Monday, 14 September 2015

ಶಿಕ್ಷಣದಿಂದ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ.

 ಶಿಕ್ಷಣದಿಂದ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ: ಮುಖ್ಯಮಂತ್ರಿ
     ಮೈಸೂರು,ಸೆ.14.-ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಸಮಾನವಾಗಿ ಸಿಕ್ಕರೆ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
     ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಜೆ.ಎಸ್.ಎಸ್. ವಿದ್ಯಾಸಂಸ್ಥೆಯ ವಸತಿ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಜ್ಞಾನ ವೃದ್ಧಿಗೆ ಗುಣಮಟ್ಟದ ಶಿಕ್ಷಣ ಪ್ರಮುಖ. ಗುಣಮಟ್ಟದ ಶಿಕ್ಷಣ ಪ್ರತಿಯೊಬ್ಬರೂ ಸಿಗಬೇಕು. ಗುಣಮಟ್ಟದ ಶಿಕ್ಷಣ ಪಡೆಯಬೇಕಾದರೆ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಸಾಧ್ಯ. ಆದರಿಂದ ಸರ್ಕಾರವು ಪ್ರಾರ್ಥಮಿಕ ಶಿಕ್ಷಣದಿಂದ ಮಕ್ಕಳಿಗೆ ಹಾಲು, ಮಧ್ಯಾಹ್ನದ ಬಿಸಿ ಊಟ, ಕಬ್ಬಿಣಾಂಶದ ಮಾತ್ರೆ ಹಾಗೂ ಹಲವು ಆರೋಗ್ಯ ವೃದ್ಧ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ನೀಡಿದೆ ಎಂದು ತಿಳಿಸಿದರು.
      ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಪಠ್ಯ ವಿಷಯದ ಜ್ಞಾನದ ಜೊತೆಗೆ ನೈತಿಕ ಜ್ಞಾನದ ಬಗ್ಗೆಯೂ ಅರಿವು ಮೂಡಿಸಬೇಕು. ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಜಾತ್ಯಾತೀತ ಭಾವನೆಯನ್ನು ಬೆಳಿಸಿದರೆ ಮಕ್ಕಳು ಸಮಾಜದ ಆಸ್ತಿಯಾಗಿ ಹೊರಹೊಮ್ಮಲು ಸಾಧ್ಯ. ಪ್ರತಿ ಮಗುವಿಗೂ ಜ್ಞಾನದ ವಿಕಾಸ ಅಗತ್ಯ ಹಾಗೂ ಅವಶ್ಯಕ ಎಂದು ಹೇಳಿದರು.
      ಸುತ್ತೂರು ಶ್ರೀ ಕ್ಷೇತ್ರ ಯಾವ ಧರ್ಮ, ಜಾತಿ ಹಾಗೂ ವರ್ಗಕ್ಕೆ ಸೀಮಿತವಾಗದೆ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಸಂಶೋಧನೆಯ ಶಿಕ್ಷಣಕ್ಕೆ ನೆರವಾಗುತ್ತಿದೆ. ಕೇವಲ ಧಾರ್ಮಿಕ ಕ್ಷೇತ್ರವಾಗಿ ಸೀಮಿತಗೊಳ್ಳದೆ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲೂ ದೇಶವಲ್ಲದೇ ವಿಶ್ವದ ಹಲವೆಡೆ ಉತ್ತಮ ಸೇವೆಯನ್ನು ಸಮಾಜಕ್ಕೆ ಸಲ್ಲಿಸುತ್ತಿದೆ ಎಂದರು.
