Friday, 9 September 2016

ಕನ್ನಡಿಗರ ಸಂಕಷ್ಟ ನ್ಯಾಯಾಲಯಕ್ಕೆ ತಿಳಿಸುವ ಸಮರ್ಥ ವಕೀಲರು ಬೇಕು-ದೇವೇಗೌಡ

ಕನ್ನಡಿಗರ ಸಂಕಷ್ಟ ನ್ಯಾಯಾಲಯಕ್ಕೆ ತಿಳಿಸುವ ಸಮರ್ಥ ವಕೀಲರು ಬೇಕು-ದೇವೇಗೌಡ
ಮಂಡ್ಯ ಯೂಥ್ ಗ್ರೂಪ್ ಸದಸ್ಯರೊಂದಿಗೆ ಮಾತುಕತೆ ವೇಳೆ ಅಭಿಪ್ರಾಯ
ದೆಹಲಿ: ಕಾವೇರಿ ವಿಚಾರದಲ್ಲಿ ಕರ್ನಾಟಕದ ವಕೀಲ ನಾರಿಮನ್ ತೋರಿದ ಮಾನವೀಯತೆಯನ್ನು ತಮಿಳುನಾಡು ದುರುಪಯೋಗ ಪಡಿಸಿಕೊಂಡಿದೆ. ಕಾವೇರಿ ವಿಚಾರದಲ್ಲಿ ದಶಕಗಳಿಂದ ಅನ್ಯಾಯ ಅನುಭವಿಸುತ್ತಾ ಬಂದಿರುವ ಕನ್ನಡಿಗರ ನೋವನ್ನು ಸುಪ್ರಿಂ ಕೋರ್ಟ್ ಮುಂದೆ ಸಮರ್ಥವಾಗಿ ಮಂಡಿಸುವ ವಕೀಲರು ಇಲ್ಲದಿರುವುದು ನಮ್ಮ ದುರಾದೃಷ್ಟ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾವೇರಿ ವಿವಾದ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್‍ಗೆ ಬೆಂಬಲವಾಗಿ ದೆಹಲಿಯ ಜಂತರ್‍ಮಂತರ್‍ನಲ್ಲಿ ಪ್ರತಿಭಟನಾ ಧರಣಿ ನಡೆಸಿದ ಮಂಡ್ಯ ಯೂಥ್ ಗ್ರೂಪ್‍ನ ಸದಸ್ಯರನ್ನು ಭೇಟಿ ಮಾಡಿದ ನಂತರ ದೇವೇಗೌಡರು ಈ ವಿಷಯ ಹೇಳಿದರು.
ಕರ್ನಾಟಕ ಕಾವೇರಿ ವಿಚಾರದಲ್ಲಿ ನಿರಂತರವಾಗಿ ಅನ್ಯಾಯ ಅನುಭವಿಸುತ್ತಾ ಬಂದಿದೆ. ಈಗಲೂ ಕೂಡ ನಾವು ತೋರಿದ ಮಾನವೀಯತೆಯನ್ನು ತಮಿಳುನಾಡು ದುರುಪಯೋಗ ಪಡಿಸಿಕೊಂಡು ರಾಜ್ಯದಿಂದ ಹೆಚ್ಚಿನ ನೀರು ಲಪಟಾಯಿಸುತ್ತಿದೆ. ತಮಿಳುನಾಡಿನಲ್ಲಿ ನೀರಿನ ಕೊರತೆ ಇರುವುದರಿಂದ ಮಾನವೀಯತೆ ಆಧಾರದ ಮೇಲೆ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುವುದಾಗಿ ನಾರಿಮನ್ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದರು. ಇದನ್ನು ಆಧಾರ ಮಾಡಿಕೊಂಡು ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ನ್ಯಾಯಾಲಯ ಆದೇಶಿಸಿದೆ. ಇದು ಕನ್ನಡಿಗರ ಗಾಯದ ಮೇಲೆ ಎಳೆದ ಬರೆ ಎಂದು ಅವರು ಬಣ್ಣಿಸಿದರು.
ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಕರ್ನಾಟಕ ಇಂತಹ ಪರಿಸ್ಥಿತಿ ಎದುರಿಸುತ್ತಿದೆ. ಕಳೆದ ಹತ್ತು ವರ್ಷದಿಂದ ಸರಾಸರಿ 300 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಟ್ಟಿದೆ. ಇಷ್ಟು ಪ್ರಮಾಣದಲ್ಲಿ ನೀರು ಬಿಟ್ಟರೂ ಸಂಕಷ್ಟ ಸಂದರ್ಭದಲ್ಲಿ ಕರ್ನಾಟಕದ ಪರ ನಿಲ್ಲುವ ಗುಣ ತಮಿಳುನಾಡಿಗೆ ಇಲ್ಲ.  ಪ್ರತಿ ಬಾರಿಯೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಕಾವೇರಿ ನದಿಗೆ ಹೆಚ್ಚಿನ ಅಚ್ಚು ಕಟ್ಟು ಪ್ರದೇಶ ಕರ್ನಾಟಕದಲ್ಲೇ ಇದೆ. ಮಂಡ್ಯ, ಮೈಸೂರು, ಕನಕಪುರ ಹಾಗೂ ಚೆನ್ನಪಟ್ಟಣ ಈ ನದಿ ನೀರಿನ ಮೇಲೆ ಕಷಿ ಹಾಗೂ ಕುಡಿಯುವ ನೀರಿಗಾಗಿ ಅವಲಂಭಿಸಿದ್ದಾರೆ. ತಮಿಳುನಾಡಿನ ಈ ವರ್ತನೆಯಿಂದ ಈ ಭಾಗದ ಜನರ ಜೀವನ ಸಂಕಷ್ಟಕ್ಕೆ ಸಿಲುಕಲಿದೆ.
ಈ ಭಾಗದ ಜನರ ಸಂಕಷ್ಟವನ್ನು ಸಮರ್ಥವಾಗಿ ನ್ಯಾಯಾಲಯಗಳ ಮುಂದೆ ಮಂಡಿಸುವ ಸಾಮಥ್ರ್ಯವುಳ್ಳ ವಕೀಲರು ಬೇಕಾಗಿದ್ದಾರೆ. ಇಲ್ಲದಿದ್ದರೆ ಕರ್ನಾಟಕದ ಹಿತವನ್ನು ಯಾರೂ ಕಾಪಾಡಲಾರರು ಎಂದು ಮಾಜಿ ಪ್ರಧಾನಿಗಳು ಬೇಸರ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಮಂಡ್ಯ ಯೂಥ್ ಗ್ರೂಪ್‍ನ ಅಧ್ಯಕ್ಷರಾದ ಡಾ. ಅನಿಲ್ ಆನಂದ್, ಉಪಾಧ್ಯಕ್ಷರಾದ ಎಚ್.ಎಸ್.ಮಂಜು, ಸದಸ್ಯರಾದ ದೇವೇಂದ್ರ ಗುಪ್ತ, ರುದ್ರಪ್ಪ ಎಸ್ ಹಾಗೂ ಡಾ. ಯಾಶೀಕಾ ಅನಿಲ್ ಮೊದಲಾದವರು ಇದ್ದರು.

