Tuesday, 1 September 2015

ಅತಿಯಾದ ಆಹಾರ ಸೇವನೆಯಿಂದ ಅಪೌಷ್ಠಿಕತೆ: ಕೆ.ಎಸ್.ಮುದಗಲ್
     ಮೈಸೂರು,ಸೆ.1ಅತಿಯಾದ ಆಹಾರ ಸೇವನೆಯಿಂದ ಅಪೌಷ್ಠಿಕತೆ ಉಂಟಾಗುತ್ತಿದ್ದು, ಸೇವಿಸುವ ಆಹಾರ ಉತ್ತಮ ಹಾಗೂ ಆರೋಗ್ಯವಂತವಾಗಿರಬೇಕು. ಉತ್ತಮ ಆಹಾರ ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಸ್.ಮುದಗಲ್ ಹೇಳಿದರು.
     ಇಂದು ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘಗಳ ಸಹಯೋಗದೊಂದಿಗೆ ಜಿ.ಪಂ. ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು ಸೃಷ್ಠಿ ಮನುಷ್ಯನಿಗೆ ಬೇಕಾದ ಎಲ್ಲವನ್ನು ನೀಡಿದ್ದರೂ, ನಾವು ಅದನ್ನು ಸೇವಿಸದೆ ಜಾಹೀರಾತಿಗೆ ಮರುಳಾಗಿ ತಂಪು ಪಾನೀಯ, ಜಂಕ್‍ಫುಡ್ ಆಹಾರಗಳನ್ನು ಸೇವನೆ ಮಾಡುತ್ತಿದ್ದೇವೆ. ಉತ್ತಮ ಆರೋಗ್ಯಕ್ಕಾಗಿ ಪೌಷ್ಠಿಕ ಆಹಾರ ಸೇವನೆಯ ಜತೆಗೆ ಕೆಟ್ಟ ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
    ಅಪೌಷ್ಠಿಕತೆ ದೇಶವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ. ಪ್ರಪಂಚದ ಮೂರು ಮಕ್ಕಳಲ್ಲಿ ಭಾರತದ ಒಂದು ಮಗು ಅಪೌಷ್ಠಿಕತೆಯಿಂದ ಬಳಲುತ್ತಿದೆ. ಪೌಷ್ಠಿಕತೆ ಮತ್ತು ದೇಶದ ಅಭಿವೃದ್ಧಿ ಒಂದೇ ನಾಣ್ಯದ ಎರಡು ಮುಖಗಳಾಗಿದೆ. ಭವಿಷ್ಯದಲ್ಲಿ ಇವೆರಡನ್ನು ಒಟ್ಟಿಗೆ ಕೊಂಡೊಯ್ಯಬೇಕಾಗಿದೆ. ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಮನುಷ್ಯರು ಪೌಷ್ಠಿಕ ಆಹಾರ ಸೇವಿಸುತ್ತಿಲ್ಲ.  ದೇಹದ ಆರೋಗ್ಯ ಕಾಪಾಡಿಕೊಳ್ಳಲು ಆಹಾರ ಮತ್ತು ವಿಹಾರ ಕ್ರಮಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
     ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ  ಡಾ. ಬಿ. ಪುಷ್ಪಾ ಅಮರನಾಥ್ ಮಾತನಾಡಿ  ದೇಶದಲ್ಲಿ ಶೇ. 42.5ರಷ್ಟು, ರಾಜ್ಯದಲ್ಲಿ ಶೇ. 32ರಷ್ಟು, ಜಿಲ್ಲೆಯಲ್ಲಿ 449 ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಒತ್ತಡ ಬದುಕಿನ ನಡುವೆಯೂ ಆಹಾರ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು. 21ನೇ ಶತಮಾನಕ್ಕೆ ಕಾಲಿಡುವ ಜೊತೆಗೆ, ಆಹಾರ  ಭಧ್ರತಾ ಕಾಯಿದೆ ಜಾರಿಗೆ ತಂದರೂ ಅಪೌಷ್ಠಿಕತೆಯಿಂದ ಬಳಲುವ ವiಕ್ಕಳನ್ನು ಕಾಣುತ್ತಿದ್ದೇವೆ ಎಂದು ಆತಂಕ ವ್ಯಕ್ತ ಪಡಿಸಿದರು.
