Saturday, 28 November 2015

ಮೈಸೂರು, ನ. 28- ವಿಧಾನ ಪರಿಷತ್ ಚುನಾವಣೆಗೆ ಕೇಂದ್ರ ಚುನಾವನಾ ಆಯೋಗ ಅಧಿಕೃತ ಘೋಷಣೆ ಮಾಡಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಜಿಲ್ಲಾಧಿಕಾರಿ ಹಾಗೂ ಚುನಾವನಾ ಅಧಿಕಾರಿಯು ಆಗಿರುವ ಸಿ. ಶಿಖಾ ಅವರು ತಿಳಿಸಿದರು.
ಡಿ. 2ರಿಂದ 9 ರವರೆಗೆ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಬಹುದು ಎಂದರು.
ನಾಮಪತ್ರವನ್ನು ಹಿಂದಕ್ಕೆ ಪಡೆಯಲು ಡಿ. 12 ಕೊನೆದಿನ. ಡಿ. 27ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದ್ದು, ಡಿ. 30ರಂದು ಬೆಳಗ್ಗೆ 8ಕ್ಕೆ ಮತಗಳ ಎಣಿಕೆ ಕಾರ್ಯ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
ಮೈಸೂರು ಮತ್ತು ಚಾಮರಾಜ ನಗರದಲ್ಲಿ ಒಟ್ಟು 7628 ಮಂದಿ ಮತದಾರರಿದ್ದು, ಈ ಪೈಕಿ ಮೈಸೂರಲ್ಲಿ 5212 ಮತ್ತು ಚಾಮರಾಜ ನಗರದಲ್ಲಿ 2416 ಮಂದಿ ಮತದಾರರಿದ್ದಾರೆಂದರು.
ಈ ಚುನಾವಣೆಯಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಮತವನ್ನು ಚಲಾಯಿಸಬಹುದೆಂದು ಅವರು ಹೇಳಿದರು.
ಅಭ್ಯರ್ಥಿಗಳಿಗೆ ವೆಚ್ಚದ ಮಿತಿ ಇಲ್ಲ ಎಂದ ಅವರು ಮತದಾರರಿಗೆ ಆಮಿಷವೊಡ್ಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
ಶಾಸಕರು, ಮಂತ್ರಿಗಳು ಸರಕಾರಿ ವಾಹನವನ್ನು ಚುನಾವಣಾ ಕಾರ್ಯಕ್ಕೆ ಬಳಸುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇದೇ ಮೊದಲ ಬಾರಿಗೆ ಮತಪತ್ರದಲ್ಲಿ ಅಭ್ಯರ್ಥಿಯ ಹೆಸರಿನೊಂದಿಗೆ ಅವರ ಭಾವಚಿತ್ರವನ್ನು ಮುದ್ರಿಸಲಾಗುತ್ತದೆ ಎಂದು ಅವರು ಹೇಳಿದರು.
2016ರ ಜನವರಿ 1ರ ವರೆಗೆ ಚುನಾವನಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದವರು ತಿಳಿಸಿದರು.

ಮೈಸೂರು, ನ. 28- ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಇಂದು ಕನಕದಾಸರ ಜಯಂತಿಯನ್ನು ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಸಿ. ಶಿಖಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಸೇರಿದಂತೆ ಮತ್ತಿತರ ಗಣ್ಯರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕಿ ನಾಗರತ್ನ ಅವರು ಕನಕದಾಸರ ತತ್ವ, ಆದರ್ಶ, ಅವರು ಬೆಳೆದು ಬಂದ ಬಗ್ಗೆ, ಮುಕ್ತಿಪಡೆದ ಮಾರ್ಗದ ಬಗ್ಗೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕನಕದಾಸರ ಕೀರ್ತನೆಯನ್ನು ಹಾಡಲಾಯಿತು.

No comments:

Post a Comment