Thursday, 29 October 2015


ಮಂಡ್ಯ೨೯‘ವಚನಸಾಹಿತ್ಯ’ ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾರಸ್ವತ ಲೋಕ ನೀಡಿದ ಕೊಡುಗೆ-ಶ್ರೀನಿವಾಸಶೆಟ್ಟಿ
ಮಂಡ್ಯ:ವೇದೋಪನಿಷತ್ತುಗಳ ಸಾರ, ದಟ್ಟವಾದ ಜೀವನಾನುಭವ, ಮೌಢ್ಯ ಕಂದಾಚಾರಗಳ ವಿಡಂಬನೆ, ನೀತಿಬೋಧೆ ಇವುಗಳೇ ವಚನಗಳ ವಸ್ತುವಿಷಯಗಳು. ಮನದ ಭಕ್ತಿ, ಪ್ರೀತಿ, ಆವೇಶ, ಆತಂಕ, ಕಾಯಕತತ್ವ, ಸಾಮಾಜಿಕ ವಿಡಂಬನೆ ಇವುಗಳನ್ನು ಪ್ರಕಟಗೊಳಿಸುವುದಕ್ಕೆ ಶಿವಶರಣರು ಆರಿಸಿಕೊಂಡ ಮಾಧ್ಯಮವೇ ವಚನಗಳು.ಹೀಗೆ ಅವರು ರಚಿಸಿದ ವಚನಸಾಹಿತ್ಯ ವಿಶ್ವಸಾಹಿತ್ಯಕ್ಕೆ ಕನ್ನಡ ಸಾರಸ್ವತ ಲೋಕ ನೀಡಿದ ಕೊಡುಗೆಯಾಗಿದೆ ಎಂದು ಮಂಡ್ಯ ತಾಲೂಕು ಮೂರನೇ ವಚನ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಸ್.ಶ್ರೀನಿವಾಸಶೆಟ್ಟಿ ಬಣ್ಣಿಸಿದರು.
ಅವರು ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಕನಕಪುರ,ರಾಷ್ಟ್ರೀಯ ಸೇವಾ ಯೋಜನಾ ಘಟಕ,ಸರ್ಕಾರಿ ಪದವಿ ಪೂರ್ವ ಕಾಲೇಜು ಬಸರಾಳು ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಹಮ್ಮಿಕೊಂಡಿರುವ ಮಂಡ್ಯ ತಾಲೂಕು ಮೂರನೇ ವಚನ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
       12ನೇ ಶತಮಾನ ಕನ್ನಡ ನಾಡಿನ ಇತಿಹಾಸದಲ್ಲಿ ಸುವರ್ಣಕಾಲ. ಸಾಮಾಜಿಕ, ಸಾಂಸ್ಕøತಿಕ, ರಾಜಕೀಯ, ಸಾಹಿತ್ಯಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ  ಬದಲಾವಣೆಯ ಗಾಳಿ ಭರದಿಂದ ಬೀಸಿದ ಕಾಲ. ಬಸವಣ್ಣ ಮತ್ತು ಅವರ ಸಮಕಾಲೀನರಾದ ನೂರಾರು ಶಿವಶರಣರು ಒಂದೆಡೆ ಕಾಯಕತತ್ವವನ್ನು ಅನುಷ್ಠಾನಗೊಳಿಸುತ್ತಾ, ಇನ್ನೊಂದೆಡೆ ಅನುಭವಮಂಟಪದಲ್ಲಿ ಕಲೆತು ಪರಸ್ಪರ ಜಿಜ್ಞಾಸೆ ನಡೆಸುತ್ತ, ಕೊಡು-ಕೊಳ್ಳುತ್ತ ವಚನಗಳನ್ನು ರಚಿಸಿದರು. ಅಂದು ಅವುಗಳು ಶ್ರೀ ಸಾಮಾನ್ಯರ ಅಭಿವ್ಯಕ್ತಿಯ ಬಗೆಯಾಗಿ ಎಲ್ಲರ ನಾಲಿಗೆಯಲ್ಲಿ ಹರಿದಾಡಿತು. ಗಾದೆ, ಒಗಟು, ಜಾನಪದ ಸಾಹಿತ್ಯದಂತೆ ಜನರ ಬಾಯಿಂದ ಬಾಯಿಗೆ ಹರಡಿ ಜನಪ್ರಿಯವಾಯ್ತು. ಹೊಸ ಕ್ರಾಂತಿಗೆ ನಾಂದಿ ಹಾಡಿತು. ಈ ವಚನಗಳು ಕನ್ನಡದ ಅಮೂಲ್ಯ ಆಸ್ತಿ. ಒಂದು ಕಾಲದಲ್ಲಿ ಜನಜಾಗೃತಿಯನ್ನು ಮೂಡಿಸಿದ ಸಾವಿರ ಸಾವಿರ ಸಂಖ್ಯೆಯ ವಚನಗಳಲ್ಲಿ ಕಾಲನ ಪಾಶಕ್ಕೆ ಸಿಕ್ಕಿ ಬಹಳಷ್ಟು ನಲುಗಿ ಹೋಗಿವೆ. ಉಳಿದವುಗಳನ್ನಾದರೂ ಜೋಪಾನ ಮಾಡಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ವಚನಗಳು ನಮ್ಮ ಅಹಂಕಾರವನ್ನು ಕೆಳಕ್ಕೆ ಒತ್ತಿ ಹೃದಯದ ಆದ್ರ್ರತೆಯನ್ನು  ಹೆಚ್ಚಿಸುತ್ತವೆ. ಬದುಕಿನ ಬಗ್ಗೆ ಸಕಾರಾತ್ಮಕ ಒಲವನ್ನು ಜೀವಪರ ನಿಲುವನ್ನು ಬೆಳೆಸುತ್ತವೆ. ವಚನದ ಓದು ನೀಡುವ ಆನಂದ ನಿಜಕ್ಕೂ ಅಮೂರ್ತವಾದುದು. ನೊಂದು ಬಸವಳಿದ ಮನಸ್ಸುಗಳಿಗೆ ಅವುಗಳು ಉತ್ಸಾಹವನ್ನು ತುಂಬಿ ಬದುಕನ್ನು ಎದುರಿಸುವ ಛಲವನ್ನೂ, ಬಲವನ್ನೂ ಕಟ್ಟಿಕೊಡುತ್ತವೆ.
ಬೆಂದ ಸಂಸಾರ ಬೆಂಬಿಡದೆ ಕಾಡುತ್ತಿರುವುದಯ್ಯ
ಏವೆನಯ್ಯ ಏವೆನಯ್ಯ
ಅಂದಂದಿನ ದಂದುಗಕ್ಕೆ ಏವೆನಯ್ಯ ಏವೆನಯ್ಯ
ಬೆಂದೊಡಲ ಹೊರೆವುದಕ್ಕೆ ನಾನಾರೆ
ಚೆನ್ನಮಲ್ಲಿಕಾರ್ಜುನ ಕೊಲ್ಲು, ಕಾಯಿ ನಿಮ್ಮ ಧರ್ಮ.
ಎಂಬಶಿವಶರಣೆ ಅಕ್ಕಮಹಾದೇವಿಯ ವಚನವನ್ನು ಉಲ್ಲೇಖಿಸಿ
 ‘ಸಂಸಾರ’ವನ್ನು ಬೆಂಕಿಗೆ ಉಪಮಾನಿಸುವ ಅಕ್ಕ  ಸಂಸಾರ ಸಾಗರದಲ್ಲಿ ಸಿಲುಕಿ ಮುಳುಗೇಳುತ್ತಿರುವ ನಮ್ಮೆಲ್ಲರ ಪಾಡೂ ಇದೆ ತಾನೆ? ಅಕ್ಕ ಚೆನ್ನಮಲ್ಲಿಕಾರ್ಜುನನಿಗೆ ಮೊರೆಯಿಡುವಂತೆ ಭಗವಂತನಿಗೆ ಮೊರೆಯಿಡುವುದೊಂದೆ ನಮಗಿರುವ ಏಕೈಕ ಮಾರ್ಗ ಎಂದು ಅವರು ತಿಳಿಸಿದರು.
ನಮ್ಮ ಜೀವನ ಶ್ರೀಮಂತವಾಗಬೇಕಾದರೆ, ಸಮೃದ್ಧಿಯಾಗಬೇಕಾದರೆ ನಮ್ಮಂತರಂಗದ ಅರಿವಿನ ಪ್ರದೀಪವನ್ನು ಬೆಳಗಿಸಿಕೊಳ್ಳಬೇಕು. ಆ ಅಂತರಂಗದ ಜ್ಯೋತಿಯಲ್ಲಿ ಭಗವಂತನನ್ನು ಕಂಡು ಆರಾಧಿಸಬೇಕು. ಇದಕ್ಕೆ ನಮ್ಮದೆ ಆದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ನಮಗಿದೆ. ಆದರೆ ಅದು ಪ್ರದರ್ಶನದ ವಸ್ತುವಾಗಬಾರದು. ಬಾಹ್ಯಾಡಂಬರದ ಪ್ರಕ್ರಿಯೆಯಾಗಬಾರದು ಎಂಬುದು ಶಿವಶರಣರ ಆಶಯ ಎಂದರು.ಅಲ್ಲಮಪ್ರಭು,ಚೆನ್ನಬಸವಣ್ಣ,ಬಸವಣ್ಣ,ಶಾಂತರಸ,ನಾಗಲಾಂಬಿಕೆ ಮುಂತಾದವರ ವಚನಗಳನ್ನು ಅವರು ಉಲ್ಲೇಖಿಸಿದರು.
ಹೀಗೆ ಶಿವಶರಣರ ಅನುಭವದ, ಅನುಭಾವದ ಮೂಸೆಯಲ್ಲಿ ಮೂಡಿಬಂದ ಸಾವಿರಾರು ವಚನಗಳು ನಮ್ಮ ಮುಂದಿವೆ. ಅವುಗಳೆಲ್ಲವೂ ಬೆಳಕಿನ ಪುಂಜಗಳೇ. ಅವುಗಳು ಬರಿಯ ಮಾತುಗಳಲ್ಲ; ಜ್ಯೋತಿರ್ಲಿಂಗಗಳು. ಅವುಗಳ ಅಧ್ಯಯನ ಮತ್ತು ನಿತ್ಯಪಠಣದಿಂದ ಅಜ್ಞಾನದ ಅಂಧಕಾರ ತೊಲಗಿ ಜ್ಞಾನದ ಬೆಳಕು ಪಸರಿಸುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಸತ್ಸಂಗಗಳು, ವಚನಗೋಷ್ಠಿಗಳು, ಸಮ್ಮೇಳನಗಳು ಅರ್ಥಪೂರ್ಣ. ಇವುಗಳು ಹೆಚ್ಚು ಹೆಚ್ಚು ನಡೆಯುವಂತಾಗಲಿ ಎಂದು ಅವರು ಅಭಿಪ್ರಾಯಪಟ್ಟರು.  

No comments:

Post a Comment