Wednesday, 30 July 2014

ಕೆ.ಆರ್.ಪೇಟೆ-ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣದ ಸಂಸ್ಕಾರವನ್ನು ಕೊಡಿಸಿ- ಕ್ಷೇತ್ರಶಿಕ್ಷಣಾಧಿಕಾರಿ ಎಸ್.ರೇವಣ್ಣ ಮನವಿ

ಕೃಷ್ಣರಾಜಪೇಟೆ. ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಸತ್ಪ್ರಜೆಗಳಾದ್ದರಿಂದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣದ ಸಂಸ್ಕಾರವನ್ನು ಕೊಡಿಸಿ ತಮ್ಮ ಮಕ್ಕಳನ್ನೇ ಸಮಾಜಕ್ಕೆ ಕೊಡುಗೆಯಾಗಿ ನೀಡಿ ನಾಗರಿಕ ಸಮಾಜದಲ್ಲಿನ ಒಂದೇ ಒಂದು ಮಗುವೂ ಕೂಡ ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎಸ್.ರೇವಣ್ಣ ಮನವಿ ಮಾಡಿದರು.
ಅವರು ಇಂದು ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ನಡೆದ ಶಾಲಾ ಮಕ್ಕಳ ವಿಶೇಷ ದಾಖಲಾತಿ ಆಂದೋಲನದ ಅಂಗವಾಗಿ ನಡೆದ ಜಾಗೃತಿ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಜ್ಞಾನವು ಯಾರೂ ಕದಿಯಲಾರದ ಆಸ್ತಿಯಾಗಿದೆ. ಶಿಕ್ಷಣದ ಜ್ಞಾನದ ಶಕ್ತಿಗೆ ಮಾತ್ರ ಸಾಮಾಜಿಕ ಅಸಮಾನತೆಯನ್ನು ಅಳಿಸಿಹಾಕಿ ಸಮಾನತೆಯ ಸಮಾಜವನ್ನು ನಿರ್ಮಿಸುವ ತಾಕತ್ತಿದೆಯಾದ್ದರಿಂದ ಸರ್ಕಾರದ ಆಶಯದಂತೆ 5ರಿಂದ15 ವರ್ಷದೊಳಗಿನ ಒಂದೇ ಒಂದು ಮಗುವೂ ಕೂಡ ಶಿಕ್ಷಣವನ್ನು ಪಡೆಯುವುದರಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು. ಮಕ್ಕಳು ಆಟವಾಡಿಕೊಂಡು, ಓದಿ ವಿದ್ಯಾವಂತರಾಗುವ ಸಮಯದಲ್ಲಿ ಶಾಲೆಯನ್ನು ಬಿಡಿಸಿ ಬಾಲಕಾರ್ಮಿಕರನ್ನಾಗಿ ಮಾಡುವುದು ಹಾಗೂ ಮಕ್ಕಳ ಹಕ್ಕುಗಳ ಧಮನ ಮಾಡುವುದು ಕಾನೂನಿನ ದೃಷ್ಠಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ಶಿಕ್ಷಣದ ಜ್ಞಾನವನ್ನು ಕೊಡಿಸಿ ಶ್ರೇಷ್ಠ ನಾಗರಿಕರನ್ನಾಗಿ ರೂಪಿಸಬೇಕು. ಈ ದಿಕ್ಕಿನಲ್ಲಿ ನಾಗರಿಕ ಸಮಾಜದ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಜಿ.ಬಿ.ರಾಮಪ್ಪ ಮಾತನಾಡಿ ಎಲ್ಲಾ ಜಾತಿ ಹಾಗೂ ವರ್ಗಗಳ ಮಕ್ಕಳಿಗೆ ಶಿಕ್ಷನದ ಜ್ಞಾನದ ಬೆಳಕನ್ನು ನೀಡುವ ಸರ್ಕಾರಿ ಶಾಲೆಗಳು ದೇವಾಲಯಗಳಿಗಿಂತಲೂ ಶ್ರೇಷ್ಠವಾಗಿವೆ. ಮಕ್ಕಳ ಅಭ್ಯುದಯದಲ್ಲಿ ಪೋಷಕರು ಸಂತೋಷ ಪಡಬೇಕಲ್ಲದೇ, ಮಕ್ಕಳಿಗೆ ಸರ್ಕಾರವು ಉಚಿತವಾಗಿ ನೀಡುತ್ತಿರುವ ಶಿಕ್ಷಣವನ್ನು ಕೊಡಿಸುವ ಬದ್ಧತೆಯನ್ನು ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿದರು.
ಮುಖ್ಯಶಿಕ್ಷಕ ಸೋಮಶೇಖರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎನ್.ಚಂದ್ರಶೇಖರ್, ಶಿಕ್ಷಣ ಸಂಯೋಜಕರಾದ ಪಿ.ಜೆ.ಕುಮಾರ್, ಬಲರಾಮು, ನವೀನ್, ಲೋಕೇಶ್, ಚೆನ್ನರಾಜು, ಯೋಗೇಂದ್ರ, ಎಸ್.ಕೆ.ರವಿಕುಮಾರ್, ಶಿಕ್ಷಕರಾದ ಲಕ್ಷ್ಮಣಗೌಡ, ನಾಗರಾಜೇಗೌಡ, ಸವಿತ ಮತ್ತಿತರರು ಜಾಥಾದಲ್ಲಿ ಭಾಗವಹಿಸಿದ್ದರು.
ಚಿತ್ರಶೀರ್ಷಿಕೆ: 30-ಏಖPಇಖಿಇ-02  ಕೃಷ್ಣರಾಜಪೇಟೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ನಡೆದ ಶಾಲಾ ಮಕ್ಕಳ ವಿಶೇಷ ದಾಖಲಾತಿ ಆಂದೋಲನದ ಅಂಗವಾಗಿ ನಡೆದ ಜಾಗೃತಿ ಮೆರವಣಿಗೆಯನ್ನು ಉದ್ಘಾಟಿಸಿದ ಕ್ಷೇತ್ರಶಿಕ್ಷಣಾಧಿಕಾರಿ ಎಸ್.ರೇವಣ್ಣ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಜಿ.ಬಿ.ರಾಮಪ್ಪ ಮತ್ತಿತರರು ಚಿತ್ರದಲ್ಲಿದ್ದಾರೆ.