     ಘನತೆವೆತ್ತ ರಾಜ್ಯಪಾಲರಾದ ವಾಜೂಬಾಯಿ ವಾಲ ಮಾತನಾಡಿ ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಲು  ಶಿಕ್ಷಣ ಒಳ್ಳೆಯ ಮಾಧ್ಯಮ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಒಳ್ಳೆಯ ವಿದ್ಯೆ ನೀಡುವುದರ ಜೊತೆ ಸಂಸ್ಕಾರವನ್ನು ಕಲಿಸಬೇಕು. ಸತ್ಯ ಹಾಗೂ ಧರ್ಮದ ದಾರಿಯನ್ನು ಆಯ್ಕೆ ಮಾಡುವವರಿಗೆ ಯಾವಾಗಲೂ ಒಳ್ಳೆಯದಾಗುತ್ತದೆ. ಮಕ್ಕಳು ಒಳ್ಳೆಯ ವಿಚಾರದ ಬಗ್ಗೆ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ತಿಳಿಸಿದರು.
     ಜೆ.ಎಸ್.ಎಸ್ ಮಠದ ಶಿವರಾತ್ರಿ ದೇಶಿಕೇಂದ್ರ ಸಾಮೀಜಿ, ಲೋಕೋಪಯೋಗಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಸಹಕಾರ ಸಚಿವರಾದ ಹೆಚ್.ಎಸ್.ಮಹದೇವಪ್ರಸಾದ್, ವಿಧಾನ ಪರಿಷರ್ ಉಪಸಭಾಪತಿ ಮರಿತಿಬ್ಬೇಗೌಡ, ಚಾಮರಾಜನಗರ ಲೋಕ ಸಭಾ ಸದಸ್ಯರಾದ ಧ್ರುವನಾರಾಯಣ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಏಕ ಮಾಲೀಕತ್ವ ಪಹಣಿಯಾಗಿ ಪರಿವರ್ತಿಸಲು ಪೋಡಿಮುಕ್ತ ಗ್ರಾಮ ಅಭಿಯಾನ
      ಮೈಸೂರು,ಸೆ.14.ರಾಜ್ಯದಲ್ಲಿ ಬಹು ಮಾಲೀಕತ್ವ ಹೊಂದಿರುವ 58 ಲಕ್ಷ ಆರ್.ಟಿ.ಸಿ ಗಳನ್ನು ಪೋಡಿ ಮುಕ್ತಗೊಳಿಸಿ ಏಕ ಮಾಲೀಕತ್ವ ಪಹಣಿಯಾಗಿ ಪರಿವರ್ತಿಸುವುದು ಪೋಡಿಮುಕ್ತ ಗ್ರಾಮ ಅಭಿಯಾನದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ತಿಳಿಸಿದರು.
      ಅವರು ಇಂದು ನಂಜನಗೂಡು ತಾಲ್ಲೂಕಿನ ಹೊಸಕೋಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಡಿಮುಕ್ತ ಗ್ರಾಮ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
      ಪೋಡಿಮುಕ್ತ ಗ್ರಾಮ ಅಭಿಯಾನಕ್ಕಾಗಿ ರಾಜ್ಯದ ನಗರಪ್ರದೇಶವನ್ನು ಹೊರತುಪಡಿಸಿ 171 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 3 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ಕೆಲಸಕ್ಕಾಗಿ ಪ್ರತಿ ತಾಲ್ಲೂಕಿಗೆ ತಲಾ 4 ಮಂದಿ ಭೂಮಾಪಕರ ತಂಡವನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
     ರಾಜ್ಯದಲ್ಲಿ 30,662 ಕಂದಾಯ ಗ್ರಾಮಗಳು ಇರುತ್ತವೆ. ಈ ಕಂದಾಯ ಗ್ರಾಮಗಳಲ್ಲಿ ಒಟ್ಟು 2 ಕೋಟಿ 50 ಲಕ್ಷ ಭೂ ಮಾಲೀಕರಿರುತ್ತಾರೆ. 1 ಕೋಟಿ 75 ಲಕ್ಷ ಆರ್.ಟಿ.ಸಿ.ಗಳು ಇರುತ್ತವೆ. ಈ ಪೈಕಿ 58 ಲಕ್ಷ ಬಹುಮಾಲೀಕತ್ವವಿರುವ ಆರ್.ಟಿ.ಸಿ.ಗಳು ಇರುತ್ತವೆ. ಒಂದೊಂದು ಬಹುಮಾಲೀಕತ್ವದ ಆರ್.ಟಿ.ಸಿ.ಯಲ್ಲಿ ಸರಾಸರಿ ಮೂರು ಮಂದಿ ಆರ್.ಟಿ.ಸಿ.ದಾರರು ಇರುತ್ತಾರೆ. ಅಂತಹ ಜಮೀನುಗಳ ಅಳತೆ ಮಾಡಿ ಪ್ರತ್ಯೇಕ ನಕ್ಷೆ ತಯಾರಿಸಿ, ಏಕಮಾಲೀಕತ್ವ ಪಹಣಿ ನೀಡಲಾಗುತ್ತದೆ ಎಂದರು.
