Friday, 29 January 2016

ಮತದಾರರ ಅಭಿಪ್ರಾಯ ಸಂಗ್ರಹಿಸಿ ಬಿಜೆಪಿ ಟಿಕೆಟ್
ಮಂಡ್ಯ: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸ ಬಯಸುವ ಅಭ್ಯರ್ಥಿಗಳ ಬಗ್ಗೆ ಆಯಾ ಕ್ಷೇತ್ರವಾರು ಮತದಾರರಿಂದ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡಲು ಉದ್ದೇಶಿಸಲಾಗಿದೆ ಎಂದು ಬಿಜೆಪಿ ಮುಖಂಡರಾದ ಪ್ರೊ. ಬಿ.ಶಿವಲಿಂಗಯ್ಯ ತಿಳಿಸಿದ್ದಾರೆ.
ಮಂಡ್ಯ ವಿಧಾನಸಭಾ ಕ್ಷೇತ್ರದ ಮೂರು ಜಿಲ್ಲಾ ಪಂಚಾಯಿತಿ ಮತ್ತು 11 ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬಗ್ಗೆ ಆಯಾ ಕ್ಷೇತ್ರದ ಮತದಾರರನ್ನು ಖುದ್ದು ಭೇಟಿ ಮಾಡಿ, ಸಭೆಯಲ್ಲಿ ಚರ್ಚಿಸಿ ಉತ್ತಮರಿಗೆ ಟಿಕೆಟ್ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ಸಂಬಂಧ ಶುಕ್ರವಾರದಿಂದಲೇ (ಜ.29) ಪ್ರಕ್ರಿಯೆ ಆರಂಭವಾಗಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರದ ಬಸರಾಳು, ಚಂದಗಾಲು, ಹಲ್ಲೇಗೆರೆ, ಬೇಬಿ, ಕೆರಗೋಡು, ಕೀಲಾರ, ಹೊಡಾಘಟ್ಟ, ಹುಲಿವಾನ ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಸಭೆ ನಡೆಸಿ ಮತದಾರರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.
31ರ ಭಾನುವಾರ ಹನಕೆರೆ, ಬೂದನೂರು, ಸಾತನೂರು ತಾಪಂ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಮತದಾರರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಅಭ್ಯರ್ಥಿಗಳಿಗೇ ಟಿಕೆಟ್ ನೀಡುತ್ತಿದ್ದು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಯಲ್ಲಿ ಖಾತೆ ತೆರೆಯುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈ ಬಲಪಡಿಸುತ್ತೇವೆ ಎಂದಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಮತದಾರರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚು ಗೆಲ್ಲಿಸಬೇಕೆಂದು ಪ್ರೊ. ಬಿ.ಶಿವಲಿಂಗಯ್ಯ ಅವರು ಮನವಿ ಮಾಡಿದ್ದಾರೆ.

No comments:

Post a Comment