Sunday, 10 January 2016

ಆಧುನಿಕ ಜೀವನ ಪದ್ಧತಿಯಿಂದ ಪರಂಪರೆ ನಾಶ-ನಾಗರಾಜು

ಮಂಡ್ಯ: ಇಂದಿನ ಯುವಜನತೆ ಆಧುನಿಕ ಜೀವನ ಪದ್ಧತಿಯ ಕಡೆ ಆಕರ್ಷಿತರಾಗುತ್ತಿದ್ದು ಇದರಿಂದ ನಮ್ಮ ಮೌಲ್ಯ ಪರಂಪರೆಗಳು ನಾಶದತ್ತ ಸಾಗುತ್ತಿವೆ ಎಂದು ಹೊನ್ನಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ಸಿ.ನಾಗರಾಜು ಅಭಿಪ್ರಾಯಪಟ್ಟರು.
    ಬಸರಾಳು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
    ಸಮಾಜದಲ್ಲಿ ಮೌಢ್ಯ ಅಂಧಕಾರಗಳು ಹೆಚ್ಚುತ್ತಿದ್ದು ಜನ ಅವುಗಳ ಕಡೆ ವಾಲುತ್ತಿದ್ದು ಜನರನ್ನು ದಿಕ್ಕು ತಪ್ಪಿಸುವ ಶಕ್ತಿಗಳು ಹೆಚ್ಚಾಗಿವೆ.ಹಿಂದೆ ಮದುವೆಗಳು ಸಾಂಪ್ರದಾಯಿಕ ಪದ್ಧತಿಯಲ್ಲಿ ಊರುಗಳಲ್ಲಿ ಸರಳವಾಗಿ ನಡೆಯುತ್ತಿದ್ದವು.ಆದರೆ ಇಂದು ಪೈಪೋಟಿಗೆ ಬಿದ್ದಂತೆ ಅದ್ಧೂರಿ ಮದುವೆಗಳ ಸಂಖ್ಯೆ ಹೆಚ್ಚಾಗುತ್ತಿವೆ.ಅದಕ್ಕಾಗಿ ಸಾಲ ಮಾಡಿಕೊಳ್ಳುವವರೂ ಇದ್ದಾರೆ.ದೇವರು ದಿಂಡರ ಹೆಸರಿನಲ್ಲಿ ಶೋಷಣೆಗೆ ಒಳಗಾಗುತ್ತಿರುವುದೂ ಕಂಡುಬರುತ್ತಿದೆ.ಬಸವಣ್ಣನವರಂತ ದಾರ್ಶನಿಕರು ಇಂತಹ ಮೌಢ್ಯಗಳ ವಿರುದ್ಧ ಸಮರ ಸಾರಿದ್ದರು.ಕುವೆಂಪು ಮಂತ್ರ ಮಾಂಗಲ್ಯ ಪ್ರತಿಪಾದಿಸಿದ್ದರು.ಇದ್ಯಾವುದನ್ನು ನಾವು ಅನುಸರಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
   ಮಾತಿನಿಂದ ಸಮಾಜ ಕಟ್ಟುವ ಕೆಲಸವಾಗಬೇಕೆ ಹೊರತು ಪರಸ್ಪರ ದ್ವೇಷ ಅಸೂಯೆ ಹುಟ್ಟಿಸುವಂತಿರಬಾರದು.ಮಾತು ಮೃದು ಮಧುರವಾಗಿರಬೇಕು.ಮಾತಿನಲ್ಲಿ ನಯವಿನಯ ಶುದ್ಧತೆ ಇರಬೇಕು.ಬೇರೆಯವರಿಗೆ ಹಿತವನ್ನು ಉಂಟುಮಾಡುವಂತಿರಬೇಕು ಶರಣರು ಹೇಳಿರುವಂತೆ ನಮ್ಮ ಮಾತು ಲಿಂಗ ಮೆಚ್ಚಿ ಅಹುದಹುದು ಎನ್ನುವಂತಿರಬೇಕು ಆಗ ಸಂಬಂಧಗಳು ಸುಧಾರಿಸುತ್ತವೆ ಎಂದರು.
