Friday, 22 April 2016

ಸಂಪುಟ ಪುನರ್ ರಚನೆ ಸದ್ಯಕ್ಕಿಲ್ಲ

ಸಂಪುಟ ಪುನರ್ ರಚನೆ ಸದ್ಯಕ್ಕಿಲ್ಲ
ಮೈಸೂರು,ಏ.22: ರಾಜ್ಯ ಸಚಿವ ಸಂಪುಟ ಪುನರ್‍ರಚನೆ ಸದ್ಯಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಂಗಳಾಂತ್ಯದಲ್ಲಿ ಸಂಪುಟ ಪುನರ್‍ರಚನೆಗೆ ಮುಂದಾಗಿದ್ದೆ. ಆದರೆ ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು, ಹಾಗಾಗಿ ಸಂಪುಟ ಪುನರ್‍ರಚನೆ ಪ್ರಕ್ರಿಯೆಯನ್ನು ಮುಂದೂಡಿರುವುದಾಗಿ ಹೇಳಿದರು.
ಸದ್ಯಕ್ಕೆ ದೆಹಲಿ ಪ್ರವಾಸ ಕೈಗೊಳ್ಳುವ ಯಾವುದೇ ಯೋಜನೆ ಇಲ್ಲ. ಬರಪೀಡಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸುವುದಕ್ಕೆ ಪ್ರಾಮುಖ್ಯತೆ ನೀಡಲಾಗುವುದು. ಬರ ಪರಿಹಾರ ಪೂರ್ಣಗೊಳ್ಳುವವರೆಗೂ ಸಂಪುಟ ಪುನರ್‍ರಚನೆಗೆ ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಕೇವಲ ಊಹಾಪೋಹಾ. ಕಾಂಗ್ರೆಸ್ ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಮುಂದಾಗಿದೆ. ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆ ಎಂಬುದು ವದಂತಿ ಎಂದರು.
ರಾಜ್ಯದಲ್ಲಿ ಈಗಾಗಲೇ ಏಳು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಅಧ್ಯಯನ ಕಾರ್ಯ ನಡೆಸಲಾಗಿದೆ. ಏ.25, 26,27ರಂದು ಎರಡನೇ ಹಂತದ ಬರ ಪರಿಸ್ಥಿತಿ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗುವುದು. ಬರ ಅಧ್ಯಯನ ನಂತರ ಪರಿಹಾರ ಘೋಷಣೆ ಮಾಡಲಾಗುವುದು ಎಂದರು.
ಇದಕ್ಕೂ ಮುನ್ನ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಬರ ಪರಿಸ್ಥಿತಿ ಕುರಿತು ಮೂರನೇ ಹಂತದ ಸಮೀಕ್ಷೆ ನಡೆಸಲು ಸಚಿವರ ಅಧ್ಯಕ್ಷತೆಯಲ್ಲಿ ನಾಲ್ಕು ಸಮಿತಿಗಳನ್ನು ನೇಮಕ ಮಾಡಲಾಗುವುದು. ಮೈಸೂರು ವಿಭಾಗಕ್ಕೆ ಸಚಿವ ಟಿ.ಬಿ.ಜಯಚಂದ್ರ, ರಾಯಚೂರು-ಎಚ್.ಕೆ.ಪಾಟೀಲ್, ಬೆಂಗಳೂರು-ಶ್ರೀನಿವಾಸ್ ಪ್ರಸಾದ್, ಬೆಳಗಾವಿ-ಗುಲ್ಬರ್ಗಾ ವಿಭಾಗಕ್ಕೆ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದ ಸಮಿತಿ ಮೇ 2ರ ನಂತರ ಸಮೀಕ್ಷೆ ನಡೆಸಿ ವರದಿ ನೀಡಲಿವೆ ಎಂದರು.
ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಅಧ್ಯಯನ, ಪರಿಶೀಲನೆ ಕೈಗೊಂಡ ನಂತರ ಬರಹಾನಿ ಪರಿಹಾರವನ್ನು ಘೋಷಣೆ ಮಾಡುತ್ತೇವೆ. ಈಗಾಗಲೇ ರಾಜ್ಯ ಸರ್ಕಾರ 350 ಕೋಟಿ ರೂ. ವೆಚ್ಚದಲ್ಲಿ ಬರಪರಿಹಾರ ಕೈಗೊಂಡಿದೆ. ಕುಡಿಯುವ ನೀರು ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವುದಿಲ್ಲ, ಕೇಂದ್ರ ಸರ್ಕಾರಕ್ಕೆ ಪರಿಹಾರ ಕೋರಲಾಗುವುದೆಂದರು.
ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪ್ರಕರಣ ಕುರಿತು ಮೇಲ್ಮನವಿ ಸಲ್ಲಿಸುವ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲಾಗುವುದು. ಅನಂತರ ಮೇಲ್ಮನೆಗೆ ಸಲ್ಲಿಸಲಾಗುವುದು. ಅವರು ಪಕ್ಷದ ಅಧ್ಯಕ್ಷರಾಗುವ ಮುನ್ನವೇ ಈ ಬಗ್ಗೆ ಚಿಂತನೆ ನಡೆದಿತ್ತು. ಈ ವಿಚಾರದಲ್ಲಿ ದೇಶದ ರಾಜಕಾರಣ ನಡೆಸುತ್ತಿಲ್ಲ. ಎಲ್ಲರಿಗೂ ಸಹ ಕಾನೂನು ಒಂದೇ ಎಂದರು.
ಲೋಕಾಯುಕ್ತ ಸಂಸ್ಥೆಯಲ್ಲಿ ರಚಿಸಲಾಗಿರುವ ಭ್ರಷ್ಠಾಚಾರ ನಿಗ್ರಹ ದಳಕ್ಕೆ ಅಗತ್ಯ ಸಿಬ್ಬಂದಿಯನ್ನು ಹಾಗೂ ಸವಲತ್ತುಗಳನ್ನು ಹಂತ ಹಂತವಾಗಿ ದೊರಕಿಸಿಕೊಡಲಾಗುವುದು. ಈಗಾಗಲೇ ಸಿಬ್ಬಂದಿ ಕಾರ್ಯನಿರ್ವಹಣೆಯಲ್ಲಿ ನಿರತರಾಗಿದ್ದಾರೆ ಎಂದು ಅವರು, ಮೈಸೂರು ಜಿಲ್ಲಾ ಪಂಚಾಯಿತಿ ಮೀಸಲು ಬದಲಾವಣೆ ವಿಚಾರದಲ್ಲಿ ಮಹಿಳೆಯರಿಗೆ ಅಧಿಕಾರ ದೊರಕಿಸಿಕೊಡುವುದು ತಪ್ಪೇ ಎಂದು ಪ್ರಶ್ನಿಸಿದರು.
ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಧಿಕಾರಿ ಎದುರು ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ. ಸಣ್ಣ ಪುಟ್ಟ ವಿಚಾರಕ್ಕೆ ರೈತರು ಆತ್ಮಹತ್ಯೆಗೆ ಮುಂದಾಗುವುದು ಸರಿಯಲ್ಲ ಎಂದು ಹೇಳಿದರು.

No comments:

Post a Comment