ವಿಶ್ವಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚೆನ್ನವೀರ ಕಣವಿ ಚಾಲನೆ.
ಮೈಸೂರು: ಕನ್ನಡ ನಾಡಿನ ಜೀವನದಿ ಕಾವೇರಿಗೆ ತಮಿಳ್ನಾಡು ಮಗ್ಗುಲ ಮುಳ್ಳಾಗಿದೆ ಎಂದು ನಾಡೋಜ ಚೆನ್ನವೀರ ಕಣವಿ ಅತೀವ ಬೇಸರ ವ್ಯಕ್ತಪಡಿಸಿದ್ದಾರೆ.ವಿಶ್ವಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಶನಿವಾರ ಬೆಳಿಗ್ಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಮಿಳ್ನಾಡು ನಮ್ಮ ಪಾಲಿಗೆ ಮಗ್ಗುಲ ಮುಳ್ಳಾಗಿ ಆಗಾಗ ಚುಚ್ಚುತ್ತಲೇ ಇರುತ್ತದೆ. ಇದಕ್ಕೆ ಸಂಕಷ್ಟ ಸೂತ್ರವೊಂದನ್ನು ಸಿದ್ದಪಡಿಸಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಶನಿವಾರ ಮದ್ಯಾಹ್ನ 12 ಗಂಟೆ 5 ನಿಮಿಷಕ್ಕೆ ಸಂದ ಶುಭ ಧನುರ್ ಲಗ್ನದಲ್ಲಿ ನಾಡ ದೇವತೆ, ತಾಯ ಚಾಮುಂಡೇಶ್ವರಿಗೆ ಅಗ್ರ ಪೂಜೆ ಸಲ್ಲಿಸಿದ ನಂತರ ಉದ್ಘಾಟನಾ ಭಾಷಣ ಮಾಡಿದ ಅವರು, ಕರ್ನಾಟಕ- ತಮಿಳುನಾಡಿನ ನಡುವೆ ಉದ್ಭವಿಸಿರುವ ಈ ಬಿಕ್ಕಟ್ಟನ್ನು ಪರಿಸಹರಿಸಲು ಪ್ರಧಾನಮಂತ್ರಿಗೆ ಕಾನೂನಿನಲ್ಲಿ ಅವಕಾಶವಿದೆ ಎಂದರಲ್ಲದೇ ನ್ಯಾಯಾಲಯವೂ ಸಹ ಈ ಸಂಗತಿಯನ್ನು ಮಾನವೀಯತೆಯ ನಿಟ್ಟಿನಲ್ಲಿ ನೋಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ತಮ್ಮ ಪಕ್ಷದ ಹಿತಕ್ಕಿಂತಲೂ ರಾಜ್ಯದ ಹಿತಮುಖ್ಯವೆಂದು ನಮ್ಮ ರಾಷ್ಟ್ರೀಯ ಪಕ್ಷಗಳು ಭಾವಿಸಬೇಕೆಂದು ಮನವಿ ಮಾಡಿದರು.
ಅಂತಾರಾಜ್ಯ ನೀರು ಹರಿಯುವ ಪ್ರದೇಶದಲ್ಲಿ ಪ್ರತಿ ರಾಜ್ಯ ಕ್ಕೆ ತನ್ನ ಪ್ರದೇಶದೊಳಗೆ ಒಂದು ಸಮುಚಿತ ಸಮತೋಲನದ ನೀರಿನಪಾಲು ಬಳಸಿಕೊಳ್ಳುವ ಹಕ್ಕಿದೆ ಎಂದು 1995ರಲ್ಲಿ ಹೆಲ್ಸಿಂಕಿ ಅಂತಾರಾಷ್ಟ್ರೀಯ ಕಾನೂನು ಸಂಘದ ಸಮಾವೇಶದಲ್ಲಿ ನೀರು ಹಂಚಿಕೆ ಕುರಿತು ಅಂತಾರಾಷ್ಟ್ರೀಯ ನೀತಿ ರೂಪಿಸಲಾಗಿದೆ.ಅದರ ಆಧಾರದ ಮೇಲೆ ತಕ್ಕ ಮಾನದಂಡಗಳನ್ನು ರೂಪಿಸಿ ಅಂತಾರಾಜ್ಯ ಜಲವಿವಾದಗಳನ್ನು ಕೇಂದ್ರ ಸರ್ಕಾರ ಬಗೆಹರಿಸಬಹುದೆಂದು ತಿಳಿಸಿದರು.
