Friday, 28 August 2015


ಕೃಷ್ಣರಾಜಪೇಟೆ. ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿರುವ ಕುರಿತು ಸರ್ವೇ ಅಧಿಕಾರಿಗಳ ತಂಡದಿಂದ ಅಳತೆ ಕೆಲಸವು ಭರದಿಂದ ಸಾಗಿದೆ. ಅಕ್ರಮ ಒತ್ತುವರಿದಾರರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ತೆರವು ಕಾರ್ಯಾಚರಣೆಯು ನಿಲ್ಲುವುದಿಲ್ಲ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಸ್ಪಷ್ಠಪಡಿಸಿದರು.
ಅವರು ಇಂದು ಪಟ್ಟಣಕ್ಕೆ ಭೇಟಿ ನೀಡಿ ತಹಶೀಲ್ದಾರ್ ಶಿವಕುಮಾರ್ ಮತ್ತು ಪುರಸಭೆಯ ಮುಖ್ಯಾಧಿಕಾರಿ ಬಸವರಾಜು ಅವರಿಂದ ಒತ್ತುವರಿ ತೆರವು ಕಾರ್ಯಾಚರಣೆಯ ಪ್ರಗತಿ ಕುರಿತು ಮಾಹಿತಿ ಪಡೆದುಕೊಂಡು ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದರು.
ಪ್ರಸ್ತುತ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ನಿರ್ಮಿಸಿರುವ ಚನ್ನಪ್ಪನಕಟ್ಟೆಗೆ ಸೇರಿದ 6.5 ಎಕರೆ ಕಟ್ಟೆಯ ಭೂಮಿಯಲ್ಲಿ ಸುಮಾರು ಎರಡು ಎಕರೆಗೂ ಹೆಚ್ಚಿನ ಭೂಮಿಯು ಒತ್ತುವರಿಯಾಗಿರುವುದು ಸರ್ವೇ ಅಧಿಕಾರಿಗಳಿಗೆ ಮೇಲ್ನೋಟಕ್ಕೆ ಕಂಡು ಬಂದಿದೆ. ಅಕ್ರಮ ಒತ್ತುವರಿಯನ್ನು ಗುರುತಿಸುವ ಕೆಲಸವು ಕಳೆದ 4 ದಿನಗಳಿಂದಲೂ ಭರದಿಂದ ಸಾಗಿದೆ. ಸ್ಥಳೀಯ ಶಾಸಕರಾದ ನಾರಾಯಣಗೌಡ ಅವರು ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ಲೋಕಾಯುಕ್ತರಿಗೆ ಮನವಿ ಸಲ್ಲಿಸಿ ಪಟ್ಟಭದ್ರ ಹಿತಾಸಕ್ತಿಗಳಿಂದ ಚನ್ನಪ್ಪನಕಟ್ಟೆಯ ಒತ್ತುವರಿಯನ್ನು ತೆರವುಗೊಳಿಸಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು ಒತ್ತುವರಿದಾರರಿಂದ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಮನವಿ ಸಲ್ಲಿಸುವ ಜೊತೆಗೆ ಸದನದಲ್ಲಿ ಚರ್ಚೆ ಮಾಡಿ ಒತ್ತಾಯಿಸಿದ್ದರು.
