Monday, 3 November 2014


ಕೆ.ಆರ್.ಪೇಟೆ,ನ.03- ಜನಸಂಖ್ಯಾ ಸ್ಪೋಟ, ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ, ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆ ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆ ದೇಶದ ಯುವಶಕ್ತಿ ಜಾಗೃತವಾಗಿರಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಎಚ್.ಟಿ.ಹರೀಶ್ ಅಭಿಪ್ರಾಯಪಟ್ಟಿದ್ದಾರೆ.
ಅವರು ತಾಲೂಕಿನ ದಬ್ಬೇಘಟ್ಟ ಗ್ರಾಮದಲ್ಲಿ ಕಿಕ್ಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶ್ರಮದಾನ ಶಿಬಿರದಲ್ಲಿ ಭಾಗವಹಿಸಿ ಪರಿಸರ ಸಂರಕ್ಷಣೆ ಕುರಿತು ಮಾತನಾಡಿದರು.
ನಾವು ಶುದ್ದವಾಗಿದ್ದರೆ ಸಾಲದು. ನಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಪರಿಸರ ಸ್ವಚ್ಚತೆಗೆ ಸಾಂಘಿಕ ಪರಿಶ್ರಮ ಅತ್ಯಗತ್ಯ ಎಂದ ಡಾ.ಹರೀಶ್ ಸಾಂಕ್ರಾಮಿಕ ರೋಗಗಳಾದ ಕಾಲರ, ಪ್ಲೇಗು, ಮಲೇರಿಯಾ, ಸಿಡುಬುಗಳಲ್ಲದೆ ಪೋಲೀಯೋ, ಕುಷ್ಠ ಮುಂತಾದ ಮಾರಕ ಕಾಯಿಲೆಗಳ ಮೇಲೆ ನಾವು ನಿಯಂತ್ರಣ ಸಾಧಿಸಿದ್ದೇವೆ. ಆಧುನಿಕ ಜೀವನ ಶೈಲಿಯಿಂದಾಗಿ ಅಸಾಂಕ್ರಮಿಕ ಕಾಯಿಲೆಗಳಾದ ರಕ್ತದೊತ್ತಡ, ಮದುಮೇಹ ಮುಂತಾದ ಕಾಯಿಲೆಗಳು ನಮ್ಮನ್ನು ಕಾಡುತ್ತಿವೆ. ಇದರ ವಿರುದ್ದ ನಾವು ಎಚ್ಚರಿಕೆ ವಹಿಸಬೇಕೆಂದು ಕಿವಿಮಾತು ಹೇಳಿದ ಅವರು ಶುದ್ದ ಕುಡಿಯುವ ನೀರು ಮತ್ತು ಶೌಚಾಲಯ ನಮ್ಮ ಕನಿಷ್ಠ ಅಗತ್ಯತೆಗಳಾಗಬೇಕು. ಇದರಿಂದ ಹತ್ತು ಹಲವು ಸಾಂಕ್ರಾಮಿಕ ಕಾಯಿಲೆಗಳನ್ನು ತಡೆಗಟ್ಟಬಹುದೆಂದರು. ಕೈ ತೊಳೆಯುವುದರಿಂದ ಹಿಡಿದು ಗ್ರಾಮದೊಳಗಿನ ತಿಪ್ಪೆಗುಂಡಿಗಳನ್ನು ತೆರವುಗೊಳಿಸುವವರೆಗೂ ನಾವು ಶುಚಿತ್ವದ ಮಹತ್ವದ ಅರಿವು ಮೂಡಿಸಿಕೊಳ್ಳಬೇಕೆಂದ ಅವರು ಪ್ರತಿಯೊಬ್ಬರು ವಿದ್ಯಾವಂತರಾಗಿ ಆರೋಗ್ಯದ ಬಗ್ಗೆ ಅರಿವು ಮೂಡಿಸಿಕೊಂಡರೆ ಮಾತ್ರ ಆರೋಗ್ಯಕರ ಭಾರತ ನಿರ್ಮಾಣ ಸಾಧ್ಯವೆಂದರು.
ಆರೋಗ್ಯಕರ ಭಾರತ ನಿರ್ಮಾಣಕ್ಕೆ ಆರೋಗ್ಯ ಇಲಾಕೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಅವರು ತಾಲೂಕಿನ 113 ಹಳ್ಳಿಗಳಲ್ಲಿ ಕುಡಿಯುವ ನೀರಿನಲ್ಲಿ ಪ್ಲೋರೇಡ್ ಅಂಶ ಪತೆಯಾಗಿದೆ. ಇದರ ಬಗ್ಗೆ ನಾವು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದೇವೆ, ಶಿಶು ಮರಣ, ಹೆರಿಗೆ ಸಂದರ್ಭದಲ್ಲಿನ ತಾಯಿಯ ಮರಣ ಪ್ರಮಾಣವನ್ನು ನಿಯಂತ್ರಿಸಿದ್ದೇವೆ. ದೈಹಿಕ ಮತ್ತು ಮಾನಸಿಕ ಆರೋಗ್ಯಗಳೆರಡಕ್ಕೂ ಆಧ್ಯಾತ್ಮದಲ್ಲಿ ಸೂಕ್ತ ಉತ್ತರವಿದ್ದು ಜನ ದೈನಂದಿನ ವ್ಯಾಯಾಮ, ಯೋಗ ಕಲಿಕೆಗೆ ಹೆಚ್ಚು ಆದ್ಯತೆ ನೀಡಬೇಕೆಂದು ಡಾ.ಹರೀಶ್ ಕರೆ ನೀಡಿದರು.
ಗ್ರಾಮ ಮುಖಂಡ ದೇವರಾಜು ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಚನ್ನರಾಯಪಟ್ಟಣ ತಾಲೂಕು ಅಗ್ರಹಾರ ಗ್ರಾಮದ ಸ.ಪ.ಪೂ ಕಾಲೇಜಿನ ಪ್ರಾಂಶುಪಾಲ ಸಿಂದೂ ಚಂದ್ರಶೇಖರ್, ಉಪನ್ಯಾಸಕರಾದ ಎಂ.ಕೆ.ಹರಿಚರಣತಿಲಕ್, ನರೇಂದ್ರಬಾಬು, ಗ್ರಾ.ಪಂ ಸದಸ್ಯ ಮಂಜೇಗೌಡ, ಜಿ.ಪಂ ಮಾಜಿ ಸದಸ್ಯ ಬೋಜೇಗೌಡ, ಪ್ರಭಾರ ಪ್ರಾಂಶುಪಾಲ ಲೇಪಾಕ್ಷಿಗೌಡ ಮುಖ್ಯ ಅತಿಥಿಗಳಾಗಿದ್ದರು.

