Monday, 24 November 2014

 ಕೃಷ್ಣರಾಜಪೇಟೆ. ಕ್ರೀಡೆಗಳಲ್ಲಿ ಸೋಲು ಗೆಲುವು ಸ್ವಾಭಾವಿಕವಾಗಿದೆ. ಇಂದಿನ ಸೋಲು ನಾಳಿನ ಗೆಲುವಾಗುವುದರಿಂದ ಯುವವಕೀಲರು ಸೋಲು-ಗೆಲುವನ್ನು ಸ್ಪರ್ಧಾ ಮನೋಭಾವನೆಯಿಂದ ಸ್ವೀಕರಿಸಿಕೊಂಡು ಎದೆಗುಂದದೇ ಮುನ್ನಡೆಯಬೇಕು ಎಂದು ಪಟ್ಟಣದ ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಸ್.ಗೋಪಾಲಪ್ಪ ಕರೆ ನೀಡಿದರು.
ಅವರು ಇಂದು ಪಟ್ಟಣದ ನಾಲ್ವಡಿ ಕೃಷ್ಣರಾಜಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ ವಕೀಲರ ಸಂಘವು ನ.26ರಂದು ನಡೆಯಲಿರುವ ವಕೀಲರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಕೀಲರ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್’ಅನ್ನು ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದಿನ ಒತ್ತಡದ ಬದುಕಿನಿಂದ ಯುವ ವಕೀಲರು ಮುಕ್ತಿ ಪಡೆಯಲು ಕ್ರೀಡಾ ಚಟುವಟಿಕೆಗಳು, ಧ್ಯಾನ, ಯೋಗಾಸನ ಮತ್ತು ದೈಹಿಕ ವ್ಯಾಯಾಮವು ವರದಾನವಾಗಿದೆ. ಏಕಾಗ್ರತೆಯಿಂದ ಒತ್ತಡ ಮುಕ್ತರಾಗಿ ಅಭ್ಯಾಸ ಮಾಡಿದರೆ ಯಾವುದೇ ಸಾಧನೆಯನ್ನು ಸುಲಭವಾಗಿ ಮಾಡಲು ಅವಕಾಶವಿರುವುದರಿಂದ ಶ್ರದ್ಧೆಯಿಂದ ಅಭ್ಯಾಸ ಮಾಡಿ ಕ್ರೀಡೆಯಲ್ಲಿ ಸಾಧನೆ ಮಾಡಿ ಶ್ರೇಷ್ಠ ಸಾಧಕರಾಗಿ ಹೊರಹೊಮ್ಮಬೇಕು ಎಂದು ಮನವಿ ಮಾಡಿದ ನ್ಯಾಯಾಧೀಶ ಗೋಪಾಲಪ್ಪ ಮಾನಸಿಕ ಒತ್ತಡದಿಂದ ಹೊರಬರಲು ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳ ಅಭ್ಯಾಸವು ಚೇತೋಹಾರಿ ದಿವ್ಯ ಸಾಧನವಾಗಿದೆ. ವಕೀಲರ ದಿನಾಚರಣೆಯ ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ವಕೀಲ ಮಿತ್ರರನ್ನು ಒಂದೆಡೆ ಸೇರಿಸಿ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ನಡೆಸುತ್ತಿರುವುದು ಇಡೀ ನಾಗರಿಕ ಸಮಾಜವೇ ಮೆಚ್ಚುವಂತಹ ವಿಚಾರವಾಗಿದೆ. ವಕೀಲರು ತಮ್ಮಲ್ಲಿ ನ್ಯಾಯವನ್ನು ಅರಸಿ ಬರುವ ಬಡ ಕಕ್ಷೀದಾರರಿಗೆ ನ್ಯಾಯವನ್ನು ದೊರಕಿಸಿಕೊಡಲು ಬದ್ಧತೆಯಿಂದ ವಾದವನ್ನು ಮಂಡಿಸಿ ವೃತ್ತಿಧರ್ಮ ಹಾಗೂ ನ್ಯಾಯವನ್ನು ಎತ್ತಿಹಿಡಿಯಲು ಶ್ರಮಿಸಬೇಕು. ನಿತ್ಯವೂ ಕಾನೂನು ಪುಸ್ತಕಗಳನ್ನು ಓದುವ, ವಿಶ್ವದ ವಿದ್ಯಮಾನಗಳ ಬಗ್ಗೆ ಕುತೂಹಲದಿಂದ ತಿಳಿದುಕೊಳ್ಳುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕ್ರೀಡಾಕೂಟದಲ್ಲಿ ಬೋಲಿಂಗ್ ಮಾಡಿ ನಂತರ ಬ್ಯಾಟಿಂಗ್ ಮಾಡಿದ ಕಿರಿಯಶ್ರೇಣಿ ನ್ಯಾಯಾಧೀಶ ಎಸ್.ಕುಮಾರ್ ಮಾತನಾಡಿ ಕ್ರೀಡಾ ಚಟುವಟಿಕೆಗಳು ಒತ್ತಡ ಮುಕ್ತವಾದ ಬದುಕಿಗೆ ಸಂಜೀವಿನಿಯಿದ್ದಂತೆ, ಸತತವಾದ ಅಭ್ಯಾಸ ಹಾಗೂ ಏಕಾಗ್ರತೆಯಿಂದ ಅಭ್ಯಾಸ ಮಾಢಿ ಮುನ್ನಡೆದರೆ ಶ್ರೇಷ್ಠ ಸಾಧಕರಾಗಿ ಹೊರಹೊಮ್ಮಬಹುದು. ವಕೀಲರು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಕಲೆ, ಸಾಹಿತ್ಯ, ಕ್ರೀಡೆ ಸೇರಿದಂತೆ ಎಲ್ಲಾ  ವಿಚಾರಗಳನ್ನು ಅಭ್ಯಾಸ ಮಾಡುವ ಮೂಲಕ ಕೀರ್ತಿಗಳಿಸಬೇಕು ಎಂದು ಕರೆ ನೀಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ಅನಂತರಾಮಯ್ಯ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಭ್ಯಾಸ ಪಂದ್ಯದಲ್ಲಿ ಶ್ರೀರಂಗಪಟ್ಟಣ ಮತ್ತು ಕೆ.ಆರ್.ಪೇಟೆ ಎ’ತಂಡಗಳು ಆಟವಾಡಿದವು. ಜಿಲ್ಲೆಯ ಎಲ್ಲಾ ಏಳೂ ತಾಲೂಕುಗಳ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ, ಹಿರಿಯ ವಕೀಲರಾದ ಬಿ.ಎಲ್.ದೇವರಾಜು, ಹೆಚ್.ರವಿ, ಬಂಡಿಹೊಳೆ ಗಣೇಶ್, ಎಸ್.ಡಿ.ಸರೋಜಮ್ಮ, ಸ್ವರೂಪ, ಎಂ.ಎಲ್.ಸುರೇಶ್, ಸಿ.ಎನ್.ಮೋಹನ್, ಕೆರೆಮೇಗಳಕೊಪ್ಪಲು ಶಂಕರೇಗೌಡ, ಎಂ.ಆರ್.ಪ್ರಸನ್ನಕುಮಾರ್, ಅಪರ ಸರ್ಕಾರಿ ವಕೀಲರಾದ ಪುರಮಂಜುನಾಥ್, ಮತ್ತಿತರರು  ಭಾಗವಹಿಸಿದ್ದರು.
ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ಅನಂತರಾಮಯ್ಯ ಸ್ವಾಗತಿಸಿದರು, ಶಂಕರೇಗೌಡ ವಂದಿಸಿದರು. ರಾಜೇಗೌಡ ಮತ್ತು ಪಾಂಡು ಕಾರ್ಯಕ್ರಮ ನಿರೂಪಿಸಿದರು.




No comments:

Post a Comment