Sunday, 12 July 2015

ಕೆ.ಆರ್.ಪೇಟೆ,ಜು.12- ಕಳೆದ 17 ವರ್ಷಗಳ ಕಾನೂನು ಹೋರಾಟ ನಡೆಸಿ ಹರೀನಹಳ್ಳಿ ಗ್ರಾಮದ ವ್ಯಾಪ್ತಿಯ ಪಹಣಿಯನ್ನು ಸರಿಮಾಡಿಸಿಕೊಂಡಿದ್ದ ರೈತನ ಪಹಣಿಯನ್ನು ದುರುದ್ಧೇಶದಿಂದ ಮತ್ತೆ ದೋಷಪೂರಿತಗೊಳಿಸಿರುವ ಕಂದಾಯ ಇಲಾಖೆಯ ಅಧಿಕಾರಿಗಳ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ರೈತ ಹೆಚ್.ಬಿ.ಮಂಜುನಾಥ್ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಪಟ್ಟಣದ ಬಸ್ ನಿಲ್ದಾಣದ ಎದುರಿನ ಮುಖ್ಯ ರಸ್ತೆಯ ಬದಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ತಾಲೂಕಿನ ಅಗ್ರಹಾರಬಾಚಹಳ್ಳಿ ವೃತ್ತಕ್ಕೆ ಸೇರಿದ ಹರೀನಹಳ್ಳಿ ಗ್ರಾಮದ ವ್ಯಾಪ್ತಿಯ ಸರ್ವೇ ನಂ8/5ರ ಪೈಕಿ 25 ಗುಂಟೆ ಜಮೀನನ್ನು ಬೇರೆಯವರಿಂದ ಕ್ರಯಕ್ಕೆ ಪಡೆದಿದ್ದರೂ ಸಹ  ಹೇಮಾವತಿ ಜಲಾಶಯ ಯೋಜನೆಯ ಕಾಲುವೆಗೆ ಸೇರಿದೆ ಎಂದು ದಾಖಲೆ ಮಾಡಿದ್ದರ ವಿರುದ್ಧ ನ್ಯಾಯಾಲಯಕ್ಕೆ  ಹೋದಾಗ ಕಂದಾಯ ಇಲಾಖೆಯ ಆದೇಶದ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ 17 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿ ಪಹಣಿಯಿಂದ ಹೇಮಾವತಿ ಜಲಾಶಯದ ಕಾಲುವೆಗೆ ಸೇರಿದೆ ಎಂಬ ಅಂಶವನ್ನು ತೆಗೆದುಹಾಕಿ ರೈತನ ಹೆಸರಿಗೆ ಪಹಣಿ ಮತ್ತು ಖಾತೆ ಮಾಡಲಾಡಲಾಗಿತ್ತು. ಆದರೆ ಕಂದಾಯ ಇಲಾಖೆ ಅಧಿಕಾರಿಗಳ ಬೇಜವಬ್ದಾರಿಯಿಂದ ಮತ್ತೆ ಪಹಣಿಯಲ್ಲಿ ಸದರಿ ಸರ್ವೆ ನಂಬರಿನ ವಿಸ್ತೀರ್ಣದ ಭೂಮಿಯು ನೀರಾವರಿ ಇಲಾಖೆಗೆ ಸೇರಿದ ಎಂದು ದಾಖಲೆಯನ್ನು ಬದಲಾಯಿಸಲಾಗಿದೆ. ಇದು ಕಂದಾಯ ಇಲಾಖೆಯ ಬೇಜವಾಬ್ಧಾರಿತನವನ್ನು ಖಂಡಿಸಿರುವ ಮಂಜುನಾಥ ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಕಂದಾಯ ಇಲಾಖೆಯ ಬೇಜವಾಬ್ಧಾರಿತನದಿಂದಾಗಿ ಮತ್ತೆ ಕೋರ್ಟಿಗೆ ಅಲೆಬೇಕಾದ ಪರಿಸ್ಥಿತಿ ಎದುರಾಗಿದೆ ಹಾಗಾಗಿ ತಕ್ಷಣ ಜಿಲ್ಲಾಧಿಕಾರಿಗಳು ತಮ್ಮ ಭೂಮಿ ಬಾಗಿಲು ಹತ್ತಬೇಕಾಗಿದೆ. ಮಾನ್ಯ ಉಪವಿಭಾಗಾಧಿಕಾರಿಯವರು ಈಬಗ್ಗೆ ಪರಿಶೀಲನೆ ನಡೆಸಿ ತಮ್ಮ ತಾಯಿ ಅಕ್ಕಮ್ಮ ಕೋಂ ಬೀರಯ್ಯ ಹೆಸರಿನಲ್ಲಿ ಉಂಟಾಗಿರುವ ಪಹಣಿಯ ದೋಶವನ್ನು ಸರಿಪಡಿಸಿಕೊಡಬೇಕು ಎಂದು ಮನವಿ ಮಾಡಿದರು.
