Friday, 30 October 2015

ಹುಲಿವಾನ-ಸತ್ಯ ಶೋಧನೆ ವರದಿ

ಜನಪರ ಕ್ರಿಯಾ ವೇದಿಕೆಯು ಆಯೋಜಿಸಿದ್ದ ಹುಲಿವಾನ ಗ್ರಾಮದಲ್ಲಿ ನಡೆದ ಅಂತರ್ಜಾತಿ ವಿವಾಹ ಹಿನ್ನೆಲೆಯಲ್ಲಿ ಜರುಗಿದ ಜಾತಿ ದೌರ್ಜನ್ಯಗಳ ಕುರಿತು
ಸತ್ಯಶೋಧನಾ ತಂಡದ ವರದಿ.

ಪ್ರೀತಿಯ ಬಂದುಗಳೇ,

ಮೈಸೂರು ದಸರಾ ಸಂಭ್ರಮದಲ್ಲಿರುವ ನಿಮ್ಮ ಮುಂದೆ ಮಂಡ್ಯ ಜಿಲ್ಲೆಯ ಕೆರೆಗೋಡು ಹೋಬಳಿಯ ಹುಲಿವಾನ ಗ್ರಾಮದ ದಲಿತರ ಮೇಲಿನ ಜಾತಿ ದೌರ್ಜನ್ಯಗಳನ್ನು ಮುಂದೆ ಇಡುವುದರಲ್ಲಿ ನಮಗೆ ಬೇಸರವೆನಿಸುತ್ತಿದೆ. ಮೈಸೂರು ಕರ್ನಾಟಕದ ಸಾಂಸ್ಕøತಿಕ ರಾಜಧಾನಿ ಎಂಬ ಹಿರಿಮೆಯನ್ನು ಹೊಂದಿದ ಜಿಲ್ಲೆ ಮೈಸೂರಿನ ಪಕ್ಕದ ಜಿಲ್ಲೆಯಾಗಿರುವ ಮಂಡ್ಯ ಜಿಲ್ಲೆ ಕೂಡ ಹಿಂದೆ ಮೈಸೂರಿನ ಅಂಗವಾಗಿದ್ದುದು ಒಂದು ವಿಶೇಷತೆಯಾಗಿದೆ. ಇಂತಹ ಸಾಂಸ್ಕøತಿಕ ಹಿರಿಮೆಯನ್ನು ಹೊಂದಿರುವ ಮಂಡ್ಯ ಜಿಲ್ಲೆಯಲ್ಲಿ ಜಾತಿ ಹೆಸರಿನಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಿರುವುದು ನಾವು ಗೌರವದಿಂದ ಹೇಳಿಕೊಳ್ಳುವ ಸಾಂಸ್ಕøತಿಕ ಗುರುತನ್ನು ಪ್ರಶ್ನೆಗೆ ಒಳಪಡುತ್ತದೆ ಎಂಬುದರಲ್ಲಿ ಭಿನ್ನಾಭಿಪ್ರಾಯವಿರಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಸಮಾಜದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಹಲವಾರು ಜಾತಿಗಳ ಸಮುದಾಯಗಳೊಂದಿಗೆ ಒಂದು ಸಂವಾದವನ್ನು ಮುಂದೆ ಇಡುವುದು ನಮ್ಮ ಕರ್ತವ್ಯವೆಂದು ಭಾವಿಸುತ್ತೇವೆ. ಆದುದರಿಂದ ಜಾತಿ ದೌರ್ಜನ್ಯಗಳನ್ನು ಖಂಡಿಸುವುದು, ತಪ್ಪು ಮಾಡಿದವರನ್ನು ಆರೋಪಿಸುವುದು ಮಾತ್ರ ನಮ್ಮ ಕೆಲಸವಾಗಿರಬಾರದು ಬದಲಿಗೆ ಪ್ರೀತಿ ಮತ್ತು ಸಮಾನತೆ ನೆಲೆಯೂರುವ ಒಂದು ಸುವರ್ಣ ಕರ್ನಾಟಕ ಕಟ್ಟುವ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ನಮ್ಮ ಬದುಕಿನ ಪ್ರಮುಖ ಕರ್ತವ್ಯವಾಗಿದೆ. ಇಂತಹ ತಿಳುವಳಿಕೆಯೊಂದಿಗೆ ಈ ಸಮಸ್ಯೆಯನ್ನು ನಾವು ನೋಡಬೇಕು ಎಂಬ ಬಯಕೆಯೊಂದಿಗೆ ಅಭಿಪ್ರಾಯಗಳನ್ನು ಮುಂದೆ ಇಡುತ್ತೇವೆ.

ಘಟನೆಯ ಹಿನ್ನೆಲೆ
ಹುಲಿವಾನ ಗ್ರಾಮದ ದಲಿತ ಯುವಕನಾದ ಸಂತೋಷ ಅದೇ ಗ್ರಾಮಕ್ಕೆ ಸೇರಿದ ಸುಮಾ (ಲಿಂಗಾಯಿತ ಜಾತಿ) ಎಂಬ ಯುವತಿಯೊಂದಿಗೆ ಮಂಡ್ಯ ನಗರದಲ್ಲಿ ಮಾತನಾಡಿದ್ದನ್ನು ನೋಡಿದವರು ಸುಮಾಳ ಪೋಷಕರಿಗೆ ತಿಳಿಸಿರುತ್ತಾರೆ.
