ಕೃಷ್ಣರಾಜಪೇಟೆ. ಪಟ್ಟಣದಲ್ಲಿ ತೊಗಟವೀರ ನೇಕಾರ ಸಮಾಜದವರು ಆಯೋಜಿಸಿದ್ದ 4ನೇ ವರ್ಷದ ಶ್ರೀ ಚಾಮುಂಡೇಶ್ವರಿ ತಾಯಿಯ ಕರಗ ಮಹೋತ್ಸವವವು ಜಾನಪದ ಕಲಾ ತಂಡಗಳ ವೈಭವದ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ನಡೆಯಿತು. ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ತರಳಬಾಳು ಬೃಹನ್ಮಠದ ಆನೆ ಗೌರಿಯು ತಾಯಿ ಶ್ರೀಚಾಮುಂಡೇಶ್ವರಿ ತಾಯಿಯ ಮೂರ್ತಿಯನ್ನು ಹೊತ್ತು ಗಂಭೀರವಾಗಿ ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು.
ಇತಿಹಾಸ ಪ್ರಸಿದ್ಧವಾದ ದೇವೀರಮ್ಮಣ್ಣಿ ಕೆರೆಯಿಂದ ಕರಗವನ್ನು ತಲೆಯ ಮೇಲೆ ಹೊತ್ತು ನಡೆಮುಡಿಯಲ್ಲಿ ಸಾಗಿದರೆ ದೇವರ ಗುಡ್ಡರು ತಾಯಿ ಚಾಮುಂಡಿಯನ್ನು ಜಾನಪದ ಗಾಯನದೊಂದಿಗೆ ಕರೆದು ನರ್ತಿಸಿದ್ದು ಭಕ್ತಿಯ ಪರಾಕಾಷ್ಠೆಗೆ ಭಕ್ತಾಧಿಗಳನ್ನು ಕರೆದೊಯ್ದಿತ್ತು. ಡೊಳ್ಳು ಕುಣಿತ, ಪಟ ಕುಣಿತ, ಪೂಜಾ ಕುಣಿತ, ನಂದಿಧ್ವಜ ಕುಣಿತ, ಸೋಮನಕುಣಿತ, ಕೋಲಾಟ, ವೀರಗಾಸೆ ನೃತ್ಯ, ಯಕ್ಷಗಾನ ಪಾತ್ರಧಾರಿಗಳು ಹಾಗೂ ಹಾಸ್ಯ ಪಾತ್ರಧಾರಿಗಳ ನೃತ್ಯವು ಸಾರ್ವಜನಿಕರನ್ನು ರಂಜಿಸಿದರೆ, ಸಿರಿಗೆರೆಯ ಬೃಹನ್ಮಠದ ಆನೆ ಗೌರಿಯು ತಾಯಿ ಚಾಮುಂಡೃಶ್ವರಿಯ ಮೂರ್ತಿಯನ್ನು ಹೊತ್ತು ಗಂಭೀರವಾಗಿ ಮೆರವಣಿಗೆಯಲ್ಲಿ ಸಾಗಿದ್ದು ಈ ಭಾರಿಯ ಕರಗ ಮಹೋತ್ಸವದ ವಿಶೇಷ ಆಕರ್ಷಣೆಯಾಗಿತ್ತು. ಬಾಣಬಿರುಸುಗಳು, ಪಟಾಕಿ ಮತ್ತು ಆಟಂ ಬಾಂಬ್‍ಗಳು ಹಾಗೂ ಸಿಡಿ ಮದ್ದುಗಳ ಸದ್ದಿಗೆ ಜಗ್ಗದೇ ಆನೆ ಗೌರಿಯು ಹೆಜ್ಜೆ ಹಾಕುತ್ತಾ ಶ್ರೀ ಚನ್ನಬಸವೇಶ್ವರ ದೇವಾಲಯದ ಪಕ್ಕದಲ್ಲಿರುವ ಶ್ರೀ ರಾಮಮಂದಿರದ ಜಾಗದಲ್ಲಿ ನಡೆದ ಪೂಜಾ ವಿಧಿವಿಧಾನಗಳಲ್ಲಿ ರಾಜ್ಯದ ದಾವಣಗೆರೆ, ಸಂತೇಸರಗೂರು, ಶ್ರೀರಂಗಪಟ್ಟಣ, ಕಡತನಾಳು, ಉಂಡಿಗನಾಳು, ಅರಳಕುಪ್ಪೆ, ಹೊನ್ನಾವಾರ, ಕುಣಿಗಲ್, ನಾಗಮಂಗಲ, ಪಾಂಡವಪುರ, ತುಮಕೂರು, ತಿಪಟೂರು, ಅಮ್ಮಸಂದ್ರ, ಚಿತ್ರದುರ್ಗ, ದಂಡಿನಶಿವರ, ತುರುವೇಕೆರೆ, ತೆಂಡೇಕೆರೆ, ಅಂಚನಹಳ್ಳಿ, ತಗಡೂರು ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕುಲಭಾಂದವರು ಆಗಮಿಸಿ ತಾಯಿ ಚಾಮುಂಡಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಜಿಲ್ಲಾ ತೊಗಟವೀರ ಸಮಾಜದ ಅಧ್ಯಕ್ಷ ಹಂಸರಮೇಶ್ ಕರಗ ಮಹೋತ್ಸವದ ನೇತೃತ್ವವನ್ನು ವಹಿಸಿದ್ದರೆ, ಪ್ರಧಾನ ಅರ್ಚಕರಾದ ನಂಜುಂಡಣ್ಣ ಪೂಜಾ ವಿಧಿ-ವಿಧಾನಗಳ ಉಸ್ತುವಾರಿಯನ್ನು ವಹಿಸಿದ್ದರು. ಪೂಜಾ ಕಾರ್ಯಕ್ರಮಗಳ ನಂತರ ನಡೆದ ಸಾಮೂಹಿಕ ಅನ್ನಸಂತರ್ಪಣೆಯಲ್ಲಿ 10ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಭಾಗವಹಿಸಿದ್ದರು.