Thursday, 8 September 2016

ಬಂದ್ ಹಿನ್ನೆಲೆ: ಸೂಕ್ತ ಬಂದೋಬಸ್ತ್‍ಗೆ ಜಿಲ್ಲಾಧಿಕಾರಿಗಳ ಸೂಚನೆ

  ಬಂದ್ ಹಿನ್ನೆಲೆ: ಸೂಕ್ತ ಬಂದೋಬಸ್ತ್‍ಗೆ ಜಿಲ್ಲಾಧಿಕಾರಿಗಳ ಸೂಚನೆ
ಮೈಸೂರು, ಸೆ. 8. ವಿವಿಧ ಸಂಘಟನೆಗಳು ಸೆಪ್ಟೆಂಬರ್ 9 ರಂದು ರಾಜ್ಯ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಾದ ಡಿ. ರಂದೀಪ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಲಾಯಿತು.
ಬಂದ್ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡಪರ ಸಂಘಟನೆಗಳು ಹೆಚ್ಚು ಸಕ್ರಿಯವಾಗಿರುವ ಜಿಲ್ಲೆಯ ಕೆಲವು ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಆ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆಗೆ ಒತ್ತು ನೀಡಲಾಗಿದೆ ಎಂದು ಡಿ.ಸಿ.ಪಿ ಶೇಖರ್ ಅವರು ಹೇಳಿದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಕಚೇರಿಗಳಿಗೆ ಸೂಕ್ತ ಭದ್ರತೆ ಕಲ್ಪಿಸಲಾಗುವುದು. ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಗೆ ಬಂದ್ ಹಿನ್ನೆಲೆಯಲ್ಲಿ ಭದ್ರತೆ ಅವಶ್ಯಕತೆ ಇದ್ದರೆ, ಅವರಿಗೂ ಭದ್ರತೆ ಒದಗಿಸಲಾಗುವುದು ಎಂದು ಶೇಖರ್ ಅವರು ಹೇಳಿದರು.
ಟಿ.ನರಸೀಪುರ, ನಂಜನಗೂಡು ತಾಲ್ಲೂಕುಗಳಲ್ಲಿ ನೀರಾವರಿ ಪ್ರದೇಶ ಇರುವುದರಿಂದ ಹೆಚ್ಚಿನ ಸಾರ್ವಜನಿಕರು ಬಂದ್‍ನಲ್ಲಿ ಭಾಗವಹಿಸಬಹುದು. ಇಲ್ಲಿನ ಹೆಚ್ಚಿನ ನಿಗಾವಹಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಶಾಲಾ ಕಾಲೇಜುಗಳಿಗೆ ರಜೆ ನೀಡಬೇಕಾಗುವುದೇ ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪರಿಸ್ಥಿತಿಯನ್ನು ಸಂಜೆ ವರೆಗೂ ಅವಲೋಕಿಸಿ, ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಪರಿಸ್ಥಿತಿ ನೋಡಿಕೊಂಡು, ಸಾರಿಗೆ ನಿUಮದ ಬಸ್ ಸಂಚಾರದ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹೇಳಿದರು.
ಬಂದ್ ನೆಪದಲ್ಲಿ ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಧಕ್ಕೆ ಉಂಟುಮಾಡಿದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಬೇಕು. ಇಂತಹ ಅಹಿತಕರ ಘಟನೆಗಳು ನಡೆದರೆ ಸಾರ್ವಜನಿಕರು ಜಿಲ್ಲಾಧಿಕಾರಿಗಳ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ: 0821-2423800ಗೆ ಕರೆ ಮಾಡಿ, ತಿಳಿಸಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಟಿ. ವೆಂಕಟೇಶ್, ಮೈಸೂರು ಉಪ ವಿಭಾಗಾಧಿಕಾರಿಗಳಾದ ಸಿ.ಎಲ್. ಆನಂದ್, ಹುಣಸೂರು ಉಪವಿಭಾಗಾಧಿಕಾರಿ ಸೌಜನ್ಯ, ಮುಡಾ ಆಯುಕ್ತರಾದ ಡಾ. ಎಂ. ಮಹೇಶ್, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Tuesday, 6 September 2016