ಯುವತಿಯ ಕುಟುಂಬದವರು ಪೊಲೀಸ್ ಇಲಾಖೆಗೆ ವಿಷಯ ತಿಳಿಸಿರುತ್ತಾರೆ. ಪೊಲೀಸರು ಯುವಕ ಮತ್ತು ಯುವತಿಯನ್ನು ಠಾಣೆಗೆ ಕರೆಯಿಸಿ ವಿಚಾರಿಸಿದಾಗ ಇಬ್ಬರು ಪರಸ್ಪರ ಪ್ರೀತಿಸುತ್ತಿರುವುದಾಗಿ ಮತ್ತು ಮದುವೆಯಾಗುವುದಾಗಿಯೂ ಹೇಳಿರುತ್ತಾರೆ. ಇಬ್ಬರೂ ಮದುವೆಯ ವಯಸ್ಸಿನವರಾಗಿದ್ದ ಕಾರಣ, ಪೊಲೀಸರು ದಿನಾಂಕ: 01-09-2015ರಂದು ಎರಡೂ ಕುಟುಂಬದವರಿಗೂ ಸಮಾಧಾನ ಹೇಳಿ ಕಳುಹಿಸಿದರು. ಮರುದಿನ ಅಂದರೆ, 02-09-2015(ಈ ದಿನ ಅಖಿಲ ಭಾರತ ಕಾರ್ಮಿಕ ಮುಷ್ಕರ ಇತ್ತು) ರಂದು ಗ್ರಾಮದಲ್ಲಿ ಬಹು ಸಂಖ್ಯಾತರಾದ ಒಕ್ಕಲಿಗ ಸಮುದಾಯದವರು ಲಿಂಗಾಯಿತ ಸಮುದಾಯದೊಂದಿಗೆ ಸೇರಿಕೊಂಡು ರಾತ್ರಿ ಸುಮಾರು 8-00 ಗಂಟೆಯ ಸಮಯದಲ್ಲಿ (8 ರಿಂದ 9 ಗಂಟೆಯ ತನಕ ಲೋಡ್ ಶೆಡ್ಡಿಂಗ್ ಕಾರಣ ವಿದ್ಯುತ್ ಇರುವುದಿಲ್ಲ) ಈ ಸಂದರ್ಭವನ್ನು ಬಳಸಿಕೊಂಡು ದಲಿತ ಕಾಲೋನಿಯೊಳಗೆ ನುಗ್ಗಿ ಸಂತೋಷ ಮತ್ತು ಅವನ ಸ್ನೇಹಿತ ದಿಲೀಪನ ಮನೆ ಮೇಲೆ ನಿರ್ದಾಕ್ಷಿಣ್ಯವಾಗಿ ದಾಳಿ ಮಾಡಿದ್ದಾರೆ. ಇಂತಹ ಯಾವುದಾದರೂ ಅನಾಹುತ ಸಂಭವಿಸಬಹುದೆನೋ ಎಂಬ ಭಯ ಮತ್ತು ನಿರೀಕ್ಷೆಯೊಂದಿಗೆ ದಲಿತರು ಕರೆಗೋಡು ಪೊಲೀಸ್ ಠಾಣೆಗೆ ದೂರು ನೀಡಿ ರಕ್ಷಣೆ ಕೋರಿದ್ದರು. ದೂರು ಸ್ವೀಕರಿಸಿದ ಇಲಾಖೆಯವರು ಆರು ಜನ ಪೊಲೀಸರನ್ನು ಗ್ರಾಮದಲ್ಲಿ ರಕ್ಷಣೆಗೆ ನಿಯೋಜಿಸಿದರು. ಆದರೆ 60 ರಿಂದ 70 ಜನರ ಗುಂಪು ಪೊಲೀಸರನ್ನು ಮೀರಿ ದಲಿತರ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ಅಲ್ಲಿದ್ದ ಪೊಲೀಸರು ಮೇಲಾಧಿಕಾರಿಗಳಿಗೆ ತಿಳಿಸಿದ್ದರಿಂದ ಕೂಡಲೇ ಹೆಚ್ಚಿನ ಪೊಲೀಸರು ಆಗಮಿಸಿ ಲಾಠಿಚಾರ್ಜ್ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ಘಟನೆಯ ನಂತರ ದಲಿತರು ಈ ಘಟನೆಯನ್ನು ಕುರಿತು ಮತ್ತೊಂದು ದೂರು ದಾಖಲಿಸಿದರು.

ಎರಡನೆಯ ದಾಳಿ
ಹುಲಿವಾನ ಗ್ರಾಮದ ಮುಖ್ಯ ರಸ್ತೆಯ ಅಂಚಿನಲ್ಲೆಯಿರುವ ದಲಿತ ಕಾಲೋನಿಗೆ ಸಣ್ಣ ಮಟ್ಟಿಗಿನ ಭದ್ರತೆಯನ್ನು ಒದಗಿಸಲಾಗಿತ್ತು. ಮೊದಲನೇ ದಿನದ ಘಟನೆ ಕಾರಣ, ಸವರ್ಣಿಯ ಸಮೂದಾಯಕ್ಕೆ ಸೇರಿದವರ ಮೇಲೆ ಪೋಲಿಸ್ ದೂರು ದಾಖಲಾಗುತ್ತಿದ್ದಂತೆ ಊರಿನಲ್ಲಿ ದಲಿತರ ಮೇಲಿನ ಅಸಹನೆ ಹೆಚ್ಚಾಗಿತ್ತು.