ಕೇಂದ್ರ ಸರ್ಕಾರ ರಾಷ್ಟ್ರೀಯ ಜಲ ನೀತಿಯೊಂದನ್ನು ರೂಪಿಸುವುದು ಅತ್ಯಂತ ಅಗತ್ಯವಾಗಿದೆ. ಮಹಾದಾಯಿ ವಿವಾದವನ್ನು ಮೂರು ರಾಜ್ಯಗಳ ಮುಖ್ಯಮಂತ್ರಿ ಗಳು ಮಾತುಕತೆ ಮೂಲಕ ಸೌಹಾರ್ದತೆಯಿಂದ ಬಗೆ ಹರಿಸಿಕೊಳ್ಳಬೇಕು ಎಂದು ನ್ಯಾಯಮಂಡಳಿ ನೀಡಿರುವ ಸಲಹೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳದೆ, ಪ್ರಧಾನಿಯವರು ಮಧ್ಯಸ್ಥಿಕೆ ವಹಿದಿ ಸೌಹಾರ್ದತೆಯಿಂದ ಬಗೆ ಹರಿಸಿ ಪರಸ್ಪರ ಬಾಂಧವ್ಯ ಹೆಚ್ಚಿಸುವರು ಎಂಬುದು ಎಲ್ಲರ ಅಪೇಕ್ಷೆಯಾಗಿದೆ ಎಂದರು.
ಕನ್ನಡಿಗರು ಭಾಷಾಂಧರಲ್ಲ:
ಕನ್ನಡಿಗರು ಎಂದೂ ಭಾಷಾಂಧರಾಗಿರಲಿಲ್ಲ. ಸರ್ವಭಾಷಾ ಸಾರಸ್ವತಿ ಎಂಬ ಪರಿಕಲ್ಪನೆ ಜಗತ್ತಿಗೆ ಕೊಟ್ಟವರು ಕನ್ನಡಿಗರು.ತಾಯ್ನಾಡಿಗೆ ಅಗ್ರಪೂಜೆ ಸಲ್ಲಬೇಕು.ಕನ್ನಡವನ್ನು ಪೂರ್ತಿ ತೊರೆದು ಇಂಗ್ಲೀಷ್ ಒಂದೇ ನಮ್ಮ ಪರಮ ದೈವ ಎಂದರೆ ಮಾತ್ರ ದುರಂತ ತಪ್ಪಿದ್ದಲ್ಲ. ಇಂದು ಕನ್ನಡ ಪ್ರಜ್ಣೆ ತನ್ನ ಸ್ವೋಪಜ್ಞತೆಯಿಂದ ವಿಶ್ವಪ್ರಜ್ಞೆಯಾಗಿ, ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಂದಿಗೆ ಪ್ರವಹಿಸಿ, ಸಮನ್ವಯಗೊಂಡು ಸಾಕ್ಷಾತ್ಕಾರಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಶಿಕ್ಷಣ ನೀತಿ-2016 ಕರಡನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡಿದ್ದು, ಶಿಕ್ಷಣದ ಪ್ರಾಥಮಿಕ ಹಂತದಲ್ಲಿ ಬೋಧನಾ ಮಾಧ್ಯಮವಾಗಿ ಮಾತೃ ಭಾಷೆ ಅಥವಾ ಸ್ಥಳೀಯ ಭಾಷೆಯಿರಬೇಕೆಂದೂ, ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ. ಶಿಕ್ಷಣವನ್ನು ಪ್ರಾರಂಭಿಸಬೇಕೆಂದೂ ಸೂಚಿಸಿರುವುದು ಸ್ವಾಗತರ್ಹ. ರಾಜ್ಯ ಸರ್ಕಾರಗಳು ಆಯಾ ರಾಜ್ಯಗಳ ರಾಜ್ಯ ಭಾಷೆಯನ್ನು ಕಡ್ಡಾಯವಾಗಿ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಮಾಧ್ಯಮ ವಾಗಿ ಮಾಡಬೇಕು ಅವಶ್ಯವೆನಿಸಿದಲ್ಲಿ ಸಂವಿಧಾನದ ತಿದ್ದುಪಡಿಯನ್ನೂ ಮಾಡಬಹುದಾಗಿದೆ ಎಂದವರು ನುಡಿದರು.
