Thursday, 12 May 2016

 ನೀತಿಸಂಹಿತೆ ಪಾಲನೆಗೆ ಪ್ರಾದೇಶಿಕ ಆಯುಕ್ತರ ಸೂಚನೆ
ಮೈಸೂರು,ಮೇ.12. ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಅಧಿಸೂಚನೆ ಮೇ 16 ರಂದು ಪ್ರಕಟಗೊಳ್ಳಲಿದ್ದು, ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಮಾದರಿ  ನೀತಿಸಂಹಿತೆಯು ಜೂನ್ 15 ರವರೆಗೆ ಜಾರಿಯಲ್ಲಿರಲಿದೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯಲ್ಲಿ  ಕಟ್ಟುನಿಟ್ಟಾಗಿ ನೀತಿಸಂಹಿತೆ ಪಾಲಿಸುವಂತೆ ಮೈಸೂರು ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಕರ್ನಾಟಕ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣಾಧಿಕಾರಿ ಎ.ಎಂ. ಕುಂಜಪ್ಪ ಅವರು ತಿಳಿಸಿದರು.
 ಅವರು ಇಂದು ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಸಂಬಂಧ ನಡೆದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷಾಧಿಕಾರಿಗಳು, ಅಬಕಾರಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಚುನಾವಣೆಗೆ ಜಿಲ್ಲಾಧಿಕಾರಿ ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದು, ಚುನಾವಣಾ ಕಾರ್ಯದಲ್ಲಿ ಯಾವುದೇ ಲೋಪ ಉಂಟಾಗದಂತೆ ಕಾರ್ಯನಿರ್ವಹಿಸಬೇಕು. ಚುನಾವಣಾ ಕಾರ್ಯಗಳಿಗೆ ಹೆಚ್ಚಾಗಿ ಅನುಭವವಿರುವ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವಂತೆ ತಿಳಿಸಿದರು.
ನಾಮಪತ್ರಗಳನ್ನು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಗೆ ಅಭ್ಯರ್ಥಿಗಳು ಸಲ್ಲಿಸಬೇಕಿದ್ದು, ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಚೇರಿಯ 100 ಮೀ. ವ್ಯಾಪ್ತಿಯೊಳಗೆ ಮೂರು ವಾಹನಗಳಿಗೆ ಮಾತ್ರ ಪ್ರವೇಶವಿರುತ್ತದೆ.  ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಐದು ಜನರಿಗೆ ಮಾತ್ರ ಕಚೇರಿಗೆ ಪ್ರವೇಶವಿರುತ್ತದೆ. ಈ ನಿಟ್ಟಿನಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತರು ಸೂಕ್ತ ಕ್ರಮವಹಿಸÀಬೇಕು ಎಂದರು.
ಚುನಾವಣೆಗೆ ಸ್ಪರ್ಧಿಸುವವರ ವಯಸ್ಸು 30ಕ್ಕೂ ಕಡಿಮೆ ಇರಕೂಡದು. ಕರ್ನಾಟಕ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಬೇಕು. ಕಾನೂನಿ ಅಡಿಯಲ್ಲಿ ಅನರ್ಹರಾಗಿರಬಾರದು. ನಾಮಪತ್ರದೊಂದಿಗೆ ಮತದಾರರಾಗಿದ್ದ ಬಗ್ಗೆ ಸಂಬಂಧಿಸಿದ ಮತದಾರರ ನೋಂದಾಣಾಧಿಕಾರಿ/ಸಹಾಯಕ ನೋಂದಾಣಾಧಿಕಾರಿಗಳಿಂದ ಮತದಾರರ ಪಟ್ಟಿಯ ದೃಢೀಕೃತ ನಕಲು ಲಗತ್ತಿಸಬೇಕು. ನಾಮನಿರ್ದೇಶನದ ಪತ್ರದಲ್ಲಿ ಕನಿಷ್ಠ ಹತ್ತು ಮತದಾರರು ಪ್ರಸ್ತಾಪಕರಾಗಿ ಸಹಿ ಮಾಡಿರಬೇಕು ಮತ್ತು ಪ್ರತಿ ಅಭ್ಯರ್ಥಿ ರೂ. 10,000 ಠೇವಣಿ ಮಾಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ರೂ. 5,000 ಠೇವಣಿ ಮಾಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡವರು ಸಕ್ಷಮ ಪ್ರಾಧಿಕಾರದಿಂದ ಪಡೆದ ದೃಢೀಕರಣ ಪತ್ರ ಸಲ್ಲಿಸಬೇಕು ಎಂದರು.    
 ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿರುವ ಅಂತರರಾಜ್ಯ ಗಡಿ ಪ್ರದೇಶಗಳಲ್ಲಿ  ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಿ ಹೆಚ್ಚಿನ ನಿಗಾ ವಹಿಸಬೇಕು. ಚೆಕ್ ಪೋಸ್ಟ್‍ಗಳಲ್ಲಿ ಪರಿಶೀಲನೆ ನಡೆಸಲು ಅಬಕಾರಿ, ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ಶೀಘ್ರ ರಚಿಸಬೇಕು ಎಂದರು.
1200 ಮತದಾರರಿಗೆ ಒಂದು ಮತಕೇಂದ್ರ ಸ್ಥಾಪಿಸಬೇಕಿದ್ದು, ಈ ಹಿಂದೆ ನಡೆದ ಚುನಾವಣೆಯಲ್ಲಿ 116 ಮತ ಕೇಂದ್ರಗಳನ್ನು ತೆರೆಯಲಾಗಿತ್ತು. ಈ ಬಾರಿ ಮತ ಕೇಂದ್ರಗಳ ಸಂಖ್ಯೆ 130ಕ್ಕೆ ಹೆಚ್ಚಳವಾಗುವ ಸಾದ್ಯತೆ ಇದ್ದು, ಮತ ಕೇಂದ್ರಗಳ ಹೆಚ್ಚಳದ ಬಗ್ಗೆ ಮಾಹಿತಿ ಸಲ್ಲಿಸುವುದು. ಮತ ಕೇಂದ್ರಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸುವುದು ಹಾಗೂ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತ ಕೇಂದ್ರಗಳ ಪಟ್ಟಿಯನ್ನು ಸಲ್ಲಿಸುವಂತೆ  ತಿಳಿಸಿದರು.
ದಿನಾಂಕ 18-01-2016ಕ್ಕೆ ಮೈಸೂರು ಜಿಲ್ಲೆಯಲ್ಲಿ 31271 ಪುರುಷ ಹಾಗೂ 14633 ಮಹಿಳಾ ಮತದಾರರು ಸೇರಿದಂತೆಒಟ್ಟು 45,904 ಮತದಾರರಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 21062 ಪುರುಷ ಹಾಗೂ 8257 ಮಹಿಳಾ ಮತದಾರರು ಸೇರಿದಂತೆಒಟ್ಟು 29,319 ಮತದಾರರಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ 5950 ಪುರುಷ ಹಾಗೂ 1645 ಮಹಿಳಾ ಮತದಾರರು ಸೇರಿದಂತೆಒಟ್ಟು 7595 ಮತದಾರರಿದ್ದಾರೆ. ಹಾಸನ ಜಿಲ್ಲೆಯಲ್ಲಿ 15745 ಪುರುಷ 6694 ಮಹಿಳಾ ಹಾಗೂ 2 ಇತರೆ ಮತದಾರರು ಸೇರಿದಂತೆ ಒಟ್ಟು 22,441 ಮತದಾರರಿದ್ದಾರೆ. ಒಟ್ಟಾರೆ ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ 74028 ಪುರುಷ, 31129 ಮಹಿಳಾ ಮತ್ತು 2 ಇತರೆ ಮತದಾರರು ಸೇರಿದಂತೆ ಒಟ್ಟು 105259 ಮತದಾರರಿದ್ದಾರೆ. ಮೇ 16 ರವರಗೆ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದಾಗಿದ್ದು ಮತದಾರರ ಸಂಖ್ಯೆ ಹೆಚ್ಚಳವಾಗಲಿದೆ ಎಂದರು.
     ತಹಶೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿ  ನಡೆಯುವ ಸಭೆ ಸಮಾರಂಭ, ಸಾಂಸ್ಕøತಿ ಮತ್ತು ಧಾರ್ಮಿಕ ಕಾರ್ಯಕ್ರಮಗಳ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಬೇಕು. ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿ ಹಾಗೂ ಸೂಚನೆಗಳನ್ನು ಚುನಾವಣಾ ಆಯೋಗ ನೀಡಲಿದ್ದು, ಜಿಲ್ಲಾಧಿಕಾರಿಗಳಿಗೆ ಚುನಾವಣೆಯ ಬಗ್ಗೆ ಮಾಹಿತಿ ಬೇಕಿದ್ದಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿಯನ್ನು ಸಂಪರ್ಕಿಸದೇ ನೇರವಾಗಿ ಚುನಾವಣಾ ಆಯೋಗವನ್ನು ಸಂಪರ್ಕಿಸುವುದು ಎಂದರು.