ಅಂದು ಸೆ.3ರ ರಾತ್ರಿ 8 ಗಂಟೆ, ಲೋಡ್ ಷೆಡ್ಡಿಂಗ್ ಕಾರಣ ಈ ದಿನವೂ ಸಹ ಊರಿನಲ್ಲಿ ವಿದ್ಯುತ್ ಕಡಿತವಾಗಿದೆ. ದಲಿತ ಕಾಲೋನಿಯ ರಸ್ತೆಯಂಚಿನಲ್ಲಿ ಒಂದಷ್ಟು ಮಂದಿ ಸಣ್ಣ ಮಟ್ಟದ ಜಗಳವಾಡಲು ಶುರು ಮಾಡಿದ್ದಾರೆ. ಜಗಳ ನೋಡಿದ ಪೋಲಿಸರು ಲಾಠಿ ಬೀಸಿ ಅಲ್ಲಿದ್ದವರನ್ನು ಚದುರಿಸಲು ಮುಂದಾಗಿದ್ದಾರೆ.
ಆ ಪ್ಯೆಕಿ ಯುವಕನೊಬ್ಬ ತನ್ನ ಕಾಲು ಮುರಿಯಿತ್ತೆಂದು ಬೊಬ್ಬಿರಿದಿದ್ದಾನೆ. ಅಷ್ಟೋತ್ತಿಗಾಗಲೆ ದಲಿತ ಕಾಲೋನಿಯ ಬಳಿ ಗುಂಪುಗೂಡಿದ್ದ 300ಕ್ಕೂ ಹೆಚ್ಚು ಮಂದಿ ಸವರ್ಣಿಯರು ಬೆರಳೆಣಿಕೆಯಲ್ಲಿದ್ದ ಪೋಲಿಸರ ವಿರುದ್ದ ತಿರುಗಿ ಬಿದ್ದಿದ್ದಾರೆ.ದೊಡ್ಡ ಸಂಖ್ಯೆಯಲ್ಲಿದ್ದ ಗುಂಪನ್ನು ನಿಭಾಯಿಸಲಾಗದ ಪೋಲಿಸರು ರಕóಣೆಗಾಗಿ ದಲಿತ ಕಾಲೋನಿಯತ್ತ ಓಡಿ ಹೋಗಿದ್ದಾರೆ. ಇದರಿಂದ ಇನ್ನಷ್ಟು ಉನ್ಮತ್ತರಾದ ಸವರ್ಣಿಯರ ಗುಂಪು ಕಲ್ಲು ಬಡಿಗೆಗಳನ್ನು ದಲಿತರ ಮನೆಯ ಮೇಲೆ ತೂರುತ್ತ ಬಾಗಿಲು ಕಿಟಕಿಗಳನ್ನು ಧ್ವಂಸಗೊಳಿಸುತ್ತಾ, ಕೈಗೆ ಸಿಕ್ಕ ಆಂಬೇಡ್ಕರ್ ಧ್ವಜಫಲಕವನ್ನು ಮುರಿದು ಹಾಕಿದೆ. ಹುಲ್ಲಿನ ಮೆದೆಯೊಂದಕ್ಕೆ ಬೆಂಕಿ ಕೊಟ್ಟಿದೆ, ಈ ದಾಳಿಯಿಂದ ಡಿವೈಎಸ್‍ಪಿ ಒಳಗೊಂಡಂತೆ 15ಜನ ಪೊಲೀಸರಿಗೆ ಗಾಯಗಳಾಗಿವೆ. ಭಯಗ್ರಸ್ತ ದಲಿತರು ಕಬ್ಬಿನ ಗದ್ದೆಗಳತ್ತ ಓಡಿ ತಮ್ಮನ್ನು ರಕ್ಷಿಸಿಕೊಂಡಿದ್ದಾರೆ. ಪೋಲಿಸರ ಮೇಲೆ ಹಲ್ಲೆಯಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯ ಪೋಲಿಸರನ್ನು ಕ್ಷಣಾರ್ಧದಲ್ಲಿ ಜಿಲ್ಲಾಡಳಿತ ರವಾನೆ ಮಾಡಿದೆ. ಈ ಸಂದರ್ಭ ಗಲಭೆನಿರತರಾಗಿದ್ದ 67ಕ್ಕು ಹೆಚ್ಚು ಮಂದಿಯನ್ನು ಬಂಧಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ವಿಚಾರಣೆಯ ನಂತರ ಅಮಾಯಕರು ಎಂದು ಕಂಡುಬಂದ 35 ಮಂದಿಯನ್ನು ಪೋಲಿಸರು ಠಾಣೆಯಲ್ಲೆ ಬಿಡುಗಡೆಗೊಳಿಸಿದ್ದಾರೆ. ಇನ್ನುಳಿದಂತೆ ಗಲಭೆಯಲ್ಲಿ ಭಾಗಿಯೆಂದು ಕಂಡುಬಂದ 32 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಾಂಸ್ಕøತಿಕ ನಂಬಿಕೆಗಳು ಮತ್ತು ಆಚರಣೆಗಳು
