Saturday, 1 November 2014

ಕನ್ನಡ ಭಾಷೆಯ ಉಳಿವಿಗೆ ಧೀಕ್ಷೆ ತೊಡಬೇಕು -ಶಾಸಕ ನಾರಾಯಣಗೌಡ .

 ಕೃಷ್ಣರಾಜಪೇಟೆ. ಸಾವಿರಾರು ವರ್ಷಗಳ ಭವ್ಯವಾದ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯು ಇತರೆ ಬಾಷೆಗಳ ಹಾವಳಿ ಮತ್ತು ದಬ್ಬಾಳಿಕೆಯಿಂದ ತನ್ನ ನೆಲದಲ್ಲಿಯೇ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿಯು ಎದುರಾಗಿರುವುದರಿಂದ ಕನ್ನಡಿಗರು ನಿರಭಿಮಾನಿಗಳಾಗದೇ ಭಾಷೆ ಮತ್ತು ನೆಲ-ಜಲದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡು ಕನ್ನಡ ಭಾಷೆಯ ಉಳಿವಿಗೆ ಧೀಕ್ಷೆ ತೊಡಬೇಕು ಎಂದು ಶಾಸಕ ನಾರಾಯಣಗೌಡ ಕರೆ ನೀಡಿದರು.
ಅವರು ಇಂದು ಪಟ್ಟಣದ ಮಾಧ್ಯಮಿಕ ಶಾಲಾ ಮೈದಾನದಲ್ಲಿ ತಾಲೂಕು ಆಡಳಿತವು ಆಯೋಜಿಸಿದ್ದ 59ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳು, ಎನ್.ಸಿ.ಸಿ., ಸ್ಕೌಟ್ಸ್-ಗೈಡ್ಸ್ ಹಾಗೂ ಪೋಲಿಸರಿಂದ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.
ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿಕೊಂಡಿದ್ದ ಕನ್ನಡ ನಾಡು ಸುಭೀಕ್ಷವಾಗಿತ್ತು ಭಾಷಾವಾರು ಪ್ರಾಂತ್ಯಗಳ ರಚನೆಯಾದ ಮೇಲೆ ವಿಶಾಲ ಮೈಸೂರು ಪ್ರಾಂತ್ಯವು ಕರ್ನಾಟಕವೆಂದು ನಾಮಕರಣಗೊಂಡಿತು. ಕನ್ನಡ ನಾಡು ಅಸ್ತಿತ್ವಕ್ಕೆ ಬಂದು 59 ವರ್ಷಗಳು ಕಳೆಯುತ್ತಿದ್ದರೂ ಅನ್ಯ ಭಾಷಿಕರಿಂದ ಕನ್ನಡಿಗರ ಮೇಲೆ ನಿರಂತರವಾಗಿ ನಡೆಯುತ್ತಿರುವ ದಬ್ಬಾಳಿಕೆ ಮತ್ತು ದೌರ್ಜನ್ಯಗಳು ಇಂದಿಗೂ ನಿಂತಿಲ್ಲದಿರುವುದು ವಿಷಾಧನೀಯ ಸಂಗತಿಯಾಗಿದೆ. ಗಡಿನಾಡ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ಸರ್ಕಾರವು ವಿಫಲವಾಗಿದೆ. ಬೆಳಗಾವಿ ಸೇರಿದಂತೆ ನಾಡಿನ ಯಾವುದೇ ಭಾಗವನ್ನು ಬೇರೆ ಭಾಷಿಕರಿಗೆ ಬಿಟ್ಟುಕೊಡಲು ಸಾಧ್ಯವಿಲ್ಲ. ಗಡಿ ವಿಚಾರದಲ್ಲಿ ಸರೋಜಿನಿ ಮಹಿಷಿ ವರದಿಯು ಅಂತಿಮವಾಗಿದೆ. ಕನ್ನಡಿಗರು ನಿರಭಿಮಾನಿಗಳಾಗದೇ ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡು ಮುನ್ನಡೆದರೆ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿ ಉಳಿಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂದು ಹೇಳಿದ ಶಾಸಕ ನಾರಾಯಣಗೌಡ ದೇಶದ ಇತರೆ ಯಾವುದೇ ಭಾಷೆಗಿಂತಲೂ ಶ್ರೀಮಂತ ಹಾಗೂ ಕಲಿಯಲು ಸರಳ ಭಾಷೆಯಾಗಿರುವ ಕನ್ನಡವು ಜೇನಿನಷ್ಟೇ ಸಿಹಿಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಇಂಗ್ಲೀಷ್ ವ್ಯಾಮೋಹವನ್ನು ಬದಿಗಿಟ್ಟು ಕನ್ನಡ ಮಾದ್ಯಮದಲ್ಲಿಯೇ ವ್ಯಾಸಂಗ ಮಾಡುವ, ಕನ್ನಡದಲ್ಲಿಯೇ ಮಾತನಾಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಕನ್ನಡ ತಾಯಿಭಾಷೆಯಾಗಿರುವುದರಿಂದ ಕನ್ನಡ ನಾಡಿನಲ್ಲಿ ಕನ್ನಡವನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಕನ್ನಡವು ವಿಶ್ವದಲ್ಲಿಯೇ ಅತೀ ಹೆಚ್ಚು ಜನರು ಬಳಸಿ ಪ್ರೀತಿಸುವ ಜೀವಂತ ಭಾಷೆಯಾಗಿದೆ ಎಂಬ ಸತ್ಯವನ್ನು ಅರಿತು ಕನ್ನಡಿಗರು ಕನ್ನಡದಲ್ಲಿಯೇ ವ್ಯವಹಾರ ನಡೆಸುವಂತೆ ಇತರೆ ಅನ್ಯ ಭಾಷೀಕರಿಗೆ ಮನವೊಲಿಸಬೇಕು ಎಂದು ಕರೆ ನೀಡಿದರು.