ಕಲ್ಬುರ್ಗಿ ಅಪರಾಧಿಗಳನ್ನು ಬಂಧಿಸಿ:
.ಎಂ.ಎಂ.ಕಲ್ಬುರ್ಗಿ ಯವರ ಅಮಾನುಷ ಹತ್ಯೆ, ಅಸಹಿಷ್ಣುತೆಯ ದ್ಯೋತಕವಾಗಿ ಇಡೀ ಪ್ರಪಂಚದ ತುಂಬ ಚರ್ಚೆಗೆ ಕಾರಣವಾಗಿದೆ. ಕಲ್ಬುರ್ಗಿ ಯವರ ಹತ್ಯೆ ನಡೆದು ಒಂದು ವರ್ಷವೇ ಕಳೆದಿದ್ದರೂ ತನಿಖೆ ಪೂರ್ಣವಾಗದೇ ಇರುವುದು ವಿಷಾದದ ಸಂಗತಿ.ಸರ್ಕಾರ ಶೀಘ್ರ ತನಿಖೆ ಪೂರ್ಣಗೊಳಿಸಿ,ಅಪರಾಧಿಗಳನ್ನು ಬಂಧಿಸಿ ತ್ವರಿತ ಕ್ರಮಕೈಗೊಳ್ಳಬೇಕು.
ಕಂದಾಚಾರ ನಿಷೇಧಿಸಿ:
ಧರ್ಮದ ಸೋಗಿನಲ್ಲಿ ಆಚರಿಸು ನಾನಾ ರೀತಿಯ ಕಂದಾಚಾರಗಳನ್ನು ನಿಷೇಧಿಸುವ ಅತ್ಯಂತ ಅಗತ್ಯವಿದೆ.
ನಂಬಿಕೆಗಳು ಅವಶ್ಯಕ. ನಂಬಿಕೆಗಳು ವ್ಯಕ್ತಿಗತ ನೆಲೆಯಲ್ಲಿರುತ್ತವೆ. ಅಂಥವುಗಳನ್ನು ಯಾವ ವೈಚಾರಿಕರೂ ವಿರೋಧಿಸುವುದಿಲ್ಲ. ಆದರೆ ಜನ ಸಾಮಾನ್ಯರನ್ನು ಶೊಷಣೆಗೆ ಒಳಪಡಿಸುವ ಮೂಢ ನಂಬಿಕೆಗಳನ್ನು ನಾಗರಿಕ ಸಮಾಜ ವಿರೋಧಿಸಲೇ ಬೇಕು ಅರ್ಥಹೀನವಾದ ಮೂಢ ಆಚರಣೆಗೆ ಸೀಗೆ ಮೆಳೆಯಲ್ಲಿ ಸಿಕ್ಕಿಕೊಂಡ ಮನುಷ್ಯನನ್ನು ಮತ್ತು ಸಮಾಜವನ್ನು ಮುಕ್ತಿಗೊಳಿಸಿಬೇಕಾದರೇ, ಮೌಡ್ಯಚಾರಣೆ ನಿಷೇಧ ಕಾಯ್ದೆ ತರಬೇಕೆಂಬ ಧೋರಣಾ ನಿರ್ಣಯವನ್ನು ಸರಕಾರ ಕಾರ್ಯಗತಗೊಳಿಸಬೇಕೆಂದರು.