============

ಕೆ.ಆರ್.ಪೇಟೆ,ನ.03- ಧರ್ಮದಲ್ಲಿ ನಂಬಿಕೆಯಿರಬೇಕು. ಆದರೆ ಧಾರ್ಮಿಕ ಅಂದಾಭಿಮಾನವಿರಬಾರದು ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಹೇಳಿದ್ದಾರೆ.
ಅವರು ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಶ್ರೀ ಅಂಬಾಭವಾನಿ ಮತ್ತು ಪಾಂಡುರಂಗಸ್ವಾಮಿ ದೇವಸ್ಥಾನ ಸಮಿತಿಯು ದಾನಿಗಳ ನೆರವಿನಿಂದ ನೂತನವಾಗಿ ನಿರ್ಮಿಸಿರುವ  ಶ್ರೀ ಅಂಬಾಭವಾನಿ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನೆರದಿದ್ದ ಭಕ್ತಾಧಿಗಳನ್ನು ಕುರಿತು ಮಾತನಾಡುತ್ತಿದ್ದರು.
ಧರ್ಮ ಮತ್ತು ವಿಜ್ಞಾನ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಇಂದು ವೈಜ್ಞಾನಿಕ ತಳಹದಿಯ ಮೇಲೆ ಸಮಾಜ ನಿರ್ಮಾಣವಾಗುತ್ತಿದೆಯಾದರೂ ದೈವ ಶಕ್ತಿ ಇಲ್ಲದಿದ್ದರೆ ಯಾವುದೇ ಕೆಲಸವು ಕೈಗೂಡುವುದಿಲ್ಲ ಎಂದು ಅಭಿಪ್ರಾಯಪಟ್ಟ ಸಿಂದ್ಯಾ ಒಂದು ಕೆಲಸವನ್ನು ದೈವ ಭಕ್ತಿಯಿಂದ ಮಾಡಿದರೆ ಅದು ಯಶಸ್ಸು ಕಾಣುತ್ತದೆ. ಎಲ್ಲವನ್ನು ದೇವರೇ ಮಾಡುತ್ತಾನೆ ಎಂದು ಹೇಳುವುದು ತಪ್ಪು, ದೇವರು ಅಘೋಚರ ಶಕ್ತಿಯಲ್ಲಿದ್ದಾನೆಂದರು.   ಮನುಷ್ಯ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು. ದಾನಧರ್ಮದ ಗುಣಗಳನ್ನು ಅಳವಡಿಸಿಕೊಳ್ಳಬೇಕು. ದ್ವೇಷ ಅಸೂಯೆಗಳನ್ನು ದೂರ ಮಾಡಬೇಕು. ಧರ್ಮ ಯಾವುದಾದರೇನು ದೇವರೊಬ್ಬನೇ ಎಂಬ ನಾಣ್ಣುಡಿಯನ್ನು ಅರಿತುಕೊಳ್ಳಬೇಕು ಎಂದು ಕರೆ ನೀಡಿದ ಸಿಂದ್ಯಾ ವಿಶ್ವದಾದ್ಯಂತ ಕೆಲವರು ನಡೆಸುತ್ತಿರುವ ಭಯೋತ್ಪಾದನೆಯಿಂದ ಒಂದು ಧರ್ಮದ ವಿರುದ್ಧ ಇತರೆ ಧರ್ಮದ ಜನರಲ್ಲಿ ತಪ್ಪು ಕಲ್ಪನೆ ಮೂಡುತ್ತಿದೆ. ಹಾಗಾಗಿ ಈ ಭಯೋತ್ಪಾದನೆಯನ್ನು ಬುಡಸಮೇತ ಕಿತ್ತೊಗೆಯಲು ಎಲ್ಲರೂ ಶ್ರಮಿಸಬೇಕಾಗಿದೆ. ಇದಕ್ಕಾಗಿ ಕಠಿಣ ಕಾನೂನು ಜಾರಿಯಾಗಬೇಕಾಗಿದೆ.  