ಸತ್ಯಶೋಧನಾ ತಂಡವು ಮೊದಲು ದೌರ್ಜನ್ಯಕ್ಕೀಡಾದ ದಲಿತರ ಮನೆಗಳಿಗೆ ಭೇಟಿ ನೀಡಿತು. ಒಂದು ಸುಂದರವಾದ ಮಹಡಿ ಮನೆಗೆ ಕರೆದುಕೊಂಡು ಹೋದರು. ಅ ಮನೆಯ ಕಾಂಪೌಂಡು ಗೋಡೆಯಲ್ಲಿ ಕಾಲಭೈರವೇಶ್ವರ ದೇವರ ರಕ್ಷಣೆ ಎಂದು ಬರೆಸಿದ್ದರು. ಈ ದೇವರು ಒಕ್ಕಲಿಗರ ದೇವರು ಅಲ್ಲವೆ ಎಂಬಯೋಚನೆ ಬಂದಿತು. ಆಗ ತಂಡದ ಸದಸ್ಯgರೇ ಹೇಳಿದರು ಈ ಮನೆಯ ಹುಡುಗನೆ ಸವರ್ಣೀಯ ಹುಡುಗಿಯನ್ನು ಪ್ರೀತಿಸಿರುವುದು ಎಂದು. ಆ ಮನೆ ಅಂತರ್ ಜಾತಿ ಮದುವೆಯಾದ ಸಂತೋಷರವರ ಮನೆ ಎಂದು ತಿಳಿಯಿತು, ಆ ಮನೆಯಲ್ಲಿ  ಅವರ ಅಣ್ಣ-ಅತ್ತಿಗೆ ಮತ್ತು ತಾಯಿ-ತಂದೆ ಇದ್ದರು ಈ ಕುಟುಂಬದವರು ಮೇಲೆ ವಿವರಿಸಿದ ಈ ಘಟನೆಯನ್ನು ಬಹಳ ನೋವಿನಿಂದ ಹೇಳಿಕೊಂಡರು. ಆ ಸಂದರ್ಭದಲ್ಲಿ ನೀವುಗಳು ಆದಿಚುಂಚನಗಿರಿ ಮಠದ ದೇವರಾದ ಕಾಲಭೈರವೇಶ್ವರ ದೇವರ ಪೂಜೆ ಮಾಡುತ್ತೀರಲ್ಲವೇ? ನಿಮಗೂ ಒಕ್ಕಲಿಗ ಸಮುದಾಯದವರಿಗೂ ಇರುವ ಸಂಬಂಧಗಳನ್ನು ತಿಳಿಸಿ ಎಂದು ಕೇಳಿದೆವು. ಅದಕ್ಕೆ ಅವರು ತಿಳಿಸಿದ ವಿವರಗಳನ್ನು ಹಾಗೆಯೇ ನಿಮ್ಮ ಮುಂದೆ ಇಡುತ್ತಿದ್ದೇವೆ.
ನಾವುಗಳು ಆದಿಚುಂಚನಗಿರಿ ಮಠದ ಒಕ್ಕಲು ಮನೆಯವರು ಕಾಲಭೈರವೇಶ್ವರನು ನಮ್ಮ ದೇವರು ಒಕ್ಕಲಿಗ ಸಮುದಾಯದವರಿಗೂ ಕಾಲಭೈರವೇಶ್ವರನೇ ದೇವರು. ಒಕ್ಕಲಿಗರು ಹೊಸ ಮನೆ ಕಟ್ಟಿದರೆ, ದೀಪಾವಳಿ ಮತ್ತು ಸಂಕ್ರಾಂತಿ ದಿನಗಳಲ್ಲಿ ನಾವುಗಳು (ದಲಿತರು) ನಮ್ಮ ಮನೆಯಲ್ಲಿ ಇರುವ ಕಾಲಭೈರವೇಶ್ವರ ದೇವರ ಮೂರ್ತಿಯನ್ನು ಒಕ್ಕಲಿಗರ ಮನೆಗೆ ಹೊತ್ತೊಯ್ಯುತ್ತಿದ್ದೆವು ಆ ಮೂರ್ತಿಯನ್ನು ಒಕ್ಕಲಿಗರು ತಮ್ಮ ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತಾರೆ. ಆ ಸಮಯದಲ್ಲಿ ದೇವರಿಗೆ ಇಡುವ ಎಡೆಯನ್ನು ನಮಗೆ ಕೊಡುತ್ತಾರೆ. ಈ ಸಂಪ್ರದಾಯ ಪರಂಪರಾಗತವಾಗಿ ನಡೆದುಕೊಂಡು ಬರುತ್ತಿದೆ ಎಂದರು ಕಾಲಭೈರವೇಶ್ವರನನ್ನು ಪೂಜಿಸುವ ಒಕ್ಕಲಿಗ ಕುಟುಂಬಗಳೊಂದಿಗೆ ಇಡೀ ದೇವರನ್ನು ಪೂಜಿಸುವ ದಲಿತ ಕುಟುಂಬಗಳಿಗೆ ಇರುವ ಸಂಬಂಧ ಹೀಗೆ ಮುಂದುವರಿಯುತ್ತಾ ಇರುವುದು ಆಶ್ಚರ್ಯವಾಗಿತ್ತು.