ಹೊಳಲು ಶ್ರೀಧರ್‍ಗೆ ರಾಜ್ಯಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ

 ಹೊಳಲು ಶ್ರೀಧರ್‍ಗೆ ರಾಜ್ಯಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ
    ಕರ್ನಾಟಕ ಸರ್ಕಾರ,ಸಾರ್ವಜನಿಕ ಶಿಕ್ಷಣ ಇಲಾಖೆ,ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಇವರ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಡಾ||ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ,ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ 2016 ನೇ ಸಾಲಿನ ರಾಜ್ಯ ಪ್ರಶಸ್ತಿ ಪುರಸ್ಕøತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ತನ್ವೀರ್‍ಸೇಠ್ ಅವರು ಜಿಲ್ಲೆಯ ಬಸರಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಹೊಳಲು ಶ್ರೀಧರ್ ಅವರಿಗೆ ರಾಜ್ಯಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ ಪ್ರದಾನ ಮಾಡಿದರು.
     ಹೊಳಲು ಶ್ರೀಧರ್ ಅವರು ತಾವು ಬೋಧಿಸುತ್ತಿರುವ ಕನ್ನಡ ವಿಷಯದಲ್ಲಿ ಉತ್ತಮ ಫಲಿತಾಂಶ ತಂದಿರುವುದಲ್ಲದೇ,ಶೈಕ್ಷಣಿಕ ತಂತ್ರಜ್ಞಾನದ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಕಲಿಕೆಗೆ ಒತ್ತು ನೀಡಿದ್ದಾರೆ.ಕಾಲೇಜಿನ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.ಇದಲ್ಲದೇ ಜಿಲ್ಲಾ ಕ.ಸಾ.ಪ,ಸಂಸ್ಕøತಿ ಸಂಘಟನೆ,ಜಿಲ್ಲಾ ಜಾಗೃತ ಅಂಕಣಕಾರರ ವೇದಿಕೆ,ಉಪನ್ಯಾಸಕರ ಸಂಘ ಮುಂತಾದ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಈಗಾಗಲೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ,ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರಾಗಿದ್ದು,ಹವ್ಯಾಸಿ ಪತ್ರಕರ್ತರಾಗಿಯೂ ಇವರ ಲೇಖನ,ವರದಿಗಳು,ಪದಬಂಧ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿವೆ.
ಅಭಿನಂದನೆ:ರಾಜ್ಯಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ ಪಡೆದಿರುವ ಶ್ರೀಧರ್ ಅವರನ್ನು ಜಿಲ್ಲಾ ಪ.ಪೂ.ಶಿ.ಇಲಾಖೆ ಉಪನಿರ್ದೇಶಕರಾದ ಬಿ.ಎಂ.ಶ್ರೀಕಂಠಯ್ಯ, ಬಸರಾಳು ಕಾಲೇಜಿನ ಪ್ರಾಂಶುಪಾಲರಾದ ಚಂದ್ರೇಗೌಡ ಹಾಗೂ ಉಪನ್ಯಾಸಕ ವರ್ಗ ಜಿಲ್ಲಾ ಕ.ಸಾ.ಪ ಅಧ್ಯಕ್ಷ ರವಿಕುಮಾರ್ ಚಾಮಲಾಪುರ,ಕ.ಸಾ.ಪ. ಮಾಜಿ ಅಧ್ಯಕ್ಷರಾದ ಹೆಚ್.ವಿ.ಜಯರಾಂ,ತೈಲೂರು ವೆಂಕಟಕೃಷ್ಣ ಸಂಸ್ಕøತಿ ಸಂಘಟನೆ ಅಧ್ಯಕ್ಷರಾದ ಕೆ.ಪ್ರಹ್ಲಾದರಾವ್,ಕಾರ್ಯದರ್ಶಿ ಎಂವಿ.ಧರಣೇಂದ್ರಯ್ಯ, , ಅಂಕಣಕಾರರ ವೇದಿಕೆಯ ಅಧ್ಯಕ್ಷ ಸಿದ್ದರಾಜು ಆಲಕೆರೆ, ತೂಬಿನಕೆರೆ ಲಿಂಗರಾಜು,ಅನಾರ್ಕಲಿ ಸಲೀಂ,ಮಂಡ್ಯ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಪುಟ್ಟಲಿಂಗಯ್ಯ, ಮಂಡ್ಯ ಜಿಲ್ಲಾ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಹನುಮಂತಯ್ಯ,ಮಂಗಲ ಯೋಗೇಶ್,ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕøತೆ ಅನುಪಮಾ,ಸಾರಿಗೆ ಅಧಿಕಾರಿ ಸೋಮಶೇಖರ್ ಮುಂತಾದವರು ಅಭಿನಂದಿಸಿದ್ದಾರೆ.

Sunday, 4 September 2016

ಕವಿ ಚನ್ನವೀರ ಕಣವಿ ಅವರಿಗೆ ಮೈಸೂರು ದಸರಾ ಉತ್ಸವ ಸಮಿತಿಯಿಂದ ಆಮಂತ್ರಣ ಕನ್ನಡದ ಮೂಲಕ ವಿಶ್ವದರ್ಶನವಾಗಬೇಕು: ಕಣವಿ ಅಭಿಮತ

ಕವಿ ಚನ್ನವೀರ ಕಣವಿ ಅವರಿಗೆ ಮೈಸೂರು ದಸರಾ ಉತ್ಸವ ಸಮಿತಿಯಿಂದ ಆಮಂತ್ರಣ
ಕನ್ನಡದ ಮೂಲಕ ವಿಶ್ವದರ್ಶನವಾಗಬೇಕು: ಕಣವಿ ಅಭಿಮತ

