Friday, 25 July 2014

ಕೃಷ್ಣರಾಜಪೇಟೆ..ಹಾಲು ಉತ್ಪಾದಕರು ಡೈರಿಗಳಿಗೆ ಗುಣಮಟ್ಟದ ಹಾಲನ್ನು ಸರಬರಾಜು ಮಾಡದಿದ್ದರೆ ಸಹಕಾರ ಸಂಸ್ಥೆಗಳಿಗೆ ಉಳಿಗಾಲವಿಲ್ಲ.ಅಂಬರೀಶ್.

ಕೃಷ್ಣರಾಜಪೇಟೆ. ಹಾಲು ಉತ್ಪಾದಕರು ಡೈರಿಗಳಿಗೆ ಗುಣಮಟ್ಟದ ಹಾಲನ್ನು ಸರಬರಾಜು ಮಾಡದಿದ್ದರೆ ಸಹಕಾರ ಸಂಸ್ಥೆಗಳಿಗೆ ಉಳಿಗಾಲವಿಲ್ಲ. ಇಂದಿನ ಮಾರುಕಟ್ಟೆಯ ಸ್ಪರ್ಧೆಯಲ್ಲಿ ಬೇರೆ ಬ್ರಾಂಡುಗಳ ಹಾಲುಗಳು ನೀಡುತ್ತಿರುವ ಪೈಪೋಟಿಯನ್ನು ಎದುರಿಸಿ ಮುನ್ನುಗ್ಗಬೇಕಾದರೆ ನಂದಿನಿ ಬ್ರಾಂಡ್ ಹಾಲು ಬೇರೆ ಹಾಲಿಗಿಂತ ಉತ್ತಮವಾಗಿರಬೇಕು. ಈ ದಿಕ್ಕಿನಲ್ಲಿ ಕಲಬೆರೆಕೆ ಮುಕ್ತ ಶುದ್ಧವಾದ ಹಾಲು ಸರಬರಾಜಾಗುವಂತೆ ನೋಡಿಕೊಳ್ಳಿ ಎಂದು ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ಮತ್ತು ಟೆಸ್ಟರ್‍ಗಳಿಗೆ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಸ್ವಾಮಿ ಮನವಿ ಮಾಡಿದರು.
ಅವರು ಇಂದು ಪಟ್ಟಣದ ಹೊರವಲಯದಲ್ಲಿರುವ ಹಾಲು ಶೀಥಲೀಕರಣ ಕೇಂದ್ರದ ಆವರಣದಲ್ಲಿ ತಾಲೂಕಿನ ಹಾಲು ಉತ್ಪಾದಕರ ನೌಕರರ ಯೂನಿಯನ್ ಜಿಲ್ಲಾ ಹಾಲು ಒಕ್ಕೂಟದ ನೂತನ ನಿರ್ದೇಶಕರಾಗಿ ತಾಲೂಕಿನಿಂದ ಆಯ್ಕೆಯಾಗಿರುವ ಎಸ್.ಅಂಬರೀಶ್ ಮತ್ತು ಕೆ.