     ರೈತರು ಜಮೀನುಗಳ ಪೋಡಿ ಅಳತೆಗೆ ಅರ್ಜಿ ಸಲ್ಲಿಸುವ  ಹಾಗೂ ಶುಲ್ಕ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಅಳತೆ ಮಾಡಬೇಕಾದ ಜಮೀನುಗಳ ದಾಖಲೆಯನ್ನು ತಹಶೀಲ್ದಾರ್ ಕಚೇರಿಯಿಂದಲೇ ಭೂಮಾಪಕರಿಗೆ ಪೂರೈಸಲಾಗುವುದು. ರೈತರಿಗೆ ಉಚಿತವಾಗಿ ನಕ್ಷೆ ಮತ್ತು ಹೊಸ ಪಹಣಿ ವಿತರಿಸಲಾಗುವುದು. ಪೋಡಿ ಅಳತೆಯಿಂದ ಆರ್.ಟಿ.ಸಿ.ದಾರರು ಹೊಂದಿರುವ ಹಕ್ಕು, ಸ್ವಾಧೀನಾನುಭವ ಮತ್ತು ನಕ್ಷೆ  ತಾಳೆ ಮಾಡಿಕೊಳ್ಳುವುದರಿಂದ ಭೂ ವ್ಯಾಜ್ಯಗಳು ಗಣನೀಯವಾಗಿ ಕಡಿಮೆಯಾಗಲಿದೆ. ರೈತರು ವ್ಯಾಜ್ಯಗಳನ್ನು ಹಾಕಿಕೊಂಡು ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದಾಡುವುದುನ್ನು ತಪ್ಪಿಸಬಹುದು ಎಂದರು.
     40 ವರ್ಷಗಳ ನಂತರ ರಾಜ್ಯದಲ್ಲಿ ಬೀಕರ ಬರಗಾಲ ಎದುರಾಗಿದ್ದು, 135 ತಾಲ್ಲೂಕುಗಳು ಬರಗಾಲದಿಂದ ತತ್ತರಿಸಿದೆ. ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ನಷ್ಟ ಉಂಟಾಗಿದ್ದು, ಆಗಸ್ಟ್ 24 ರಂದು ಮೂರು ಸಾವಿರ ಕೋಟಿ ರೂ. ನೀಡುವಂತೆ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು.
     ಕಬ್ಬಿನ ಬೆಳೆಗೆ ಕೇಂದ್ರ ಸರ್ಕಾರ ಬೆಲೆ ನಿಗಧಿಪಡಿಸುತ್ತದೆ. ಪ್ರತಿ ಟನ್ ಕಬ್ಬಿಗೆ 2300/- ರೂ.  ನಿಗಧಿಪಡಿಸಿದೆ.  ಉತ್ತರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಇಡೀ ದೇಶದಲ್ಲೇ ಸಕ್ಕರೆ ಬೆಲೆ ಕುಸಿದಿದ್ದು, ಪ್ರತಿ ಕೆ.ಜಿ.ಗೆ ರೂ. 22/- ರಿಂದ 23/- ಇದೆ. ಇದರಿಂದ ಸಕ್ಕರೆ ಕಾರ್ಖಾನೆಗಳಿಗೆ ಹಣ ಪಾವತಿಸಲು ಹಿಂಜರಿಯುತ್ತಿದೆ ಎಂದು ತಿಳಿಸಿದರು.
      ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಅವರು ಮಾತನಾಡಿ ಪ್ರತ್ಯೇಕ ನಕ್ಷೆ ಮತ್ತು ಅದಕ್ಕನುಗುಣವಾಗಿ ಏಕ ಮಾಲೀಕತ್ವ ಆರ್.ಟಿ.ಸಿ. ಹೊಂದುವ ಮೂಲಕ ಸಾಲ ಪಡೆಯುವಾಗ, ಹಕ್ಕು ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾವಣೆಯಾಗುವಾಗ, ಕ್ರಯದ ನೋಂದಣಿ, ವಿಭಾಗ ಪತ್ರದ ಖಾತೆ/ಪೌತಿ ಖಾತೆಯ ಸಮಯದಲ್ಲಿ ವಿಳಂಬಕ್ಕೆ ಆಸ್ಪದವಿಲ್ಲದಂತಾಗುತ್ತದೆ ಎಂದರು.
     ಇಲಾಖೆಯಿಂದ ನೇಮಕ ಮಾಡಿಕೊಂಡಿರುವ 1682 ಭೂಮಾಪಕರಿಗೆ 6 ತಿಂಗಳ ಕಾಲಾವಧಿಯ ತರಬೇತಿ ನೀಡಲಾಗಿದೆ. ಭೂಮಾಪನವನ್ನು ವೈಜ್ಞಾನಿಕವಾಗಿ  ಆಧುನಿಕ ಯಂತ್ರಗಳ ಮೂಲಕ ನಿರ್ವಹಿಸಲಾಗುತ್ತಿದೆ ಎಂದರು.
     ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಸಹಕಾರ ಸಚಿವ ಮಹದೇವ ಪ್ರಸಾದ್, ಕರ್ನಾಟಕ ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪ ಅಮರನಾಥ್, ಲೋಕಸಭಾ ಸದಸ್ಯ ಆರ್. ಧ್ರುವನಾರಾಯಣ್, ಕರ್ನಾಟಕ ಮಹಿರ್ಷ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಸಿ.ಬಸವರಾಜು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.  
(ಛಾಯಾಚಿತ್ರ ಲಗತ್ತಿಸಿದೆ).

ಅಂಚೆ ಅದಾಲತ್
      ಮೈಸೂರು,ಸೆ.14.-ಸಮಗ್ರ ಅಂಚೆ ಸೇವೆಗಳ ದೂರು ಮತ್ತು ಕುಂದುಕೊರತೆ ನಿವಾರಿಸಲು ಹಾಗೂ ಆಂಚೆ ಸೇವೆ ಸುಧಾರಣೆಗಾಗಿ ಸಲಹೆಗಳನ್ನು ದಿನಾಂಕ 22.09.2015 ರಂದು ಬೆಳಿಗ್ಗೆ 11 ಗಂಟೆಗೆ ಯಾದವಗಿರಿ ಅಂಚೆ ಕಛೇರಿಯ ಹಿರಿಯ ಅಧೀಕ್ಷಕರ ಕಾರ್ಯಾಲಯದಲ್ಲಿ  “ಡಾಕ್ ಅದಾಲತ್” ಅಯೋಜಿಸಿದೆ. ಗ್ರಾಹಕರು ದೂರು ಮತ್ತು ಕುಂದುಕೊರತೆ ಬಗ್ಗೆ ಲಿಖಿತವಾಗಿ ಪತ್ರವನ್ನು ದಿನಾಂಕ 21.09.2015 ರೊಳಗೆ ಯಾದವಗಿರಿಯಲ್ಲಿರುವ ಮೈಸೂರು ವಿಭಾಗದ ಅಂಚೆ ಸೇವೆಗಳ ಹಿರಿಯ ಅಧೀಕ್ಷಕರ ಕಾರ್ಯಾಲಯಕ್ಕೆ ಸಲ್ಲಿಸುವುದು.
