Saturday, 20 December 2014

     ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಿಂದ ಸರ್.ಎಂ.ವಿ.ಸ್ಟೇಡಿಯಂ ಪರಿಶೀಲನೆ
ಮಂಡ್ಯ.ಡಿ.  ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಪಿ.ಎಂ.ಸೋಮಶೇಖರ್ ಅವರು ಶನಿವಾರ ಜಿಲ್ಲಾ ಕ್ರೀಡಾಂಗಣ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲಾ ಮಟ್ಟದ ಕ್ರೀಡಾಂಗಣದಲ್ಲಿ ಇರಬೇಕಾದ ಸೌಲಭ್ಯ ಸವಲತ್ತುಗಳು  ಈ ಕ್ರೀಡಾಂಗಣದಲ್ಲಿ ಇಲ್ಲ. ಆದ್ದರಿಂದ ಈ ಕ್ರೀಡಾಂಗಣದ ಉನ್ನತೀಕರಣಕ್ಕೆ ಕ್ರಮ ವಹಿಸಲು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದರು.
    ಒಳಾಂಗಣ ಕ್ರೀಡಾಂಗಣದ ನಿರ್ಮಾಣ ಕಾರ್ಯ 2010-11ನೇ ಸಾಲಿನಲ್ಲಿ ಆರಂಭವಾಗಿದೆ. ಈವರೆಗೆ ಈಗಾಗಲೇ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಕೆಲವು ಆರೋಪಗಳು ಹಾಗೂ ಆಡಳಿತಾತ್ಮಕ ಅಡೆತಡೆಗಳಿಂದ ನಿರ್ಮಾಣ ಕಾರ್ಯ ಕುಂಠಿತವಾಗಿದೆ. ಮುಂದಿನ ಮಾರ್ಚ್ ಏಪ್ರಿಲ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಅವರು ಹೇಳಿದರು.
    ಕ್ರೀಡಾಂಗಣದಲ್ಲಿ ವ್ಯವಸ್ಥೆ ಸುಧಾರಣೆ ಆಗಬೇಕಾಗಿದೆ. ಬಾಸ್ಕೆಟ್‍ಬಾಲ್ ಕೋರ್ಟ್‍ಗೆ ಸಿಂಥೆಟಿಕ್ ಟ್ರ್ಯಾಕ್ ಹಾಕಬೇಕು, ಫ್ಲೆಡ್‍ಲೈಟ್ ಹಾಕಬೇಕು ಹಾಗೂ ಸುತ್ತ ತಂತಿಬೇಲಿ ಹಾಕಬೇಕು. ಖೋ ಖೋ, ವಾಲಿಬಾಲ್ ಕೋರ್ಟ್‍ಗಳು ಸುಧಾರಣೆಯಾಗಬೇಕು ಎಂದರು.
    ಕ್ರೀಡಾ ತರಬೇತುದಾರರ ಕೊರತೆ ಎಲ್ಲಾ ಜಿಲ್ಲೆಗಳಲ್ಲೂ ಇದೆ. ಈಗಾಗಲೇ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ ಸಮಸ್ಯೆ ಬಗ್ಗೆ ತಿಳಿದುಕೊಂಡಿದ್ದೇನೆ. ಕಾರ್ಯ ನಿರ್ವಹಿಸುತ್ತಿರುವ ಕ್ರೀಡಾ ತರಬೇತುದಾರರ ಹುದ್ದೆಯನ್ನು ಖಾಯಂಗೊಳಿಸುವಂತೆ ಬೇಡಿಕೆ ಇದೆ. ಈ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಕ್ರೀಡಾ ಸಚಿವರ ಗಮನ ಸೆಳೆಯಲಾಗುವುದು ಎಂದರು.
    ಕ್ರೀಡಾ ವಿದ್ಯಾರ್ಥಿನಿಲಯವನ್ನು ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕಿಸಬೇಕಾಗಿದೆ. ಇಡೀ ಕ್ರೀಡಾಂಗಣದಲ್ಲಿ ಒಂದೇ ಒಂದು ಶೌಚಾಲಯವಿದೆ. ಅದಕ್ಕೂ ಸಹ ವಿದ್ಯತ್ ದೀಪದ ವ್ಯವಸ್ಥೆ ಇಲ್ಲ ಎಂದರು.
    ಪರಿಶೀಲನೆ ವೇಳೆ ನಗರಸಭಾ ಸದಸ್ಯ ಎಂ.ಪಿ.ಅರುಣ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಡಾ|| ಎಚ್.ಪಿ.ಮಂಜುಳಾ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾದ ಜಗದೀಶ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಚಂದ್ರಹಾಸ, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಾದು, ವಾಸ್ತುಶಿಲ್ಪಿ ಅಭಿಮನ್ಯು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
