Monday, 7 March 2016

ಸ್ವಸ್ಥ ಸಮಾಜಕ್ಕೆ ಶಿಕ್ಷಣ, ಆರೋಗ್ಯ ಮುಖ್ಯ: ಡಾ.ಅನಿಲ್ ಆನಂದ್

ಸ್ವಸ್ಥ ಸಮಾಜಕ್ಕೆ ಶಿಕ್ಷಣ, ಆರೋಗ್ಯ ಮುಖ್ಯ: ಡಾ.ಅನಿಲ್ ಆನಂದ್
- ಮಹಿಳೆಯರ ಸಮಸ್ಯೆಗಳ ಕುರಿತು ಡಾ.ಯಾಶಿಕಾ ಸಂವಾದ
70 ಸಾವಿರ ರೂ. ಔಷಧ ಉಚಿತ ವಿತರಣೆ
ಭಾರತೀನಗರ: ಸ್ವಸ್ಥ ಸಮಾಜಕ್ಕೆ ಶಿಕ್ಷಣ ಮತ್ತು ಆರೋಗ್ಯ ಬಹಳ ಮುಖ್ಯ. ಗ್ರಾಮೀಣ ಜನರು ವಿದ್ಯೆ ಕಲಿತು ಆರೋಗ್ಯಕರ ಜೀವನ ನಡೆಸಬೇಕು ಎಂದು ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಅವರು ಸಲಹೆ ನೀಡಿದರು.
ಮಂಡ್ಯ ಯೂತ್ ಗ್ರೂಪ್ ವತಿಯಿಂದ ಇಲ್ಲಿಗೆ ಸಮೀಪದ ಕಡಿಲುವಾಗಿಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ  ಏರ್ಪಡಿಸಿದ್ದ ಗ್ರಾಮೀಣ ಮಹಿಳೆಯರ ದೈಹಿಕ ಆರೋಗ್ಯ ಕುರಿತ ಜಾಗೃತಿ ಕಾರ್ಯಕ್ರಮ, ಉಚಿತ ಔಷಧಗಳ ವಿತರಣೆ ಕಾರ್ಯಕ್ರಮದಲ್ಲಿ ಗ್ರಾಮದ ಜನರ ಆರೋಗ್ಯ ತಪಾಸಣೆ ನಡೆಸಿ ಮಾತನಾಡಿದರು.
ಗ್ರಾಮದೊಳಗೆ ನೈರ್ಮಲ್ಯ ಕಾಪಾಡಿಕೊಂಡರೆ ಬಹಳಷ್ಟು ರೋಗಗಳನ್ನು ದೂರವಿಡಬಹುದು. ಚರಂಡಿಗಳಲ್ಲಿ ಶುಚಿತ್ವ ಕಾಪಾಡಿಕೊಂಡು, ತಿಪ್ಪೇಗುಂಡಿಗಳಿಗೆ ಗ್ರಾಮದ ಹೊರವಲಯದಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ಕುಡಿಯಲು ಶುದ್ಧವಾದ ನೀರನ್ನು ಬಳಸುವಂತೆ ಸಲಹೆ ನೀಡಿದರು.
ಅವೈಜ್ಞಾನಿಕವಾಗಿ ನೋವು ನಿವಾರಕ ಮಾತ್ರೆಗಳನ್ನು ಬಳಸಬಾರದು. ಇದರಿಂದ ಕಿಡ್ನಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಲೇಬಲ್ ಇಲ್ಲದ ಮಾತ್ರೆಗಳನ್ನು ಉಪಯೋಗಿಸುವುದರಿಂದ ನಾನಾ ರೀತಿಯ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ವೈದ್ಯರ ಸಲಹೆ ಇಲ್ಲದೆ ಮಾತ್ರೆಗಳನ್ನು ತೆಗೆದುಕೊಳ್ಳಬಾರದು ಎಂದರಲ್ಲದೆ, ದೈಹಿಕ ಚಿಕಿತ್ಸೆಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.
ಮಹಿಳೆಯರ ಸಮಸ್ಯೆಗಳ ಕುರಿತು ಸಂವಾದ:
ಗ್ರಾಮೀಣ ಮಹಿಳೆಯರ ದೈಹಿಕ ಆರೋಗ್ಯ ಹಾಗೂ ವೈಯಕ್ತಿಕ ಸಮಸ್ಯೆಗಳ ಬಗ್ಗೆ ತಪಾಸಣೆ ನಡೆಸಿ, ಅವರೊಂದಿಗೆ ಸಂವಾದ ನಡೆಸಿದ ಡಾ.ಯಾಶಿಕಾ ಅನಿಲ್, ಗ್ರಾಮೀಣ ಮಹಿಳೆಯರು ಸಮಾಜದ ಬೆನ್ನಲುಬಾಗಿದ್ದಾರೆ. ಮೂಢ ನಂಬಿಕೆ ಹಾಗೂ ಸ್ವಾತಂತ್ರ್ಯದ ಕೊರತೆಯಿಂದ ಮಹಿಳೆಯರು ಅನಾರೋಗ್ಯ, ಅಪೌಷ್ಠಿಕತೆ ಸೇರಿದಂತೆ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮುಚ್ಚಿಡುವ ಮನೋಭಾವದಿಂದ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ ಎಂದು ಹೇಳಿದರು.
