ಕೃಷ್ಣರಾಜಪೇಟೆ. ಗ್ರಾಮೀಣ ಪ್ರದೇಶದ ಜನರು ಆಸ್ತಿ ಸಂಪಾದನೆಯ ಕಡೆಗೆ ಗಮನ ನೀಡದೇ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡುವ ಮೂಲಕ ತಮ್ಮ ಮಕ್ಕಳನ್ನೇ ಸಮಾಜಕ್ಕೆ ಕೊಡುಗೆಯನ್ನಾಗಿ ನೀಡಬೇಕು ಎಂದು ಶಾಸಕ ನಾರಾಯಣಗೌಡ ಕರೆ ನೀಡಿದರು.
ಅವರು ಇಂದು ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆ ಹಾಗೂ ಅಕ್ಷರ ದಾಸೋಹ ಮಧ್ಯಾಹ್ನದ ಬಿಸಿಯೂಟ ತಯಾರಿಕೆಯ ಅನ್ನಪೂರ್ಣ ಅಡುಗೆ ಮನೆಯನ್ನು ಉದ್ಘಾಟಿಸಿದ ನಂತರ ನಡೆದ ಸಭೆಯಲ್ಲಿ ಸಾರ್ವಜನಿಕರನ್ನು ಉದ್ಧೇಶಿಸಿ ಮಾತನಾಡಿದರು.
ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಹಣದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಆದರೆ ನಾವು ಕಷ್ಟಪಟ್ಟು ಕಲಿತ ವಿದ್ಯೆಯ ಜ್ಞಾನದಿಂದ ಯಾವುದೇ ಸವಾಲನ್ನು ಸುಲಭವಾಗಿ ಎದುರಿಸಿ ಶ್ರೇಷ್ಠ ಸಾಧನೆಯನ್ನು ಮಾಡುವ ಮೂಲಕ ಹಣ ಮತ್ತು ಕೀರ್ತಿ ಎರಡನ್ನೂ ಪಡೆಯಬಹುದು. ಇಂದಿನ ಸಾಮಾಜಿಕ ಅಸಮಾನತೆಯನ್ನು ಹೊಡೆದೋಡಿಸುವ ಶಕ್ತಿಯು ಶಿಕ್ಷಣದ ಜ್ಞಾನಕ್ಕಿದೆಯಾದ್ದರಿಂದ ಗ್ರಾಮೀಣ ಜನರು ಹೆಣ್ಣು-ಗಂಡು ಎಂಬ ಭೇಧ-ಭಾವವನ್ನು ಮಾಡದೇ ಕಡ್ಡಾಯವಾಗಿ ಶಾಲೆಗೆ ಕಳುಹಿಸಿ ವಿದ್ಯೆಯ ಜ್ಞಾನದ ಶಕ್ತಿಯನ್ನು ಕೊಡಿಸಿ ಸಾಧನೆ ಮಾಡಿ ಮುನ್ನಡೆಯುವಂತೆ ಬೆನ್ನುತಟ್ಟಿ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದ ಶಾಸಕರು ಇಂದು ಸರ್ಕಾರಿ ಶಾಲೆಗಳಲ್ಲಿಯೇ ಉಚಿತವಾಗಿ ಗುಣಮಟ್ಟದ ಶಿಕ್ಷಣವು ಉಚಿತವಾಗಿ ದೊರೆಯುತ್ತಿರುವುದರಿಂದ ಪೋಷಕರು ಕಾನ್ವೆಂಟ್ ವ್ಯಾಮೋಹವನ್ನು ಬಿಟ್ಟು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಿ ಹೆಚ್ಚಿನ ಜ್ಞಾನವಂತರನ್ನಾಗಿ ಮಾಡಬೇಕು. ಸಕಾರವು ಮಕ್ಕಳಿಗೆ ಉಚಿತವಾಗಿ ನೀಡುವ ಬೈಸಿಕಲ್, ಮಧ್ಯಾಹ್ನದ ಬಿಸಿಯೂಟ, ಶಾಲಾ ಸಮವಸ್ತ್ರ, ವಿದ್ಯಾರ್ಥಿವೇತನ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಶ್ರದ್ಧೆ ಹಾಗೂ ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಶ್ರೇಷ್ಠಸಾಧನೆ ಮಾಡುವ ಮೂಲಕ ತಂದೆ ತಾಯಿಗಳು ಹಾಗೂ ಗುರು-ಹಿರಿಯರಿಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ಜಗಧೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಫ್ರಾಂಕ್ಲಿನ್ ಕ್ರಿಸ್ಟೋಫರ್ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾಲೇಜಿಗೆ ಅಗತ್ಯವಾಗಿ ಬೇಕಾಗಿರುವ ಹೆಚ್ಚುವರಿ ಕೊಠಡಿಗಳು ಹಾಗೂ ಶಾಲಾ ಮೈದಾನಕ್ಕೆ ಕಾಂಪೌಂಡ್ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಸಿ.ಚೆಲುವೇಗೌಡ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವಿಶಕಂಠೇಗೌಡ, ಸದಸ್ಯರಾದ ವಿಠಲಾಪುರ ಸುಬ್ಬೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ವಿ.ಡಿ.ಮೋಹನ್, ಜಯರಾಮೇಗೌಡ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ, ಮಾಜಿ ಅಧ್ಯಕ್ಷ ಪಾಪೇಗೌಡ, ಮುಖಂಡರಾದ ದೊದ್ದನಕಟ್ಟೆ ಪಾಂಡು, ಕಿರಣ್, ರಮೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕರ್, ಶಿವಲಿಂಗಪ್ಪ, ಶಾಲಾಭಿವೃಧ್ಧಿ ಸಮಿತಿಯ ರಾಜು, ನಾಗರಾಜು, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ರಾಮಕೃಷ್ಣ, ಬಿಇಓ ಜವರೇಗೌಡ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ, ಜಿ.ಪಂ ಕುಡಿಯುವ ನೀರು ವಿಭಾಗದ ಎಇಇ ರಮೇಶ್, ಸಹಾಯಕ ಎಂಜಿನಿಯರ್ ಮೋಹನ್‍ಕುಮಾರ್, ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಿರಿಯ ಉಪನ್ಯಾಸಕರಾದ ಡಿ.ಲಿಂಗರಾಜು ಸ್ವಾಗತಿಸಿದರು, ಬಸವರಾಜು ವಂದಿಸಿದರು. ಎಂ.ಮಲ್ಲಿಕಾರ್ಜುನ ಮತ್ತು ರಾಜಾಚಾರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ರಂಜಿತ ಪ್ರಾರ್ಥಿಸಿದರು.
No comments:
Post a Comment