ಈ ಧರಣಿಗೆ ಪುರಸಭಾ ಸದಸ್ಯ ಹೆಚ್.ಆರ್.ಲೋಕೇಶ್ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಹಾಗೂ ಆಟೋ ಚಾಲಕರು  ಭಾಗವಹಿಸಿ ತಮ್ಮ ಬೆಂಬಲ ಸೂಚಿಸದರು.

ಕೆ.ಆರ್.ಪೇಟೆ,ಜು.12.ಆರ್.ಎಸ್.ವ್ಯಾಪ್ತಿಯ ರೈತರಿಗೆ ಹರಿಸುತ್ತಿರುವ ಮಾದರಿಯಲ್ಲಿ ಹೇಮಾವತಿ ಜಲಾಶಯ ವ್ಯಾಪ್ತಿಗೆ ಒಳಪಡುವ ತಾಲೂಕಿನ ಕಾಲುವೆಗಳಲ್ಲಿಯೂ ನೀರು ಹರಿಸಬೇಕು.  ಇದರಿಂದ  ಬೋರ್‍ವೆಲ್‍ಗಳಲ್ಲಿ ಅಂತರ್ಜಲ ಕುಸಿಯದಂತೆ,  ರೈತರ ಬೆಳೆಗಳು ಒಣಗದಂತೆ ತಡೆಯಬೇಕು.  ಗ್ರಾಮೀಣ ಭಾಗದಲ್ಲಿ ತಲೆ ಎತ್ತಿರುವ ರಿಕ್ರಿಯೇಷನ್ ಕ್ಲಬ್‍ಗಳನ್ನು ಬಂದ್ ಮಾಡಿಸಬೇಕು. ಅನಧಿಕೃತ ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ಮುಚ್ಚಬೇಕು. ಕಳಪೆ ಬಿತ್ತನೆ ಬೀಜ ಮಾರಾಟ ತಡೆಗಟ್ಟಬೇಕು. ಪ್ರತಿ 3ತಿಂಗಳಿಗೊಮ್ಮೆ ರೈತ ಕುಂದುಕೊರತೆ ಸಭೆ ನಡೆಸಬೇಕು.........ಇತ್ಯಾದಿ ಮನವಿಗಳನ್ನು ಮಾಡಿ ಇದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಂಡರೆ ರೈತರ ಆತ್ಮಹತ್ಯೆಗಳನ್ನು ತಡೆಹಿಡಿದು ಅವರ ಬದುಕು ಬಂಗಾರವಾಗಿಸಬಹುದು ಎಂದು ರೈತರು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಜಿಲ್ಲಾಧಿಕಾರಿ ಡಾ.ಅಜಯ್‍ನಾಗಭೂಷಣ್,  ಶಾಸಕ ಕೆ.ಸಿ.ನಾರಾಯಣಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್.ಜಿ.ಬೊರಸೆ, ಉಪವಿಭಾಗಾಧಿಕಾರಿ ಡಾ.ಜೆಚ್.ಎಲ್.ನಾಗರಾಜು ಅವರ  ಸಮ್ಮುಖದಲ್ಲಿ ಪಟ್ಟಣದ ಮಿನಿವಿಧಾನಸೌಧದಲ್ಲಿ ನಡೆದ ರೈತರ ಕುಂದು-ಕೊರತೆ ಸಭೆಯಲ್ಲಿ ರೈತರು ಮಾಡಿದ ಮನವಿಗಳಿವು.