ಕರಗಮಹೋತ್ಸವದಲ್ಲಿ ಶಾಸಕ ನಾರಾಯಣಗೌಡ, ಮಾಜಿಶಾಸಕ ಕೆ.ಬಿ.ಚಂದ್ರಶೇಖರ್, ಮಾಜಿ ವಿಧಾನಸಭಾಧ್ಯಕ್ಷ ಕೃಷ್ಣ, ಪುರಸಭೆ ಅಧ್ಯಕ್ಷ ಕೆ.ಗೌಸ್‍ಖಾನ್, ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಮಾಜಿಅಧ್ಯಕ್ಷರಾದ ಕೆ.ಹೆಚ್.ರಾಮಕೃಷ್ಣ, ಕೆ.ಸಿ.ವಾಸು, ನಾಗರಾಜು, ಪುರಸಭೆ ಸದಸ್ಯರಾದ ಕೆ.ಆರ್.ಹೇಮಂತಕುಮಾರ್, ಕೆ.ಎಸ್.ಸಂತೋಷ್, ಡಿ.ಪ್ರೇಮಕುಮಾರ್, ಬಿ.ಎನ್.ಪದ್ಮಾವತಿ, ಚೆಲುವರಾಜು, ನಂಜುಂಡಯ್ಯ, ಪಟ್ಟಣ ಪೋಲಿಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಎಂ.ಶಿವಕುಮಾರ್, ಮುಖಂಡರಾದ ಕೆ.ಆರ್.ಪುಟ್ಟಸ್ವಾಮಿ. ಕೆ.ಸಿ.ರೇವಣ್ಣ, ಆರ್.ವೆಂಕಟಸುಬ್ಬೇಗೌಡ, ಎಸ್.ಜೆ.ಕುಮಾರಸ್ವಾಮಿ ಮತ್ತಿತರರು ಭಾಗವಹಿಸಿ ತಾಯಿ ಚಾಮುಂಡಿಯ ಆಶೀರ್ವಾದ ಪಡೆದರು.
ಕರಗ ಮಹೋತ್ಸವದಲ್ಲಿ ಭಾಗವಹಿಸಿದ್ದ ಚಿಕ್ಕಬಳ್ಳಾಪುರದ ತಪಸೀಹಳ್ಳಿಯ ನೇಕಾರ ತೊಗಟವೀರ ಗುರುಪೀಠದ ಪೀಠಾಧಿಪತಿ ಜಗದ್ದುರು ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ನಮ್ಮ ಸಂಸ್ಕøತಿಯ ಪ್ರತಿಬಿಂಬವಾದ ಹಬ್ಬ-ಹರಿದಿನಗಳು, ಉತ್ಸವಗಳು ಮನಸ್ಸಿಗೆ ಶಾಂತಿ, ನೆಮ್ಮದಿಯನ್ನು ಮೂಡಿಸುವ ಜೊತೆಗೆ ಎಲ್ಲರೂ ಒಂದಾಗಿ ಸಡಗರ ಸಂಭ್ರಮಗಳಿಂದ ಉತ್ಸವದಲ್ಲಿ ಭಾಗಿಗಳಾಗಿ ತಾಯಿ ಚಾಮುಂಡಿಯ ಆಶೀರ್ವಾದವನ್ನು ಪಡೆಯಲು ಸಾದ್ಯವಾಗುತ್ತದೆ. ಧರ್ಮ, ನ್ಯಾಯ, ನೀತಿ ಹಾಗೂ ಆದ್ಯಾತ್ಮ ಮಾರ್ಗದಿಂದ ಮಾತ್ರ ಜೀವನದಲ್ಲಿ ಯಶಸ್ಸನ್ನು ಗಳಿಸಿ ಗುರಿ ಸಾಧಸಿಬಹುದು. ಗುರು ಕೃಪೆಯಿಂದ ಮಾತ್ರ ಜೀವನದಲ್ಲಿ ಮೋಕ್ಷವನ್ನು ಹೊಂದಬಹುದು. ಆದ್ದರಿಂದ ಗಳಿಸಿದ ಹಣದಲ್ಲಿ ಅಲ್ಪಭಾಗವನ್ನು ಧಾನ-ಧರ್ಮ ಮಾಡುವ, ಬಡಜನರ ಕಣ್ಣೀರನ್ನು ಒರೆಸುವ ಕೆಲಸವನ್ನು ಮಾಡಿ ಸರಳವಾದ ಪೂಜೆ ಪುರಸ್ಕಾರಗಳಿಂದ ಭಗವಂತನ ಸಾಕ್ಷಾತ್ಕಾರವನ್ನು ಹೊಂದಬಹುದು ಎಂದು ಶ್ರೀಗಳು ಆಶೀರ್ವಚನ ನೀಡಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರನ್ನು ಕೆ.ಆರ್.ಕೃಷ್ಣ ಸ್ವಾಗತಿಸಿದರು. ನಿರಂಜನದಾದ ವಂದಿಸಿದರು.
No comments:
Post a Comment