ರಸ್ತೆ ಅಭಿವೃದ್ಧಿ ಮೂಲಕ ಜನರ ಅಭಿವೃದ್ಧಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು,ಜ.7.(ಕ.ವಾ):-ಸಾರ್ವಜನಿಕರಿಗೆ ರಸ್ತೆ ಸಂಪರ್ಕ ಅತ್ಯಂತ ಅವಶ್ಯಕವಾದ ಮೂಲಭೂತ ಸೌಕರ್ಯ. ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದರಿಂದ ಜನರ ಅಭಿವೃದ್ಧಿಯ ಜೊತೆಯಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು ಪಿರಿಯಾಪಟ್ಟಣ ತಾಲ್ಲೂಕಿನ ಹಲಗನಹಳ್ಳಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಹಾಸನ-ರಾಮನಾಥಪುರ-ಪಿರಿಯಾಪಟ್ಟಣ ರಾಜ್ಯ ಹೆದ್ದಾರಿ-21ರ ಅಗಲೀಕರಣ ಹಾಗೂ ಅಭಿವೃದ್ಧಿ ಪಡಿಸುವ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗರ ಪ್ರದೇಶದಲ್ಲಿ ರಸ್ತೆ ಎಷ್ಟು ಅವಶ್ಯಕವೊ ಅಷ್ಟೇ ಅವಶ್ಯಕ ಗಾಮೀಣ ಪ್ರದೇಶಕ್ಕೂ ಸಹ ಇದೆ. ಈ ನಿಟ್ಟಿನಲ್ಲಿ ಸರ್ಕಾರ ರಾಜ್ಯದಲ್ಲಿ ಅನೇಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಬಹಳಷ್ಟು ಕಾಮಗಾರಿಗಳನ್ನು ಕೈಗೆತ್ತಕೊಂಡಿದೆ. ಗ್ರಾಮಾಂತರ ಪ್ರದೇಶದ ನಿವಾಸಿಗಳಿಗೆ, ರೈತರಿಗೆ, ಮಹಿಳೆಯರಿಗೆ ಹಾಗೂ ಶಾಲಾ ಮಕ್ಕಳಿಗೆ ಸಂಚರಿಸಲು ಅನುಕೂಲ ಕಲ್ಪಿಸಲು ಗ್ರಾಮೀಣ ಭಾಗದಲ್ಲಿ ರಸ್ತೆಗಳ ಅಗಲೀಕರಣ ಹಾಗೂ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ ಎಂದು ಹೇಳಿದರು.
ಹಾಸನ-ರಾಮನಾಥಪುರ-ಪಿರಿಯಾಪಟ್ಟಣ ರಾಜ್ಯ ಹೆದ್ದಾರಿ-21ರ ಅಗಲೀಕರಣ ಹಾಗೂ ಅಭಿವೃದ್ಧಿ ಪಡಿಸುವ
ನಿಟ್ಟಿನಲ್ಲಿ ಇಂದು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ರಸ್ತೆಯ ಗುಣಮಟ್ಟ ಅಂತರಾಷ್ಟ್ರೀಯ ರಸ್ತೆಗಳ ಗುಣಮಟ್ಟಕ್ಕೆ ಸಮಾನವಿರುತ್ತದೆ. ಒಟ್ಟು 73.69 ಕಿ.ಮೀ. ಉದ್ದದ ರಸ್ತೆಯನ್ನು ಅಗಲೀಕರಣ ಹಾಗೂ ಅಭಿವೃದ್ಧಿ ಪಡಿಸಲು 221.93 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ರಸ್ತೆಯ ನಿರ್ಮಾಣ ಅವಧಿ 2 ವರ್ಷಗಳಿದ್ದು, 8 ವರ್ಷಗಳ ಕಾಲ ರಸ್ತೆ ನಿರ್ವಹಣಾ ಅವಧಿ ಇರುತ್ತದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಸಮಾಜದ ಕಟ್ಟಕಡೆಯ ಜನರ ಅಭಿವೃದ್ಧಿಯ ದೃಷ್ಠಿಯಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಬಡವರು, ದಲಿತರು, ರೈತರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಸಾಮಾಜಿಕವಾಗಿ ಶಕ್ತಿ ತುಂಬಲ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ. ರಾಜ್ಯದಲ್ಲಿ ಮಳೆಯ ಕೊರತೆಯಿಂದ ಪ್ರಸಕ್ತ ವರ್ಷ ಅನೇಕ ಭಾಗದಲ್ಲಿ ನೀರಿನ ಹಾಗೂ ವಿದ್ಯುತ್ ಕೊರತೆ ಕಾಡಿದೆ. ಜೂನ್ ತಿಂಗಳೊತ್ತಿಗೆ ರಾಜ್ಯಕ್ಕೆ 2300 ಮೇಗಾ ವ್ಯಾಟ್ ವಿದ್ಯುತ್ ಹೊಸದಾಗಿ ಸೇರಲಿದೆ. ರಾಜ್ಯದಲ್ಲಿ ಪ್ರತಿ ವರ್ಷ ರೈತರ ವಿದ್ಯುತ್ ದರಕ್ಕೆ 7200 ಕೋಟಿ ರಿಯಾಯಿತಿ ನೀಡಲಾಗುತ್ತದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ರೈತರು ಅನುಕೂಲಕ್ಕಾಗಿ ಹಾಗೂ ಅಂರ್ತಜಲ ಮಟ್ಟವನ್ನು ಹೆಚ್ಚಿಸಲು ಕೆರೆಗಳಿಗೆ ನದಿ ಮೂಲವಾಗಿ ನೀರು ತುಂಬಿಸುವ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ಪ್ರದೇಶದ ಕೆರೆಗಳಲ್ಲಿ ನೀರು ತುಂಬಿದ್ದು, ಜನರು ಸಂತೋಷ ಪಡುವಂತಾಗಿದೆ. ರಾಜ್ಯದಲ್ಲಿ 1200 ಕರೆಗಳಿಗೆ ನೀರು ತುಂಬಿಸಲು 5000 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಲೋಕೋಪಯೋಗಿ ಇಲಾಖೆ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ. ಬಿ.ಪುಷ್ಪಾ ಅಮರನಾಥ್, ಶಾಸಕರಾದ ವೆಂಕಟೇಶ್, ಮಂಜುನಾಥ್, ಧರ್ಮಸೇನಾ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಎನ್.ಕೃಷ್ಣ ರಾಜು, ಉಪಾಧ್ಯಕ್ಷರಾದ ಎ.ಹೆಚ್.ಭೀಮಾ ಶಂಕರ, ಪ್ರಾದೇಶಿಕ ಆಯುಕ್ತರಾದ ಎ.ಎಂ.ಕುಂಜಪ್ಪ, ಜಿಲ್ಲಾಧಿಕಾರಿ ಸಿ.ಶಿಖಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಹಾಗೂ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
No comments:
Post a Comment