ಮೈಸೂರು. ಸೆ. 4.ಧಾರವಾಡದ ಕಲ್ಯಾಣನಗರದಲ್ಲಿರುವ ಕವಿ ನಿವಾಸ ‘ಚೆಂಬೆಳಕು’ಗೆ ಭಾನುವಾರ ಬೆಳಿಗ್ಗೆ ಮೈಸೂರು ಮಹಪೌರರಾದ ಬಿ.ಎಲ್.ಭೈರಪ್ಪ, 2016ರ ದಸರಾ ಉತ್ಸವ ಸ್ವಾಗತ ಸಮಿತಿಯ ಸದಸ್ಯ ಕಾರ್ಯದರ್ಶಿಗಳೂ ಆಗಿರುವ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್, ಉಪವಿಶೇಷಾಧಿಕಾರಿಗಳಾಗಿರುವ ಅಪರ ಜಿಲ್ಲಾಧಿಕಾರಿ ಟಿ.ವೆಂಕಟೇಶ, ಕಾರ್ಯದರ್ಶಿ ಪುಟ್ಟಶೇಷಗಿರಿ, ಧಾರವಾಡ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಮತ್ತಿತರ ಗಣ್ಯರು ಭೇಟಿ ನೀಡಿ ಅಕ್ಟೋಬರ್ 1 ರಿಂದ ಆರಂಭವಾಗುವ ಈ ಬಾರಿಯ ದಸರಾ ಉದ್ಘಾಟನೆಗೆ ಆಹ್ವಾನ ನೀಡಿದರು. ಮೈಸೂರು ಪೇಟ, ಶಾಲು, ಶ್ರೀಗಂಧದ ಹಾರ, ಫಲ ಪುಷ್ಪ ನೀಡಿ ಸತ್ಕರಿಸಿ, ಆಮಂತ್ರಣ ನೀಡಲಾಯಿತು. 
ಗೌರವ ಸ್ವೀಕರಿಸಿ ಮಾತನಾಡಿದ ಕವಿ ಚನ್ನವೀರ ಕಣವಿ, ವಿಜಯನಗರದ  ಸ್ಥಾಪನೆಗೆ ಮುನ್ನುಡಿ ಬರೆದ ಗಂಡುಗಲಿ ಕುಮಾರರಾಮ ಆರಂಭಿಸಿದ  ದಸರಾ ಉತ್ಸವವನ್ನು ಮೈಸೂರು ಅರಸರು ಮುಂದುವರೆಸಿಕೊಂಡು ಬಂದರು.ಕರ್ನಾಟಕ ಏಕೀಕರಣಗೊಂಡ ಬಳಿಕವೂ ಸರಕಾರ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬಂದಿದೆ.ಸಾಂಸ್ಕøತಿಕ ಕೇಂದ್ರವಾಗಿರುವ ಮೈಸೂರು ಬೆಳಕಿನ ಕಿಂಡಿಯಾಗಿ ಕನ್ನಡದ ಮೂಲಕ ವಿಶ್ವದರ್ಶನ ಮಾಡಿಸುತ್ತಿದೆ.ರಾಜ್ಯ ಸರಕಾರ ಮೈಸೂರು ದಸರಾ ಉತ್ಸವ ಉದ್ಘಾಟನೆಯ ಗೌರವ ನೀಡಿರುವದಕ್ಕೆ ಆಭಾರಿಯಾಗಿದ್ದೇನೆ ಎಂದು ಸಾಹಿತಿ,ನಾಡೋಜ ಚನ್ನವೀರ ಕಣವಿ ಹೇಳಿದರು.
ಮೈಸೂರು,ಧಾರವಾಡ,ಮಂಗಳೂರು ನಗರಗಳು ಕರ್ನಾಟಕದ ಸಾಂಸ್ಕøತಿಕ ಕೇಂದ್ರಗಳಾಗಿವೆ.ಇವು ನವೋದಯ ಸಾಹಿತ್ಯದ ಕೇಂದ್ರಗಳೂ ಆಗಿದ್ದವು.ಮೈಸೂರು ದಸರಾ ಉತ್ಸವವು ಏಕೀಕೃತ ಕರ್ನಾಟಕದ ಉತ್ಸವವಾಗಿದೆ.ಬಂಗಾಲದಲ್ಲಿ ದುರ್ಗಾಪೂಜೆಯ ಮೂಲಕ ವಂಗಭಂಗ ಚಳವಳಿ,ಮಹಾರಾಷ್ಟ್ರದಲ್ಲಿ ಗಣೇಶ ಉತ್ಸವವನ್ನು ಬಾಲ ಗಂಗಾಧರ ತಿಲಕರು ದೇಶಪ್ರೇಮ ಬಿತ್ತಲು ಬಳಸಿಕೊಂಡರು.                                                            ಕರ್ನಾಟಕದಲ್ಲಿ ದಸರಾ ಹಬ್ಬವು ನಾಡಿನ ಅಖಂಡತೆ ಸಾರಲು ಪ್ರೇರಣೆಯಾಯಿತು. ವರಕವಿ ದ.ರಾ.ಬೇಂದ್ರೆ, ಬೆಟಗೇರಿ ಕೃಷ್ಣಶರ್ಮರು ಧಾರವಾಡದಲ್ಲಿ 1925 ರಿಂದಲೇ ನಾಡಹಬ್ಬ ಆಚರಿಸುವ ಪರಂಪರೆ ಆರಂಭಿಸಿದ್ದರು ಎಂದು ಹೇಳಿದರು.
ಅನೆಗೊಂದಿಯ ಗಂಡುಗಲಿ ಕುಮಾರರಾಮ ಆರಂಭಿಸಿದ ದಸರಾ ಹಬ್ಬದ ಪರಂಪರೆ ವಿಜಯನಗರದ ಅರಸರು,ಮೈಸೂರು ಒಡೆಯರ ಮೂಲಕ ನಿರಂತರವಾಗಿ ಸಾಗಿಕೊಂಡು ಬಂದಿದೆ.ಸ್ವಾತಂತ್ರ್ಯಾನಂತರ ಅಸ್ತಿತ್ವಕ್ಕೆ ಬಂದ ಸರಕಾರಗಳು ದಸರಾ ಆಚರಣೆ ಮುಂದುವರೆಸಿಕೊಂಡು ಬಂದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.ಜಗತ್ಪ್ರಸಿದ್ಧವಾಗಿರುವ ಮೈಸೂರು ದಸರೆಯ ಮೂಲಕ ವಿಶ್ವದರ್ಶನವಾಗುತ್ತಿದೆ.ಎಲ್ಲ ಜಿಲ್ಲೆಗಳಲ್ಲಿ ಇದೇ ಮಾದರಿಯ ಸಾಂಸ್ಕøತಿಕ ಉತ್ಸವಗಳು ನಡೆಯಬೇಕು.ಅವು ಜನತೆಯ ಹಬ್ಬಗಳಾಗಬೇಕು ಎಂದರು.

ಮೈಸೂರು ಮಹಾನಗರ ಪಾಲಿಕೆಯ ಮಹಾಪೌರ ಬಿ.ಎಲ್.ಭೈರಪ್ಪ ಮಾತನಾಡಿ, ತಾಯಿ ಚಾಮುಂಡೇಶ್ವರಿಯ ನಾಡಹಬ್ಬವನ್ನು ಕರ್ನಾಟಕ ಸರಕಾರ ಮುಂದುವರೆಸಿಕೊಂಡು ಬಂದಿದೆ. ಉನ್ನತಾಧಿಕಾರ ಸಮಿತಿಯು ದಸರಾ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕೆಂಬ ತೀರ್ಮಾನ ಕೈಗೊಳ್ಳವ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯವನವರಿಗೆ  ವಹಿಸಿತ್ತು. ಅವರ ಸೂಚನೆಯಂತೆ ಹಿರಿಯ ಕವಿ ಚನ್ನವೀರ ಕಣವಿ ಅವರನ್ನು ಧಾರವಾಡಕ್ಕೆ ಬಂದು  ದಸರಾ ಉದ್ಘಾಟನೆಗೆ ಆಹ್ವಾನಿಸುತ್ತಿದ್ದೇವೆ.ಕಣವಿಯವರ ಮೂಲಕ ಹೊಸ ಪೀಳಿಗೆಗೆ ಮಾರ್ಗದರ್ಶನ ಸಿಗಲಿದೆ ಎಂಬ ಆಶಾಭಾವ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾಧಿಕಾರಿ ,ಮೈಸೂರು ದಸರಾ ಉತ್ಸವ ಸ್ವಾಗತ ಸಮಿತಿಯ ಸದಸ್ಯ ಕಾರ್ಯದರ್ಶಿ ಡಿ.ರಂದೀಪ ಮಾತನಾಡಿ ಅಕ್ಟೋಬರ 1 ರಂದು ಬೆಳಿಗ್ಗೆ 11.40 ಕ್ಕೆ ಮೈಸೂರು ದಸರಾ ಉತ್ಸವ ಉದ್ಘಾಟನೆಯಾಗಲಿದೆ.11 ದಿನಗಳ ಈ ಹಬ್ಬವನ್ನು ಜನತೆಯ ದಸರೆಯಾಗಿ ಆಚರಿಸಲಿದ್ದೇವೆ ಎಂದರು.

