Wednesday, 3 December 2014

ಶಾಲಾ ಮಕ್ಕಳಿಗೆ ವಾರದಲ್ಲಿ 5 ದಿನ ಹಾಲು: ಮುಖ್ಯಮಂತ್ರಿ ಸಿದ್ದರಾಮಯ್ಯ

ಶಾಲಾ ಮಕ್ಕಳಿಗೆ ವಾರದಲ್ಲಿ 5 ದಿನ ಹಾಲು: ಮುಖ್ಯಮಂತ್ರಿ ಸಿದ್ದರಾಮಯ್ಯ
      ಮೈಸೂರು,ಡಿ.-ಕ್ಷೀರಾಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಮುಂದಿನ ಸಾಲಿನಿಂದ ವಾರದಲ್ಲಿ 5 ದಿನ ಹಾಲು ನೀಡಲು ರಾಜ್ಯ ಸರ್ಕಾರ ಕ್ರಮಕೈಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
     ಮೈಸೂರು ತಾಲೂಕಿನ ವರುಣ ವಿಧಾನ ಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
     ಮಕ್ಕಳ ಆರೋಗ್ಯದ ಅಭಿವೃದ್ಧಿ ದೃಷ್ಟಿಯಿಂದ ಪೌಷ್ಟಿಕ ಆಹಾರ ಮುಖ್ಯ ಶಾಲೆಗಳಲ್ಲಿ ಮಕ್ಕಳಿಗೆ ಹಾಲು ನೀಡಿರುವುದರಿಂದ ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ. ಕ್ಷೀರಾಭಾಗ್ಯ ಯೋಜನೆಯಡಿ ವಾರದಲ್ಲಿ 3 ದಿನ ನೀಡಲಾಗುತ್ತಿರುವ ಹಾಲನ್ನು ಮುಂದಿನ ಸಾಲಿನಿಂದ 5 ದಿನಕ್ಕೆ  ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮವಹಿಸಿದೆ. ಆರೋಗ್ಯ ಸರಿಯಿದ್ದರೆ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ. ಮಕ್ಕಳ ಶಿಕ್ಷಣ ಮತ್ತು ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಈ ನಿರ್ಣಯ ಕೈಗೊಂಡಿದೆ. ಕ್ಷೀರಾಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಹಾಲು ಪೂರೈಸಲು ಪತ್ರಿ ವರ್ಷ 650 ಕೋಟಿ ವೆಚ್ಚ ಮಾಡಲಾಗುತ್ತಿದ್ದು, 8 ಲಕ್ಷ ಲೀಟರ್ ಹಾಲು ಶಾಲೆಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
     ಹಸಿವು ಮುಕ್ತ ರಾಜ್ಯ ನಿರ್ಮಾಣ ಮಾಡಲು ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ 1 ಕೋಟಿ 3 ಲಕ್ಷ ಕುಟುಂಬಗಳು ಮತ್ತು ಸುಮಾರು 4 ಕೋಟಿ ಜನರು ತಿಂಗಳಿಗೆ 30 ಕೆ.ಜಿ. ಅಕ್ಕಿ ಗೋಧಿ ಇನ್ನಿತರ ಧಾನ್ಯಗಳನ್ನು ಪಡೆಯುತ್ತಿದ್ದಾರೆ. ಮಹಿಳೆಯರನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ವಿವಿಧ ಅಭಿವೃದ್ಧಿ ನಿಗಮದಿಂದ ಮಹಿಳೆಯರು ಪಡೆದಿರುವ ಸಾಲವನ್ನು ಮುಂದಿನ ದಿನಗಳಲ್ಲಿ ಮನ್ನ ಮಾಡಲಾಗುವುದು. ಕೆಳ ವರ್ಗದ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ರಾಜ್ಯ ಸರ್ಕಾರ ಮುಖ್ಯ ಉದ್ದೇಶವಾಗಿದೆ ಎಂದರು.
     ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಈ ಸಾಲಿನಲ್ಲಿ 15,830 ಕೋಟಿ ರೂ. ಮೀಸಲಿರಿಸಿದೆ. ಅಧಿಕಾರಿಗಳು ಪರಿಶಿಷ್ಟರಿಗೆ ನಿಗಧಿ ಪಡಿಸಿರುವ ಅನುದಾನವನ್ನು ವೆಚ್ಚ ಮಾಡುವುದರಲ್ಲಿ ವಿಫಲವಾದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮವಹಿಸಲು ಹೊಸ ಕಾನೂನನ್ನು ಜಾರಿಗೊಳಿಸಿದೆ. ಯಾವುದೇ ಕಾರಣಕ್ಕೂ ಪರಿಶಿಷ್ಟರಿಗೆ ಮೀಸಲಿರಿಸಿದ ಅನುದಾನವು ಹಿಂದಕ್ಕೆ ಹೋಗುವುದಿಲ್ಲ. ಮುಂದಿನ ಸಾಲಿನಲ್ಲಿ ಅನುದಾನವನ್ನು ವೆಚ್ಚ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
     ರಾಜ್ಯ ಸರ್ಕಾರದ ವತಿಯಿಂದ ನೀರಾವರಿ ಯೋಜನೆಗೆ 11300 ಕೋಟಿ ವೆಚ್ಚ ಮಾಡಲಾಗುತ್ತಿದೆ. ವಿದ್ಯಾಸಿರಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 50 ಸಾವಿರ ವಿದ್ಯಾರ್ಥಿಗಳು ಸೌಲಭ್ಯ ಪಡೆಯಲಿದ್ದಾರೆ. ಬಡವರಿಗೆ  ಸರ್ಕಾರದ ಯೋಜನೆಯನ್ನು ಮತ್ತಷ್ಟು ಸಮರ್ಪಕವಾಗಿ ತಲುಪಿಸಲು ಪಿಂಚಣಿ, ಆಹಾರ ಹಾಗೂ ಕಂದಾಯ ಅದಾಲತ್ ಹೆಸರಿನಡಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.   
   ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮೈಸೂರು ತಾಲ್ಲೂಕು ವರುಣ ಹೋಬಳಿ ಹಾಗೂ ಟಿ.ನರಸೀಪುರ ತಾಲ್ಲೂಕು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 84 ಕೋಟಿ 95 ಲಕ್ಷ, 34 ಸಾವಿರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಇದೇ ಸಂದರ್ಭದಲ್ಲಿ ಮಾಡಲಾಯಿತು.
     ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಶ್ರೀನಿವಾಸ್ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಆಂಜನೇಯ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ವಿಧಾನ ಸಭಾ ಸದಸ್ಯ ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಧರ್ಮವಸೇನಾ, ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಮಂಜುಳ ಮಾನಸ, ಜಿಲ್ಲಾಧಿಕಾರಿ ಶೀಖಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಮಾದಪ್ಪ ಹಾಗೂ ಇನ್ನಿತರರು ಭಾಗವಹಿಸಿದರು.
ಮುಖ್ಯ ಮಂತ್ರಿಗಳು ಇದೇ ಸಂದರ್ಭದಲ್ಲಿ ವರುಣ ಕ್ಷೇತ್ರದ ಜನ ಸಂಪರ್ಕ ಸಭೆ ನಡೆಸಿ ಜನರ ಕುಂದುಕೊರತೆ ಆಲಿಸಿದರು.
