Tuesday, 25 November 2025

ವಿಶ್ವ ವಿಕಲಚೇತನರ ದಿನಾಚರಣೆ : ಸಕಲ ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ

 ವಿಶ್ವ ವಿಕಲಚೇತನರ ದಿನಾಚರಣೆ : ಸಕಲ ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ ಚಾಮರಾಜನಗರ, ನವೆಂಬರ್ 25 (ಸಂಜೆಮಿತ್ರ):- ವಿಶ್ವ ವಿಕಲಚೇತನರ ದಿನಾಚರಣೆಯನ್ನು ಇದೇ ಡಿಸೆಂಬರ್ 3ರಂದು ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ಸಕಲ ಸಿದ್ದತೆಯನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ವಿಶ್ವ ವಿಕಲಚೇತನರ ದಿನಾಚರಣೆ ಸಂಬಂಧ ಸಂಘ ಸಂಸ್ಥೆಗಳ ಮುಖಂಡರು, ಪ್ರತಿನಿಧಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡಿಸೆಂಬರ್ 3ರಂದು ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ವಿಶ್ವ ವಿಕಲಚೇತನರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಸಮಾರಂಭದ ಸುಗಮ ನಿರ್ವಹಣೆಗೆ ಉಪಸಮಿತಿಯನ್ನು ನೇಮಿಸಲಾಗಿದೆ. ಸಮಿತಿಯ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು, ಸದಸ್ಯರು ನಿಗದಿಯಾಗಿರುವ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಬೇಕು ಎಂದರು.

ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಕ್ರೀಡಾಕೂಟವನ್ನು ಡಿಸೆಂಬರ್ 1ರಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಬೇಕು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಕ್ರೀಡೆಗಳ ಆಯೋಜನೆ, ಕ್ರೀಡಾಂಗಣದ ಸಿದ್ದತೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು. ಕ್ರೀಡಾಕೂಟ ಹಾಗೂ ವಿಶ್ವ ವಿಕಲಚೇತನರ ದಿನಾಚರಣೆಯಂದು ಕುಡಿಯುವ ನೀರು, ಉಪಹಾರ, ಪ್ರಯಾಣದ ವ್ಯವಸ್ಥೆ, ಮತ್ತಿತ್ತರ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ವಿಶ್ವ ವಿಕಲಚೇತನರ ದಿನಾಚರಣೆ ನಡೆಯುವ ಡಿಸೆಂಬರ್ 3ರಂದು ಶಿಷ್ಟಾಚಾರ ಅನುಸಾರ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳಬೇಕು. ಜಾಥಾ, ವೇದಿಕೆ ಕಾರ್ಯಕ್ರಮಕ್ಕೆ ಪೂರಕವಾಗಿರುವ ಎಲ್ಲ ಸಿದ್ದತೆಗಳನ್ನು ಆಯಾ ಸಮಿತಿಗಳು ನಿರ್ವಹಿಸಬೇಕು. ವಿಶೇಷ ಸಾಮಥ್ರ್ಯವುಳ್ಳ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳ ಆಯೋಜನೆಗೆ ತಾಲೀಮು ನಡೆಸಬೇಕು. ವಿಶೇಷ ಸಾಧನೆ ಮಾಡಿದ ವಿಕಲಚೇತನರನ್ನು ಗುರುತಿಸಿ ಸನ್ಮಾನಿಸಬೇಕು ಎಂದರು.