ಧಾರವಾಡ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ಕನ್ನಡದ ಹೆಮ್ಮೆಯ ಪುತ್ರ ಕವಿ ಚನ್ನವೀರ ಕಣವಿಯವರನ್ನು ದಸರಾ ಉದ್ಘಾಟನೆಗಾಗಿ ಕರ್ನಾಟಕ ಸರಕಾರ ಆಮಂತ್ರಿಸಿರುವುದು .ಸಮಸ್ತ ಧಾರವಾಡ ಜನತೆಯಲ್ಲಿ ಸಂಭ್ರಮ ತಂದಿದೆ ಎಂದರು.
ಮೈಸೂರಿನ ಅಪರ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಧಾರವಾಡದ ಪ್ರಭಾರ ಅಪರ ಜಿಲ್ಲಾಧಿಕಾರಿ ರಮೇಶ ಕೋನರಡ್ಡಿ, ಧಾರವಾಡದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ರಂಗಣ್ಣವರ ಮತ್ತಿತರರು ಉಪಸ್ಥಿತರಿದ್ದರು.

ಸೆಪ್ಟಂಬರ್ 28 ರಂದು ಕವಿ ಚನ್ನವೀರ ಕಣವಿ ಅವರು ಪುತ್ರ ಶಿವಾನಂದ ಕಣವಿ ಅವರೊಂದಿಗೆ ರೈಲಿನ ಮೂಲಕ ಮೈಸೂರಿಗೆ ತೆರಳುವರು. ಅಕ್ಟೋಬರ್ 1 ರಂದು ಬೆಳಿಗ್ಗೆ 11.40 ಕ್ಕೆ ಚಾಮುಂಡಿ ಬೆಟ್ಟದಲ್ಲಿ 2016ರ ದಸರಾ ಉತ್ಸವಕ್ಕೆ ಚಾಲನೆ ನೀಡುವರು.



Sunday, 21 August 2016


ದಸರಾ ಮಹೋತ್ಸವ -2016
ಗಜಪಯಣಕ್ಕೆ ವಿದ್ಯುಕ್ತ ಚಾಲನೆ  
      ಮೈಸೂರು,ಆ.21. ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಮೊದಲ ಸಾಂಸ್ಕøತಿಕ ಕಾರ್ಯಕ್ರಮ ಗಜಪಯಣದಲ್ಲಿ ಇಂದು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಮೊದಲನೇ ತಂಡದ ದಸರಾ ಆನೆಗಳನ್ನು ಸ್ವಾಗತಿಸಲಾಯಿತು..
   ಹುಣಸೂರು ತಾಲ್ಲೂಕಿನ ಗುರುಪುರ ಪಂಚಾಯಿತಿಯ ನಾಗಪುರ ಗಿರಿಜನ ಆಶ್ರಮ ಶಾಲೆ ಆವರಣದಲ್ಲಿ ಅರ್ಜುನ ನೇತೃತ್ವದಲ್ಲಿ ಬಲರಾಮ, ಅಭಿಮನ್ಯು, ವಿಜಯ ಹಾಗೂ ಕಾವೇರಿ ಆನೆಗಳಿಗೆ ಲೋಕೋಪಯೋಗಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ಅವರು ಸಾಂಪ್ರದಾಯಕ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಗಜಪಯಣಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
  ಚಾಲನೆ ನೀಡಿದ ನಂತರ ಮಾತನಾಡಿ ಮೈಸೂರಿನಲ್ಲಿ ಐತಿಹಾಸಿಕ ಹಾಗೂ ಪಾರಂಪರಿಕವಾಗಿ ನಾನೂರಕ್ಕೂ ಹೆಚ್ಚು ವರ್ಷಗಳಿಂದ ದಸರಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಮೊದಲನೇ ತಂಡದ ಆನೆಗಳನ್ನು ಮೈಸೂರು ಅರಮನೆಯೊಳಗೆ ಜಯಾ ಮಾರ್ತಾಂಡ ಧ್ವಾರದ ಮೂಲಕ ಸಾಂಪ್ರದಾಯಕವಾಗಿ ಆಗಸ್ಟ್ 26 ರಂದು ಬರಮಾಡಿಕೊಳ್ಳಲಾಗುವುದು. ಆನೆಗಳ ಜತೆಯಲ್ಲಿ ಆಗಮಿಸುವ ಮಾವುತರು, ಕಾವಾಡಿಗರು ಹಾಗೂ ಅವರ ಕುಟುಂಬದವರಿಗೆ ತಂಗಲು ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದರು.
  ಯಾವುದೇ ಜಾತಿ, ಧರ್ಮದ ಚೌಕಟ್ಟಿಲ್ಲದೆ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರುವ ನಾಡಹಬ್ಬ ದಸರಾ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ತಿಳಿಸುವ ದಸರಾ ಸಾಮಾಜಿಕ ಹೊಣೆಗಾರಿಕೆಯನ್ನು ಸಹಾ ಅಭಿವ್ಯಕ್ತಿಗೊಳಿಸುತ್ತದೆ ಎಂದು ಹೇಳಿದರು.    ದಸರಾವನ್ನು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಆಚರಿಲಾಗುತ್ತಿದ್ದು, ದಸರಾ ಅಂಗವಾಗಿ ಪಿರಿಯಾಪಟ್ಟಣ ತಾಲ್ಲೂಕಿನ ಬೈಲುಕುಪ್ಪೆ ಗ್ರಾಮದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣವಾದ ಗೋಲ್ಡನ್ ಟೆಂಪಲ್ ಆವರಣದಲ್ಲಿಯೂ ಸಹ ಎರಡು ದಿನಗಳ ಕಾಲ ಆಕರ್ಷಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
   ದಸರಾವನ್ನು ವಿಜೃಂಭಣೆಯಿಂದ ಆಚರಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ನಾಡ ಹಬ್ಬ ದಸರಾದಲ್ಲಿ ಹೆಚ್ಚಿನ ಜನರು ಭಾಗವಹಿಸಬೇಕು ಎಂದರು. ಇದೇ ಸಂದರ್ಭದಲಿ ಗಿರಿಜನ ಆಶ್ರಮ ಶಾಲೆ  ಮಕ್ಕಳು, ಟಿಬೆಟಿಯನ್ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನೀಡಿದರು.
  ಹುಣಸೂರು ಶಾಸಕರಾದ ಹೆಚ್.ವಿ.ಮಂಜುನಾಥ್ ಅವರು ಮಾತನಾಡಿ ದಸರಾ ಮಹೋತ್ಸವ ಈ ಬಾರಿಯ ಕೇವಲ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ದಸರಾವಾಗದೆ ಜನಸಾಮಾನ್ಯರ ದಸರಾವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮವಹಿಸಬೇಕು. ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಜನರು ಸಮಸ್ಯೆ ಎದುರಿಸುತ್ತಿದ್ದು, ಸಮಸ್ಯೆ ಮತ್ತುಷ್ಟು ಗಂಭೀರವಾಗದೆ ಜನರು ಶಾಂತಿ ನೆಮ್ಮದಿ ಬಾಳು ಬದುಕಲು ತಾಯಿ ಚಾಮುಂಡೇಶ್ವರಿ ಆರ್ಶೀವದಿಸಲಿ ಎಂದರು.
    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಹೀಮಾ ಸುಲ್ತಾನ, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಲ್.ಭೈರಪ್ಪ, ಶಾಸಕರಾದ ವೆಂಕಟೇಶ್, ಜಿ.ಪಂ. ಸದಸ್ಯೆ ಪುಷ್ಪಾ ಅಮರ್‍ನಾಥ್, ಜಿಲ್ಲಾಧಿಖಾರಿ ಡಿ.ರಂದೀಪ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಮೇಶ್ವರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್, ಮುಡಾ ಆಯುಕ್ತರಾದ ಮಹೇಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

  ಆಗಸ್ಟ್ 22 ರಂದು ಜನಸ್ಪಂದನ ಕಾರ್ಯಕ್ರಮ
ಮೈಸೂರು,ಆ.21.-ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ಹೆಚ್.ಎಸ್. ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 22 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ನಗರ ಸರ್ಕಾರಿ ಅತಿಥಿಗೃಹದ ಆವರಣದಲ್ಲಿ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
 ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ಬಗ್ಗೆ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರ್ಕಾರದ ವಿವಿಧ ಯೋಜನೆಗಳಲ್ಲಿ ಗುರುತಿಸಿರುವ ಅರ್ಹ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಮಂಜೂರಾತಿ ಪತ್ರಗಳನ್ನು ಸಹ ನೀಡಲಾಗುವುದು.
ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿಗಳೊಂದಿಗೆ ಹಾಗೂ ದಿನಾಂಕ 18-07-2016 ರಂದು ನಡೆಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತವಾಗಿದ್ದ ತಾಲ್ಲೂಕುವಾರು/ ಇಲಾಖಾವಾರು ಅರ್ಜಿಗಳ ವಿಚಾರದಲ್ಲಿ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿಯೊಂದಿಗೆ ಖುದ್ದು ಹಾಜರಾಗುವಂತೆ ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, 25 June 2016