ರವಿಕುಮಾರ್ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹಾಲು ಒಕ್ಕೂಟದ ಅಭಿವೃದ್ಧಿಗೆ ದುಡಿಯುವ ಮನಸ್ಸಿರುವ ಕ್ರಿಯಾಶೀಲ ಯುವ ನಿರ್ದೇಶಕರು ತಾಲೂಕಿನಿಂದ ಆಯ್ಕೆಯಾಗಿದ್ದಾರೆ. ಇವರು ಆಯ್ಕೆಯಾದ 20 ದಿನಗಳಲ್ಲಿ ಹಾಲು ಉತ್ಪಾದಕರು ತಮ್ಮ ಡೈರಿಗಳಿಗೆ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮನೋಭಾವನೆಯನ್ನು ಬೆಳೆಸಿಕೊಂಡು ಡೈರಿಗಳನ್ನು ಉಳಿಸಿ ಬೆಳೆಸಿ ಎಂಬ ಅರಿವಿನ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಭಿನಂದಿಸಿದ ಡಾ.ಸ್ವಾಮಿ ಹಾಲು ಉತ್ಪಾದಕರು ಮತ್ತು ಜಿಲ್ಲಾ ಹಾಲು ಒಕ್ಕೂಟದ ನಡುವೆ ಸೇತುವೆಯಂತೆ ಕೆಲಸ ನಿರ್ವಹಿಸುತ್ತಿರುವ ಹಾಲಿನ ಡೈರಿಗಳ ಕಾರ್ಯದರ್ಶಿಗಳು ಹಾಗೂ ಹಾಲು ಪರೀಕ್ಷಕರು ಬದ್ಧತೆಯನ್ನು ಅಳವಡಿಸಿಕೊಂಡು ಕಡಿಮೆ ಗುಣಮಟ್ಟದ ಹಾಲು ಡೈರಿಗಳಿಗೆ ಸರಬರಾಜಾಗದಂತೆ ನಿಗಾ ವಹಿಸಬೇಕು. ಮಹಿಳಾ ಡೈರಿಗಳ ಆಡಳಿತದಲ್ಲಿ ಪುರುಷರು ಹಸ್ತಕ್ಷೇಪ ಮಾಡದಂತೆ ಎಚ್ಚರ ವಹಿಸಬೇಕು. ಪ್ರಸ್ತುತ ತಾಲೂಕಿನ ಹಾಲಿನ ಗುಣಮಟ್ಟದಲ್ಲಿ ಏರಿಕೆಯಾಗುತ್ತಿದ್ದರೂ ಎಸ್.ಎನ್.ಎಫ್ ಪ್ರಮಾಣವು ಶೇ.85ಕ್ಕಿಂತ ಕಡಿಯಾಗದಂತೆ ನೋಡಿಕೊಳ್ಳಬೇಕು. ಕೆಲವೇ ಜನರು ನೀಡುವ ಕಡಿಮೆ ದರ್ಜೆಯ ಹಾಲನ್ನು ಮುಲಾಜಿಗೆ ಒಳಗಾಗಿ ಕಾರ್ಯದರ್ಶಿಗಳು ಖರೀದಿ ಮಾಡಿದರೆ ಇಡೀ ಗ್ರಾಮಕ್ಕೆ ಕೆಟ್ಟಹೆಸರು ಬರುವುದರಿಂದ ಜಿಲ್ಲೆಯ 85ಸಾವಿರ ಹಾಲು ಉತ್ಪಾದಕರು ಶುದ್ಧವಾದ ಹಾಲನ್ನೇ ಸರಬರಾಜು ಮಾಡುತ್ತೇವೆ ಎಂದು ಧಿಕ್ಷೆ ತೊಡಬೇಕಾಗಿದೆ ಎಂದು ಮನವಿ ಮಾಡಿದರು.