ಕಾರ್ಯಕ್ರಮದಂದು ಆರೋಗ್ಯ ತಪಾಸಣಾ ಶಿಬಿರ, ಯುಡಿಐಡಿ ಕಾರ್ಡ್ ಸೌಲಭ್ಯಕ್ಕಾಗಿ ನೊಂದಣ ಇನ್ನಿತರ ವ್ಯವಸ್ಥೆಗಳಿಗಾಗಿ ಶಿಬಿರ ಏರ್ಪಾಡು ಮಾಡಬೇಕು. ಒಟ್ಟಾರೆ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ಕ್ರೀಡಾಕೂಟ ಯಶಸ್ವಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಯಾವುದೇ ಲೋಪವಿಲ್ಲದೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ವಿಶೇಷಚೇತನರ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕ್ರಮ ಆಯೋಜನೆ ಸಂಬಂಧ ಸಲಹೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ಸುರೇಶ್, ಜಿಲ್ಲಾ ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಕಲ್ಯಾಣಾಧಿಕಾರಿ ಡಾ. ಕೆ.ಎನ್. ಮಂಜುನಾಥ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಎಂ.ವಿ. ಸುಧಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಸುರೇಶ್, ಇನ್ನಿತರ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ನಿರ್ದೇಶಕರಾದ ಪ್ರಭುಸ್ವಾಮಿ, ವಿಶೇಷಚೇತನರ ಸಂಘಟನೆಗಳ ಮುಖಂಡರಾದ ಸಿದ್ದಯ್ಯ, ರಮೇಶ್, ಕೃಷ್ಣಮೂರ್ತಿ, ಕುಮಾರ್, ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Tuesday, 18 November 2025

19-11-2025 ಮದ್ದೂರು ಶಾಸಕ ಕೆ.ಎಂ.ಉದಯ್.