ಈ ಘಟನೆಯಲ್ಲಿ ದೌರ್ಜನ್ಯಕ್ಕೊಳಗಾದ ಮತ್ತೊಂದು ದಲಿತರ ಮನೆಗೆ ಹೋದೆವು. ಆ ಮನೆಯ ಕಿಟಕಿ ಬಾಗಿಲುಗಳನ್ನು ನಾಶಪಡಿಸಿದ್ದರು. ದಾಳಿಕೋರರು ಗಾಜಿನ ಕಿಟಕಿಗಳನ್ನು ಒಡೆಯುವಾಗ ಮನೆಯ ಒಳಗೆ ಇದ್ದ ಶೃತಿ ಎಂಬ ವಿದ್ಯಾರ್ಥಿನಿಗೆ ಗಾಯಗಳಾಗಿದ್ದವು. ಆ ಮನೆಗೆ ಬಂದ ದಾಳಿಕೋರರ ಗುಂಪು ಅಮಾನುಷ ರೀತಿಯಲ್ಲಿ ದಾಳಿ ನಡೆಸುತ್ತಿರುವುದನ್ನು ಕಂಡು ಆ ಮನೆಯವರು ಜೋರಾಗಿ ಕಿರುಚಾಡಿದರು. ಈ ಶಬ್ದವನ್ನು ಕೇಳಿ ಸ್ಥಳಕ್ಕೆ ಧಾವಿಸಿದ ಪೊಲೀಸರು ದಾಳಿಕೋರರಿಂದ ಆ ಮನೆಯವರನ್ನು ರಕ್ಷಿಸಿ ಗಾಯಗೊಂಡಿದ್ದ ಶೃತಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದರು. ಶೃತಿ ಕಂಪ್ಯೂಟರ್ ಸೈನ್ಸ್ ಡಿಗ್ರಿ ಓದುತ್ತಿದ್ದಳು. ಶೃತಿಯವರ ತಂಗಿ ಶ್ವೇತಾ ಡಿಪ್ಲೋಮ ಇನ್ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದಳು. ತಂದೆ ಶಿವಲಿಂಗಯ್ಯ, ತಾಯಿ ಮಂಗಳಮ್ಮ ಈ ಕುಟುಂಬಕ್ಕೆ ಒಂದು ಎಕರೆ ಜಮೀನಿದೆ ಈ ಜಮೀನು ಕುಲವಾಡಿಕೆ ಕೆಲಸ ಮಾಡುತ್ತಾ ಬಂದಿದ್ದರಿಂದ ಸರ್ಕಾರ 50 ವರ್ಷಗಳ ಹಿಂದೆ ನೀಡಿತ್ತು.
ಈ ಕುಟುಂಬದ ದೇವರು ತಿರುಪತಿ ವೆಂಕಟಸ್ವಾಮಿ. ಈ ಕುಟುಂಬದವರನ್ನು ತಿರುಪತಿ ಒಕ್ಕಲಿನವರು ಎಂದು ಕರೆಯುತ್ತಾರೆ. ಒಕ್ಕಲಿಗರಲ್ಲಿ ತಿರುಪತಿ ವೆಂಕಟೇಶನನ್ನು ಪೂಜಿಸುವವರಿಗೂ ಈ ಕುಟುಂಬದವರಿಗೂ ದೈವ ನಂಬಿಕೆಯಲ್ಲಿ ತುಂಬಾ ಹತ್ತಿರದ ಸಂಬಂಧಗಳಿವೆ. ಕಾಲಭೈರವೇಶ್ವರನನ್ನು ಪೂಜಿಸುವ ದಲಿತ ಕುಟುಂಬ ಹಾಗೆಯೇ ತಿರುಪತಿ ಒಕ್ಕಲು ಎಂದು ಕರೆಯಲಾಗುವ ಈ ದಲಿತ ಕುಟುಂಬದವರು ಒಕ್ಕಲಿಗರಲ್ಲಿ ವೆಂಕಟೇಶನನ್ನು ಪೂಜಿಸುವವರ ಮನೆಯ ಗೃಹ ಪ್ರವೇಶ ದೀಪಾವಳಿ, ಸಂಕ್ರಾಂತಿ ಮತ್ತು ಹರಕೆಯ ದಿನಗಳಲ್ಲಿ ಈ ದಲಿತರ ಮನೆಯಲ್ಲಿರುವ ತಿರುಪತಿ ದೇವರ ಮೂರ್ತಿಯನ್ನು ಶಂಖ ಮತ್ತು ಜಾಗಟೆಗಳೊಂದಿಗೆ ಒಕ್ಕಲಿಗರ ಮನೆಗೆ ಹೊತ್ತೊಯ್ದು ಪೂಜಿಸುತ್ತಾರೆ ಮತ್ತು ದೇವರ ಎಡೆಯನ್ನು ದಲಿತರಿಗೆ ಕೊಡುತ್ತಾರೆ. ಈ ದೇವರ ಮೂರ್ತಿಗಳನ್ನು ದಲಿತರು ತುಂಬಾ ಭಕ್ತಿಯಿಂದ ಪೋಷಿಸಿಕೊಂಡು ಬರುತ್ತಾರೆ.
ಈ ದಲಿತ ಕುಟುಂಬಗಳಿಗೂ ಒಕ್ಕಲಿಗ ಕುಟುಂಬಗಳಿಗೂ ಭಕ್ತಿ ರೂಪದಲ್ಲಿ ಒಂದು ರೀತಿಯ ಸಮಾನತೆ ಇರುವುದು ಕಂಡುಬರುತ್ತದೆ. ಶೈವ ಮತ್ತು ವೈಷ್ಣವ ತತ್ವಗಳು ಬೆಳೆದ ಕಾಲಘಟ್ಟಗಳಲ್ಲಿ ಇಂತಹ ಸಮಾನತೆಯ ಸಂಪ್ರದಾಯ ಸ್ವೀಕರಿಸಿರಬಹುದು. ಅಥವಾ ಸಮುದಾಯದಲ್ಲಿ ಜಾತಿಗಳನ್ನು ನಿರಾಕರಿಸಿ ಬೆಳೆದ ಬೌದ್ಧ ಧರ್ಮದಿಂದ ಈ ಮೌಲ್ಯಗಳು ಸ್ವೀಕರಿಸಿರಲೂ ಬಹುದು. ಆಶ್ಚರ್ಯವನ್ನು ಮೂಡಿಸುವ ದೈವಭಕ್ತಿಯಲ್ಲಿ ಈ ರೀತಿಯ ಸಮಾನತೆಯ ಮೌಲ್ಯಗಳಿರುವ ಬಗ್ಗೆ ವಿಶ್ಲೇಷಣಕಾರರು ಗಮನಹರಿಸಿದರೆ ಶ್ರೇಷ್ಠತೆ ಹೊಂದಿರುವ ಪರಂಪರೆಯನ್ನು ನಾವು ಅರ್ಥಮಾಡಿ ಕೊಳ್ಳಬಹುದು. ಈ ರೀತಿ ವರ್ಷದ ಕೆಲವು ದಿನಗಳಲ್ಲಿ ದೈವಭಕ್ತಿಯ ಆಧಾರದಲ್ಲಿ ಇರುವ ಸಮಾನತೆಯ ಸಂಬಂಧಗಳು ಈ ಸಮುದಾಯಗಳನ್ನು ಮಾನಸಿಕವಾಗಿ ನಡೆಸಿಕೊಂಡು ಬರುತ್ತಿರುವುದು ಗಮನಾರ್ಹ.