ಪ್ರತಿ ಮೂರು ತಿಂಗಳಿಗೊಮ್ಮೆ ರೈತರ ಕುಂದುಕೊರತೆ ಸಭೆಯನ್ನು ಜಿಲ್ಲಾಡಳಿತವು ತಾಲೂಕು ಕೇಂದ್ರದಲ್ಲಿ ಆಯೋಜಿಸಿದರೆ ರೈತರು ತಮಗಾಗುತ್ತಿರುವ ತೊಂದರೆಯನ್ನು ಮುಕ್ತವಾಗಿ ಹೇಳಿಕೊಳ್ಳಲು ಸಹಕಾರವಾಗಲಿದೆ  ಈ ಬಗ್ಗೆ ಜಿಲ್ಲಾಡಳಿತವು ಸೂಕ್ತ ಕ್ರಮ ವಹಿಸುವ ಮೂಲಕ ರೈತರಲ್ಲಿ ಆತ್ಮಸ್ಥೆರ್ಯ ತುಂಬಲು ಮುಂದಾಗಬೇಕು.
ಮಹಿಳಾ ಸ್ವಸಹಾಯ ಸಂಘಗಳು, ಗ್ರಾಮೀಣ ಭಾಗದಲ್ಲಿ ಮೈಕ್ರೋ ಪೈನಾನ್ಸ್ ಸಂಸ್ಥೆಗಳು ತಲೆ ಎತ್ತಿದ್ದು ರೈತರಿಗೆ ಶೇ.5ರಿಂದ 10ರಷ್ಟು ಬಡ್ಡಿಗೆ  ಮಹಿಳಾ ಗುಂಪುಗಳ ಮೂಲಕ ಮೂಲಕ ಸಾಲ ನೀಡುತ್ತಿರುವುದರಿಂದ ಪ್ರತಿ ವಾರವೂ ಹಣ ನೀಡಿ ಎಂದು ಮಹಿಳೆಯರು ರೈತರ ಬಳಿ ಹೋಗಿ ಗಲಾಟೆ ಮಾಡಿ ಅವಮಾನ ಮಾಡುತ್ತಿರುವುದರಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ.  ಇದರಿಂದ ಮನನೊಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇಂತಹ ಸಂಸ್ಥೆಗಳಿಗೆ ಕಡಿವಾಣ ಹಾಕಿ, ರೈತರ ಆತ್ಮಹತ್ಯೆಯನ್ನು ತಪ್ಪಸಬೇಕು.
ಫುಡ್‍ಪಾರ್ಕ್ ಆರಂಭ ಮಾಡುವ ಮೂಲಕ ಸ್ಥಳೀಯ ರೈತರು ಬೆಳೆಯುವ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತೆ ಜಿಲ್ಲಾಡಳಿತವು ಕ್ರಮ ವಹಿಸಬೇಕು. ಖಾಲಿ ಚೆಕ್ ಮತ್ತು ಪ್ರೊನೋಟ್ ಪಡೆದ ಸಾಲ ನೀಡುತ್ತಿರುವ ಖಾಸಗಿ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಸಹಕಾರ ಸಂಸ್ಥೆಗಳು ಯಾವುದೇ ಅಡಮಾನವಿಲ್ಲದೆ 50ಸಾವಿರ ಸುಲಭವಾಗಿ ಸಾಲ ನೀಡುವಂತೆ ಬ್ಯಾಂಕುಗಳಿಗೆ ಆದೇಶ ನೀಡಬೇಕು.  ಗ್ರಾಮೀಣ ಭಾಗದಲ್ಲಿ   ನಾಯಿ ಕೊಡೆಗಳಂತೆ ತಲೆ ಎತ್ತಿರುವ ಕ್ಲಬ್‍ಗಳನ್ನು ಬಂದ್ ಮಾಡಿಸಬೇಕು.  ಗ್ರಾಮೀಣ ಭಾಗದ ರೈತರು ಕೃಷಿ ಜೊತೆಗೆ ಉಪಕಸುಬುಗಳನ್ನು ಕೈಗೊಳ್ಳಲು ಸೂಕ್ತ ತರಬೇತಿ ಮತ್ತು ಸಾಲ ಸೌಲಭ್ಯ ಒದಗಿಸಿಕೊಡಬೇಕು.
