Monday, 9 May 2016

ಉನ್ನತ ಮಟ್ಟದ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿಯವರೊಂದಿಗೆ ಬರ ಮತ್ತು ನೀರಿನ ಅಭಾವ ಪರಿಸ್ಥಿತಿಯ ಕುರಿತಂತೆ  ಪರಾಮರ್ಶಿಸಿದ ಪ್ರಧಾನಿ
ಕರ್ನಾಟಕದ ಕೆಲವು ಭಾಗಗಳಲ್ಲಿ ತಲೆದೋರಿರುವ ಬರ ಮತ್ತು ನೀರಿನ ಅಭಾವ ಪರಿಸ್ಥಿತಿ ಕುರಿತಂತೆ ದೆಹಲಿಯಲ್ಲಿಂದು ನಡೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಹಿಸಿದ್ದರು. ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ  ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಭಾರತ ಸರ್ಕಾರದ ಮತ್ತು  ರಾಜ್ಯದ ಹಿರಿಯ ಅಧಿಕಾರಿಗಳು ಸಹ ಉಪಸ್ಥಿತರಿದ್ದರು.

ಚರ್ಚೆಯನ್ನು ಆರಂಭಿಸಿದ ಪ್ರಧಾನಮಂತ್ರಿಯವರು, ತಾವು ಬರಪೀಡಿತ 11 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ, ಬರದಿಂದ ಉದ್ಭವಿಸಿರುವ ಸಮಸ್ಯೆಗಳನ್ನು ತಗ್ಗಿಸಲು ಏನು ಮಾಡಬಹುದು ಎಂಬ ಬಗ್ಗೆ ಮತ್ತು ಮಧ್ಯಮ ಮತ್ತು ದೀರ್ಘಕಾಲೀನ ಕ್ರಮಗಳ ಬಗ್ಗೆ ಗಮನ ಹರಿಸಿದ್ದಾಗಿ ತಿಳಿಸಿದರು.

ಮುಂಗಾರಿನ ಮನವಿಗೆ ಸ್ಪಂದಿಸಿ 1540.20 ಕೋಟಿ ರೂಪಾಯಿಗಳ ನೆರವು ನೀಡಿದ ಭಾರತ ಸರ್ಕಾರಕ್ಕೆ ಕರ್ನಾಟಕದ ಮುಖ್ಯಮಂತ್ರಿಗಳು ಧನ್ಯವಾದ ಅರ್ಪಿಸಿದರು ಮತ್ತು ಇದನ್ನು ರೈತರಿಗೆ ನೆರವು ನೀಡಲು ಸಂಪೂರ್ಣವಾಗಿ ಬಳಸಿಕೊಂಡಿದ್ದಾಗಿ ತಿಳಿಸಿದರು. ಈ ಹಣವನ್ನು ಆರ್.ಟಿ.ಜಿ.ಎಸ್. ಮೂಲಕ ರೈತರಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು. ಹಿಂಗಾರು ಅವಧಿಗೆ 723.23 ಕೋಟಿ ರೂಪಾಯಿಗಳನ್ನು ಇತ್ತೀಚೆಗೆ ಅನುಮೋದಿಸಿದ್ದು, ಅದನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಕೋರಿದರು.

ಇದು 2015-16ನೇ ಸಾಲಿನಲ್ಲಿ ಬಿಡುಗಡೆ ಮಾಡಲಾಗಿರುವ ಎಸ್.ಡಿ.ಆರ್.ಎಫ್.ನ ಕೇಂದ್ರದ ಪಾಲಾದ 207 ಕೋಟಿ ರೂಪಾಯಿಗಳ ಹೊರತಾದ ಹೆಚ್ಚುವರಿ ಮೊತ್ತ ಎಂಬುದನ್ನು ತಿಳಿಸಲಾಯಿತು. ಜೊತೆಗೆ 2016-17ರ ಅವಧಿಗೆ ಈಗಾಗಲೇ 108.75 ಕೋಟಿ ರೂಪಾಯಿಗಳನ್ನು ಎಸ್.ಡಿ.ಆರ್.ಎಫ್.ನ ಪ್ರಥಮ ಕಂತಾಗಿ ಬಿಡುಗಡೆ ಮಾಡಲಾಗಿದೆ.
ಅಲ್ಲದೆ 2016-17ನೇ ಸಾಲಿನಲ್ಲಿ ಭಾರತ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಬರ ತಡೆಯಲು ಮತ್ತು ಜಲ ಸಂರಕ್ಷಣೆಗೆ ಕರ್ನಾಟಕದಲ್ಲಿ 603 ಕೋಟಿ ರೂಪಾಯಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ತಿಳಿಸಲಾಯಿತು. ಅದೇ ರೀತಿ ವಿವಿಧ ಕೃಷಿ ಯೋಜನೆಗಳ ಅಡಿಯಲ್ಲಿ 830 ಕೋಟಿ ಲಭ್ಯವಾಗಲಿದೆ.