ಕೃಷ್ಣರಾಜಪೇಟೆ. ರಾಜ್ಯದ್ಯಂತ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ ಹಾಗೂ ದೌರ್ಜನ್ಯವನ್ನು ತಡೆಯುವಲ್ಲಿ ವಿಫಲವಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಇಂದು ವಕೀಲರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ಅನಂತರಾಮಯ್ಯ ಮತ್ತು ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಅವರ ನೇತೃತ್ವದಲ್ಲಿ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿದ ವಕೀಲರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ತಾಲೂಕು ಕಛೇರಿಗೆ ತೆರಳಿ ತಹಶೀಲ್ದಾರ್ ಶ್ರೀಧರಮೂರ್ತಿ ಅವರಿಗೆ ಮನವಿ ಪತ್ರವನ್ನು ಅರ್ಪಿಸಿದರು. ವಕೀಲರಾದ ಕೆರೆಮೇಗಳಕೊಪ್ಪಲು ಶಂಕರೇಗೌಡ, ಎಂ.ಎಲ್.ಸುರೇಶ್, ಬಂಡಿಹೊಳೆ ಗಣೇಶ್, ಬಿ.ಎಲ್.ದೇವರಾಜು, ಕೆ.ಟಿ.ಮಂಜುಳ, ಬಿ.ಆರ್.ಪಲ್ಲವಿ, ಎಸ್.ಡಿ.ಸರೋಜಮ್ಮ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

No comments:

Post a Comment