                          ರೈತರಿಗೆ ಮಾಹಿತಿ ಮಹಾಪುರವಾಗಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ : ಸಿದ್ದರಾಮಯ್ಯ
    ಮೈಸೂರು,ಡಿ..ರೈತರು ಆರ್ಥಿಕವಾಗಿ ಸದೃಢರಾಗಲು ಕೃಷಿ ಪದ್ಧತಿಯಲ್ಲಿ ಅವರು ಅಳವಡಿಸಿಕೊಳ್ಳಬೇಕಿರುವ ಮಾಹಿತಿಯನ್ನು ನೀಡಬೇಕು. ಜಿಲ್ಲಾ ಕೃಷಿ ತರಬೇತಿ ಕೇಂದ್ರವು ರೈತರಿಗೆ ಮಾಹಿತಿಯ ಮಹಾಪುರವಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
   ಅವರು ಇಂದು ಮೈಸೂರು ತಾಲ್ಲೂಕು ನಾಗನÀಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ 4.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕೃಷಿ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
   ಪ್ರತಿ ಜಿಲ್ಲೆಯಲ್ಲಿ ಕೃಷಿ ತರಬೇತಿ ಕೇಂದ್ರವಿರಬೇಕು. ಕೃಷಿ ತರಬೇತಿ ಕೇಂದ್ರದಲ್ಲಿ ವಿಸ್ತರಣಾ ಕೆಲಸವಾಗಬೇಕು. ರೈತರಿಗೆ ಮಣ್ಣಿನ ಗುಣಗಳು, ಹೊಸ ತಂತ್ರಜ್ಞಾನ, ಮುಂಗಾರು ಹಿಂಗಾರು  ಸಂದರ್ಭದಲ್ಲಿ ಯಾವ ಬೆಳೆ ಬೆಳೆಯಬೇಕು, ಯಾವ ಬೆಳೆ ಬೆಳೆದರೆ ಮಾರುಕಟ್ಟೆ ದೊರೆಯುತ್ತದೆ ಎಂಬುವ ಬಗ್ಗೆ ಮಾಹಿತಿ ನೀಡಬೇಕು ಎಂದರು.
     ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳು ನಡೆಯಬೇಕು ರೈತರಿಗೆ ರೋಗ ರಹಿತ ಬೀಜ ಒದಗಿಸಬೇಕು. ಕೇವಲ ಬೀಜ ಹಾಗೂ ರಸಗೊಬ್ಬರ ವಿತರಣೆ ಮಾಡುವುದು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕೆಲಸವಲ್ಲ ಅವರು ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಬೇಕು ಅವರಿಗೆ ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕಿರುವ ಪದ್ಧತಿಗಳ ಬಗ್ಗೆ ಸಲಹೆ ಹಾಗೂ ಸೂಚನೆಗಳನ್ನು ನೀಡಬೇಕು ಎಂದರು.
    ಹಸಿರು ಕ್ರಾಂತಿಯ ಮೊದಲು ಆಹಾರ ದಾನ್ಯಗಳಿಗೆ ಬೇರೆ ದೇಶಗಳನ್ನು ಅವಲಂಬಿಸುತ್ತಿದ್ದೇವು ಹಸಿರು ಕ್ರಾಂತಿಯ ನಂತರ ನಮ್ಮ ಆಹಾರವನ್ನು ನಾವೆ ಬೆಳೆಯುತ್ತಿದ್ದೇವೆ ಇದು ಮಾತ್ರ ಸಾಲದು ನಾವು ಬೇರೆ ದೇಶಗಳಿಗೆ ಆಹಾರ ರಫ್ತು ಮಾಡುವ ರೀತಿ ಬೆಳೆಯ ಬೇಕು ಎಂದರು.
    ಯುವ ಪೀಳಿಗೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಅವರಿಗೂ ಕೂಡ ಕೃಷಿ ಲಾಭದಾಯಕ ಹುದ್ದೆ ಎಂದು ಮನದಟ್ಟು ಮಾಡಿಕೊಡಬೇಕಾಗಿದೆ. ಕಳೆದ ಸಾಲಿನಲ್ಲಿ 1800 ಕೋಟಿ ರೂ.ಗಳ ಬೆಂಬಲ ಬೆಲೆ ನೀಡಿ ರೈತರು ಬೆಳೆದ ಬೆಳೆಗಳನ್ನು ಖರೀದಿಸಲಾಗಿದೆ ಎಂದರು.