ಚುನಾವಣಾ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ನಾಲ್ಕು ಜಿಲ್ಲೆಗಳಲ್ಲಿ ಒಂದೇ ವಾಹನ ಬಳಸುತ್ತಿದ್ದಲ್ಲಿ ಅಂತಹ ವಾಹನಗಳಿಗೆ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಅನುಮತಿ ಪಡೆದುಕೊಳ್ಳುವುದು. ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ವಾಹನಗಳನ್ನು ಬಳಸುತ್ತಿದ್ದಲ್ಲಿ ಸಂಬಂದಿಸಿದ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅನುಮತಿ ಪಡೆದುಕೊಳ್ಳುವುದು. ಚುನಾವಣಾ ಪ್ರಚಾರಕ್ಕೆ ಸ್ಥಳದ ಅನುಮತಿ ಸ್ಥಳದ ಪಡೆಯುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ಸಲ್ಲಿಸಿ ಅನುಮತಿ ಪಡೆದ ಪತ್ರವನ್ನು ನಂತರ ಸಂಬಂದಿಸಿದ ಪೊಲೀಸ್ ಇಲಾಖೆಗೆ ಸಲ್ಲಿಸುವುದು ಎಂದರು.
ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ವೇಳಾಪಟ್ಟಿಯು ಮೇ 16 ರಂದು ಪ್ರಕಟಗೊಳ್ಳಲಿದ್ದು, ಮೇ 23 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಮೇ 24 ರಂದು ನಾಮಪತ್ರಗಳು ಪರಿಶೀಲನೆ ಕಾರ್ಯ ನಡೆಯಲಿದ್ದು, ಮೇ 26 ರಂದು ನಾಮಪತ್ರ ಹಿಂಪಡೆಯಲು ಕಡೆಯ ದಿನ. ಜೂನ್ 9 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಜೂನ್ 13 ರಂದು ಎಣಿಕೆ ಕಾರ್ಯ ನೆರವೇರಲಿದೆ. ನೀತಿಸಂಹಿತೆಯು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವ ಜೂನ್ 15 ರವರೆಗೂ ಜಾರಿಯಲ್ಲಿರುತ್ತದೆ ಎಂದರು.
     ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ, ಮಂಡ್ಯ ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್, ಹಾಸನ ಜಿಲ್ಲಾಧಿಕಾರಿ ಉಮೇಶ್, ಚಾಮರಾಜನಗರ ಜಿಲ್ಲಾಧಿಕಾರಿ ರಾಮು, ಹೆಚ್ಚುವರಿ ಆಯುಕ್ತರಾದ ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷಾಧಿಕಾರಿಗಳು, ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. (ಛಾಯಾಚಿತ್ರ ಲಗತ್ತಿಸಿದೆ).
ಯೋಜನೆ ಅನುಷ್ಠಾನ ಮಾಡುವಲ್ಲಿ ಯಶಸ್ವಿ : ಆಯೋಗದ ಸದಸ್ಯರು
     ಮೈಸೂರು,ಮೇ.12. ಮೈಸೂರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಯಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮತ್ತು ಯೋಜನಾ ಸಮನ್ವಯಾಧಿಕಾರಿಗಳು ಸರ್ಕಾರಿ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಕಾರದಿಂದ ಮೀಸಲಿಟ್ಟ ಹಣವನ್ನು ಪರಿಶಿಷ್ಟ ಜಾತಿ/ಪಂಗಡದವರಿಗೆ ತಲುಪಿಸುವಲ್ಲಿ ಮತ್ತು ಏಳಿಗೆಗೆ ಶ್ರಮ ವಹಿಸಿರುವುದು ತಿಳಿದು ಬಂದಿರುತ್ತದೆ ಎಂದು  ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಸದಸ್ಯರುಗಳಾದ ಎಂ. ಕುಂಬಯ್ಯ ಮತ್ತು ಎನ್. ದಿವಾಕರ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