ಅನೇಕ ಬಗೆ ಮಾಲಿನ್ಯದ ಇಂದಿನ ಕಲುಷಿತ ವಾತಾವರಣದಲ್ಲಿ ಒಳ ಹೊರಗಿನ ತಾಪಮಾನವನ್ನು ತಣಿಸಲು ಜಲ ಸಂರಕ್ಷಣೆಯೊಂದಿಗೆ ಹಸಿರು ದಸರಾ ವರುಷದುದ್ದಕ್ಕೂ ಕಾರ್ಯರೂಪಗೊಳಿಸುವಂತಾಗಬೇಕೆಂದು ತಿಳಿಸಿದರು.
ತಮ್ಮ ಬಾಲ್ಯದ ದಸರೆಯನ್ನು ನೆನಪಿಸಿಕೊಂಡ ಕಣವಿ, 74 ವರ್ಷಗಳ ಹಿಂದೆ 1942 ರಲ್ಲಿ, ನಾನು ನಾಲ್ಕನೆ ತರಗತಿಯಲಿದ್ದಾಗ ಮೊದಲು ಮೈಸೂರು ದಸರಾ ಮಹೋತ್ಸವ ನೋಡಿದ್ದು, ಕಣ್ಣಿಗೆ ಕಟ್ಟಿದಂತಿದೆ ಎಂದರು.
ಕುವೆಂಪು ವಿರಚಿತ ಲಲಿತಾದ್ರಿ ಕವಿತೆ ಮೆಚ್ಚಿಕೊಂಡಿದ್ದೆ.ಹೀಗಾಗಿ ಲಲಿತಾದ್ರಿಯನ್ನು ನೋಡಬೇಕಿತ್ತು.
ರಾಜ್ಯದಲ್ಲಿ ಬರಗಾಲದ ಛಾಯೆ ದಟ್ಟವಾಗಿ ಆವರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ದಸರಾ ಉತ್ಸವವನ್ನು ಸಾಂಪ್ರದಾಯಿಕ ರೀತಿಯಲ್ಲಿ ಸರಳವಾಗಿ ಆಚರಿಸಲು ಯೋಗ್ಯ ನಿರ್ಣಯ ಕೈಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವ ವಸುಧೆಯೊಳಗಿನ ಒಂದು ಬಿಂದುವಾಗಿ,ತನ್ನೊಳಗೆ ವಸುಧೆಯನ್ನೇ ಅರಗಿಸಿಕೊಂಡ ಕನ್ನಡದ ಒಂದು ಭವ್ಯ ಪ್ರತಿಮೆಯಾಗಿದೆ. ಇದನ್ನು ಕನ್ನಡ ಸಂಸ್ಕೃತಿ ಎನ್ನಬಹುದು. ಈ ಸಾಂಸ್ಕೃತಿಕ ಮಹೋತ್ಸವ ಕರ್ನಾಟಕದ ಎಲ್ಲ ಜಿಲ್ಲಾ ಸ್ಥಳಗಳಲ್ಲಿಯೂ ಆಯಾ ಪ್ರಾದೇಶಿಕ ವೈಶಿಷ್ಟ್ಯಗಳೊಂದಿಗೆ ನಡೆಯುವಂತೆ ಆರ್ಥಿಕ ನೆರವಿನೊಂದಿಗೆ ಸರ್ಕಾರ ನೋಡಿಕೊಳ್ಳುವುದೆಂದು ಆಶಿಸಿದ್ದೇನೆ ಎಂದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾವೇರಿ ನದಿ ನೀರಿನ ಹಂಚಿಕೆ ವಿಚಾರವಾಗಿ ರಾಜ್ಯದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಈ ಸಂದರ್ಭದಲ್ಲಿ ಚಾಮುಂಡಿ ತಾಯಿಯಲ್ಲಿ ಕಾವೇರಿ ವಿವಾದದ ಬಿಕ್ಕಟ್ಟು ಬಗೆ ಹರಿಯಲಿ, ನ್ಯಾಯಾ ಸಿಗಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದರು.