ಮುಟ್ಟಾಗುವ ಸಮಯದಲ್ಲಿ ನೈರ್ಮಲ್ಯದ ಕೊರತೆಯಿಂದ ಹಲವು ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಸೂಕ್ತ ಮುಂಜಾಗ್ರತೆ ವಹಿಸದೆ ಹಳೆಯ ಕಾಲದ ಪದ್ಧತಿಗಳನ್ನೇ ಈಗಲೂ ಅನುಸರಿಸುತ್ತಿದ್ದಾರೆ. ಇದರಿಂದ ಗರ್ಭಕೋಶ ಸಮಸ್ಯೆಗಳು, ಬಿಳಿಸೆರಗು, ಸೋಂಕು ಹೆಚ್ಚಾಗುತ್ತಿದೆ ಎಂದು ತಿಳಿಸಿದರು. ಮುಟ್ಟಾಗುವ ಸಮಯದಲ್ಲಿ ವಹಿಸಬೇಕಾದ ನೈರ್ಮಲ್ಯ ಜಾಗೃತಿ ಹಾಗೂ ಅನುಸರಿಸಬೇಕಾದ ಕ್ರಮಗಳನ್ನು ಸಂವಾದದ ಮೂಲಕ ಅರಿವು ಮೂಡಿಸಲಾಯಿತು.
ಸಣ್ಣಪುಟ್ಟ ಗರ್ಭಕೋಶ ಸಮಸ್ಯೆಗಳಿಗೆಲ್ಲಾ ಗರ್ಭಕೋಶವನ್ನು ತೆಗೆಯಬೇಕಾದ ಅಗತ್ಯವಿಲ್ಲ. ನಂತರದ ದಿನಗಳಲ್ಲಿ ಹಾರ್ಮೋನ್‍ಗಳ ಕೊರತೆಯಿಂದ ನಾನಾ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದ ಡಾ.ಯಾಶಿಕಾ, ಗರ್ಭಕೋಶ ಸಮಸ್ಯೆಗಳ ನಿವಾರಣೆಗೆ ಮುಂಜಾಗ್ರತೆ ವಹಿಸುವುದು ಹೇಗೆ ಎಂಬ ಬಗ್ಗೆ ಮಹಿಳೆಯರಿಗೆ ತಿಳಿವಳಿಕೆ ಹೇಳಿದರು.
ಈ ಆರೋಗ್ಯ ಕಾರ್ಯಕ್ರಮದಲ್ಲಿ ಗ್ರಾಮದ ಸುಮಾರು 266 ರೋಗಿಗಳ ಆರೋಗ್ಯ ತಪಾಸಣೆ ನಡೆಸಲಾಯಿತು. ಇದರಲ್ಲಿ 130ಕ್ಕೂ ಹೆಚ್ಚು ಮಹಿಳೆಯರಿದ್ದರು. 25 ಜನರಿಗೆ ಇಸಿಜಿ ಚಿಕಿತ್ಸೆ ನೀಡಲಾಯಿತು. 76 ಜನರಿಗೆ ರಕ್ತದೊತ್ತಡ ಪರೀಕ್ಷೆ, 20 ಮಂದಿಗೆ ದೈಹಿಕ ಚಿಕಿತ್ಸೆ ಹಾಗೂ 6 ಮಂದಿಗೆ ಮದ್ಯಪಾನದಿಂದ ಮುಕ್ತಗೊಳಿಸುವ ಕುರಿತು ಚಿಕಿತ್ಸೆ ನೀಡಲಾಯಿತು.
ಶಿಬಿರದಲ್ಲಿ 70 ಸಾವಿರ ರೂ. ಔಷಧ ಉಚಿತ ವಿತರಣೆ:
ನರರೋಗ ಸಂಬಂಧಿತ ಸಮಸ್ಯೆಗಳು, ತಲೆನೋವು, ಮಂಡಿನೋವು, ಬೆನ್ನುನೋವು, ಮೂರ್ಛೆರೋಗ, ಪಾಶ್ರ್ವವಾಯು, ಮಾನಸಿಕ ಒತ್ತಡ ಸೇರಿದಂತೆ ಅನೇಕ ಸಮಸ್ಯೆಗಳಿಂದ ನರಳುತ್ತಿದ್ದವರಿಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು. ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡ ರೋಗಿಗಳಿಗೆ 70 ಸಾವಿರಕ್ಕೂ ಹೆಚ್ಚಿನ ಮೌಲ್ಯದ ಔಷಧಗಳನ್ನು ಉಚಿತವಾಗಿ ವಿತರಿಸಲಾಯಿತು. ಇಂಟಾಸ್, ಸನ್‍ಫಾರ್ಮಾ, ಮ್ಯಾನ್‍ಕೈಂಡ್, ಸಿಸ್ಪೋಪಿಕ್ ಕಂಪನಿಗಳು ಈ ಔಷಧಗಳ ಪ್ರಾಯೋಜಕತ್ವ ವಹಿಸಿದ್ದವು.
ಇದೇ ವೇಳೆ ಗ್ರಾಮೀಣ ಮಹಿಳೆಯರಿಗೆ ಅನುಕೂಲವಾಗುವಂತೆ `ಸೋಫಿ' ಕಂಪನಿಯ 1200 ನ್ಯಾಪ್ಕಿನ್‍ಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಗ್ರೂಪ್‍ನ ಪದಾಧಿಕಾರಿಗಳು ನೇತ್ರದಾನದ ಮಹತ್ವ ಕುರಿತು ಗ್ರಾಮದ ಜನರಲ್ಲಿ ಅರಿವು ಮೂಡಿಸಿದರು. ಯೂತ್ ಗ್ರೂಪ್‍ನ ಮರಿಲಿಂಗೇಗೌಡ, ಪ್ರಮೋದ್, ರಾಜಣ್ಣ, ದರ್ಶನ್, ಮಂಜು, ಶಿವ, ಭರತ್, ವಿನಯ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

No comments:

Post a Comment