ರೈತರು ಸರಬರಾಜು ಮಾಡಿದ ಕಬ್ಬಿಗೆ ಸಕಾಲದಲ್ಲಿ ಕಬ್ಬು ಕಟಾವು ಆಗುವಂತೆ ಸಕ್ಕರೆ ಕಾರ್ಖಾನೆಗೆ ಸೂಚನೆ ನೀಡಬೇಕು. ಯಾವುದೇ ಕಾರಣಕ್ಕೂ ಹೊರತಾಲೂಕಿನ ಕಬ್ಬು ಸರಬರಾಜಾಗದಂತೆ ಕ್ರಮ ವಹಿಸಬೇಕು ಮತ್ತಿತರರ ಮನವಿಗಳನ್ನು ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ರೈತರು ಮತ್ತು ಮುಖಂಡರು ಅಧಿಕಾರಿಗಳಿಗೆ ಮಾಡಿದರು.
ಸಭೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಂ.ವಿ.ರಾಜೇಗೌಡ, ತಾಲೂಕು ಅಧ್ಯಕ್ಷ ಮರುವನಹಳ್ಳಿ ಶಂಕರ್, ತಹಸೀಲ್ದಾರ್ ಶಿವಕುಮಾರ್, ಜಿ.ಪಂ.ಸದಸ್ಯರಾದ ಸರ್ವಮಂಗಳಾವೆಂಕಟೇಶ್, ಅನುಸೂಯಗಂಗಾಧರ್,  ಮಾಜಿ ಸದಸ್ಯ ಬಿ.ನಾಗೇಂದ್ರಕುಮಾರ್,  ಪುರಸಭಾ ಸದಸ್ಯರಾದ ಡಿ.ಪ್ರೇಮಕುಮಾರ್, ಕೆ.ಎಸ್.ಸಂತೋಷ್‍ಕುಮಾರ್, ವಿಠಲಾಪುರ ಸುಬ್ಬೇಗೌಡ, ತಾ.ಪಂ.ಸದಸ್ಯರಾದ ಕೆ.ಆರ್.ರವೀಂದ್ರಬಾಬು, ರೇಣುಕಾಕಿಟ್ಟಿ, ಚೆಲುವಯ್ಯ, ಎಂ.ಸಿ.ರಾಮೇಗೌಡ, ಮುಖಂಡರಾದ ಕೆ.ಜೆ.ವಿಜಯಕುಮಾರ್, ಬಸ್ತಿರಂಗಪ್ಪ,  ಎಂ.ಆರ್.ಪ್ರಸನ್ನಕುಮಾರ್, ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ಅಧಿಕಾರಿ ಕೆ.ಬಾಬುರಾಜ್, ಸರ್ಕಲ್ ಇನ್ಸ್‍ಪೆಕ್ಟರ್ ಯೋಗೇಶ್, ಸಬ್‍ಇನ್ಸ್‍ಪೆಕ್ಟರ್ ವಿನಯ್ ಮತ್ತಿತರರು ಭಾಗವಹಿಸಿದ್ದರು.

No comments:

Post a Comment