ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಬೇಕು: ಕೆ .ಶಿವಮೂರ್ತಿ
ಭಾರತ ಸರ್ಕಾರದ ವಾರ್ತಾ ಶಾಖೆ
ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಬೇಕು: ಕೆ .ಶಿವಮೂರ್ತಿ
ದಾವಣಗೆರೆ, ನವೆಂಬರ್ 10, 2014
ಭಾರತ ಸರ್ಕಾರದ ವಾರ್ತಾ ಶಾಖೆ ,ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಇತರ ಮಾಧ್ಯಮ ಘಟಕಗಳ ಸಹಭಾಗಿತ್ವದಲ್ಲಿ ದಾವಣಗೆರೆಯಲ್ಲಿ ಆಯೋಜಿಸಿರುವ ಮೂರು ದಿನಗಳ ‘ಸಾರ್ವಜನಿಕ ಮಾಹಿತಿ ಆಂದೋಲನ'ದ ಉದ್ಘಾಟನಾ ಸಮಾರಂಭ ಇಂದು ದಾವಣಗೆರೆ ಜಿಲ್ಲೆಯ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಜರುಗಿತು. ಶ್ರೀ.ಕೆ ಶಿವಮೂರ್ತಿ, ಶಾಸಕರು, ಮಾಯಕೊಂಡ ವಿಧಾನಸಭಾ ಕ್ಷೇತ್ರ ಇವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಾರ್ವಜನಿಕ ಮಾಹಿತಿ ಆಂದೋಲನಗಳು ಸಹಾಯಕಾರಿಯಾಗಿವೆ. ಸರ್ಕಾರದ ಯೋಜನೆಗಳು ಜನಪರವಾಗಿದ್ದಲ್ಲಿ ಸುಲಭವಾಗಿ ಅವು ಗ್ರಾಮೀಣ ಜನತೆಯನ್ನು ತಲುಪಲು ಸಾಧ್ಯ. ಆಡಳಿತ ಮತ್ತು ಕಾನೂನುಗಳ ಸುವ್ಯವಸ್ಥೆಗೆ ಜನರ ಸಹಭಾಗಿತ್ವ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯ. ಸರ್ಕಾರದ ಯೋಜನೆಗಳಿಗೆ ನಿಧಾನಗತಿಯ ಪ್ರಚಾರ ದೊರಕುವುದರಿಂದ ಅವು ಜನಸಾಮಾನ್ಯರನ್ನು ತಡವಾಗಿ ತಲುಪುತ್ತಿವೆ. ಸರ್ಕಾರದ ಪ್ರಚಾರ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವ ಕುರಿತು ನಾವಿಂದು ಚಿಂತಿಸಬೇಕಾಗಿದೆ ಎಂದರು. ಸಾರ್ವಜನಿಕ ಮಾಹಿತಿ ಆಂದೋಲನದ ಅಂಗವಾಗಿ ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯದ ವತಿಯಿಂದ ಆಯೋಜಿಸಿರುವ ಛಾಯಾಚಿತ್ರ ಪ್ರದರ್ಶನವನ್ನೂ ಶಾಸಕರು ಉದ್ಘಾಟಿಸಿದರು.
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಶ್ರೀ. ಅಬ್ದುಲ್ ಜಬ್ಬಾರ್, ಶಾಸಕರು, ವಿಧಾನ ಪರಿಷತ್, ಮೂಲ ಸೌಲಭ್ಯ ವಂಚಿತ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುವ ಜನಸಾಮಾನ್ಯರಿಗೆ ಸರ್ಕಾರದ ಯೋಜನೆಗಳ ಕುರಿತು ಅರಿವನ್ನು ಮೂಡಿಸುವುದು ಮತ್ತು ಸೂಕ್ತ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪಿಸುವ ಉದ್ದೇಶಗಳನ್ನು ಸಾರ್ವಜನಿಕ ಮಾಹಿತಿ ಆಂದೋಲನ ಒಳಗೊಂಡಿದ್ದು ಇಂತಹ ಆಂದೋಲನಗಳ ಸದುಪಯೋಗವನ್ನು ಜನಸಾಮಾನ್ಯರು ಪಡೆಯಬೇಕು ಎಂದರು.
ದಾವಣಗೆರೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ. ಯಶೋದಮ್ಮ ಹಾಲೇಶಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಫಲಾನುಭವಿಯ ಮನೆ ಬಾಗಿಲಿಗೆ ಸೇವೆ ಒದಗಿಸುವ ಮತ್ತುÀ ಯೋಜನೆಗಳ ಕುರಿತ ಮಾಹಿತಿ ನೀಡುವ ಉದ್ದೇಶವನ್ನು ಸಾರ್ವಜನಿಕ ಮಾಹಿತಿ ಆಂದೋಲನಗಳು ಹೊಂದಿವೆ ಎಂದರು. ಆಂದೋಲನದ ಅಂಗವಾಗಿ ನಗರದಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಏರ್ಪಡಸಿದ್ದ ಬೃಹತ್ ರ್ಯಾಲಿಗೆ ಇವರು ಚಾಲನೆ ನೀಡಿದರು.
ದಾವಣಗೆರೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮತ್ತು ಹಾಲಿ ಸದಸ್ಯೆ ಶ್ರೀಮತಿ ಸಹನಾ ರವಿ, ಜಿಲ್ಲಾ ಪಂಚಾಯತ್ ಸದಸ್ಯೆಯರಾದ ಶ್ರೀಮತಿ ಜಯಲಕ್ಷ್ಮಿ ಮತ್ತು ಶ್ರೀಮತಿ ಶಾರದಾ ಉಮೇಶ್ ನಾಯ್ಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಧಿಕಾರಿ ಶ್ರೀ. ಎಸ್ ಬಿ ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶ್ರೀ.ಟಿ.ಎಮ್ ಶಶಿಧರ್ , ಬೆಂಗಳೂರಿನ ಭಾರತ ಸರ್ಕಾರದ ವಾರ್ತಾ ಶಾಖೆಯ ಹೆಚ್ಚುವರಿ ಮಹಾ ನಿರ್ದೇಶಕ ಶ್ರೀ.ಎಸ್ ವೆಂಕಟೇಶ್ವರ್ ಉಪಸ್ಥಿತರಿದ್ದರು.
No comments:
Post a Comment