ವರ್ಷದಲ್ಲಿ ಕೆಲವೇ ದಿನಗಳಾದರೂ ದಲಿತರ ಮನೆಗಳಲ್ಲಿರುವ ದೇವರ ಮೂರ್ತಿಗಳನ್ನು ಒಕ್ಕಲಿಗರು ತಮ್ಮ ಮನೆಗಳಲ್ಲಿ ಸ್ವೀಕರಿಸಿ ಪೂಜಿಸುವುದರಿಂದ ಸಮಾನತೆಯ ಭಾವನೆಗಳು ಇರುತ್ತವೆ. ಅದೇ ಸಂದರ್ಭದಲ್ಲಿ ಲಿಂಗಾಯಿತ ಯುವತಿಯನ್ನು ದಲಿತ ಯುವಕ ಪ್ರೀತಿಸಿದ ಎಂಬ ಕಾರಣವನ್ನು ಮುಂದಿಟ್ಟು ದಲಿತರ ಮನೆಗಳ ಮೇಲೆ ದಾಳಿಮಾಡಿ ಆಸ್ತಿ-ಪಾಸ್ತಿಗೆ ಬೆಂಕಿ ಇಟ್ಟು ನಾಶಮಾಡುವ ಆಚರಣೆಯೂ ಇರುತ್ತದೆ. ಈ ಎರಡೂ ಮೌಲ್ಯಗಳಲ್ಲಿ ಈ ಸಮುದಾಯಗಳು ಯಾವ ಮೌಲ್ಯಗಳನ್ನು ಸ್ವೀಕರಿಸಬೇಕು ಮತ್ತು ಯಾವ ಮೌಲ್ಯಗಳನ್ನು ತಿರಸ್ಕರಿಸಬೇಕು ಎಂದು ಕಾಲವು ನಮ್ಮನ್ನು ಕೇಳುತ್ತದೆ. ಮಾನವೀಯತೆಯನ್ನು ದೇಶದ ಸಮುದಾಯದ ಅಭಿವೃದ್ಧಿಯನ್ನು ದೇಶಭಕ್ತಿಯನ್ನು ಪ್ರೀತಿಸುವ ಪ್ರತಿಯೊಬ್ಬ ಮುಖಂಡರು ಮತ್ತು ನಾಗರೀಕರು ಜನರ ಮಧ್ಯದಲ್ಲಿ ಪ್ರೀತಿಯನ್ನು ಬೆಳೆಸುವ ಸಮಾನತೆಯನ್ನೇ ಬಯಸುತ್ತಾರೆ ಎಂದು ದೃಡವಾಗಿ ನಂಬುತ್ತೇವೆ. ಯಾವ ಸಮುದಾಯವು ದ್ವೇಷ ಮತ್ತು ವೈರತ್ವವನ್ನು ಬೆಂಬಲಿಸುತ್ತದೆಯೋ ಅ ಸಮುದಾಯವು ಉನ್ನತವಾದ ಸಂಸ್ಕøತಿ ಚರಿತ್ರೆಯನ್ನು ಕಟ್ಟಿ ಬೆಳೆಸಲು ಸಾಧ್ಯವಾಗುವುದಿಲ್ಲ. ಆದುದರಿಂದ ಸಮುದಾಯ ಜಾತಿಗಳ ನಡುವೆ ಪ್ರೀತಿ ಮತ್ತು ಮಾನವೀಯತೆಯನ್ನು ಬೆಳೆಸುವ ಪರಂಪರೆಯನ್ನು ನಾವು ಕಾಪಾಡಬೇಕಾಗಿರುವುದು ಅತ್ಯಗತ್ಯವಾಗಿದೆ.
ನಮ್ಮ ಸಮುದಾಯದಲ್ಲಿ ಬೇರೂರಿರುವ ಅಸ್ಪøಶ್ಯತೆಯ ಆಧಾರದಲ್ಲಿನ ಜಾತೀಯತೆಯ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಜಾತಿ ರಹಿತ ಸಮಾಜವನ್ನು ಕಟ್ಟಬೇಕು. ಈ ಉನ್ನತ ಅಂಶಗಳನ್ನು ಬುದ್ದ, ಬಸವಣ್ಣ, ಅಂಬೇಡ್ಕರ್ ಮುಂತಾದವರು ಸಾಮಾಜಿಕ ಚಿಂತಕರೆಲ್ಲರೂ ಹೇಳಿರುವುದನ್ನು ನಾವು ಯೋಚಿಸಬೇಕು. ಜೊತೆಯಲ್ಲಿ ಇರುವ ಮನುಷ್ಯರನ್ನು ಸಮಾನತೆಯಿಂದ ಗೌರವಿಸದೇ ಇರುವ ಸಮಾಜ ಸ್ವತಂತ್ರ್ಯ ಸಮಾಜವಾಗಿ ಇರುವುದಿಲ್ಲ ಎಂದು ಈ ಮಹನೀಯರು ಮತ್ತೆ ಮತ್ತೆ ಒತ್ತಿ ಹೇಳಿದ್ದಾರೆ.
