Sunday, 12 July 2015

ದೇ.ಜಗೌ ಕನ್ನಡದ ಕಟ್ಟಾಳು: ಮುಖ್ಯಮಂತ್ರಿ ಸಿದ್ದರಾಮಯ್ಯ

ದೇ.ಜಗೌ ಕನ್ನಡದ ಕಟ್ಟಾಳು: ಮುಖ್ಯಮಂತ್ರಿ ಸಿದ್ದರಾಮಯ್ಯ
    ಮೈಸೂರು,ಜು.12.ಹಿರಿಯ ಸಾಹಿತಿ ನಡೋಜ ಡಾ|| ದೇ.ಜವರೇಗೌಡ ಅವರು ಕನ್ನಡದ  ಕಟ್ಟಾಳು ಎಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಹೇಳಿದರು.
      ಅವರು ಇಂದು ಮೈಸೂರು ನಗರದ ಕಲಾಮಂದಿರದಲ್ಲಿ ಡಾ.ದೇಜಗೌ ಅಭಿನಂದನ ಸಮಿತಿಯವರು ಅಯೋಜಿಸಿದ್ದ ಶತಮಾನದ ಹೊಸ್ತಿಲಿನಲ್ಲಿ ನಡೋಜ ದೇಜಗೌ ಅವರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
       ದೇ.ಜ.ಗೌ ಅವರು ತಮ್ಮ ಜೀವನದ ಉದ್ದಕ್ಕೂ ಕನ್ನಡ ಸಾಹಿತ್ಯ, ಕನ್ನಡದ ಬೆಳವಣಿಗೆಗೆ, ಕನ್ನಡವನ್ನು ಆಡಳಿತ ಭಾಷೆಯಾಗಿ ಅನುಷ್ಠಾನ, ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನ ಕೊಡಿಸಲು ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡ ಭಾಷೆಗೆ ಅವರು ಸಲ್ಲಿಸಿರುವ ಸೇವೆಗೆ ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕದ 6 ಕೋಟಿ ಜನರ ಪರವಾಗಿ ಗೌರವಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ  ಎಂದರು.
     ಮನುಷ್ಯ ಎಷ್ಟು ವರ್ಷಗಳ ಕಾಲ ಬದುಕುತ್ತಾನೆ ಎಂಬುವುದು ಮುಖ್ಯವಲ್ಲ. ಅವನು ಆರೋಗ್ಯವಾಗಿ ಕ್ರಿಯಾಶೀಲರಾಗಿ, ತನ್ನ ಮಾತೃಭೂಮಿ, ಭಾಷೆಗೆ ಸಲ್ಲಿಸುವ ಸೇವೆ ಮುಖ್ಯ. ದೇ.ಜವರೇಗೌಡ ಅವರ ಜೀವನ ಇಂದಿನ ಯುವಜನರಿಗೆ ಮಾದರಿಯಾಗಲಿ ಎಂದರು.
      ದೇಜಗೌ ಅವರು ಬಡತನದಲ್ಲೇ ಬೆಳೆದವರು, ಅವರ ತಂದೆ ತಾಯಿ ವಿದ್ಯಾಭ್ಯಾಸವನ್ನು ಪ್ರೋತ್ಸಹಿಸದೆ ಕುರಿ ಕಾಯುವಂತೆ ತಿಳಿಸಿದರು. ಆದರೂ ಕಷ್ಟದಲ್ಲೇ ವಿದ್ಯಾಭ್ಯಾಸ ನಡೆಸಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ ಅವರ ಸಾಧನೆ ಎಲ್ಲರಿಗೂ ಮಾದರಿ. ಮಾನಸಗಂಗೋತ್ರಿಯಲ್ಲಿ ಕನ್ನಡ ಅಧ್ಯಯಾನ ಸಂಸ್ಥೆ ಬೆಳವಣಿಗೆಯಲ್ಲಿಯೂ ಇವರ ಶ್ರಮವಿದೆ ಎಂದರು.
     ಸಾಮಾಜದಲ್ಲಿರುವ ಮೂಡನಂಬಿಕೆಗಳು ದೂರವಾಗಬೇಕು. ಶ್ರಮದಿಂದ ಮಾತ್ರ ಸಾಧನೆ ಸಾಧ್ಯ. ಯವುದೇ ಹಣೆಬರಹ, ಪಂಚಾಂಗ ಹಾಗೂ ಜೋತಿಷ್ಯದಿಂದ ಸಾಧನೆಯ ಮೆಟ್ಟಿಲು ಹತ್ತಲು ಸಾಧ್ಯವಿಲ್ಲ. ವಿಜೃಂಭಣೆಯಿಂದ ಮಕ್ಕಳ ಮದುವೆ ಮಾಡಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವವರಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ತಿಳಿಸಿದಂತಹ ಸರಳ ವಿವಾಹ, ಮಂತ್ರ ಮಾಂಗಲ್ಯ ಪದ್ಧತಿಯನ್ನು ಅನುಸರಿಸುವುದು ಸೂಕ್ತ ಎಂದರು.
       ಮೈಸೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿ.ಎಫ್.ಟಿ.ಆರ್.ಐ ಸಂಸ್ಥೆಯಲ್ಲಿ ಕನ್ನಡದ ಜನರಿಗೆ ಅಲ್ಲಿಯ ನಿರ್ದೇಶಕರು ತೊಂದರೆ ನೀಡುತ್ತಿರುವುದಾಗಿ ಹಾಗೂ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದೇ.ಜಗೌ ಅವರು ಮನವಿ ಸಲ್ಲಿಸಿದ್ದಾರೆ. ಸಿ.ಎಫ್.ಟಿ.ಆರ್.ಐ  ಕೇಂದ್ರ ಸರ್ಕಾರದ ಸಂಸ್ಥೆಯಾಗಿದ್ದು, ಈ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
     ಕನ್ನಡ ಭಾಷೆ ಹಾಗೂ ರಾಜ್ಯದ ಅಭಿವೃದ್ಧಿಯ ಕೆಲಸಕ್ಕೆ ಸರ್ಕಾರ ಸದಾ ಸಿದ್ಧವಿದ್ದು, ಈ ಬಗ್ಗೆ ನೀಡುವ ಸಲಹೆಗಳನ್ನು ಸ್ವೀಕರಿಸಲು ಸಿದ್ಧವಿರುವುದಾಗಿ ತಿಳಿಸಿದರು.
        ಕಾರ್ಯಕ್ರಮದಲ್ಲಿ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವೆ ಉಮಾಶ್ರೀ, ಶಾಸಕ ವಾಸು, ಸೋಮಶೇಖರ್, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ರಂಗಪ್ಪ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

No comments:

Post a Comment