Wednesday, 12 October 2016

ಪೊಲೀಸ್ ಶಿಕ್ಷಣ ಸಮುಚ್ಛಯ ನಿರ್ಮಾಣಕ್ಕೆ 22.5 ಕೋಟಿ ರೂ. ಅನುದಾನ: ಸಿದ್ದರಾಮಯ್ಯ

ಪೊಲೀಸ್ ಶಿಕ್ಷಣ ಸಮುಚ್ಛಯ ನಿರ್ಮಾಣಕ್ಕೆ 22.5 ಕೋಟಿ ರೂ. ಅನುದಾನ: ಸಿದ್ದರಾಮಯ್ಯ
ಮೈಸೂರು, ಅ. 12. ಮೈಸೂರು ನಗರದಲ್ಲಿ ಪೊಲೀಸ್ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವತಿಯಿಂದ ಅತ್ಯುತ್ತಮವಾದ ಶಿಕ್ಷಣ ಸಮುಚ್ಛಯವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿ, ಕಾರ್ಯಗತ ಮಾಡಲಾಗುತ್ತಿದೆ. ಇದಕ್ಕಾಗಿ ಮೊದಲ ಹಂತದಲ್ಲಿ 22.5 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಮೈಸೂರು ನಗರದ ಜಲಪುರಿ ಪೊಲೀಸ್ ಪಬ್ಲಿಕ್ ಶಾಲೆಯ ಸಮುಚ್ಛಯದಲ್ಲಿ ನೂತನವಾಗಿ ನಿರ್ಮಿಸಿರುವ ನರ್ಸರಿ ಶಾಲಾ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಮಕ್ಕಳಿಗೆ ಉತ್ತಮ ಶಾಲೆಗಳಲ್ಲಿ ಪ್ರವೇಶ ದೊರೆಯುತ್ತದೆ. ಆದರೆ ಕೆಳ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ಪಡೆಯುವುದು ಇಂದಿನ ಪರಿಸ್ಥಿತಿಯಲ್ಲಿ ಕಷ್ಟ. ಈ ಪೋಷಕರ ಮಕ್ಕಳಿಗೆ ಉತ್ತಮ ಗುಣಮಟ್ಟದ ಹಾಗೂ ಮೌಲ್ಯಯುತವಾದ ಶಿಕ್ಷಣ ಸಿಗಬೇಕು ಎಂದು ಅವರು ಹೇಳಿದರು.
ಈ ಶಾಲೆ ಆರಂಭವಾದಾಗ 179 ಮಕ್ಕಳು ಇದ್ದರು ಈಗ 1200 ಮಕ್ಕಳು ಕಲಿಯುತ್ತಿದ್ದಾರೆ. ಪ್ರಾಥಮಿಕ ಪೂರ್ವ ಶಾಲೆಯಿಂದ 11ನೇ ತರಗತಿ ವರೆಗೆ ಇಲ್ಲಿ ಶಿಕ್ಷಣ ದೊರೆಯುತ್ತದೆ. ಸಿ.ಬಿ.ಎಸ್.ಸಿ.ಯಿಂದ ಅನುಮತಿ ಪಡೆದು ಗುಣಮಟ್ಟದ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದೆ. ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೂ ಇಂತಹ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ಹೇಳಿದರು.
ಬಡವರ ಮಕ್ಕಳಿಗೂ ಉತ್ತಮವಾದ ಶಿಕ್ಷಣ ಸಿಗಬೇಕು ಎಂದು ಕೇಂದ್ರದ ಯು.ಪಿ.ಎ. ಸರ್ಕಾರ ಅಧಿಕಾರದಲ್ಲಿ ಇದ್ದಾಗ ಆರ್.ಟಿ.ಇ. ಕಾಯ್ದೆ ಜಾರಿಗೆ ತಂದಿದೆ. ರಾಜ್ಯದಲ್ಲಿ ಅದನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗುತ್ತಿದೆ ಎಂದರು.