ರಾಜ್ಯದಲ್ಲಿ ಕೆಲವು ಕಡೆ ಬರಗಾಲವಿದ್ದರೆ, ಕೆಲವು ಜಿಲ್ಲೆಗಳಲ್ಲಿ ಅತೀವೃಷ್ಟಿ ಇದೆ. ರಾಜ್ಯ ಅನಾವೃಷ್ಟಿಗೆ ತುತ್ತಾಗುವುದನ್ನೂ ನೋಡುತ್ತಿದ್ದೇವೆ. ಕಾವೇರಿ ವಿವಾದಕ್ಕೆ 120 ವರ್ಷಗಳ ಇತಿಹಾಸವಿದೆ. 1820 ಮತ್ತು 24ರಲ್ಲಿ ಕಾವೇರಿ ನದಿ ನೀರಿನ ವಿಚಾರವಾಗಿ ಒಪ್ಪಂದವಾಗಿತ್ತು. ಅದು ಕೇವಲ 50 ವರ್ಷಗಳಿಗೆ ಮಾತ್ರ. ಆದರೆ ತದ ನಂತರವು 1991ರಲ್ಲಿ ಇಂಟ್ರೀಮ್ ಅವಾರ್ಡ್ ಆಯ್ತು. ನಂತರ 192 ಟಿಎಂಸಿ ನೀರನ್ನು ಬಿಡಬೇಕೆಂದು ಒಪ್ಪಂಧವಾಗಿತ್ತು. ಅದರ ನಂತರ 192 ಟಿಎಂಸಿಗಿಂತ ಹೆಚ್ಚು ನೀರನ್ನು ಬಿಡುತ್ತಾ ಬಂದಿದ್ದೇವೆ. ಆದರೆ ಕಳೆದ ಐದು ವರ್ಷದಲ್ಲಿ ಮಳೆ ಕೊರತೆಯಿಂದಾಗಿ ನೀರು ಹರಿಸಲು ಸಾಧ್ಯವಾಗಿಲ್ಲ. ಕೆ.ಆರ್‍ಎಸ್.ಜಲಾಶಯ ತುಂಬಬೇಕಾದರೆ ಕೊಡಗಿನಲ್ಲಿ ಮಳೆಯಾಗಬೇಕು. ಆದರೆ ಅಲ್ಲಿಯೂ ಕೂ ಮುಂಗಾರು ಮಳೆ ಹೆಚ್ಚಾಗಿ ಆಗಿಲ್ಲ. ಇದರ ಪರಿಣಾಮವಾಗಿ 157 ಟಿಎಂಸಿ ನೀರು ಜಲಾಶಯಕ್ಕೆ ಬರಬೇಕಾಗಿತ್ತು. ಆದರೆ 129 ಟಿ.ಎಂ.ಸಿ ನೀರು ಮಾತ್ರ ಜಲಾಶಯಕ್ಕೆ ಒಳಹರಿವಾಗಿದೆ. ಶೇ.48 ರಷ್ಟು ನೀರು ಕೊರತೆ ಇದೆ. ಆದ್ದರಿಂದ ತಮಿಳು ನಾಡಿಗೆ ನೀರು ಬಿಡಲು ಸಾಧ್ಯವಾಗಿಲ್ಲವೆಂದು ಹೇಳಿದರು.
14 ಲಕ್ಷ ಎಕರೆ ಕೃಷಿ ಭೂಮಿ ಇದ್ದು, ಕೇವಲ 4 ಲಕ್ಷ ಎಕರೆ ಪ್ರದೇಶದಲ್ಲಿ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸೂಚಿಸಲಾಗಿದೆ. ಆದರೆ ಕುಡಿಯುವ ನೀರಿಗೆ ಹೆಚ್ಚು ಒತ್ತು ನೀಡಿರುವುದರಿಂದ ಕೃಷಿ ಭೂಮಿಗೂ ನೀರು ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರಿಸಿದರು.