 ಮೈಸೂರು,ಜೂ.25.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜೂನ್ 27 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
     ಅಂದು  ಸಂಜೆ 6-30 ಗಂಟೆಗೆ ರಸ್ತೆ ಮೂಲಕ ಮೈಸೂರಿಗೆ ಆಗಮಿಸುವರು. ರಾತ್ರಿ 7-30 ಗಂಟೆಗೆ ರಾಜಮಾತೆ ಶ್ರೀಮತಿ ಪ್ರಮೋದಾ ದೇವಿ ಒಡೆಯರ್ ಹಾಗೂ ಲೇಟ್ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪುತ್ರ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರೀಶಿಕಾ ಕುಮಾರಿ ಇವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಭಾಗವಹಿಸುವರು. ರಾತ್ರಿ 9 ಗಂಟೆಗೆ ಮೈಸೂರಿನಿಂದ ರಸ್ತೆ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.
ರಾಜ್ಯ ಯುವ ಪ್ರಶಸ್ತಿಗೆ  ಅರ್ಜಿ  ಆಹ್ವಾನ
     ಮೈಸೂರು,ಜೂ.25-ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ  ವತಿಯಿಂದ 2015-16ನೇ ಸಾಲಿನಲ್ಲಿ ಕ್ರೀಡೆ, ಸಾಂಸ್ಕøತಿ ಹಾಗೂ ಸಮುದಾಯ ಅಭಿವೃದ್ದಿ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯಚಟುವಟಿಕೆ ನಿರ್ವಹಿಸಿರುವ ಯುವಜನರಿಗೆ ಮತ್ತು ನೊಂದಾಯಿತ ಯುವಕ/ಯುವತಿ ಸಂಘಗಳಿಗೆ ರಾಜ್ಯ ಯುವ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿದೆ.
     ದಿನಾಂಕ 01-04-2015 ರಿಂದ 31-03-2016 ರವರೆಗೆ ಯುವಕ/ಯುವತಿ ಹಾಗೂ ಯುವಕ ಸಂಘ/ಯುವತಿ ಮಂಡಳಿ ಕೈಗೊಂಡಿರುವ ಸಾಧನೆಗಳನ್ನು ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು. ಸರ್ಕಾರಿ ನೌಕರರು ಸಲ್ಲಿಸಿದ ಪ್ರಸ್ತಾವನೆಯನ್ನು ಆಯ್ಕೆಗೆ ಪರಿಗಣಿಸುವುದಿಲ್ಲ. ಪ್ರಸ್ತಾವನೆಗಳನ್ನು ದಿನಾಂಕ:                     25-08-2016 ರೊಳಗಾಗಿ ಸಲ್ಲಿಸುವುದು.
    ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ದೂರವಾಣಿ ಸಂಖ್ಯೆ: 0821-2564179 ಇವರನ್ನು ಸಂಪರ್ಕಿಸುವುದು.
ಗ್ರಾಮೀಣ ಅಂಚೆ ಸೇವಕರ (ಅಂಚೆ ವಿತರಕರ) ಹುದ್ದೆಗಳ ಆಯ್ಕೆ ಬಗ್ಗೆ
  ಮೈಸೂರು,ಜೂ.25.ಮೈಸೂರು ಪಶ್ಚಿಮ ಅಂಚೆ ಉಪ ವಿಭಾಗದ  ಕುವೆಂಪುನಗರ ಉಪ ಅಂಚೆ  ಕಛೇರಿ  ಹಾಗೂ ಬೋಗಾದಿ ಉಪ ಅಂಚೆ ಕಚೇರಿಯಲ್ಲಿ ಖಾಲಿ ಇರುವ ಗ್ರಾಮೀಣ  ಅಂಚೆ ಸೇವಕರ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಹಾಗೂ ಬೇಸಿಕ್ ಕಂಪ್ಯೂಟರ್ ಜ್ಞಾನವನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ  ಆಹ್ವಾನಿಸಿದೆ.
     ಕುವೆಂಪುನಗರ ಉಪ ಅಂಚೆ ಕಛೇರಿ ಗ್ರಾಮೀಣ ಅಂಚೆ ಸೇವಕರ ಹುದ್ದೆಗೆ ಅರ್ಜಿ ಸಲ್ಲಿಸಲು ಜುಲೈ 03 ಹಾಗೂ ಬೋಗಾದಿ ಉಪ ಅಂಚೆ ಕಛೇರಿ ಗ್ರಾಮೀಣ ಅಂಚೆ ಸೇವಕ ಹುದ್ದೆಗೆ ಅರ್ಜಿ ಸಲ್ಲಿಸಲು ಜುಲೈ 14 ಕೊನೆಯ ದಿನಾಂಕವಾಗಿರುತ್ತದೆ.
     ಅರ್ಜಿ ಸಲ್ಲಿಸುವವರ ವಯೋಮಿತಿ 18 ರಿಂದ 30 ವರ್ಷದ ಒಳಗಿರಬೇಕು. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
     ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಗಳಿಗೆ ಸಹಾಯಕ ಅಂಚೆ ಅಧೀಕ್ಷಕರು, ಮೈಸೂರು ಪೂರ್ವ ಪಶ್ಚಿಮ ಉಪ ವಿಭಾಗ, ಮೈಸೂರು- 570023, ದೂರವಾಣಿ ಸಂಖ್ಯೆ : 0821-2417309 ಯನ್ನು ಸಂಪರ್ಕಿಸುವುದು.
ಪ್ರವಾಸ ಕಾರ್ಯಕ್ರಮ
     ಮೈಸೂರು,ಜೂ.25.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜೂನ್ 27 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
     ಅಂದು  ಸಂಜೆ 6-30 ಗಂಟೆಗೆ ರಸ್ತೆ ಮೂಲಕ ಮೈಸೂರಿಗೆ ಆಗಮಿಸುವರು. ರಾತ್ರಿ 7-30 ಗಂಟೆಗೆ ರಾಜಮಾತೆ ಶ್ರೀಮತಿ ಪ್ರಮೋದಾ ದೇವಿ ಒಡೆಯರ್ ಹಾಗೂ ಲೇಟ್ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪುತ್ರ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರೀಶಿಕಾ ಕುಮಾರಿ ಇವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಭಾಗವಹಿಸುವರು. ರಾತ್ರಿ 9 ಗಂಟೆಗೆ ಮೈಸೂರಿನಿಂದ ರಸ್ತೆ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.
ಆಡಳಿತ ನ್ಯಾಯಾಧೀಕರಣದಲ್ಲಿ ತರಬೇತಿ
     ಮೈಸೂರು,ಜೂ.25.ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
     ಅರ್ಜಿ ಸಲ್ಲಿಸುವವರು ಕಾನೂನು ಪದವಿಯಲ್ಲಿ ತೇರ್ಗಡೆಯಾಗಿ 2 ವರ್ಷ ಮೀರಿರಬಾರದು, ವಯೋಮಿತಿ 40 ವರ್ಷದೊಳಗಿರಬೇಕು. ವಾರ್ಷಿಕ ಆದಾಯ ಮಿತಿ 2 ಲಕ್ಷ ಮೀರಿರಬಾರದು ಆಸಕ್ತರು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಜುಲೈ 20 ರೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2344661 ನ್ನು ಸಂಪರ್ಕಿಸುವುದು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಪಿಎ ಪದವಿ ಪರೀಕ್ಷೆಗೆ ಅರ್ಜಿ ಆಹ್ವಾನ