ಭಯೋತ್ಪಾದನೆಯು ವಿಶ್ವದ ಅಭಿವೃದ್ಧಿಗೆ ಮಾರಕವಾಗಿದ್ದು ಭಯೋತ್ಪಾದಕರಿಗೆ ಮಾನವೀಯತೆಯ ಪಾಠ ಹೇಳಬೇಕಾಗಿದೆ. ಈ ಮೂಲಕ ವಿಶ್ವದ ಎಲ್ಲಾ ಜನತೆ ಶಾಂತಿ ನೆಮ್ಮದಿಯ  ಜೀವನ ಸಾಗಿಸಲು ಅನುವು ಮಾಡಿಕೊಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಮನುಷ್ಯ ತನಗೆ ಬೇಕಾದ ಎಲ್ಲಾ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಬಹುದು. ಆದರೆ ಮನಸ್ಸಿಗೆ ಬೇಕಾದ ಶಾಂತಿ ನೆಮ್ಮದಿಯನ್ನು ಕೊಂಡು ಕೊಳ್ಳಲು ಸಾಧ್ಯವಿಲ್ಲ. ಅದು ಧಾರ್ಮಿಕ ಕಾರ್ಯಕ್ರಮಗಳಿಂದ ಮಾತ್ರ ಸಿಗುತ್ತದೆಯೇ ಹೊರತು ಯಾವುದೇ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಹಾಗಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಸಿಂಧ್ಯಾ ಮನವಿ ಮಾಡಿದರು.
ಉಡುಪಿ ಶ್ರೀ ಮಠದ ಕಿರಿಯ ಶ್ರೀಗಳು, ಡಾ.ಭಾಷ್ಯಂ ಸ್ವಾಮೀಜಿ, ಶ್ರೀ ಈಶ್ವರಗಿರಿ ಸ್ವಾಮೀಜಿ, ಶ್ರೀ ಸ್ವಾಮಿನಾಮ ದೇವಾನಂದಸ್ವಾಮೀಜಿ, ಹಾಸನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ,  ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಧರ್ಮ ಸಂದೇಶ ನೀಡಿದರು.   ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕ ಇ.ಮಾರುತಿರಾವ್ ಪವಾರ್, ಜಿ.ಪಂ.ಸದಸ್ಯೆ ಗೌರಮ್ಮಶ್ರೀನಿವಾಸ್, ತಾ.ಪಂ. ಸದಸ್ಯೆ ರೇಣುಕಾಕಿಟ್ಟು, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಆರ್.ರಘು, ತಾಲೂಕು ಮರಾಠ ಸಮಾಜದ ಮುಖಂಡರಾದ ಕೃಷ್ಣೋಜಿರಾವ್‍ಹಿತೇಶ್, ಶ್ರೀನಿವಾಸಕಾಳೆ, ಶ್ರೀ ಅಂಬಾಭವಾನಿ ಮತ್ತು ಪಾಂಡುರಂಗಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಸುಬ್ಬಾರಾವ್‍ಸಿಂಧೆ, ಮುಖ್ಯಸ್ಥ ಭೈರೋಜಿರಾವ್ ಚವ್ಹಾಣ್, ಉಪಾಧ್ಯಕ್ಷ ರಾಜ್‍ಕುಮಾರ್, ಕಾರ್ಯದರ್ಶಿ ವಿಠ್ಠಲ್‍ರಾವ್‍ಗವಾನೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



No comments:

Post a Comment