     ಸಮಾರೋಪ ಭಾಷಣ ಮಾಡಿದ ನಿವೃತ್ತ ಪ್ರಾಂಶುಪಾಲ ಚಂದ್ರಶೇಖರಮೂರ್ತಿ ವಿದ್ಯಾರ್ಥಿ ಜೀವನ ನಿಮ್ಮ ಪಾಲಿಗೆ ಅತಿಮುಖ್ಯ ಕಾಲಘಟ್ಟ.ಈ ಸಂದರ್ಭದಲ್ಲಿ ಹೆಚ್ಚಿನ ಕಾಳಜಿ ಇಟ್ಟು ಅಭ್ಯಸಿಸಿದರೆ ಮುಂದಿನ ಜೀವನ ಸುಗಮವಾಗುತ್ತದೆ.ಈ ಸಮಯದಲ್ಲಿ ಕಷ್ಟಪಟ್ಟರೆ ಜೀವನದ ದಿಕ್ಕು ದೆಸೆಯೆ ಬದಲಾಗುತ್ತದೆ.ಮನಸ್ಸಿನಂತೆ ಮಾದೇವ ಎನ್ನುವಂತೆ ವಿದ್ಯಾರ್ಥಿ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯ ಎಂಬುದಿಲ್ಲ.ನಿಮ್ಮನ್ನು ನೀವು ನಂಬಿದರೆ ಯಶಸ್ಸು ಖಂಡಿತಾ ಸಾಧ್ಯ.ಈ ನಿಟ್ಟಿನಲ್ಲಿ ಮುಂದುವರೆದು ಪರೀಕ್ಷೆಯನ್ನು ಎದುರಿಸಿ ಯಶಸ್ವಿಯಾಗಿ ಎಂದು ತಿಳಿಸಿದರು.
    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದುದ್ದ ಕಾಲೇಜಿನ ಪ್ರಾಂಶುಪಾಲ ತೂಬಿನಕೆರೆ ಲಿಂಗರಾಜು ವಿದ್ಯಾರ್ಥಿಗಳು ಜೀವನದ ಮುಂದಿನ ಗುರಿ ಇರಿಸಿಕೊಂಡು ಗುರಿ ಸಾಧಿಸುವ ಛಲದಿಂದ ಮುನ್ನಡೆದರೆ ಗುರಿ ಮುಟ್ಟಲು ಸಾಧ್ಯ.ನಿಮ್ಮ ಭವಿಷ್ಯ ನಿಮ್ಮ ಕೈಯ್ಯಲ್ಲಿದೆ ಅದನ್ನು ಉತ್ತಮವಾಗಿ ರೂಪಿಸಿಕೊಳ್ಳಿ ಎಂದು ತಿಳಿಸಿದರು.
    ಮತ್ತೋರ್ವ ಅತಿಥಿ ಕನ್ನಲಿ ಕಾಲೇಜು ಪ್ರಾಂಶುಪಾಲ ಕೆ.ಎನ್.ಮಲ್ಲೇಗೌಡ ಮಾತನಾಡಿ ವಿದ್ಯಾರ್ಥಿಗಳು ಶಿಸ್ತು,ಸಮಯಪ್ರಜ್ಞೆ  ಇಟ್ಟುಕೊಂಡು ಅಭ್ಯಸಿಸಿದರೆ ಯಶಸ್ಸು ಸಾಧ್ಯ.ಶ್ರಮಪಟ್ಟರೆ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬಹುದು ಎಂದರು.
   ಉಪನ್ಯಾಸಕ ಹೊಳಲು ಶ್ರೀಧರ್ ತಮ್ಮ ಅನುಭವಗಳ ಬಗ್ಗೆ ಮಾತನಾಡಿದರು.ಹಿರಿಯ ಉಪನ್ಯಾಸಕ ಹೆಚ್.ಪುಟ್ಟಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶ್ರೀನಿವಾಸ್,ತಿಮ್ಮೇಗೌಡ,ಅಕ್ಷಯ ಬಹುಮಾನ ವಿತರಿಸಿದರು.ಉಪನ್ಯಾಸಕಿ ಬಿ.ಜಿ.ಲತಾ ವಾರ್ಷಿಕ ವರದಿ ಮಂಡಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಚಂದ್ರೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಜಿ.ಎನ್.ಮನುಕುಮಾರ್,ಪ್ರೌಢಶಾಲಾ ವಿಭಾಗದ ಹಿರಿಯ ಸಹಶಿಕ್ಷಕಿ ರುಕ್ಮಿಣಮ್ಮ,ಉಪನ್ಯಾಸಕರಾದ ಮಂಜುನಾಥ್,ರೂಪಶ್ರೀ,ವಿಶ್ವನಾಥ್,ಸುರೇಶ್,ಚೇತನಾ,ನಾಗರಾಜು ಉಪಸ್ಥಿತರಿದ್ದರು.
   ವಿವಿಧ ಕ್ರೀಡೆ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದುವು.

No comments:

Post a Comment