ರಾಜ್ಯದ ಜನತೆಗೆ ಕುಡಿಯಲು ನೀರಿಲ್ಲ. ಆದರೆ ತಮಿಳುನಾಡು ಸಾಂಬಾ ಬೆಳೆ ಬೆಳೆಯಲು ನೀರು ಕೇಳುತ್ತಿದೆ. ಅಕ್ಟೋಬರ್‍ನಲ್ಲಿ ತಮಿಳುನಾಡಿನಲ್ಲಿ ಹೆಚ್ಚು ಮಳೆಯಾಗುತ್ತದೆ. ಅವರಿಗೆ ಉತ್ತಮ ಅಂತರ್ಜಲವು ಇದೆ. ಆದರೂ ಸುಪ್ರೀಂ ಕೋರ್ಟ್‍ನ ತಮಿಳುನಾಡು ಪರ ತೀರ್ಪು ನೀಡಿ ಗಾಯದ ಮೇಲೆ ಬರೆ ಎಳೆದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ಯಾರಾ ಒಲಂಪಿಯನ್ ದೀಪಾ ಮಲ್ಲಿಕ್ ಮತ್ತು ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್.ಮಹದೇವ ಪ್ರಸಾದ್, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಔಕಾಫ್ ಸಚಿವ ತನ್ವೀರ್ ಸೇಠ್, ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ, ಸಂಸದರಾದ ಪ್ರತಾಪ್ ಸಿಂಹ, ದೃವನಾರಾಯಣ್, ಶಾಸಕರಾದ ಎಂ.ಕೆ.ಸೋಮಶೇಖರ್, ಜಿ.ಟಿ.ದೇವೇಗೌಡ, ಚಿಕ್ಕಮಾದು, ಮಹಾಪೌರಾದ ಬಿ.ಎಲ್.ಭೈರಪ್ಪ, ಉಪ ಮಹಾಪೌರರಾದ ವನಿತಾ ಪ್ರಸನ್ನ, ಜಿಲ್ಲಾಧಿಕಾರಿ ಡಿ.ರಂದೀಪ್, ಪೊಲೀಸ್ ಆಯುಕ್ತ ಬಿ.ದಯಾನಂದ್, ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ವಿಧಾನ ಪರಿಷತ್ ಸದಸ್ಯ ಧರ್ಮಸೇನಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಬಾಕ್ಸ್ಕ್ರೀಡಾ ಜ್ಯೋತಿ ಉದ್ಘಾಟನೆ
ದಸರಾ ಕ್ರೀಡಾ ಜ್ಯೋತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಬಸವರಾಜು ವರ್ಷ ತೆಗೆದುಕೊಂಡು ಬಂದ ಕ್ರೀಡಾ ಜ್ಯೋತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಿಸಿದರು.
ಸಾಂಸ್ಕøತಿಕ ಸ್ವಾಗತ
ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನೆಗೆ ಆಗಮಿಸಿದ ಹಿರಿಯ ಸಾಹಿತಿ ನಾಡೋಜ ಚೆನ್ನವೀರ ಕಣವಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗಣ್ಯರನ್ನು ಚಾಮುಂಡಿ ಬೆಟ್ಟದಲ್ಲಿ ಸಾಂಸ್ಕøತಿಕ ಮತ್ತು ಜನಪದ ಕಲಾತಂಡಗಳೊಂದಿಗೆ ಸ್ವಾಗತಿಸಲಾಯಿತು.
ಪಟ ಕುಣಿತ, ವೀರಗಾಸೆ, ಕಂಸಾಳೆ, ನಂಧಿಧ್ವಜ, ಕೀಲು ಕುದುರೆ ಹಾಗೂ ಪೂರ್ಣ ಕುಂಭದೊಂದಿಗೆ ಅತಿಥಿಗಳನ್ನು ಬರಮಾಡಿಕೊಳ್ಳಲಾಯಿತು.
No comments:
Post a Comment