    ಅವರು ಮೇ 7 ರಿಂದ 10 ರವರೆಗೆ ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಕೆಲವು ದಲಿತ ಕಾಲೋನಿಗಳು ಹಾಗೂ ಗಿರಿಜನ ಹಾಡಿಗಳಿಗೆ ಭೇಟಿ ನೀಡಿ ಕುಂದುಕೊರತೆಗಳನ್ನು ವಿಚಾರಿಸಿದ ನಂತರ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
    ಕರ್ನಾಟಕ ಪ್ರಾಚ್ಯ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಪರಿಶಿಷ್ಟ ಜಾತಿ/ ಪಂಗಡಗಳಿಗೆ ತಲುಪಬೇಕಾದ ಯಾವುದೇ ವಿಧದವಾದ ಸವಲತ್ತುಗಳನ್ನು ಒದಗಿಸದೇ ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನವನ್ನು ಖರ್ಚು ಮಾಡಿರುವುದಿಲ್ಲ. ಸರ್ಕಾರಿ ಆದೇಶ ಸಂಖ್ಯೆ ಎಸ್.ಡಬ್ಲ್ಯೂಡಿ. 34 ಬಿ.ಸಿ.ಎ. 2004 ಬೆಂಗಳೂರು ದಿನಾಂಕ 10-03-2005ರ ಪ್ರಕಾರ ಪರಿಶಿಷ್ಟ ಜಾತಿ/ಪಂಗಡಗಳ ನಿರುದ್ಯೋಗಿಗಳಿಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಅಡಿಯಲ್ಲಿ ನಿಯಮಾನುಸಾರ ಗುತ್ತಿಗೆಗಳನ್ನು ನೀಡಿರುವುದಿಲ್ಲ. ಇವರು ಸ್ವಜನ ಪಕ್ಷಪಾತವಾಗಿ ಇಷ್ಟಾನುಸಾರ ಗುತ್ತಿಗೆ ನೀಡಿರುವುದು ಕಂಡುಬಂದಿದ್ದು, ಭಾರತ ಸಂವಿಧಾನದ ಅನುಚ್ಫೇಧ 46ರನ್ನು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಇವರಿಗೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ವತಿಯಿಂದ ನೋಟೀಸ್ ಜಾರಿ ಮಾಡಲಾಗಿದೆ.
    ಮೇ 10 ರಂದು ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ (ಎನ್.ಐ.ಇ) ಕಾಲೇಜಿಗೆ ಭೇಟಿ ನೀಡಿ ಮೀಸಲಾತಿ ಬಗ್ಗೆ ವಿಚಾರಣೆ ಮಾಡಿದಾಗ, ಸರಿಯಾಗಿ ಮೀಸಲಾತಿ ನಿಯಮವನ್ನು ಅನುಸರಿಸದೇ ಇರುವುದು ಕಂಡು ಬಂದಿದ್ದು ಇವರಿಗೆ ಸಹ ಆಯೋಗದ ವತಿಯಿಂದ ನೋಟೀಸ್ ಜಾರಿ ಮಾಡಲಾಗಿದೆ ಎಂದು ಆಯೋಗದ ಸದಸ್ಯರುಗಳಾದ ಎಂ. ಕುಂಬಯ್ಯ ಮತ್ತು ಎನ್. ದಿವಾಕರ ಅವರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಛಾಯಾಚಿತ್ರ ಲಗತ್ತಿಸಿದೆ).
ಮೇ 13 ರಂದು ಭಗೀರಥ ಜಯಂತಿ
      ಮೈಸೂರು,ಮೇ.12. ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ  ಮಾದರಿ ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಮೇ 13 ರಂದು ಬೆಳಿಗ್ಗೆ 10-30ಕ್ಕೆ ಕಲಾಮಂದಿರದಲ್ಲಿ ಶ್ರೀ ಭಗೀರಥ ಜಯಂತಿಯನ್ನು ಸರಳವಾಗಿ ಆಚರಿಸಲಾಗುವುದು. ಬೆಂಗಳೂರು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಡಿ. ಜಗನ್ನಾಥ್ ಸಾಗರ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
      ಮೇ 13 ರಂದು ಬೆಳಿಗ್ಗೆ 9 ಗಂಟೆಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ  ಜಿಲ್ಲೆಯ ಉಪ್ಪಾರ ಸಮುದಾಯವರಿಂದ ಮೆರವಣಿಗೆ ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಮಠಪತಿ ಅವರು ತಿಳಿಸಿದ್ದಾರೆ.

ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ
      ಮೈಸೂರು,ಮೇ.12.ಮೈಸೂರಿನ ನಿರ್ಮಿತಿ ಕೇಂದ್ರವು ಅSIಖ-ಅಃಖI-ಖಔಔಖಏಇಇ,  ಸಹಯೋಗದೊಂದಿಗೆ ನಿರ್ಮಾಣ ಕ್ಷೇತ್ರದಲ್ಲಿ ಹೊಸದಾಗಿ ಅಭಿವೃದ್ಧಿಪಡಿಸುತ್ತಿರುವ ಮತ್ತು ಉನ್ನತೀಕರಣಗೊಂಡಿರುವ ತಾಂತ್ರಿಕತೆಗಳನ್ನು ಪರಿಚಯಿಸುವ ಮತ್ತು ತಿಳುವಳಿಕೆ ನೀಡುವ ಸಂಬಂಧ ಮೇ 13 ರಂದು ಬೆಳಿಗ್ಗೆ 10-30ಕ್ಕೆ ಕರ್ನಾಟಕ ವಸ್ತುಪ್ರದರ್ಶನ ಆವರಣದಲ್ಲಿರುವ ಪ್ರಾಚ್ಯ ವಸ್ತು ಸಂಗ್ರಹಣಾಲಯ ಮತ್ತು ಪುರತತ್ವ ಇಲಾಖೆ ಸಭಾಂಗಣದಲ್ಲಿ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
    ಜಿಲ್ಲಾಧಿಕಾರಿ ಸಿ.ಶಿಖಾ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಬೆಟಸೂರ್ ಮಠ್,  ಅSIಖ-ಅಃಖI-ಖಔಔಖಏಇಇ,  ಸ ನಿರ್ದೇಶಕರು, ಹಿರಿಯ ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕೇರಳ-ಕರ್ನಾಟಕ ಗಡಿಪ್ರದೇಶಗಳಲ್ಲಿ ಮದ್ಯ ಮಾರಾಟ ನಿಷೇಧ
     ಮೈಸೂರು,ಮೇ.12.-ಕೇರಳ ರಾಜ್ಯದಲ್ಲಿ ದಿನಾಂಕ 16-05-2016 ರಂದು ವಿಧಾನಸಭಾ ಚುನಾವಣೆ ಹಾಗೂ ಮತ ಎಣಿಕೆ ಕಾರ್ಯವು ದಿನಾಂಕ 19-05-2016 ರಂದು ನಡೆಯಲಿದೆ. ಚುನಾವಣೆಯು ಮುಕ್ತ, ನ್ಯಾಯ ಸಮ್ಮತ ಶಾಂತಿಯುತವಾಗಿ ನಡೆಸಲು ಕೇರಳ-ಕರ್ನಾಟಕ ಗಡಿಪ್ರದೇಶಗಳ 3 ಕಿ.ಮೀ. ವ್ಯಾಪ್ತಿಯಲ್ಲಿ ದಿನಾಂಕ 16-05-2016 ರಂದು ಚುನಾವಣೆ/ಮತದಾನ ಮುಕ್ತಾಯವಾಗುವ 48 ಗಂಟೆಗಳ ಮುಂಚಿತವಾಗಿ ಮತ್ತು ದಿನಾಂಕ 19-05-2016 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿಯವರೆಗೆ ಎಲ್ಲಾ ವಿಧದ ಮದ್ಯದಂಗಡಿಗಳನ್ನು (ಸಿಎಲ್-2, ಸಿಎಲ್-9, ಸಿಎಲ್-7, ಸಿಎಲ್-11ಸಿ, ಸಿಎಲ್-4, ಸಿಎಲ್-6ಎ, ಸಿಎಲ್-8, ಸಿಎಲ್-8ಎ) ಮುಚ್ಚಲು ಮತ್ತು ಮದ್ಯ ಮಾರಾಟ, ಸಾಗಾಣಿಕೆ, ಶೇಖರಣೆಯನ್ನು ನಿಷೇಧಿಸಿ ಒಣ ದಿವಸಗಳೆಂದು ಜಿಲ್ಲಾಧಿಕಾರಿ ಸಿ. ಶಿಖಾ ಅವರು ಘೋಷಿಸಿ ಆದೇಶ ಹೊರಡಿಸಿರುತ್ತಾರೆ.
    ಮೇ 13 ರಂದು  ಹಿರಿಯ  ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರದ ಉದ್ಘಾಟನೆ
      ಮೈಸೂರು,ಮೇ.12.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಹಾಗೂ ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಮೇ 13 ರಂದು ಬೆಳಿಗ್ಗೆ 11 ಗಂಟೆಗೆ ಕುವೆಂಪುನಗರ 2ನೇ ಹಂತದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಯೋಗಮಂದಿರದ ಕಟ್ಟಡದಲ್ಲಿ ಹಿರಿಯ  ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರದ ಉದ್ಘಾಟನೆ ನಡೆಯಲಿದೆ.
    ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಎಂ.ಕೆ. ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸುವರು.

No comments:

Post a Comment