 
     


ಅನುಮೋದಿಸಲ್ಪಟ್ಟಿರುವ ಕೇಂದ್ರದಲ್ಲಿ ಮಾತ್ರ ಆಧಾರ್ ಸೇವೆ ಉಚಿತವಾಗಿ ಪಡೆಯಿರಿ
     ಮೈಸೂರು,ಸೆ.14.ಕರ್ನಾಟಕ ಸರ್ಕಾರದ ಇ-ಆಡಳಿತ ಇಲಾಖೆ ಹಾಗೂ ಕೇಂದ್ರ ಸರ್ಕಾರದ ಯುಐಡಿಎಐ ಪ್ರಾಧಿಕಾರದ ವತಿಯಿಂದ ಮೈಸೂರು ಜಿಲ್ಲೆಯಲ್ಲಿ ಅನುಮೋದಿಸಲ್ಪಟ್ಟಿರುವ ಆಧಾರ್ ನೋಂದಣಿ ಕೇಂದ್ರದಲ್ಲಿ ಮಾತ್ರ ಆಧಾರ್ ಸೇವೆಯನ್ನು ಉಚಿತವಾಗಿ ಪಡೆಯುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ತಿಳಿಸಿದ್ದಾರೆ.
     ಮೈಸೂರು ತಾಲ್ಲೂಕು ಇಲವಾಲ, ಜಯಪುರ, ವರುಣಾ, ನಂಜನಗೂಡು ಕಸಬಾ ನಂಜನಗೂಡು ತಾಲ್ಲೂಕಿನ ಚಿಕ್ಕಯ್ಯಛತ್ರ, ಬಿಳಿಗೆರೆ, ದೊಡ್ಡಕವಲಂದೆ, ಹುಲ್ಲಹಳ್ಳಿ, ಟಿ.ನರಸೀಪುರ ಕಸಬಾ ಟಿ.ನರಸೀಪುರ ತಾಲ್ಲೂಕಿನ ಬನ್ನೂರು, ಸೋಸಲೆ, ತಲಕಾಡು, ಮೂಗೂರು, ಗಾಡವಗೆರೆ, ಹನಗೂಡು, ಹುಣಸೂರು ಕಸಬಾ ಹುಣಸೂರು ತಾಲ್ಲೂಕಿನ ಬಿಳಿಕೆರೆ, ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮ, ಮಿರ್ಲೆ, ಹೊಸಅಗ್ರಹಾರ, ಚುಂಚನಕಟ್ಟೆ, ಹೆಬ್ಬಾಳ್, ಕೆ.ಆರ್.ನಗರ ಕಸಬಾ, ಹೆಚ್.ಡಿ.ಕೋಟೆ ಕಸಬಾ, ಹೆಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ, ಸರಗೂರು, ಕಂಡಲಿಕೆ, ಅಂತರಸಂತೆ, ಪಿರಿಯಾಪಟ್ಟಣ ತಾಲ್ಲೂಕಿನ ಹಾರನಹಳ್ಳಿ, ಬೆಟ್ಟದಪುರ ಹಾಗೂ ರಾವಂದೂರಿನಲ್ಲಿರುವ ಅಟಲ್ ಜೀ ಜನಸ್ನೇಹಿ ಕೇಂದ್ರಗಳು ಅನುಮೋದಿಸಲ್ಪಟ್ಟಿರುವ ಕೇಂದ್ರಗಳಾಗಿರುತ್ತವೆ.