     ಜಿಲ್ಲಾ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
    ಮಂಡ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರ ಲಿಫಿಗಾರರು-10, ಬೆರಳಚ್ಚುಗಾರರು-10, ಬೆರಳಚ್ಚು ನಕಲುಗಾರರು-04, ಆದೇಶಿಕ ಜಾರಿಕಾರರು-08 ಹಾಗೂ ಜವಾನರು-14 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
    ಶೀಘ್ರ ಲಿಫಿಗಾರರ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಶೀಘ್ರಲಿಪಿ ಹಾಗೂ ಬೆರಳಚ್ಚು ಪ್ರೌಢದರ್ಜೆ ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
    ಬೆರಳಚ್ಚುಗಾರರ ಹುದ್ದೆಗೆ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ  ಬೆರಳಚ್ಚು ಪ್ರೌಢದರ್ಜೆ ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
    ಬೆರಳಚ್ಚು ನಕಲುಗಾರರ ಹುದ್ದೆಗೆ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ  ಬೆರಳಚ್ಚು  ಕಿರಿಯ ದರ್ಜೆ ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
    ಆದೇಶಿಕ ಜಾರಿಕಾರರ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ತಿಳಿದಿರಬೇಕು. ಭಾರಿ ವಾಹನ ಚಾಲನಾ ಪರವಾನಗಿ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
    ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರೈಸಿರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಕ್ಕೆ ಸೇರಿದ  ಅಭ್ಯರ್ಥಿಯ ವಯೋಮಿತಿ 40 ವರ್ಷ ಮೀರಿರಬಾರದು. ಪ್ರವರ್ಗ-2ಎ, 2ಬಿ, 3ಎ ಹಾಗೂ 3ಬಿ ರವರು 38 ವರ್ಷ ಮೀರಿರಬಾರದು. ಸಾಮಾನ್ಯ ಅಭ್ಯರ್ಥಿಗಳ ವಯೋಮಿತಿ 35 ವರ್ಷ ಮೀರಿರಬಾರದು. ಅಂಗವಿಕಲ ಹಾಗೂ ವಿಧವಾ ಮಹಿಳೆಯರಿಗೆ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ನೀಡಲಾಗುವುದು.
    ಭರ್ತಿ ಮಾಡಿದ ಅರ್ಜಿಗಳನ್ನು ಜನವರಿ 24, 2015 ಸಂಜೆ 4.00 ಗಂಟೆಯೊಳಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಮಂಡ್ಯ ಇಲ್ಲಿಗೆ ಸಲ್ಲಿಸುವುದು. ಒಂದು ವೇಳೆ ಕಡೆಯ ದಿನಾಂಕವು ಸಾರ್ವತ್ರಿಕ ರಜಾ ದಿನವಾಗಿದ್ದ ಪಕ್ಷದಲ್ಲಿ ಮುಂದಿನ ಕೆಲಸದ ದಿನಾಂಕ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನವಾಗಿರುತ್ತದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿಯ ವೆಬ್‍ಸೈಟ್ hಣಣಠಿ;//eಛಿouಡಿಣ.gov.iಟಿ/mಚಿಟಿಜಥಿಚಿ ನೋಡುವುದು ಹಾಗೂ ಸದರಿ ಕಛೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