     ರೈತರು ಬೆಳೆದ ರಾಗಿಯನ್ನು ಪ್ರತಿ ಕ್ವಿಂಟಲ್‍ಗೆ ರೂ. 2000/- ಬೆಂಬಲ ಬೆಲೆ ನೀಡಿ ಖರೀರಿದಿಸಲಾಗುವುದು. ಇದೇ ರಾಗಿಯನ್ನು ಪಡಿತರ ವ್ಯವಸ್ಥೆಯಲ್ಲಿ ಪಡಿತರ ಚೀಟಿದಾರರಿಗೆ ರೂ. 1/- ರ ದರದಲ್ಲಿ ವಿತರಿಸಲಾಗುವುದು. ರೈತರು ಬೆಳೆಯುತ್ತಿರುವ ಭತ್ತ, ರಾಗಿ, ಮೆಕ್ಕೆ ಜೋಳ ಹಾಗೂ ಹಾಲನ್ನು ಸಹ ಖರೀದಿಸಲಾಗುತ್ತಿದೆ ಎಂದರು.
    ಪ್ರತಿ ಲೀಟರ್ ಹಾಲಿಗೆ ರೂ. 4/- ಸಹಾಯಧನ ನೀಡಿ ಖರೀದಿಸಲಾಗುತ್ತಿದೆ. 35 ಲಕ್ಷ ಲೀಟರ್ ಉತ್ಪಾದನೆಯಿದ್ದ ಹಾಲು ಇಂದು 63 ಲಕ್ಷ ಲೀಟರ್  ತಲುಪಿದೆ. ಪ್ರತಿದಿನ ಕ್ಷೀರಾಭಾಗ್ಯ ಯೋಜನೆಯಡಿ ಒಂದು ದಿನಕ್ಕೆ 8 ಲಕ್ಷ ಲೀಟರ್ ಹಾಲನ್ನು ಮಕ್ಕಳಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.
     ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ ರಾಜ್ಯದಲ್ಲಿ ರೈತರಿಗೆ 23 ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳಿವೆ. ಮೈಸೂರು ಮತ್ತು ಬಿಜಾಪುರ ಜಿಲ್ಲೆಯಲ್ಲಿರುವ ಕೃಷಿ ತರಬೇತಿ ಕೇಂದ್ರವು ಮೇಲದರ್ಜೆಯದಾಗಿದ್ದು, ಈ ತರಬೇತಿ ಕೇಂದ್ರಗಳಲ್ಲಿ ಕೃಷಿಯ ಜೊತೆಗೆ ಜಲಾನಯನ ಇಲಾಖೆಗೆ ಸಂಬಂಧಿಸಿದ ತರಬೇತಿಯನ್ನು ಸಹ ನೀಡಲಾಗುವುದು ಎಂದರು.
     ಕೃಷಿ ಇಲಾಖೆಯು ವಿಸ್ತರಣಾ ಕೇಂದ್ರವಾಗಿ ಬದಲಾಗಬೇಕು. ವಿಸ್ತರಣಾಧಿಕಾರಿಗಳು ಪ್ರತಿ ದಿನ ಗ್ರಾಮಗಳಿಗೆ ಭೇಟಿ ನೀಡಬೇಕು. ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ತಿಂಗಳಲ್ಲಿ 2 ದಿನ ಹೋಬಳಿ ಮಟ್ಟದಲ್ಲಿ ರೈತರ ಜೊತೆ ಚರ್ಚೆ ನಡೆಸಿ ಅವರಿಗೆ ಸಲಹೆ ನೀಡಬೇಕು ಎಂದರು.   
    ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಸಚಿವÀ ಆಂಜನೇಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವೆ ಉಮಾಶ್ರೀ, ವಿಧಾನಸಭಾ ಸದಸ್ಯ ಜಿ.ಟಿ.ದೇವೇಗೌಡ, ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಧರ್ಮವಸೇನಾ,  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಶೀಖಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಮಾದಪ್ಪ ಹಾಗೂ ಇನ್ನಿತರರು ಭಾಗವಹಿಸಿದರು.


No comments:

Post a Comment