ನೌಕರರ ಯೂನಿಯನ್ ನೀಡಿದ ಆತ್ಮೀಯ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಎಸ್.ಅಂಬರೀಶ್ ಹೊಸದಾಗಿ ಆಯ್ಕೆಯಾಗಿರುವ ನಿರ್ದೇಶಕರು ಹಾಲಿನ ಗುಣಮಟ್ಟಕ್ಕೆ ಒತ್ತು ನೀಡಿ ನಮಗೆ ತೊಂದರೆ ನೀಡುತ್ತಿದ್ದಾರೆ ಎಂದು ಹಾಲಿನ ಡೈರಿಗಳ ಕಾರ್ಯದರ್ಶಿಗಳು ಹಾಗೂ ಟೆಸ್ಟರ್‍ಗಳು ತಪ್ಪು ತಿಳಿಯಬಾರದು, ನಮಗೆ ಎಲ್ಲಾ ಡೈರಿಗಳೂ ಒಂದೇ, ಕಲಬೆರಕೆ ರಹಿತವಾದ ಗುಣಮಟ್ಟದ ಹಾಲನ್ನು ಸರಬರಾಜು ಆಗುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿರುವುದರಿಂದ  ನಾವುಗಳು ಸೇಡಿನ ರಾಜಕಾರಣ ಮಾಡದೇ ಹಾಲು ಒಕ್ಕೂಟದ ಅಭಿವೃಧ್ಧಿಯನ್ನು ಗುರಿಯನ್ನಾಗಿಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಕೆಲವು ಡೈರಿಗಳ ಮಾಜಿ ಅಧ್ಯಕ್ಷರೇ ಹಾಲಿಗೆ ಸಕ್ಕರೆ ಮತ್ತು ಯೂರಿಯಾವನ್ನು ಬೆರೆಸಿ ಕಲಬೆರಕೆ ಮಾಡಿರುವ ಹಾಲನ್ನು ಸರಬರಾಜು ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದೇವೆ. ಹಾಲಿನ ಡೈರಿಗಳು ಅಭಿವೃದ್ಧಿಹೊಂದಿ ಹಾಲು ಉತ್ಪಾದಕರು ಹೆಚ್ಚಿನ ಲಾಭವನ್ನು ಸಂಪಾದನೆ ಮಾಡಬೇಕಾದರೆ ಗುಣಮಟ್ಟದ ಕಾಪಾಡುವಿಕೆ ಬಹಳ ಮುಖ್ಯ ಈ ದಿಕ್ಕಿನಲ್ಲಿ ನೌಕರರು ಬದ್ಧತೆಯಿಂದ ಕೆಲಸ ಮಾಡಿ ಸಹಕಾರ ಕ್ಷೇತ್ರವನ್ನು ಉಳಿಸಿ ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಒಕ್ಕೂಟದ ಮತ್ತೋರ್ವ ನಿರ್ದೇಶಕ ಡಾಲುರವಿ ಮಾತನಾಡಿ ಸನ್ಮಾನಗಳು ಜವಾಬ್ಧಾರಿಯನ್ನು ಹೆಚ್ಚಿಸುವುದರಿಂದ ಹಾಲು ಉತ್ಪಾದಕರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಒಕ್ಕೂಟವನ್ನು ರಾಜ್ಯದಲ್ಲಿಯೇ ಮಾದರಿಯಾಗಿ ಅಭಿವೃದ್ಧಿಪಡಿಸಲು ದುಡಿಯುವ ಜೊತೆಗೆ ಜಿಲ್ಲೆಯ ಹಾಲು ಗುಣಮಟ್ಟದಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನವನ್ನು ಪಡೆಯುವ ನಿಟ್ಟಿನಲ್ಲಿ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ. ಹಾಲು ಉತ್ಪಾದಕರಿಗೆ ವರದಾನವಾಗಿರುವ ಜನಶ್ರೀ ವಿಮಾ ಯೋಜನೆಗೆ ಕಡ್ಡಾಯವಾಗಿ ಹಾಲು ಉತ್ಪಾದಕರು ಸದಸ್ಯರಾಗಿ ಅನುಕೂಲಗಳನ್ನು ಪಡೆದುಕೊಂಡು ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂದರು.
