ದಾರಿದ್ರ್ಯತೆ ತೊಲಗಿಸಲು ಹೋರಾಟ ಅಗತ್ಯ
ರಾಜ್ಯಪಾಲ ವಜುಭಾಯ್‍ವಾಲಾ
ಮಂಡ್ಯ, ಅ.31- ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ದಾರಿದ್ರ್ಯತೆ ಹೆಚ್ಚಾಗುತ್ತಲೇ ಇದೆ. ಪ್ರತಿಯೊಬ್ಬರೂ ದಾರಿದ್ರ್ಯತೆಯನ್ನು ತೊಲಗಿಸಲು ಹೋರಾಟ ನಡೆಸುವ ಅವಶ್ಯಕತೆ ಇದೆ ಎಂದು ರಾಜ್ಯಪಾಲ ವಜುಭಾಯ್‍ವಾಲಾ ಅಭಿಪ್ರಾಯ ಪಟ್ಟರು.
ನಗರದ ಪಿ.ಇ.ಎಸ್. ಇಂಜಿನಿಯರ್‍ರಿಂಗ್ ಕಾಲೇಜಿನ ಪ್ಲೇಸ್‍ಮೆಂಟ್ ಸಭಾಂಗಣದಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ವತಿಯಿಂದ ಏರ್ಪಡಿಸಿರುವ ರೆಡ್‍ಕ್ರಾಸ್ ಭವನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಡೀ ವಿಶ್ವದಲ್ಲೇ ಹೆಸರು ಮಾಡಿರುವ ರೆಡ್‍ಕ್ರಾಸ್ ಸಂಸ್ಥೆಯನ್ನು ಜಿಲ್ಲೆಯಲ್ಲೂ ಉದ್ಘಾಟನೆ ಮಾಡಿರುವುದು ಒಳ್ಳೆಯ ಕೆಲಸ. ಪ್ರತಿಯೊಬ್ಬರೂ ಒಬ್ಬ ವ್ಯಕ್ತಿಯ ಜೀವ ಉಳಿಸುವ ರಕ್ತವನ್ನು ದಾನ ಮಾಡಲು ಮುಂದಾಗಬೇಕು ಎಂದು ಹೇಳಿದರು.
ರೆಡ್‍ಕ್ರಾಸ್ ಸಂಸ್ಥೆ ಮಾನವೀಯತೆ, ವಿಶ್ವಾಸತೆಗೆ ಹೆಸರುವಾಸಿಯಾಗಿ ವಿಶ್ವಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ನೊಂದ ಜನರಿಗೆ ನೆರವಾಗಲು ಪ್ರತಿಯೊಬ್ಬರೂ ಮಾನವೀಯತೆ ಮೆರೆಯಬೇಕು. ಗ್ರಾಮೀಣ ಜನತೆಯಲ್ಲಿ ರಕ್ತದಾನ ಮಾಡುವ ವಿದ್ಯಾವಂತ ಯುವಕರು ಅರಿವು ಮೂಡಿಸಬೇಕು ಎಂದರು.
ಜನತೆ ಹಣ, ಬಟ್ಟೆ, ಊಟವನ್ನು ಕೊಡಲು ಸಿದ್ಧರಾಗುತ್ತಾರೆ ಆದರೆ ಒಬ್ಬ ವ್ಯಕ್ತಿಯ ಜೀವ ಉಳಿಸುವ ರಕ್ತವನ್ನು ನೀಡಲು ಹಿಂದೇಟು ಹಾಕುವುದು ಏಕೆ ಎಂಬುದು ತಿಳಿಯುತ್ತಿಲ್ಲ. ರಾಮಾಯಣದಲ್ಲಿ ಪ್ರತಿಯೊಬ್ಬರೂ ಸುಖದಿಂದ ಇರಲಿ ಎಂದು ಹೇಳುತ್ತಾರೆ ಇದು ನಮ್ಮ ಸಂಸ್ಕøತಿಯ ಪ್ರತಿಬಿಂಬ, ನಮ್ಮ ಒಳಿತನ್ನು ಬಯಸದೆ ಪರರ ಅಭಿವøದ್ಧಿಯ ಬಗ್ಗೆಯೂ ಗಮನ ಹರಿಸಬೇಕು ಇದು ಮಾನವ ಗುಣವಾಗಬೇಕು ಎಂದು ಹೇಳಿದರು.
ಪಾಕಿಸ್ತಾನದಿಂದ ಮೂಖ ಹುಡುಗಿ ಭಾರತಕ್ಕೆ ಮರಳಿ ಬಂದಾಗ ಇಡೀ ಮನುಕುಲವೇ ಪ್ರೀತಿಯಿಂದ ನೋಡಿತು. ಇದು ನಮ್ಮ ಭಾರತದ ಸಂಸ್ಕøತಿಯ ಪ್ರತಿಬಿಂಬವಾಗಿದೆ. ಅದೇ ರೀತಿ ಬೇರೆಯವರು ಸಂಕಷ್ಟದಲ್ಲಿರುವು ಅವರ ಸಮಸ್ಯೆಯನ್ನು ತಮ್ಮದು ಎಂದು ಭಾವಿಸಿ ಅದನ್ನು ಇತ್ಯರ್ಥ ಪಡಿಸಲು ಮುಂದಾಗಬೇಕು ಎಂದರು.