     ಮೈಸೂರಿನ ಸಿದ್ದಾರ್ಥನಗರ ಹಾಗೂ ಗೋಕುಲಂನಲ್ಲಿರುವ ಮೈಸೂರು ಒನ್ ಕೇಂದ್ರ, ಆದಿಚುಂಚನಗಿರಿ ರಸ್ತೆಯಲ್ಲಿರುವ ಬಿ.ಸಿ.ಎಂ ಬಾಲಕರ ವಿದ್ಯಾರ್ಥಿನಿಲಯ, ಮೈಸೂರು ತಾಲ್ಲೂಕಿನ ಸಿಂದುವಳ್ಳಿ ಗ್ರಾಮ ಪಂಚಾಯಿತಿ ಹಾಗೂ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ನೋಂದಣಿ ಕಾರ್ಯ ನಡೆಯುತ್ತದೆ.
    ಮೈಸೂರಿನ ಎಫ್‍ಟಿಎಸ್ ಸರ್ಕಲ್, ಮೇಟಿಗಳ್ಳಿಯಲ್ಲಿರುವ ಕಾರ್ಪೋರೇಷನ್ ಕಟ್ಟಡ, ಕೆ.ಆರ್.ಮೊಹಲ್ಲಾದ ಸುಣ್ಣದಕೇರಿ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಕಟ್ಟಡ, ಹುಣಸೂರು ತಾಲ್ಲೂಕಿನ ಹಳೇ ಬಸ್‍ಸ್ಯಾಂಡ್ ಹತ್ತಿರವಿರುವ ಜೆ.ಪಿ. ಟ್ರಸ್ಟ್ ಕಟ್ಟಡ, ಕೆ.ಆರ್.ನಗರದ ಮಿರ್ಲೆ ಪಂಚಾಯಿತಿ ಆಫೀಸ್ ಹತ್ತಿರ ಕಾರ್ಯನಿರ್ವಹಿಸುತ್ತಿರುವ  ಶ್ರೀ ಎನ್ರೋಲ್ಮೆಂಟ್ ಎಜೆನ್ಸಿ ಅನುಮೋದಿಸಲ್ಪಟ್ಟ ಕೇಂದ್ರಗಳಾಗಿರುತ್ತವೆ.
    ಸಾರ್ವಜನಿಕರು ಈ ಕೇಂದ್ರಗಳಲ್ಲಿ ಮಾತ್ರ ಆಧಾರ್ ಸೇವೆ ಉಚಿತವಾಗಿ ಪಡೆಯುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಸರಾ ಫಲಪುಷ್ಪ ಪ್ರದರ್ಶನ ಅರ್ಜಿ ಆಹ್ವಾನ
    ಮೈಸೂರು,ಸೆ.14.ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ತೋಟಗಾರಿಕೆ ಸಂಘದ ವತಿಯಿಂದ 2015-16ನೇ ಸಾಲಿನಲ್ಲಿ ದಸರಾ ಫಲಪುಷ್ಪ ಪ್ರದರ್ಶನ ಏರ್ಪಡಿಸಿರುವ ಹಿನ್ನೆಯಲೆಯಲ್ಲಿ ಖಾಸಗಿ ಮನೆಗಳು, ಕೈಗಾರಿಕಾ ಸಂಸ್ಥೆ, ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರಿ ಸಂಘ ಸಂಸ್ಥೆಗಳು ತಪ್ಪು ಉದ್ಯಾನವನಗಳು ಮತ್ತು ತೋಟಗಳನ್ನು ಫಲಪುಷ್ಪ ಪ್ರದರ್ಶನದ ತೀರ್ಪುಗಾರರು ಬಂದು ವೀಕ್ಷಿಸಿ ತೀರ್ಪು ನೀಡಲು ಆಸಕ್ತ ಸಂಘಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ.
     ಆಸಕ್ತರು ಜಿಲ್ಲಾ ತೋಟಗಾರಿಕಾ ಸಂಘ, ಕರ್ಜನ್ ಪಾರ್ಕ್, ಮೈಸೂರು ಇಲ್ಲಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್ 3 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2428703ನ್ನು ಸಂಪರ್ಕಿಸುವುದು.

No comments:

Post a Comment