     ಪೌಷ್ಠಿಕಾಂಶದ ಕೊರತೆಯನ್ನು ನೀಗಿಸಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ, ಸಮರ್ಪಕ ಅನುಷ್ಠಾನವಾಗುತ್ತಿಲ್ಲ. ಸದೃಢ ದೇಶ ಕಟ್ಟಬೇಕಾದರೆ ಆರೋಗ್ಯವಂತ ಜೀವನವನ್ನು ಬೆಳಸಿಕೊಳ್ಳಬೇಕು. ಉತ್ತಮ ಆರೋಗ್ಯವೇ ಎಲ್ಲಾ ರೀತಿಯ ಒತ್ತಡಗಳಿಗೆ ಉತ್ತರ. ದೇಶವನ್ನು ಅಪೌಷ್ಠಿಕತೆಯಿಂದ ಮುಕ್ತಗೊಳಿಸಲು ಎಲ್ಲರು ಒಗ್ಗೂಡಿ ಶ್ರಮಿಸಬೇಕು ಎಂದು ತಿಳಿಸಿದರು.
    ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದÀ ಎಲ್.ಮಾದಪ್ಪ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜವರೇಗೌಡ, ಜಿಲ್ಲಾ ಕಾನೂನು ಸೇವರಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹೆಗ್ಡೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಚಂದ್ರಮೌಳಿ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಕೆ.ರಾಧಾ, ಡಾ.ಜಿ.ಸರಸ್ವತಿ, ಡಾ.ಉಮಾ ಕೆ.ಕುಮಾರ್ ಮತ್ತು ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



ಸೆಷ್ಟೆಂಬರ್ ಮಾಹೆ ಪಡಿತರ ಬಿಡುಗಡೆ    
     ಮೈಸೂರು,ಸೆ.1. ಮೈಸೂರು ಜಿಲ್ಲೆಯ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ  ಸೆಪ್ಟೆಂಬರ್ 2015ರ ಮಾಹೆಗೆ ಅಂತ್ಯೋದಯ ಕಾರ್ಡುದಾರರಿಗೆ ಉಚಿತವಾಗಿ 35 ಕೆ.ಜಿ. ಅಕ್ಕಿ, ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಪ್ರತಿ ಸದಸ್ಯರಿಗೆ ಉಚಿತವಾಗಿ 5 ಕೆ.ಜಿ. ಅಕ್ಕಿ,  ನೀಡಲಾಗುವುದು. ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ 1 ಲೀಟರ್ ತಾಳೆ ಎಣ್ಣೆ  ರೂ. 25/-,  1 ಕೆ.ಜಿ. ಅಯೋಡೈಸ್ಡ್ ಉಪ್ಪು  ರೂ. 2 /-, ಹಾಗೂ 1 ಕೆ.ಜಿ. ಸಕ್ಕರೆ ರೂ. 13-50/- ದರದಲ್ಲಿ ಬಿಡುಗಡೆ ಮಾಡಲಾಗುವುದು.
     ಎಪಿಎಲ್ ಪಡಿತರ ಕಾರ್ಡು ಏಕಸದಸ್ಯರಿಗೆ 3 ಕೆ.ಜಿ. ಅಕ್ಕಿ ,(ರೂ. 15=00 ಪ್ರತಿ ಕೆ.ಜಿ.ಗೆ) 2 ಕೆ.ಜಿ. ಗೋಧಿ (ರೂ. 10=00 ಪ್ರತಿ ಕೆ.ಜಿ.ಗೆ) ಎರಡು ಅಥವಾ ಹೆಚ್ಚಿನ ಕುಟುಂಬ ಸದಸ್ಯರಿಗೆ 5 ಕೆ.ಜಿ. ಅಕ್ಕಿ,(ರೂ. 15=00 ಪ್ರತಿ ಕೆ.ಜಿ.ಗೆ) ಹಾಗೂ 5 ಕೆ.ಜಿ. ಗೋಧಿ (ರೂ. 10=00 ಪ್ರತಿ ಕೆ.ಜಿ.ಗೆ) ನೀಡಲಾಗುವುದು.
      ಜಿಲ್ಲೆಯಲ್ಲಿ ಪಡಿತರ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಕಾರ್ಡುದಾರರು ಸಂಬಂಧಿಸಿದ ಗ್ರಾಮ ಪಂಚಾಯಿತಿ/ತಾಲ್ಲೂಕು ಮಟ್ಟದ ಅಧಿಕಾರಿಗಳು ಅಥವಾ ತಹಶೀಲ್ದಾರ್ ಅವರನ್ನು ಸಂಪರ್ಕಿಸಬಹುದು ಅಥವಾ ಡಾ.ಕೆ. ರಾಮೇಶ್ವರಪ್ಪ, ಹಿರಿಯ ಉಪನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮೈಸೂರು ದೂರವಾಣಿ ಸಂಖ್ಯೆ 0821-2422107 ಅಥವಾ ಬೆಂಗಳೂರಿನ ಶುಲ್ಕ ರಹಿತ ಸಹಾಯವಾಣಿ 1800-425-9339ಗೆ ದೂರು ಸಲ್ಲಿಸಬಹುದೆಂದು ತಿಳಿಸಿದ್ದಾರೆ.
