Monday, 3 November 2014


 ಫಲಾನುಭವಿಗಳ ಆಯ್ಕೆಯಲ್ಲಿ ಸ್ವಾರ್ಥಬೇಡ: ಡಾ. ಎಂ.ಎಚ್.ಅಂಬರೀಷ್
ಮಂಡ್ಯ ನ.3 ಗ್ರಾಮ ಪಂಚಾಯಿತಿಯಿಂದ ಬಡವರಿಗೆ ವಸತಿ ಸೌಲಭ್ಯಗಳನ್ನು ನೀಡಲು ಫಲಾನುಭವಿಗಳ ಆಯ್ಕೆ ಮಾಡುವಾಗ ಸ್ವಾರ್ಥ ಇರಬಾರದು ಎಂದು ವಸತಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಎಚ್.ಅಂಬರೀಷ್ ಅವರು ಹೇಳಿದರು.
ಸೋಮವಾರ ಮಂಡ್ಯ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಡೊಡ್ಡಗರುಡನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಿರ್ಮಿಸಿರುವ ರಾಜೀವ್‍ಗಾಂಧಿ ಸೇವಾ ಕೇಂದ್ರವನ್ನು ಉದ್ಘಾಟಿಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಡವರಿಗೆ ವಸತಿ ಸೌಲಭ್ಯ ಕೊಡುವ ಅವಕಾಶ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೂ ದೊರೆತಿದೆ. ಈ ಸೌಲಭ್ಯವನ್ನು ಅಣ್ಣ-ತಮ್ಮಂದಿರಿಗೆ ಹಾಗೂ ಸಂಬಂಧಿಗಳಿಗೆ ನೀಡುವ ಬದಲು ನಿಜವಾದ ಅರ್ಹರಿಗೆ ನೀಡಬೇಕು ಎಂದು ಹೇಳಿದರು.
ಜಿಲ್ಲೆಯ ಅಭಿವೃದ್ಧಿಗೆ ಸಾಧ್ಯವಾದಷ್ಟು ಎಲ್ಲಾ ರೀತಿಯ ಕೆಲಸಗಳನ್ನು ಮಾಡಲು ಸಿದ್ಧನಿದ್ದೇನೆ. ನಮ್ಮ ಮೇಲೆ ಇಟ್ಟರುವ ನಿರೀಕ್ಷೆಗಳನ್ನು ಸುಳ್ಳು ಮಾಡುವುದಿಲ್ಲ ಎಂದು ಹೇಳಿದರು.
ಬಸರಾಳು ಭಾಗದ ಕೆರೆಗಳಿಗೆ ನೀರು ತುಂಬಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ, ಈ ವರ್ಷ ಸಾಧ್ಯವಾದಷ್ಟು ಕೆರೆ ತುಂಬಿಸಿದ್ದೇವೆ. ಈ ಭಾಗದಲ್ಲಿ ಸಾಕಷ್ಟು ಕೆಲಸಗಳು ಆಗಿವೆ. ಇನ್ನೂ ಹಲವಾರು ಸಮಸ್ಯೆಗಳು ಇವೆ. ದೊಡ್ಡಗರುಡನಹಳ್ಳಿಗೆ ಆಸ್ಪತ್ರೆ ಬೇಕು ಎಂದು ಕೇಳಿದ್ದೀರಿ. ಆಸ್ಪತ್ರೆ ಮಂಜೂರು ಮಾಡಿಸಲು ಕ್ರಮಕೈಗೊಳ್ಳಲಾಗುವುದು. ಗುಡಿಗೇನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಅನುಕೂಲ ಆಗುವಂತೆ ಬಿ.ಹೊಸೂರಿನಲ್ಲಿ ನಾಡಕಚೇರಿ ಬೇಕು ಎಂದು ಮನವಿ ಬಂದಿದೆ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಕ್ರಮವಹಿಸಲು ತಿಳಿಸಲಾಗಿದೆ. ನಿಮ್ಮೆಲ್ಲಾ ಬೇಡಿಕೆಗಳ ಈಡೇರಿಕೆಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಗುಡಿಗೇನಹಳ್ಳಿ, ಚಾಕನಹಳ್ಳಿ, ರಾಮೇಗೌಡನಕೊಪ್ಪಲು, ಈರೇಗೌಡನಕೊಪ್ಪಲು ಗ್ರಾಮಗಳನ್ನು ಸಂಪರ್ಕಿಸುವ 5.79 ಕಿ.ಮೀ. ಉದ್ದದ ರಸ್ತೆ ಸುಧಾರಣೆಗಾಗಿ ಪಿಎಂಜಿಎಸ್‍ವೈ-2 ಯೋಜನೆಯಡಿ 215.8 ಲಕ್ಷ ರೂ.ಗಳ ಕಾಮಗಾರಿ ಕೈಗೆತ್ತುಕೊಳ್ಳಲಾಗಿದ್ದು, ಸಚಿವರು ಗುದ್ದಲಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು. ಮಂಡ್ಯ-ನಾಗಮಂಗಲ ರಸ್ತೆಯಿಂದ ಹುನಗನಹಳ್ಳಿಗೆ ಹೋಗುವ ಮಾರ್ಗದಲ್ಲಿ 60 ಲಕ್ಷ ರೂ.ಗಳಲ್ಲಿ ಸೇತುವೆ ನಿರ್ಮಿಸಲು ಗುದ್ದಲಿಪೂಜೆ ನೆರವೇರಿಸಿದರು.  ಬಸರಾಳು ಐ.ಟಿ.ಐ ಹಾಗೂ ಇತರೆ ಕಾಲೇಜು ಕಟ್ಟಡಗಳ ಕಾಮಗಾರಿ ವೀಕ್ಷಣೆ ಮಾಡಿದರು. ಚಂದಗಾಲು ಗ್ರಾಮದಲ್ಲಿ ನಿರ್ಮಿಸಿರುವ ರಾಜೀವ್‍ಗಾಂಧೀ ಸೇವಾ ಕೇಂದ್ರವನ್ನು ಉದ್ಘಾಟಿಸಿದರು. ಬಸರಾಳು ಹೋಬಳಿ ಚಿಕ್ಕಬಳ್ಳಿಯಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು. ಮಂಡ್ಯ ನಗರದಲ್ಲಿ ಬನ್ನೂರು ರಸ್ತೆ ಹಾಗೂ ಗುತ್ತಲು ರಸ್ತೆಯಲ್ಲಿ ನಡೆದಿರುವ ಕಾಮಗಾರಿಗಳ ಪರಿಶೀಲನೆ ಮಾಡಿದರು.
ಸಚಿವರ ಪ್ರವಾಸದ ವೇಳೆ ಮಂಡ್ಯ ಉಪ ವಿಭಾಗಾಧಿಕಾರಿ ಅರುಳ್‍ಕುಮಾರ್, ತಹಶೀಲ್ದಾರ್ ವಿ. ಪ್ರಿಯದರ್ಶಿನಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ಗೋಪಾಲ್, ಕುಡಿಯುವ ನೀರು ಯೋಜನೆಯ ಕಾರ್ಯಪಾಲಕ ಇಂಜಿನಿಯರ್ ಚೆನ್ನಯ್ಯ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಚಂದ್ರಹಾಸ್, ಮತ್ತಿತರರು ಉಪಸ್ಥಿತರಿದ್ದರು.