ತಾಲೂಕಿನಾದ್ಯಂತ ಶಿಥಿಲಗೊಂಡಿರುವ ಹಾಗೂ ಬಾಡಿಗೆ ಕಟ್ಟಡಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಟ್ಟಡಗಳ ಉನ್ನತೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದು ಜತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಬೇಕೆಂಬ ಉದ್ದೇಶದಿಂದ ಮೂಲ ಸೌಲಭ್ಯಕ್ಕೆ ಅಗತ್ಯ ಕ್ರಮ ವಹಿಸಿರುವುದಾಗಿ ಶಾಸಕ ಕೆ.ಎಂ.ಉದಯ ತಿಳಿಸಿದರು.
ಪಟ್ಟಣದ ಡಾ| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ ಆಯೋಜಿಸಿದ್ದ ಸಕ್ಷಮ್ ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್ ಎಲ್.ಇ.ಡಿ ಟಿ.ವಿ. ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಸುಮಾರು 408 ಅಂಗನವಾಡಿ ಕೇಂದ್ರಗಳಿದ್ದು ಕೆಲವು ಬಾಡಿಗೆ ಕಟ್ಟಡದಲ್ಲಿ ದುರಸ್ತಿ ಹಂತದಲ್ಲಿ ಹಾಗೂ ಶಿಥಿಲಾವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು ಈ ಸಂಬಂಧ ಈಗಾಗಲೇ ಇಲಾಖಾ ಸಚಿವರೊಟ್ಟಿಗೆ ಚರ್ಚಿಸಿ ಹಂತ ಹಂತವಾಗಿ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದ್ದು ಅಂಗನವಾಡಿ ಕೇಂದ್ರಗಳ ಉನ್ನತೀಕರಣಕ್ಕೆ ಹೆಚ್ಚಿನ ಒತ್ತು ನೀಡಿರುವುದಾಗಿ ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರವು ಪೋಷಣ್ ಅಭಿಯಾನವನ್ನು ಜಾರಿಗೆ ತಂದಿದ್ದು ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗೆ ಪೌಷ್ಠಿಕ ಅಂಶ ಆಹಾರವನ್ನು ಪೂರೈಕೆ ಮಾಡಲು ಮುಂದಾಗಿದ್ದು ಜತೆಗೆ ಅಪೌಷ್ಠಿಕತೆಯಿಂದ ಮುಕ್ತರನ್ನಾಗಿಸುವುದೇ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಪ್ರತಿ ಅಂಗನವಾಡಿ ಕೇಂದ್ರಗಳಿಗೆ ಆಧುನಿಕ ಮೂಲ ಸೌಲಭ್ಯ, ತಾಂತ್ರಿಕತೆಯ ಸ್ಪರ್ಶ, ಪೌಷ್ಠಿಕಾಂಶಯುಕ್ತ ಆಹಾರ ವಿತರಣೆ ಮತ್ತು ಮೂರರಿಂದ ಆರು ವರ್ಷದ ಮಕ್ಕಳಿಗೆ ಪ್ರಾಯಪೂರ್ವ ರಕ್ಷಣೆ ಮತ್ತು ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳನ್ನು ಸಕ್ಷಮ್ ಅಂಗನವಾಡಿ ಮತ್ತು ಮಿಷನ್ ಪೋಷಣ್ ಎಂದು ಘೋಷಿಸಲಾಗಿದೆ ಎಂದರು.
ತಾಲೂಕಿನಲ್ಲಿ ಸ್ವಂತ ಕಟ್ಟಡ ಹೊಂದಿರುವ ಸುಮಾರು 108 ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್ ಎಲ್.ಇ.ಡಿ ಟಿ.ವಿ.ಗಳನ್ನು ವಿತರಿಸಿದ್ದು ಮುಂದಿನ ದಿನಗಳಲ್ಲಿ ಪ್ರತಿ ಅಂಗನವಾಡಿಗೂ ಟಿ.ವಿ. ವಿತರಿಸಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅಗತ್ಯ ಕ್ರಮ ವಹಿಸಲಾಗಿದೆ ಎಂದರು.
ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರು ಸರಕಾರದ ಸೌಲಭ್ಯವನ್ನು ಪ್ರತಿ ಫಲಾನುಭವಿಗೂ ತಲುಪುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಮತ್ತು ಯಾವುದೇ ಲೋಪ ದೋಷಗಳು ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಎಲ್.ಇ.ಡಿ ಟಿ.ವಿ ಮೂಲಕ ಶಾಲಾಪೂರ್ವ ಶಿಕ್ಷಣ ನೀಡಿ ಪೋಷಣ್ ವಾಟಿಕಾ, ಬೋಧನಾ ಕಲಿಕಾ ಸಾಮಗ್ರಿಗಳು, ಆರ್.ಓ ಅಳವಡಿಕೆ ಇನ್ನಿತರ ವ್ಯವಸ್ಥೆಯನ್ನು ಕಲ್ಪಿಸಿ ಮಕ್ಕಳ ಜ್ಞಾನಾರ್ಜನೆಯನ್ನು ಹೆಚ್ಚಿಸಬೇಕೆಂದರು.
ತಾಲೂಕಿನ ಅಂಗನವಾಡಿ ಕೇಂದ್ರದ ಸಹಾಯಕಿಯರು ಮತ್ತು ಕಾರ್ಯಕರ್ತೆಯರು ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಮತ್ತು ಪೋಷಣ್ ಅಭಿಯಾನದಡಿ ಸಿಗುವ ಹಲವು ಸೌಲಭ್ಯಗಳನ್ನು ಅಧಿಕಾರಿಯೊಟ್ಟಿಗೆ ವೀಕ್ಷಿಸಿದರು.
ಈ ವೇಳೆ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಚಲುವರಾಜು, ಬಿ.ಇ.ಓ. ಅರುಣ್‍ಕುಮಾರ್, ತಾ.ಪಂ. ಸಂಯೋಜನಾಧಿಕಾರಿ ಸುರೇಶ್, ಸಿ.ಡಿ.ಪಿ.ಓ ಅರುಣ್‍ಕುಮಾರ್, ಆರೋಗ್ಯಾಧಿಕಾರಿ ಡಾ| ರವಿಶಂಕರ್, ಎ.ಸಿ.ಡಿ.ಪಿ.ಓ ಆರ್.ಪುಷ್ಪ, ಮೇಲ್ವಿಚಾರಕಿ ಸುಜಾತ, ಭಾಗ್ಯ, ರಾಜೇಶ್ವರಿ, ಸುನೀತಾ, ಜಯಲಕ್ಷ್ಮಿ, ಉಮಾ ಇತರರಿದ್ದರು.