನು ತಲುಪುತ್ತಿದೆ, ಉಳಿದದ್ದು ಸರ್ಕಾರಗಳು, ಬಂಡವಾಳಶಾಹಿಗಳು ಮತ್ತು ಮಧ್ಯವರ್ತಿಗಳು ರೈತರಿಂದ ಲೂಟಿ ಮಾಡುತ್ತಿವೆ. ಇದನ್ನು ವಂಚನೆ, ಭ್ರಷ್ಟಾಚಾರ ಎನ್ನಬಹುದು ಎಂದರು.
ರೈತರು ಹೊಂದಿರುವ ಭೂಮಿಯ ಆಸ್ತಿಯ ದೃಷ್ಟಿಯಿಂದ ಬಹಳ ರೈತರು ಶ್ರೀಮಂತರಾಗಿದ್ದರೆ ಅದರಿಂದ ಬರುವ ಆದಾಯದಲ್ಲಿ ಬಡಪಾಯಿಗಳಾಗಿದ್ದಾರೆ. ಆಸ್ತಿಯ ಮೌಲ್ಯ ಮತ್ತು ಆಸ್ತಿಯಿಂದ ಬರುವ ಆದಾಯ ನಡುವಿನ ವ್ಯತ್ಯಾಸ ಅಗಾಧವಾಗಿರುವುದು ರೈತರನ್ನು ಸಂಕಷ್ಟದಲ್ಲಿ ಸಿಲುಕಿಸಿದೆ ಎಂದು ತಿಳಿಸಿದರು.
ಇಂದು ಬಹಳಷ್ಟು ಯೋಜನೆಗಳು ರೈತರಿಗೆ ತಲುಪುತ್ತಿಲ್ಲ. ಸಾಲ ನೀಡುವ ಮತ್ತು ವಸೂಲಿ ಮಾಡುವ ಕ್ರಮವು ಅವೈಜ್ಞಾನಿಕವಾಗಿದೆ. ಇಂತಹ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳಿಗೆ ಉತ್ಪದನಾ ವೆಚ್ಚ ಮತ್ತು ಬರುವ ಆದಾಯವನ್ನು ಲೆಕ್ಕ ಹಾಕಿ ವೈಜ್ಞಾನಿಕ ವಿಧಾನವನ್ನು ಅಳವಡಿಸಬೇಕಿದೆ. ರೈತರು ತಮ್ಮ ಉತ್ಪನ್ನಗಳಿಗೆ ರೈತರೇ ಬೆಲೆ ನಿಗದಿ ಮಾಡಬೇಕು.  ಮಾರುಕಟ್ಟೆಯಲ್ಲಿ ಗ್ರಾಹಕರು ಕೊಳ್ಳುವ ಬೆಲೆಯಲ್ಲಿ ಕನಿಷ್ಟ 50 ಭಾಗ ರೈತರಿಗೆ ಸಿಗಬೇಕು. ಭ್ರಷ್ಟತೆಯಿಂದ ಹೊರತಾದ ಮಾರುಕಟ್ಟೆ ವ್ಯವಸ್ಥೆ ಸೃಷ್ಟಿಸಬೇಕಿದೆ. ಆಗ ರೈತರ ಪರಿಸ್ಥಿತಿ ಖಂಡಿತಾ ಸುಧಾರಿಸುತ್ತದೆ ಎಂದರು.
ಹಾಗೆಯೇ ರೈತರು ಕೂಡ ಒಂದೇ ಬೆಳೆಗೆ ಅವಲಂಬಿತರಾಗದೇ ಬಹುಬೆಲೆ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ರಾಗಿ ಗೋಧಿಗಳು ಉತ್ತಮ ಆಹಾರಗಳಾಗಿದ್ದು, ಸಿಹಿ ಧಾನ್ಯಗಳೆಂದು ಕರೆಯಲ್ಪಡುತ್ತವೆ ಇವಕ್ಕೆ ತುಂಬಾ ಬೇಡಿಕೆಯಿದ್ದು ಇವುಗಳ ಉತ್ಪಾದನಾ ವೆಚ್ಚ ಕೂಡ ಕಡಿಮೆ ಇದೆ ಇವುಗಳತ್ತ ರೈತರು ಗಮನಹರಿಸಬೇಕು ಎಂದು ಸಲಹೆ ನೀಡಿದರು.