ಶಾಸಕರ ಮನವಿಯ ಮೇರೆಗೆ ಸರ್ಕಾರವು ಅಕ್ರಮ ಒತ್ತುವರಿಯನ್ನು ಗುರುತಿಸಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ನಾನು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಒತ್ತುವರಿಯನ್ನು ಗುರುತಿಸುವ ಕೆಲಸ ಮಾಡುತ್ತಿದ್ದೇವೆ. ಮೈಸೂರು-ಚನ್ನರಾಯಪಟ್ಟಣ ರಸ್ತೆಯಲ್ಲಿನ ಗ್ರಾವೆಲ್ ಗುಂಡಿಗಳನ್ನು ಗುರುತಿಸುವ ಕಾರ್ಯವು ಸಂಪೂರ್ಣಗೊಂಡಿದೆ. ಸರ್ಕಾರಿ ಭೂಮಿಯನ್ನು ಪಟ್ಟಭದ್ರ ಹಿತಾಸಕ್ತಿಗಳಿಂದ ತೆರವುಗೊಳಿಸಲು ಕ್ರಮಕ್ಕೆ ಮುಂದಾಗಿದ್ದೇವೆ. ಸರ್ಕಾರಿ ಜಾಗದ ಒಂದಿಂಚೂ ಭೂಮಿಯನ್ನು ಒತ್ತುವರಿಯಾಗಲು ಬಿಡುವ ಪ್ರಶ್ನೆಯೇ ಇಲ್ಲ, ಏಕೆಂದರೆ ನಾವು ಸರ್ಕಾರದ ಸೇವಕರು, ಸರ್ಕಾರದ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಪಟ್ಟಣದ ನಾಗಮಂಗಲ ರಸ್ತೆಯ ಅಗಲೀಕರಣ ಕೆಲಸವನ್ನೂ ಸಧ್ಯದಲ್ಲಿಯೇ ಆರಂಭಿಸುತ್ತೇವೆ. ಸರ್ಕಾರವು ಹಣ ಬಿಡುಗಡೆ ಮಾಡಲು ಮನವಿ ಸಲ್ಲಿಸಿ ಕಾಯುತ್ತಿದ್ದೇವೆ ಎಂದು ಸ್ಪಷ್ಠಪಡಿಸಿದ ನಾಗರಾಜು ನಾವು ಎಲ್ಲಿ ಕೆಲಸ ಮಾಡುತ್ತೇವೆಯೋ ಅದು ನಮ್ಮೂರು, ಅಲ್ಲಿರುವವರು ನಮ್ಮ ಜನರು, ವರ್ಗಾವಣೆಗೆ ತಲೆಕೆಡೆಸಿಕೊಳ್ಳುವುದಿಲ್ಲ. ನೀರಿನ ಋಣ ಮತ್ತು ಉಪ್ಪಿನ ಋಣವು ಇರುವವರೆಗೂ ಅಷ್ಟು ಸುಲಭವಾಗಿ ಹೊರಗೆ ಕಳುಹಿಸಲು ಆಗುವುದಿಲ್ಲ. ದೇವರಿದ್ದಾನೆ ನೋಡೋಣ ಬಿಡಿ ಎಂದು ಮಾರ್ಮಿಕವಾಗಿ ತಿಳಿಸಿದ ನಾಗರಾಜು ಅವರು ತಮ್ಮ ವರ್ಗಾವಣೆಗೆ ಕೆಲವು ಕಾಣದ ಕೈಗಳ ಅವಿರತ ಪ್ರಯತ್ನ ಮಾಡುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಏನನ್ನೂ ಹೇಳಲು ಬಯಸುವುದಿಲ್ಲ ಎಂದು ಸ್ಪಷ್ಠಪಡಿಸಿದರು. ಸರ್ವೇ ಸೂಪರ್‍ವೈಸರ್‍ಗಳಾದ ದೇವೇಗೌಡ, ರಮೇಶ್, ರಾಜು, ಮುಖ್ಯಾಧಿಕಾರಿ ಬಸವರಾಜು, ತಹಶೀಲ್ದಾರ್ ಶಿವಕುಮಾರ್, ಪುರಸಭೆಯ ಸಹಾಯಕ ಎಂಜಿನಿಯರ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಮರಿಸಿದ್ದೇಗೌಡ, ರಾಜಶ್ವನಿರೀಕ್ಷಕ ಬಸವರಾಜು, ಪಟ್ಟಣ ಪೋಲಿಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಹೆಚ್.ಎನ್.ವಿನಯ್ ಮತ್ತಿತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

No comments:

Post a Comment