ಭೀಕರ ಬರದಿಂದ ರಾಜ್ಯದ ಜನತೆ ಅನುಭವಿಸುತ್ತಿರುವ ಸಂಕಷ್ಟವನ್ನು ಮುಖ್ಯಮಂತ್ರಿಯವರು ವಿವರಿಸಿದರು. ರಾಜ್ಯದ ಪ್ರಮುಖ ಜಲಾಶಯಗಳು, ನದಿಗಳು ನೀರಿಲ್ಲದೆ ಸೊರಗಿವೆ ಎಂದು ತಿಳಿಸಿದರು. ಹೂಳೆತ್ತುವುದು, ಕೃಷಿ ಹೊಂಡ ನಿರ್ಮಾಣ, ಹನಿ ನೀರಾವರಿ ಮತ್ತು ಸಾಕಷ್ಟು ಕುಡಿಯುವ ನೀರಿನ ಪೂರೈಕೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.
ಪ್ರಧಾನಮಂತ್ರಿಯವರು ಹೂಳೆತ್ತುವ, ಜಲ ಸಂರಕ್ಷಿಸುವ ಮತ್ತು ಅಂತರ್ಜಲ ಮರು ಪೂರಣ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದರು. ಮುಂಗಾರು ಆರಂಭಕ್ಕೆ ಮುನ್ನ ಮುಂದಿನ 30ರಿಂದ 40 ದಿನಗಳ ಅವಧಿಯಲ್ಲಿ ಕೃಷಿ ಹೊಂಡ, ಹೂಳೆತ್ತುವುದು ಮತ್ತು ಅಣೆಕಟ್ಟೆಗಳ ನಿರ್ಮಾಣಕ್ಕೆ ಗರಿಷ್ಠ ಗಮನ ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಧಾನಿ ಆಗ್ರಹಿಸಿದರು.

ತ್ಯಾಜ್ಯ ನೀರಿನ ನಿರ್ವಹಣೆಗೆ ಕರ್ನಾಟಕ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳಿಗೆ ವಿವರಿಸಿದರು. ಈ ಎಲ್ಲ ಕ್ರಮಗಳನ್ನು ಪ್ರಶಂಸಿಸಿದ ಪ್ರಧಾನಮಂತ್ರಿಯವರು, ಇವೆಲ್ಲವನ್ನೂ ನಗರ ಹಾಗೂ ಪಟ್ಟಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳುವಂತೆ ಆಗ್ರಹಿಸಿದರು.

ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆಯ ಜಾರಿಗೆ ಕೈಗೊಂಡಿರುವ ಪೂರ್ವಭಾವಿ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿಗಳಿಗೆ ವಿವರಿಸಿದರು. ರಾಜ್ಯ ಸರ್ಕಾರ ಕೂಡ ಬೆಳೆ ವಿಮೆ ಕುರಿತಂತೆ ಕೆಲವು ಸಲಹೆಗಳನ್ನು ನೀಡಿತು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಪ್ರಧಾನಮಂತ್ರಿಯವರಿಗೆ ಮನವಿಪತ್ರವೊಂದನ್ನು ಅರ್ಪಿಸಿದರು. ಪ್ರಧಾನಿಯವರು ಎಲ್ಲ ಅಗತ್ಯ ಬೆಂಬಲದ ಭರವಸೆ ನೀಡಿದರು.
ಬರದಿಂದ ಉದ್ಭವಿಸಿರುವ ಸಮಸ್ಯೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಗ್ಗೂಡಿ ಎದುರಿಸಬೇಕು ಎಂದು ಪ್ರಧಾನಮಂತ್ರಿಯವರು ತಿಳಿಸಿದರು.  ಇದು “ನಮ್ಮ” ಸಮಸ್ಯೆ ಎಂದು ಪ್ರಧಾನಿ ಹೇಳಿದರು. ಸಮಸ್ಯೆಗಳಿಗೆ ಪರಿಹಾರವನ್ನು ಒಗ್ಗೂಡಿ ಹುಡುಕಬೇಕೆಂದು ಅವರು ತಿಳಿಸಿದರು.

ಜಲ ಸಂರಕ್ಷಣೆ ಮತ್ತು ನಿರ್ವಹಣೆ ಪ್ರಯತ್ನಗಳ ಬಗ್ಗೆ ರಾಜ್ಯಗಳು ಮಾತನಾಡುವ ಆರೋಗ್ಯಪೂರ್ಣ ಸ್ಪರ್ಧೆಯ ಸಮಯ ಬಂದಿದೆ ಎಂದ ಪ್ರಧಾನಮಂತ್ರಿಯವರು, ಈ ನಿಟ್ಟಿನ ಕ್ರಮಗಳು ಜಿಎಸ್ ಡಿಪಿ ಹೆಚ್ಚಿಸುತ್ತವೆ ಮತ್ತು ಹೂಡಿಕೆಗಳ ಬಗ್ಗೆ ವರ್ಣಿಸಲಾಗುತ್ತದೆ ಎಂದರು. ಜಲ ಸಂರಕ್ಷಣೆ ಮತ್ತು ನಿರ್ವಹಣೆಯ ಅಳೆಯಲು ಸೂಚ್ಯಂಕವೊಂದನ್ನು ಅಭಿವೃದ್ಧಿಪಡಿಸುವಂತೆ ನೀತಿ ಆಯೋಗಕ್ಕೆ ಪ್ರಧಾನಮಂತ್ರಿಯವರು ಸೂಚಿಸಿದರು. 

No comments:

Post a Comment