ಬೇರೆಯವರು ದುಃಖದಲ್ಲಿರುವಾಗ ಅವರ ಸಹಾಯಕ್ಕೆ ನೀವು ಹೋದರೆ ದೇವರು ನಿಮ್ಮ ಸಂಕಷ್ಟಕ್ಕೆ ದಾವಿಸುತ್ತಾನೆ. ಇತ್ತೀಚಿನ ದಿನಗಳಲ್ಲಿ ಆಹಾರ ಸೇವನೆಗಿಂತ ಹೆಚ್ಚಾಗಿ ಔಷಧಿಯನ್ನೇ ಹೆಚ್ಚಾಗಿ ಸೇವಿಸುವಂತಾಗಿದೆ ಪ್ರತಿಯೊಬ್ಬರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಲು ಮುಂದಾಗಬೇಕು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಮಾತನಾಡಿ, ಒಂದು ಸಿನಿಮಾದಲ್ಲಿ ಹೇಗೆ ನಾಯಕನಿರುತ್ತಾನೋ ಹಾಗೆ ಪ್ರತಿ ಸಂಘ ಸಂಸ್ಥೆ ಉತ್ತಮವಾಗಿ ನಡೆಯಲು ಒಬ್ಬ ನಾಯಕನ ಅವಶ್ಯಕತೆ ಇದೆ. ರೆಡ್ ಕ್ರಾಸ್ ಸಂಸ್ಥೆ ಜಿಲ್ಲೆಯನ್ನು ಉನ್ನತ ಮಟ್ಟಕ್ಕೆ ತಲುಪಬೇಕಾದರೆ ಮೀರಾ ಶಿವಲಿಂಗಯ್ಯರ ನಂತರ ಉತ್ತಮ ನಾಯಕ ಬರಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು.
ರೆಡ್‍ಕ್ರಾಸ್ ಸಂಸ್ಥೆ ಮಾನವೀಯತೆ ಹೆಸರುವಾಸಿಯಾಗಿದೆ. ಯುದ್ದ ಸಂದರ್ಭದಲ್ಲಿ ನಮ್ಮ ದೇಶಕ್ಕಾಗಿ ಪ್ರಾಣ ನೀಡುತ್ತಿರುವವರು ಸರಿಯಾದ ಸಮಯದಲ್ಲಿ ರಕ್ತವನ್ನು ಸರಬರಾಜು ಮಾಡಿ ಅವರ ಜೀವ ಉಳಿಸುತ್ತಿರುವುದು ಉತ್ತಮ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ರಕ್ತನಿಧಿ ಬ್ಯಾಂಕ್ ತೆರೆಯಲು ಅನುಮತಿ ಕೇಳಿದ್ದಾರೆ. ರಕ್ತನಿಧಿ ಬ್ಯಾಂಕ್ ತೆರೆಯುವುದು ದೊಡ್ಡ ಕೆಲಸವಲ್ಲ ಪ್ರತಿಯೊಬ್ಬರೂ ಸಹಕಾರ ನೀಡಿದರೆ ಈಗಲೇ ಪ್ರಸ್ತಾಪಿಸುತ್ತೇನೆ ಎಂದು ಭರವಸೆ ನೀಡಿದರು.
ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಕರ್ನಾಟಕ ಘಟಕದ ಸಭಾಧ್ಯಕ್ಷರಾದ ಬಸ್ರೂರು ರಾಜೀವಶೆಟ್ಟಿ, ಉಪಾಧ್ಯಕ್ಷರಾದ ಡಾ. ಸಿ.ಸೋಮಶೇಖರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಕೋಮಲ ಸ್ವಾಮಿ, ನಗರಸಭೆ ಅಧ್ಯಕ್ಷರಾದ ಲೋಕೇಶ್,ಮಂಡ್ಯದ ಘಟಕದ ಸಭಾಧ್ಯಕ್ಷರಾದ ಮೀರಾ ಶಿವಲಿಂಗಯ್ಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಶರತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಭೂಷಣ್ ಜಿ.ಬೊರಸೆ, ಅಪರ ಜಿಲ್ಲಾಧಿಕಾರಿಗಳಾದ ಬಿ.ಆರ್. ಪೂರ್ಣಿಮಾ, ಮಿಮ್ಸ್ ವೈದ್ಯಕೀಯ ಅಧೀಕ್ಷಕರಾದ ಡಾ. ಕೆ.ಎಂ. ಶಿವಕುಮಾರ್ ಭಾಗವಹಿಸಿದ್ದರು.
No comments:
Post a Comment