ಗಲಭೆಗೆ ಕಾರಣಗಳು
1. ಊರಿನಲ್ಲಿ ದಲಿತರು ಶಿಕ್ಷಣದ ಕಾರಣಕ್ಕೆ ಸಾಕಷ್ಟು ಸರ್ಕಾರಿ ಹಾಗು ಖಾಸಗಿ ಉದ್ಯೋಗಗಳನ್ನು ಪಡೆಯುವಲ್ಲಿ ಸಫಲರಾಗಿರುವುದು ಕೆಲವು ಸವರ್ಣಿಯ ಕಿಡಿಗೇಡಿಗಳ ಅಸಹನೆಗೆ ಕಾರಣವಾಗಿದೆ.
2. ಈ ಹಿಂದೆಯು ಸಹ ಗ್ರಾಮದಲ್ಲಿ 2 ಅಂತರ್‍ಜಾತಿ ವಿವಾಹಗಳಾಗಿದ್ದು ಯುವತಿಯರು ಹೊರ ಜಿಲ್ಲೆಯವರಾಗಿದ್ದು ಲಿಂಗಾಯಿತ ಕೋಮಿಗೆ ಸೇರಿದ್ದು ಯುವಕರು ದಲಿತ ಕೋಮಿಗೆ ಸೇರಿದ್ದು, ಒಂದೇ ಗ್ರಾಮದ ಯುವಕ ಯುವತಿಯರ ಅಂತರ್ ಜಾತಿ ಪ್ರೇಮ ವಿವಾಹ ಇದೆ ಮೊದಲಾಗಿದೆ.
3. ಗ್ರಾಮದಲ್ಲಿ ಈಗಲೂ ಅಸ್ಪøಶ್ಯತೆ ಅಘೋಷಿತವಾಗಿಯೆ ಮುಂದುವರಿದಿದೆ ದೇವಾಲಯ ಪ್ರವೇಶ, ಕ್ಷೌರ ನಿರಾಕರಣೆ ಸಾಮಾನ್ಯ ಸಂಗತಿಯಾಗಿದೆ. ಇವುಗಳ ಮೇಲಿನ ತಮ್ಮ ಹಕ್ಕು ಕೇಳುತ್ತಿರುವ ದಲಿತರ ನಡೆ ಕೆಲವು ಸವರ್ಣಿಯ ಕಿಡಿಗೇಡಿಗಳನ್ನು ಕೆರಳಿಸಿದೆ.
4. ಅಂತರಜಾತಿ ವಿವಾಹದ ಸಂಧರ್ಭಗಳಲ್ಲಿ ಪೋಲಿಸರು ಇನ್ನಷ್ಟು ಸೂಕ್ಷತೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕಿತ್ತು, ಮುನ್ನೆಚ್ಚೆರಿಕೆ ವಹಿಸಬೇಕಿತ್ತು
5. ಗ್ರಾ.ಪಂ ಚುನಾವಣೆಯಲ್ಲಿ ನಿರ್ದಿಷ್ಟ ಪಕ್ಷದ ಆಭ್ಯರ್ಥಿಯನ್ನು ಬೆಂಬಲಿಸಲಿಲ್ಲ ಎಂಬ ಅಸಮಾಧಾನ ಯುವಕನ ಕುಟುಂಬದ ವಿರುದ್ದ ತಿರುಗಿ ಬೀಳಲು ಕಾರಣವಾಗಿತ್ತು.
6. ಸದರಿ ಹುಲಿವಾನದಲ್ಲಿ ಇನ್ನೂ 3-4 ದಲಿತ ಯುವಕರು ಸವರ್ಣಿಯ ಯುವತಿಯರನ್ನು ಪ್ರೀತಿಸುತ್ತಿದ್ದು ಮುಂದಿನ ದಿನಗಳಲ್ಲಿ ಮದುವೆಯಾಗುತ್ತಾರೆ ಎಂಬುವ ಸುದ್ದಿಯನ್ನು ಕಿಡಿಗೇಡಿಗಳು ವ್ಯವಸ್ಥಿತವಾಗಿ ಹರಡಿದ್ದೂ ಸದರಿ ಘಟನೆಗೆ ಮುಖ್ಯವಾದ ಕಾರಣವಾಗಿರುತ್ತದೆ.

ದೌರ್ಜನ್ಯಕೋರರನ್ನು ಬಂದಿಸುವಲ್ಲಿ ಆದ ಅವಗಡ
1. ಗಲಭೆಗೆ ಕಾರಣರಾದವರನ್ನು ಪತ್ತೆಹಚ್ಚಿ ಬಂದಿಸುವ ಪ್ರಯತ್ನದಲ್ಲಿ ಪೋಲೀಸರಿಂದ ಸವರ್ಣಿಯ ಕೇರಿಗಳಲ್ಲಿ ಕೆಲ ಅಮಾಯಕರಿಗೂ ಪೆಟ್ಟು ಬಿದ್ದಿರುವುದು ಕಂಡಬಂದಿತು.