                           ನ.7 ರಂದು ಜಿ.ಪಂ. ಸಾಮಾನ್ಯ ಸಭೆ
    ಮಂಡ್ಯ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯನ್ನು ನವೆಂಬರ್ 7ರಂದು ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಟಿ.ಮಂಜುಳಾ ಪರಮೇಶ್ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ.11 ರಂದು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
     ವಸತಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ) 2014-15ನೇ ಸಾಲಿನ ಅಕ್ಟೋಬರ್ 2014ರ ಅಂತ್ಯದವರೆಗಿನ ದ್ವಿತೀಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ನವೆಂಬರ್ 11 ರಂದು ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾ ಪಂಚಾಯತ್‍ನ ಕಾವೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ರಾಜ್ಯ ಯೋಜನೆಯಡಿ ತರಬೇತಿ: ಅರ್ಜಿ ಆಹ್ವಾನ
       ಮದ್ದೂರು ಪುರಸಭಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿದ್ಯಾವಂತ ನಿರುದ್ಯೋಗಿಗಳಿಗೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ರಾಜ್ಯ ಯೋಜನೆಯಡಿ ಅಕೌಂಟಿಂಗ್ ಮತ್ತು ಟ್ಯಾಲಿ, ಕಂಪ್ಯೂಟರ್ ಫಂಡಮೆಂಟಲ್, ಎಂ.ಎಸ್. ಆಫೀಸ್, ಇಂಟರ್‍ನೆಟ್ ಮತ್ತು ಡಿಟಿಪಿ, ಲಘುವಾಹನ ಚಾಲನಾ ತರಬೇತಿ  ಹಾಗೂ ಭಾರಿವಾಹನ ಚಾಲನಾ ತರಬೇತಿಗಳನ್ನು ಉಚಿತವಾಗಿ ಪಡೆಯಲು  ಅರ್ಜಿ ಆಹ್ವಾನಿಸಲಾಗಿದೆ.
      ನಿಗದಿತ ಅರ್ಜಿ ನಮೂನೆಗಳನ್ನು ಮದ್ದೂರು ಪುರಸಭಾ ಕಚೇರಿಯಿಂದ ಪಡೆದು ಸೂಕ್ತ ದಾಖಲೆಗಳೊಂದಿಗೆ ನವೆಂಬರ್ 15 ರಂದು ಸಂಜೆ 5.30 ಗಂಟೆಯೊಳಗೆ ಕಚೇರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಮದ್ದೂರು ಪುರಸಭೆ ಕಚೇರಿಯನ್ನು ಸಂಪರ್ಕಿಸುವಂತೆ ಮದ್ದೂರು ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



No comments:

Post a Comment