ಮೈಸೂರು,ಜೂ.25.ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲಾ ಕಾಲೇಜಿನಲ್ಲಿ ಪಿಯುಸಿ ನಂತರದ ಬಿಪಿಎ ಪದವಿ, ಎಸ್.ಎಸ್.ಎಲ್.ಸಿ. ನಂತರದ ಎರಡು ವರ್ಷ ಅವಧಿಯ ಡಿಪ್ಲೋಮಾ ತರಗತಿ ಹಾಗೂ ಎರಡು ವರ್ಷ ಅವಧಿಯ ಎಂ.ಮ್ಯೂಸಿಕ್ ಹಾಗೂ ಎಂ. ಡಾನ್ಸ್ ಕೋರ್ಸುಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
 ಬಿಪಿಎ ಪದವಿ ತರಗತಿಯಲ್ಲಿ ಹಾಡುಗಾರಿಕೆ, ವೀಣಾ, ಕೊಳಲು, ಪಿಟೀಲು, ಮೃದಂಗ, ನೃತ್ಯ, ನಾಟಕಶಾಸ್ತ್ರ, ಗಮಕ ಹಾಗೂ ಕನ್ನಡ, ಸಂಸ್ಕøತ, ಇಂಗ್ಲೀಷ್, ಹಿಂದಿ, ಉರ್ದು ಭಾಷೆಗಳು ಸೌಂದರ್ಯಶಾಸ್ತ್ರ, ದಕ್ಷಿಣ ಭಾರತ ಅಧ್ಯಯನ, ಇತಿಹಾಸ ಐಚ್ಫಿಕ ವಿಷಯಗಳು ಇರುತ್ತದೆ.
ಡಿಪ್ಲೋಮಾ ತರಗತಿಯಲ್ಲಿ ಹಾಡುಗಾರಿಕೆ, ಕೊಳಲು, ವೀಣಾ, ನಾಟಕಶಾಸ್ತ್ರ, ನೃತ್ಯ ವಿಷಯಗಳು ಇರುತ್ತದೆ. ಎಂ.ಮ್ಯೂಸಿಕ್ ನಲ್ಲಿ ಹಾಡುಗಾರಿಕೆ/ವೀಣೆ ಹಾಗೂ ಎಂ.ಡ್ಯಾನ್ಸ್  ನಲ್ಲಿ ಭರತನಾಟ್ಯ ವಿಷಯ ಇರುತ್ತದೆ.
 ಪ್ರವೇಶಾತಿಯನ್ನು ದಂಡಶುಲ್ಕವಿಲ್ಲದೆ ಜುಲೈ 15 ರವರೆಗೆ ರೂ. 300/- ದಂಡಶುಲ್ಕದೊಂದಿಗೆ ಜುಲೈ 25 ರವರೆಗೆ ರೂ. 500/- ದಂಡಶುಲ್ಕದೊಂದಿಗೆ ಜುಲೈ 30 ರವರೆಗೆ ಪಡೆಯಬಹುದಾಗಿದೆ.
ಮಹಿಳಾ/ಪುರುಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವಿದ್ದು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2419586, 9448489429 ನ್ನು ಸಂಪರ್ಕಿಸುವುದು.
ಪರೀಕ್ಷಾ ಪೂರ್ವ ತರಬೇತಿ
     ಮೈಸೂರು,ಜೂ.25-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಐಎಎಸ್ ಹಾಗೂ ಕೆಎಎಸ್ ಮತ್ತು ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ ನೀಡಲು, ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.  ಅರ್ಜಿ ಸಲ್ಲಿಸಲು ಜುಲೈ 10 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ವಿವರಗಳಿಗಾಗಿ ಇಲಾಖಾ ವೆಬ್‍ಸೈಟ್ WWW.bಚಿಛಿಞತಿಚಿಡಿಜಛಿಟಚಿsses.ಞಡಿಚಿ.ಟಿiಛಿ.iಟಿ  ಅಥವಾ ಮೊಬೈಲ್ ಸಂಖ್ಯೆ:9480818013, 9480818010/ ದೂರವಾಣಿ ಸಂಖ್ಯೆ:080-44554444 ನ್ನು ಸಂಪರ್ಕಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.                                                        
ದರಪಟ್ಟಿ ಆಹ್ವಾನ
     ಮೈಸೂರು,ಜೂ.25.ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿ ಉಪಯೋಗಕ್ಕಾಗಿ  05 ಕೆವಿಎ ಯುಪಿಎಸ್-1 ಮತ್ತು ಪ್ರಾದೇಶಿಕ ಆಯುಕ್ತರ ಗೃಹ ಕಚೇರಿ ಉಪಯೋಗಕ್ಕಾಗಿ 05 ಕೆವಿಎ ಯುಪಿಎಸ್ ಹೊಂದಿದ್ದು,  ಒಂದು ವರ್ಷದ ಅವಧಿಯವರೆಗೆ ಕಾರ್ಯನಿರ್ವಹಣೆ ಮಾಡಲು ಆಸಕ್ತ ಸಂಸ್ಥೆಗಳಿಂದ ದರಪಟ್ಟಿ ಆಹ್ವಾನಿಸಿದೆ.
     ದರಪಟ್ಟಿಯನ್ನು ತೆರಿಗೆ ಸಹಿತ ಪ್ರಾದೇಶಿಕ ಆಯುಕ್ತರು ಮೈಸೂರು ವಿಭಾಗ, ಮೈಸೂರು ಇವರಿಗೆ ದಿನಾಂಕ            30-06-2016 ರಂದು ಸಂಜೆ 4 ಗಂಟೆಯೊಳಗಾಗಿ ಶೀಲ್ ಮಾಡಿದ ಲಕೋಟೆಯಲ್ಲಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2414088 ನ್ನು ಸಂಪರ್ಕಿಸಬಹುದು.
 26 ರಂದು ಮಾದಕ ವಸ್ತು, ಕಳ್ಳ ಸಾಗಣೆ ವಿರುದ್ದ ಅಂತರ ರಾಷ್ಟ್ರೀಯ ದಿನ
ಮೈಸೂರು, ಜೂನ್ 25 , ಮೈಸೂರು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಗೊಳಪಡುವ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರುಗಳು ಜೂನ್ 26 ರಂದು ಮಾದಕ ವಸ್ತುವಿನ ದುರುಪಯೋಗ ಮತ್ತು ಆಕ್ರಮ ಕಳ್ಳ ಸಾಗಣೆ ವಿರುದ್ದ ಅಂತರ ರಾಷ್ಟ್ರೀಯ ದಿನವನ್ನಾಗಿ ಆಚರಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಹೆಚ್.ಆರ್.ಬಸಪ್ಪ ತಿಳಿಸಿದ್ದಾರೆ.
  ಜೂನ್ 26 ರಂದು ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ, ಮಾದಕ ಔಷಧ ಸೇವನೆ ವಿರುದ್ದ ಮೆರವಣಿಗೆ, ಓಟಗಳು ಹಾಗೂ ಜಾಗೃತಿ ಜಾಥ, ಶಾಲಾ ಪರಿಸರದಲ್ಲಿ ಮಾದಕ ವಸ್ತುವಿನ ಸೇವನೆಯಿಂದ ಅಶಕ್ತ ಮತ್ತು ದುರ್ಬಲರಾಗಿರುವ ಗುಂಪಿನ ಸದಸ್ಯರನ್ನು ಹಾಗೂ ಹೆಚ್.ಐ.ವಿ ಪೀಡಿತರನ್ನು ಗುರುತಿಸಿ ಅವರಲ್ಲಿ ಮಾದಕ ವ್ಯಸನ ದುಷ್ಪರಿಣಾಮದ ಬಗ್ಗೆ ಅರಿವು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಕರದೊಂದಿಗೆ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮದ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.