ಸರ್ಕಾರಿ ಶಾಲೆಯಲ್ಲಿ ಕಲಿತವರು ಸಹ ಮಹಾನ್ ವ್ಯಕ್ತಿಗಳಾಗಿದ್ದಾರೆ. ಎ.ಪಿ.ಜೆ. ಅಬ್ದುಲ್ ಕಲಾಂ, ಸಿ.ಎನ್.ಆರ್.ರಾವ್, ಸರ್. ಎಂ. ವಿಶ್ವೇಶ್ವರಯ್ಯ ಅವರು ಸಹ ಸರ್ಕಾರಿ ಶಾಲೆಯಲ್ಲಿ ಕಲಿತವರು ಎಂದು ಹೇಳಿದ ಅವರು, ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ನಿವಾರಣೆಗಾಗಿ ರಾಜ್ಯದಲ್ಲಿ 1.02 ಕೋಟಿ ಮಕ್ಕಳಿಗೆ ಹಾಲು ಕೊಡಲಾಗುತ್ತಿದೆ. ಈ ಪೈಕಿ ಸರ್ಕಾರಿ ಶಾಲೆಯ 45 ಲಕ್ಷ ಮಕ್ಕಳು ಹಾಲು ಕುಡಿಯುತ್ತಿದ್ದಾರೆ ಎಂದು ಹೇಳಿದರು.
ಪೊಲೀಸರ ಬಗ್ಗೆ ನನಗೆ ಸಹಾನುಭೂತಿ ಇದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ ಇದ್ದರೆ ಮಾತ್ರ ಪ್ರಗತಿ ಸಾಧ್ಯವಾಗುತ್ತದೆ. ಶಾಂತಿ ಕಾಪಾಡುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದರು.
ಪೊಲೀಸರಿಗೆ ಸೌಲಭ್ಯ ನೀಡುವ ಬಗ್ಗೆ ವರದಿ ನೀಡಲು ರಾಘವೇಂದ್ರ ಔರಾದ್‍ಕರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ಈಗಾಗಲೇ ವರದಿಯನ್ನು ಗೃಹ ಇಲಾಖೆಗೆ ನೀಡಿದೆ. ಈ ತಿಂಗಳ 21ರೊಳಗೆ ಸಭೆಗೆ ಕರೆದು ವರದಿ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಶಿಕ್ಷಣ ಸಚಿವರಾದ ತನ್ವೀರ್ ಸೇಠ್ ಅವರು ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ. ಖಾಸಗಿ ಶಾಲೆಗಳಲ್ಲಿ ಸಿಗುವ ಉತ್ತಮವಾದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲೂ ಸಿಗುವಂತೆ ಮಾಡುತ್ತೇವೆ ಎಂದು ಹೇಳಿದರು.
ಮೈಸೂರಿನಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ನಿರ್ಮಾಣವಾಗಿರುವಂತೆ ಎಲ್ಲಾ ಜಿಲ್ಲೆಗಳಲ್ಲೂ ಆಗಬೇಕು. ರಾಜ್ಯದ 176 ತಾಲ್ಲೂಕುಗಳಲ್ಲೂ ಒಂದೊಂದು ಶಾಲೆಯಲ್ಲಿ ದತ್ತು ಪಡೆದು ಈ ರೀತಿಯ ಶಿಕ್ಷಣವನ್ನು ಕೊಡಬೇಕು ಎಂದು ಅವರು ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮಕ್ಕೆ ತಿಳಿಸಿದರು.
ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ 27 ವಿಷಯವಾರು ಪಠ್ಯಕ್ರಮಗಳ ಪರಿಷ್ಕರಣೆಗೆ ಸಮಿತಿ ನೇಮಕ ಮಾಡಲಾಗಿದ್ದು, ಅದರ ವರದಿ ಬಗ್ಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ತುಂಬಾ ಶಿಥಿಲವಾಗಿರುವ ಕಟ್ಟಡಗಳ ದುರಸ್ಥಿ ಹಾಗೂ ನವೀಕರಣಕ್ಕೆ ಕ್ರಮಕೈಗೊಳ್ಳಲಾಗುವುದು. ಖಾಸಗಿ ಶಾಲೆಗಳಲ್ಲಿ ಹೈಕೋರ್ಟ್‍ನ ನಿರ್ದೇಶನದ ಮೇರೆಗೆ ಏಕರೂಪ ಶುಲ್ಕ ಪದ್ಧತಿ ಜಾರಿಯಾಗಬೇಕು. ಡಿಸೆಂಬರ್ ಅಂತ್ಯದ ವೇಳೆಗೆ ಖಾಸಗಿ ಶಾಲೆಗಳು ಶುಲ್ಕದ ವಿವರಗಳನ್ನು ಪ್ರಕಟಿಸಲು ಅವಕಾಶ ನೀಡಲಾಗಿದೆ ಎಂದರು.
ಸರ್ಕಾರಿ ಶಾಲೆಯಲ್ಲಿ ಉತ್ತಮ ಫಲಿತಾಂಶ ನೀಡಲು ಮೌಲ್ಯವರ್ಧಿತ ಶಿಕ್ಷಣ ನೀಡಲಾಗುತ್ತಿದೆ. ಮೊದಲು ಎಸ್.ಸಿ.ಪಿ ಮತ್ತು ಟಿ.ಎಸ್.ಪಿ. ಯೋಜನೆಯಡಿ ಈ ಶಿಕ್ಷಣ ನೀಡಲಾಗುತ್ತಿದ್ದು, ಈಗ ಸಾಮಾನ್ಯ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ. ಈ ಯೋಜನೆಗೆ ‘ವಿಶ್ವಾಸ ಕಿರಣ’ ಎಂದು ಹೆಸರಿಡಲಾಗಿದೆ. 1.10 ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನೆ ಪಡೆಯುತ್ತಿದ್ದಾರೆ. ಗಣಿತ ಮತ್ತು ವಿಜ್ಞಾನ ಶಿಕ್ಷಣಕ್ಕೆ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆ.
ಲೋಕೋಪಯೋಗಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಲ್. ಭೈರಪ್ಪ, ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ, ಮಹಾನಗರ ಪಾಲಿಕೆ ಉಪ ಮಹಾಪೌರರಾದ ವನಿತಾ ಪ್ರಸನ್ನ, ಪಾಲಿಕೆ ಸದಸ್ಯರಾದ ಸಂದೇಶ್ ಸ್ವಾಮಿ, ಗೃಹ ಸಚಿವರ ಸಲಹೆಗಾರರಾದ ಕೆಂಪಯ್ಯ, ಡಿ.ಜಿ ಮತ್ತು ಐ.ಜಿ.ಪಿ ಓಂಪ್ರಕಾಶ್, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಎ.ಡಿ.ಜಿ.ಪಿ ಸುನಿಲ್ ಕುಮಾರ್, ದಕ್ಷಿಣ ವಲಯದ ಐ.ಜಿ.ಪಿ ಬಿ.ಕೆ.ಸಿಂಗ್, ಮೈಸೂರು ಜಿಲ್ಲಾಧಿಕಾರಿ ಡಿ. ರಂದೀಪ್, ಪೊಲೀಸ್ ಆಯುಕ್ತರಾದ ಡಾ. ಬಿ. ದಯಾನಂದ್, ಪೊಲೀಸ್ ಅಧೀಕ್ಷಕರಾದ ರವಿ. ಡಿ. ಚನ್ನಣ್ಣನವರ್, ರಾಜ್ಯ ಗುಪ್ತವಾರ್ತೆ ಐ.ಜಿ.ಪಿ ಶರತ್ ಚಂದ್ರ, ಮತ್ತಿತರರು ಉಪಸ್ಥಿತರಿದ್ದರು.

No comments:

Post a Comment