ಸೆ. 5 ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಕುರಿಮಂಡಿ ಕಸಾಯಿಖಾನೆ ಬಂದ್
     ಮೈಸೂರು,ಸೆ.1.ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಡುವ ಕುರಿ, ಮೇಕೆ ಕಸಾಯಿಖಾನೆ ಮತ್ತು ಇತರೆ ಎಲ್ಲ ಮಾಂಸದ ಅಂಗಡಿಗಳನ್ನು ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ 2015 ರ ಸೆಪ್ಟೆಂಬರ್ 5 ರಂದು ಮುಚ್ಚಲಾಗುವುದು. ಮೈಸೂರು ನಗರದಲ್ಲಿ ಸದರಿ ದಿನದಂದು ಮಾಂಸದ ವ್ಯಾಪಾರವನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ ಹಾಗೂ ಎಲ್ಲ ಮಾರುಕಟ್ಟೆ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಸೆ. 5 ರೊಳಗಾಗಿ ಪಡಿತರ ಚೀಟಿ ನವೀಕರಿಸಿಕೊಳ್ಳಿ
 ಮೈಸೂರು,ಸೆ.1.(ಕ.ವಾ.)-ಮೈಸೂರು ಜಿಲ್ಲೆಯಲ್ಲಿ 2010 ಕ್ಕಿಂತಲೂ ಹಿಂದಿನ ಖಾಯಂ ಪಡಿತರ ಚೀಟಿಗಳನ್ನು ಹೊಂದಿರುವ ಕಾರ್ಡುದಾರರು ತಮ್ಮ ಪೋಟೋ ಮತ್ತು ಬಯೋಮೆಟ್ರಿಕ್ ಸಲ್ಲಿಸಲು ಸೆಪ್ಟೆಂಬರ್ 5 ಕೊನೆಯ ದಿನಾಂಕವಾಗಿರುತ್ತದೆ.
 2010ಕ್ಕಿಂತಲೂ ಹಿಂದಿನ ಖಾಯಂ ಪಡಿತರ ಚೀಟಿಗಳನ್ನು ನವೀಕರಿಸಲು ಹಾಗೂ ಚಾಲ್ತಿಯಲ್ಲಿರುವ ಎಲ್ಲಾ ಪಡಿತರ ಚೀಟಿಗಳನ್ನು ಹೊಂದಿರುವವರು ಪಡಿತರ ಚೀಟಿಗಳಲ್ಲಿರುವ ಕುಟುಂಬದ ಎಲ್ಲಾ ಸದಸ್ಯರ ಚುನಾವಣಾ ಗುರುತಿನ ಚೀಟಿ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಹೊಸದಾಗಿ ಫೋಟೋ ಮತ್ತು ಬಯೋಮೆಟ್ರಿಕ್ ಮಾಹಿತಿಗಳನ್ನು ನೀಡುವ ಅವಶ್ಯಕತೆ ಇರುತ್ತದೆ. 2010 ಕ್ಕಿಂತಲೂ ಹಿಂದೆ ಪಡಿತರ ಚೀಟಿ ಪಡೆದ 3,48,390 ಫಲಾನುಭವಿಗಳು ಸರ್ಕಾರ ಕೋರಿಕೆಯಂತೆ ಆನ್‍ಲೈನ್ ನಲ್ಲಿ ಹೊಸದಾಗಿ ಫೋಟೋ ಮತ್ತು ಬಯೋಮೆಟ್ರಿಕ್ ಮಾಹಿತಿ ನೀಡಿರುತ್ತಾರೆ ಇನ್ನು ಬಾಕಿ ಉಳಿದೆ 1,28,251  ಪಡಿತರ ಚೀಟಿದಾರರು ಮಾಹಿತಿಯನ್ನು ಒದಗಿಸಿರುವುದಿಲ್ಲ.
ಗ್ರಾಮೀಣ ಪ್ರದೇಶಗಳಲ್ಲಿರುವ ಕಾರ್ಡುದಾರರು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಹೋಗಿ ಅವರ ಪಡಿತರ ಚೀಟಿಗಳನ್ನು ನವೀಕರಿಸಲು ನಗರ ಪ್ರದೇಶದಲ್ಲಿ ಖಾಸಗಿ ಫೋಟೋ ಬಯೋ ಸೆಂಟರ್, ಜನಸ್ನೇಹಿ ಕೇಂದ್ರಗಳು, ಮೈಸೂರು ಒನ್ ಕೇಂದ್ರಗಳಲ್ಲಿ ಫೋಟೋ ಮತ್ತು ಬಯೋಮೆಟ್ರಿಕ್ ಮಾಹಿತಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

No comments:

Post a Comment