ನಮ್ಮ ಯೋಚನೆಯಿಂದ ಹೊರಬಂದು, ಯೋಚನೆಯನ್ನು ವಿಸ್ತಾರಗೊಳಿಸಿ ಆಲೋಚಿಸಬೇಕಿದೆ. ರೈತರಿಗೆ ಈ ಸ್ಥಿತಿ ಬರುಲು ಕಾರಣವಾದ ಜಾಗತೀಕರಣದ ಡಬ್ಲೂಟಿಒ, ಗ್ಯಾಟ್ ಒಪ್ಪಂದಗಳಿಂದ ಹೊರಬರಲು ಒತ್ತಡ ತರಬೇಕಿದೆ. ರಾಜಕೀಯ, ಚುನಾವಣಾ ಒತ್ತಡಗಳು ಬರಬೇಕು, ಹೋರಾಟಗಳು ಪರಿಣಾಮಕಾರಿಯಾಗಿ ಬೆಳೆಯಬೇಕಿದೆ ಎಂದರು.
ರೈತರಿಗೆ ನ್ಯಾಯಯುತ ಬೆಲೆ ಹಕ್ಕು, ಲಾಭದ ಬೆಲೆ ಹಕ್ಕು ಇರಬೇಕು. ಇದಕ್ಕಾಗಿ ಶಾಸನ ಆಗಬೇಕೆಂದು ಬೆಲೆ ಆಯೋಗದಿಂದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಸರ್ಕಾರ ಬಂಡವಾಳಶಾಹಿಗಳಿಗೆ ಕೋಟ್ಯಾಂತರ ರೂ ಸಬ್ಸಿಡಿ ನೀಡುತ್ತಿದೆ, ರೈತರ ಬೆಲೆಗಳಿಗೆ ಉತ್ತಮ ಬೆಲೆ ನೀಡುತ್ತಿಲ್ಲ, ಈ ತಾರತಮ್ಯ ನೀತಿಯನ್ನು ಹೋಗಲಾಡಿಸಬೇಕು ಎಂದು ರೈತ ಕಿರಂಗೂರು ಪಾಪು ಪ್ರಶ್ನಿಸಿದರು.
ಸರ್ಕಾರಗಳು ಹೆಚ್ಚು ಖರೀದಿಸಿ ಪಡಿತರ ವ್ಯವಸ್ಥೆಯ ಮೂಲಕ ವಿತರಿಸುವ ಮಾರುವ ವ್ಯವಸ್ಥೆ ಮಾಡಬೇಕಿದೆ. ಬೆಳೆ ವೈಫಲ್ಯಕ್ಕೆ, ಬೀಜ ವೈಫಲ್ಯಕ್ಕೆ ರೈತರು ದೂರುಗಳನ್ನು ನೀಡುತ್ತಿಲ್ಲ, ಶೇ.1ರಷ್ಟು ದೂರುಗಳನ್ನು ಮಾತ್ರ ರೈತರು ನೀಡುತ್ತಿದ್ದಾರೆ. ಆದರೆ ಆ ದೂರುಗಳಲ್ಲೂ ಬಹಳಷ್ಟು ಇನ್ನು ವಿಚಾರಣೆಗೆ ಬರದೆ ಹಾಗೆಯೇ ಉಳಿದಿರುವುದು ದುರಂತ ಹಾಗಾಗಿ ಈ ವಿಚಾರದಲ್ಲಿ ಬೇಗ ವಿಚಾರಣೆಗೆ ಬರುವ ಹಾಗೆ ಮಾಡಲು ವಿಶೇಷ ಕಾರಿಡಾರ್ ವ್ಯವಸ್ಥೆ ಮಾಡಲು ಒತ್ತಾಯಿಸಬೇಕೆಂದು ಎಂದು ವಕೀಲರಾದ ಬಿ.ಟಿ ವಿಶ್ವನಾಥ್ ತಿಳಿಸಿದರು.
ರೈತ ಮುಖಂಡರಾದ ಕೆ.ಬೋರಯ್ಯನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಟಿ ವೀರಪ್ಪ ಮಾತನಾಡಿದರು. ಕರ್ನಾಟಕ ಜನಶಕ್ತಿಯ ಬಿ.ಕೃಷ್ಣಪ್ರಕಾಶ್, ರೂಪ.ಕೆ.ಮತ್ತೀಕೆರೆ, ದಸಂಸದ ಗುರುಪ್ರಸಾದ್ ಕೆರಗೋಡು, ಚಿಂತಕರಾದ ಹೆಚ್.ಎಲ್ ಕೇಶವಮೂರ್ತಿ, ರೈತ ಮುಖಂಡರಾದ ಮುದ್ದೇಗೌಡ, ಉಪನ್ಯಾಸಕರಾದ ವನಂ ಶಿವರಾಂ ಮತ್ತಿತರರು ಭಾಗವಹಿಸಿದ್ದರು.

No comments:

Post a Comment