           ರಾಷ್ಟ್ರೀಯ ಜನತಾ ನ್ಯಾಯಾಲಯ : 27743 ಪ್ರಕರಣಗಳು ಇತ್ಯರ್ಥ

     ಮಂಡ್ಯ ಜಿಲ್ಲೆಯ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಡ್ಯ ಮತ್ತು ಮಂಡ್ಯ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕಾನೂನು ಸೇವಾ ಸಮಿತಿಗಳಲ್ಲಿ ದಿನಾಂಕ 1-9-2014 ರಿಂದ 6-12-2014 ರವರೆಗೆ ರಾಷ್ಟ್ರೀಯ ಜನತಾ ನ್ಯಾಯಾಲಯವನ್ನು ಹಮ್ಮಿಕೊಳ್ಳಲಾಗಿದೆ.
     ಮಂಡ್ಯ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ನ್ಯಾಯಾಲಯಗಳಲ್ಲಿ 27743 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಸದರಿ ಪ್ರಕರಣಗಳಲ್ಲಿ 621 ಸಿವಿಲ್ ಪ್ರಕರಣಗಳು, 441 ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು, 2505 ಇತರೆ ಕ್ರಿಮಿನಲ್ ಪ್ರಕರಣಗಳು, 140 ಎನ್.ಐ. ಆಕ್ಟ್ ಪ್ರಕರಣಗಳು, 117 ಎಂ.ವಿ.ಸಿ. ಪ್ರಕರಣಗಳು, 69 ಭೂ ಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣಗಳು, 110 ರೈಲ್ವೆ ಹಾಗೂ ಅರಣ್ಯ ಪ್ರಕರಣಗಳು, 16 ವೈವಾಹಿಕ ಪ್ರಕರಣಗಳು, 11414 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ 12147 ರೆವಿನ್ಯೂ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಪ್ರಧಾನ ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸದಾನಂದ ಎಂ. ದೊಡ್ಡಮನಿ ಅವರು ತಿಳಿಸಿದ್ದಾರೆ.
ಡಿ.26 ರಂದು ವಾಚನಾಭಿರುಚಿ ಕಮ್ಮಟ ಕಾರ್ಯಕ್ರಮ
        ಕನ್ನಡ ಪುಸ್ತಕ ಪ್ರಾಧಿಕಾರ ಇವರ ಸಹಯೋಗದಲ್ಲಿ ಡಿಸೆಂಬರ್ 26 ಹಾಗೂ 27 ರಂದು ವಾಚನಾಭಿರುಚಿ ಕಮ್ಮಟ ಕಾರ್ಯಕ್ರಮವನ್ನು ಭಾರತಿ ನಗರದ ಭಾರತಿ ಕಾಲೇಜಿನ ಗಾಂಧಿಭವನದಲ್ಲಿ ವಾಚನಾಭಿರುಚಿ ಕಮ್ಮಟ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
      ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಬಂಜಗೆರೆ ಜಯಪ್ರಕಾಶ ಅವರು ಮಾಡುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ತಾಲ್ಲೂಕು ಮಟ್ಟದ ಯುವಕರ ವಾಲಿಬಾಲ್ ಹಾಗೂ ಯುವತಿಯರ ಥ್ರೋಬಾಲ್ ಪಂದ್ಯಾವಳಿ
      ಮಂಡ್ಯ ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶ್ರೀರಂಗಪಟ್ಟಣ ನೀಲಸೀಮೆ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಟ್ರಸ್ಟ್, ಯುವ ಪರಿಷತ್, ಹಾಗೂ ಕಪರನಕೊಪ್ಪಲಿನ ಸಿದ್ದಾರ್ಥ ಯುವ ಬಳಗ ಇವರ ಸಹಯೋಗದಲ್ಲಿ ಡಿಸೆಂಬರ್ 26 ರಂದು ಬೆಳಿಗ್ಗೆ 10.00 ಗಂಟೆಗೆ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣ ಆವರಣದಲ್ಲಿ ತಾಲ್ಲೂಕು ಮಟ್ಟದ ಯುವಕರ ವಾಲಿಬಾಲ್ ಹಾಗೂ ಯುವತಿಯರ ಥ್ರೋಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ತಾಲ್ಲೂಕಿನ ಕ್ರೀಡಾ ಪ್ರತಿಭೆಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಪ್ರಕಟಣೆ ತಿಳಿಸಿದೆ.

No comments:

Post a Comment