 ತಹಶೀಲ್ದಾರ್ ಹೆಚ್.ಎಲ್.ಶಿವರಾಂ ರಾಷ್ಟ್ರಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವದ ಶುಭ ಸಂಧೇಶವನ್ನು ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಅನುಸೂಯ, ಸರ್ವಮಂಗಳ, ವಿ.ಮಂಜೇಗೌಡ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಕೆ.ಗೌಸ್‍ಖಾನ್, ತಾ.ಪಂ ಅಧ್ಯಕ್ಷೆ ಪ್ರಭಾವತಿ, ಜಿ.ಪಂ ಮಾಜಿ ಉಪಾಧ್ಯಕ್ಷ ಬೇಲದಕೆರೆ ಪಾಪೇಗೌಡ, ಮಾಜಿ ಸದಸ್ಯರಾದ ಬಿ.ನಾಗೇಂದ್ರಕುಮಾರ್, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಸೋಮಶೇಖರ್, ಕಸಾಪ ಮಾಜಿ ಅಧ್ಯಕ್ಷರಾದ ಕೆ.ಆರ್.ನೀಲಕಂಠ, ಹರಿಚರಣ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಮು, ವೃತ್ತ ಆರಕ್ಷಕ ನಿರೀಕ್ಷಕ ಕೆ.ರಾಜೇಂದ್ರ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಾದ ಬೋಳಮಾರನಹಳ್ಳಿ ಸಾಕಮ್ಮ, ಚಿತ್ರನಟ ಅರವಿಂದ್, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ, ನಂಜಮ್ಮ, ಪತ್ರಕರ್ತರಾದ ಕೆ.ಆರ್.ನೀಲಕಂಠ, ಬಳ್ಳೇಕೆರೆ ಮಂಜುನಾಥ, ಹರಿಚರಣತಿಲಕ್, ಉಧ್ಯಮಿ ಜಿ.ಸೋಮಶೇಖರ್, ಹರಿಕಥಾವಿದ್ವಾಂಸ ವಿಠ್ಠಲ್‍ದಾಸ್ ಅವರನ್ನು ತಾಲೂಕು ಆಢಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಮಕ್ಕಳು ನೀಡಿದ ಸಾಂಸ್ಕøತಿಕ ಕಾರ್ಯಕ್ರಮಗಳು ನೆರೆದಿದ್ದ ಸಾರ್ವಜನಿಕರನ್ನು ರಂಜಿಸಿದವು.
ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಟಿ.ಜವರೇಗೌಡ ಸ್ವಾಗತಿಸಿದರು, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಎನ್.ಕೆಂಚಪ್ಪ ವಂದಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಜಿ.ಬಿ.ರಾಮಪ್ಪ ಕಾರ್ಯಕ್ರಮ ನಿರೂಪಿಸಿದರು.
ಚಿತ್ರಶೀರ್ಷಿಕೆ: 01ಏಖPಇಖಿಇ-01 ಕೃಷ್ಣರಾಜಪೇಟೆ ಪಟ್ಟಣದ ಮಾದ್ಯಮಿಕ ಶಾಲಾ ಮೈಧಾನದಲ್ಲಿ ತಾಲೂಕು ಆಢಳಿತವು ಆಯೋಜಿಸಿದ್ದ 59ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶಾಸಕ ನಾರಾಯಣಗೌಡ ಕನ್ನಡ ಧ್ವಜಾರೋಹಣ ನೆರವೇರಿಸಿದರು. ತಹಶೀಲ್ದಾರ್ ಹೆಚ್.ಎಲ್.ಶಿವರಾಂ, ಪುರಸಭೆ ಅಧ್ಯಕ್ಷ ಕೆ.ಗೌಸ್‍ಖಾನ್, ತಾ.ಪಂ ಅಧ್ಯಕ್ಷೆ ಪ್ರಭಾವತಿ ಮತ್ತಿತರರು ಚಿತ್ರದಲ್ಲಿದ್ದಾರೆ.



1 comment:

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ReplyDelete