ತಾಲೂಕು ಹಾಲು ಉತ್ಪಾದಕರ ನೌಕರರ ಯೂನಿಯನ್ ಅಧ್ಯಕ್ಷ ಮರಿಸ್ವಾಮಿಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾದ ಶೀಳನೆರೆ ಹಾಲಿನ ಡೈರಿಯ ಕಾರ್ಯದರ್ಶಿ ಸಿದ್ಧೇಗೌಡ, ಬೀರವಳ್ಳಿ ಹಾಲಿನ ಡೈರಿಯ ಕಾರ್ಯದರ್ಶಿ ಬಿ.ಟಿ.ಚಂದ್ರೇಗೌಡ ಹಾಗೂ ಈ ತಿಂಗಳ ಅಂತ್ಯಕ್ಕೆ ನಿವೃತ್ತರಾಗುತ್ತಿರುವ ವಿಸ್ತರಣಾಧಿಕಾರಿ ಸಿದ್ಧೇಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಒಕ್ಕೂಟದ ಉಪವ್ಯವಸ್ಥಾಪಕ ಡಾ.ಅಕ್ಕಲಪ್ಪರೆಡ್ಡಿ, ಸಹಾಯಕ ವ್ಯವಸ್ಥಾಪಕ ರವೀಂದ್ರನಾಥ್, ಮಾರ್ಗದ ವಿಸ್ತರಣಾಧಿಕಾರಿಗಳಾದ ದತ್ತಾತ್ರೇಯ, ಕೆ.ಬಿ.ನಾಗರಾಜ್, ಶೀಥಲೀಕರಣ ಕೇಂದ್ರದ ವ್ಯವಸ್ಥಾಪಕ ಶ್ರೀನಿವಾಸಮೂರ್ತಿ, ಸ್ಟೋರ್‍ಕೀಪರ್ ರವಿಕುಮಾರ್, ಪುರಸಭೆಯ ಮಾಜಿಸದಸ್ಯ ಕೆ.ಆರ್.ನೀಲಕಂಠ ಭಾಗವಹಿಸಿ ಮಾತನಾಡಿದರು.
ಅಕ್ಕಿಹೆಬ್ಬಾಳು ಡೈರಿಯ ಕಾರ್ಯದರ್ಶಿ ಅನಂತು ಪ್ರಾರ್ಥಿಸಿದರು. ಹೊಸಹೊಳಲು ಹಾಲಿನ ಡೈರಿಯ ಕಾರ್ಯದರ್ಶಿ ಕಾಂತರಾಜು ಸ್ವಾಗತಿಸಿಸದರು. ಕಿಕ್ಕೇರಿ ಡೈರಿಯ ಕಾರ್ಯದರ್ಶಿ ಕೃಷ್ಣೇಗೌಡ ವಂದಿಸಿದರು. ಗುಬ್ಬಹಳ್ಳಿ ಹಾಲಿನ ಡೈರಿಯ ಕಾರ್ಯದರ್ಶಿ ವನಿತ ಮತ್ತು ಕೈಗೋನಹಳ್ಳಿ ಡೈರಿಯ ಕಾರ್ಯದರ್ಶಿ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪಿಡಿಜಿಕೊಪ್ಪಲು ಹಾಲಿನ ಡೈರಿಯ ಕಟ್ಟಡದ ನಿರ್ಮಾಣಕ್ಕೆ 75 ಸಾವಿರ ರೂ ಸಹಾಯ ಧನದ ಚೆಕ್ಕನ್ನು ವಿತರಿಸಲಾಯಿತು.
ಚಿತ್ರಶೀರ್ಷಿಕೆ: 25-ಏಖPಇಖಿಇ-02 ಕೃಷ್ಣರಾಜಪೇಟೆ ಪಟ್ಟಣದ ಹಾಲುಶೀಥಲಿಕರಣ ಕೇಂದ್ರದ ಆವರಣದಲ್ಲಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಯೂನಿಯನ್ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾಗಿರುವ ಎಸ್.ಅಂಬರೀಶ್ ಮತ್ತು ಡಾಲುರವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಸ್ವಾಮಿ, ನೌಕರರ ಯೂನಿಯನ್ ಅಧ್ಯಕ್ಷ ಮರಿಸ್ವಾಮಿಗೌಡ ಮತ್ತಿತರರು ಚಿತ್ರದಲ್ಲಿದ್ದಾರೆ.

No comments:

Post a Comment