ಮೈಸೂರು, ಆ. 17- ಸನ್ಮಿತ್ ಸಾವು ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಒತ್ತಾಯಿಸಿದರು.
ಅವರು ಇಂದು ಸರಕಾರಿ ಅತಿಥಿಗೃಹಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ 2 ತಿಂಗಳ ಹಿಂದೆ ಪಿರಿಯಾಪಟ್ಟಣದ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸನ್ಮಿತ್ ಕೆರೆಗೆ ಬಿದ್ದು ಸತ್ತಿರುವುದರ ಬಗ್ಗೆ ಪೊಲೀಸರ ತನಿಖೆ ನಡೆಸಿದ್ದರೂ ಅಪರಾಧಿಗಳು ಯಾರು? ಎಂಬುದು ಪತ್ತೆ ಆಗಿಲ್ಲ. ಆದ್ದರಿಂದ ಈ ಪ್ರಕರಣವನ್ನು ಕೂಡಲೇ ಸಿಐಡಿಗೆ ವಹಿಸುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಈಶ್ವರಪ್ಪ ಒತ್ತಾಯಿಸಿದರು.
ಸನ್ಮಿತ್ ಸಾವಿನ ಬಗ್ಗೆ ಸಾರ್ವಜನಿಕರು ವ್ಯಕ್ತಪಡಿಸಿರುವ ವಿಷಯದ ಬಗ್ಗೆ ಸ್ಥಳೀಯ ನಾಗರೀಕರನ್ನು ಭೇಟಿ ಮಾಡಿ ಅವರ ಆಭಿಪ್ರಾಯ ಕೇಳಿ ಸರಕಾರ ತನಿಖೆಗೆ ಮುಂದಾಗಬೇಕು ಎಂದರು.
ಈ ಪ್ರಕರಣವು ಮುಖ್ಯಮಂತ್ರಿಯವರ ತವರು ಜಿಲ್ಲೆಯಲ್ಲೇ ನಡೆದಿದ್ದು, ಅದನ್ನು ಕಂಡು ಕಾಣದಂತೆ ಸಿಎಂ ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದ ಅವರು ತಮ್ಮ ಕುರ್ಚಿ ಉಳಿದರೆ ಸಾಕು ಎಂಬ ಧೋರಣೆಯನ್ನು ತಾಳಿದ್ದಾರೆಂದರು.
ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಜಯಗಳಿಸುವ ಪೂರ್ಣ ಭರವಸೆ ತಮಗೆ ಇದೆ. ಬಿಬಿಎಂಪಿ ಚುನಾವಣೆ ನಡೆಸುವ ಬಗ್ಗೆ ಮುಖ್ಯಮಂತ್ರಿಗಳು ವಿವಿಧ ರೀತಿಯ ಕಸರತ್ತು ನಡೆಸಿದರೂ ಯಾವುದೇ ಪ್ರಯೋಜನವಾಗದೆ ಸುಪ್ರೀಂ ಕೋರ್ಟ್ ಆದೇಶದಂತೆ ಚುನಾವಣೆ ನಡೆಸಲು ಮುಂದಾಗಿರುವುದು ಸ್ವಾಗತಾರ್ಹ ಎಂದರು.
ನನಗೆ ಬಿಬಿಎಂಪಿಯನ್ನು ಒಡೆಯುವ ಆಸೆ ಇಲ್ಲ. ಸಿದ್ದರಾಮಯ್ಯನವರು ಸೋಲಿನ ಭೀತಿ ಹಿನ್ನೆಲೆಯಲ್ಲಿ ಬಿಬಿಎಂಪಿಯನ್ನು ಒಡೆಯಲು ಮುಂದಾಗಿರುವುದು ಸರಿಯಲ್ಲ ಎಂದು ಈಶ್ವರಪ್ಪ ಹೇಳಿದರು.
ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಹಿರಿಯ ನಾಯಕರನ್ನು ಕಡೆಗಣಿಸಲಾಗಿದೆಯೇ? ಎಂದು ಕೇಳಿದಾಗ ಈಶ್ವರಪ್ಪ ಉತ್ತರಿಸಿ ಆಯಾ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಟಿಕೆಟ್ ಹಂಚುವುದು ಆ ಕ್ಷೇತ್ರದ ಮುಖಂಡರಿಗೆ ಸೇರಿದ್ದು ಅದರಂತೆ ಆರ್. ಅಶೋಕ್ ಅವರಿಗೆ ಟಿಕಟ್ ಹಂಚುವ ಕಾರ್ಯವನ್ನು ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಚುನಾವಣೆ ಪ್ರಚಾರಕ್ಕಾಗಿ ಯಾವ ವಿಧಾನ ಸಭಾ ಕ್ಷೇತ್ರಕ್ಕೆ ಯಾವ ನಾಯಕರನ್ನು ಕಳುಹಿಸಬೇಕು ಎಂಬುದರ ಬಗ್ಗೆ ನಾಳೆ ಸಭೆ ಸೇರಿ ಚರ್ಚಿಸಿ ನಿರ್ಧರಿಸಲಾಗುವುದೆಂದರು.
ಲೋಕಾಯುಕ್ತವು ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ಮತ್ತು ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ಮೊಕದ್ದಮೆ ದಾಖಲಿಸಿದೆ. ಆದರೆ ಸಿದ್ದರಾಮಯ್ಯನವರ ಮೇಲೆ ಏಕೆ ಮೊಕದ್ದಮೆ ದಾಖಲಿಸಿಲ್ಲ. ಇದನ್ನು ನೋಡಿದರೆ ಲೋಕಾಯುಕ್ತ ಮತ್ತು ಸಿದ್ದರಾಮಯ್ಯನವರ ನಡುವೆ ಒಳ ಒಪ್ಪಂದ ಆಗಿರುವುದು ಕಂಡು ಬರುತ್ತದೆ ಎಂದರು.
ರಾಜ್ಯದಲ್ಲಿ ಅತ್ಯಾಚಾರಕ್ಕೆ ಕೊನೆಯೇ ಇಲ್ಲ ಮತ್ತು ರೈತರ ಬಗ್ಗೆ ಕಾಳಜಿ ಇಲ್ಲ. ಇತ್ತೀಚೆಗೆ ಸಹಕಾರ ಸಚಿವ ಮಹದೇವಪ್ರಸಾದ್ ರೈತರನ್ನು ಸೋಮಾರಿಗಳೆಂದು ಹೇಳಿರುವುದರಿಂದ ಅವರನ್ನು ಸಂಪುಟದಿಂದ ಕಿತ್ತುಹಾಕಬೇಕು ಇಲ್ಲವೆ ಅವರ ರಾಜೀನಾಮೆ ಪಡೆಯುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಂಸದ ಸಿ. ಹೆಚ್. ವಿಜಯಶಂಕರ್ ಮತ್ತಿತರರು ಇದ್ದರು.
No comments:
Post a Comment