ಶಿಫಾರಸ್ಸುಗಳು
1. ಅಂತರಜಾತಿ ವಿವಾಹಗಳಾದ ಸಂಧರ್ಭದಲ್ಲಿ ಜಿಲ್ಲಾಡಳಿತ ,ಪೋಲಿಸ್ ಅತ್ಯಂತ ಸೂಕ್ಷತೆಯಿಂದ ಪರಿಸ್ಥಿತಿಯನ್ನು ನಿಭಾಯಿಸುವುದು. ವಿವಾಹಿತರಿಗೆ ಅವರ ಅವಲಂಬಿತರಿಗೆ ಹಾಗೂ ಆಗತ್ಯವಿರುವವರಿಗೆ ಸೂಕ್ತ ಭದ್ರತೆ ಒದಗಿಸುವುದು.
2. ಜಾತಿ ಮತ್ತು ಕೋಮು ಗಲಭೆಗಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗುವ, ರಾಜಕೀಯ ಪಕ್ಷಗಳು, ಮುಖಂಡರುಗಳು, ಕಾರ್ಯಕರ್ತರುಗಳನ್ನು ಮುನ್ನೆಚ್ಚರಿಕೆಯಾಗಿ ಗುರುತಿಸಿ ಸೂಕ್ತ ತಿಳುವಳಿಕೆ ನೀಡುವುದು, ಈ ರೀತಿಯ ಕ್ರುತ್ಯಗಳಿಗೆ ಬೆಂಬಲಿಸಿದವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗುವಿಕೆ.
3. ಸಂತ್ರಸ್ತ ಕುಟುಂಬಗಳಿಗೆ ಎಂ.ನರೇಗ ಯೋಜನೆಯಡಿ ಉದ್ಯೋಗವಕಾಶಗಳನ್ನು ಒದಗಿಸುವುದು.
4. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡುವುದು. ಈ ಸಂಬಂಧ ಪ್ರಕರಣಗಳ ಕಾಲಮಿತಿಯೊಳಗೆ ವಿಲೇವಾರಿಗೆ ಪ್ರತ್ಯೇಕ ಶೀಘ್ರ ನ್ಯಾಯಾಲಯವನ್ನು ಜಾರಿಗೊಳಿಸುವುದು.
5. ಸಮಾಜ ಕಲ್ಯಾಣ ಇಲಾಖೆ ದಲಿತರ ಮೇಲಿನ ದೌರ್ಜನ್ಯಗಳ ಕಾನೂನು ತಿಳುವಳಿಕೆಯನ್ನು ನಿರಂತರವಾಗಿ, ದಲಿತರು, ದಲಿತರೇತರರ ಎಲ್ಲಾ ಸಮುದಾಯಗಳ ನಡುವೆ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೈಜವಾಗಿ ಜಾಗೃತಿ ಮೂಡಿಸುವುದು.
6. ಸರ್ಕಾರ ಅಂತರ್ಜಾತಿ, ಅಂತರ್‍ಧರ್ಮಿಯ, ಸರಳ ವಿವಾಹಗಳನ್ನು ಪ್ರೋತ್ಸಾಯಿಸುವುದು.

ಸತ್ಯ ಶೋಧನಾ ತಂಡದಲ್ಲಿ ಪೀಪಲ್ಸ್ ಫೋರಂ ಪಾರ್ ಸಿವಿಲ್ ಲಿಬರ್ಟಿಸ್‍ನ ಡಾ.ವಿ.ಎಲ್.ಲಕ್ಷ್ಮಿನಾರಾಯಣ್, ಪ್ರೋ.ಪಂಡಿತಾರಾದ್ಯರವರು ಮತ್ತು ರತಿರಾವ್, ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷ ವಕೀಲ ಬಿ.ಟಿ.ವಿಶ್ವನಾಥ್, ಪತ್ರಕರ್ತ ಎಂ.ಬಿ.ನಾಗಣ್ಣಗೌಡ, ಸಿಪಿಎಂನ ರಾಜ್ಯ ಕಾರ್ಯದರ್ಶಿ ಜಿ.ಎನ್.ನಾಗರಾಜು, ಜನವಾದಿ ಮಹಿಳಾ ಸಂಘಟನೆಯ ಸಿ.ಕುಮಾರಿ, ಡಾ.ಉಮಾಶಂಕರ್, ಸವಿತಾ ಸಮಾಜದ ಮುಖಂಡ ಅಂಜನಪ್ಪ, ಹಿಂದುಳಿದ ವರ್ಗಗಳ ವೇದಿಕೆಯ ಮೈಸೂರು ಶಿವರಾಂ, ಹಿಂದುಳಿದ ವರ್ಗಗಳ ವೇದಿಕೆಯ ಮುಖಂಡ ತಗ್ಗಳ್ಳಿ ಸಂದೇಶ್, ಪಿಎಫ್‍ಐನ ದಾದಪೀರ್, ಮಹಿಳಾ ಮುನ್ನಡೆಯ ಈಶ್ವರಿ, ಕಮಲ, ಕಾರ್ಮಿಕ ಮುಖಂಡ ವರದರಾಜೇಂದ್ರ, ಸಿಪಿಐನ ಮೈಸೂರು ಜವರಪ್ಪ, ಎಸ್.ಎಫ್.ಐ.ನ ರಾಜೇಂದ್ರಸಿಂಗ್ ಬಾಬು ಇತರರು ಇದ್ದರು.

No comments:

Post a Comment