Monday, 1 September 2014

ಮಾವುತರ ಮಕ್ಕಳ ಜ್ಞಾನ ವೃದ್ಧಿಸಲು ಟೆಂಟ್ ಗ್ರಂಥಾಲಯ
ಮೈಸೂರು,ಸೆ.1.ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳೊಂದಿಗೆ ಆಗಮಿಸಿರುವ ಮಾವುತರು ಹಾಗೂ ಕಾವಡಿಗರ ಮಕ್ಕಳಿಗೆ  ಎಲ್ಲಾ ಕಥೆ ಪುಸ್ತಕಗಳನ್ನು ಓದುವ ತವಕ. ಇದು ಕಂಡುಬಂದಿದ್ದು ಅರಮನೆ ಆವರಣದಲ್ಲಿ ಇಂದು ಪ್ರಾರಂಭವಾದ ಟೆಂಟ್ ಗ್ರಂಥಾಲಯದಲ್ಲಿ.
ಮಕ್ಕಳ ವಯಸ್ಸೆ ಅಂತಹುದು ಎಲ್ಲವನ್ನು ತಿಳಿದಿಕೊಳ್ಳುವ ಆಸೆ ಹಾಗೂ ಉತ್ಸಹ. ಅವರ ಉತ್ಸಹವನ್ನು ಪ್ರೋತ್ಸಹಿಸಿ ಜ್ಞಾನವನ್ನು ವೃದ್ಧಿಸುವ ನಿಟ್ಟಿನಿಂದ ಜಿಲ್ಲಾಡಳಿತ  ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ ಮೈಸೂರು ಗ್ರಂಥಪಾಲಕರು ಹಾಗೂ ವಿಜ್ಞಾನಿಗಳ ಸಂಘದ(ಮೈಲಿಸಾ) ಸಹಕಾರದೊಂದಿಗೆ ಟೆಂಟ್ ಗ್ರಂಥಾಲಯವನ್ನು ಮಾವುತರು ಹಾಗೂ ಕಾವಡಿಗರ ಮಕ್ಕಳಿಗೆ ಅನಾವರಣಗೊಳಿಸಿದೆ.
ಟೆಂಟ್ ಶಾಲೆಯನ್ನು ಮೈಸೂರು ಉಪವಿಭಾಗದ ಸಂರಕ್ಷಣಾಧಿಕಾರಿ ಡಾ| ವಿ.ಕರಿಕಾಳನ್ ಉದ್ಘಾಟಿಸಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಬಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಎನ್.ಎಸ್. ಹರಿನಾರಾಯಣ್ ಅವರು ಮಾತನಾಡಿ ಇದೇ ಮೊದಲ ಬಾರಿಗೆ ಮಾವುತರು ಹಾಗೂ ಕಾವಾಡಿಗಳ ಮಕ್ಕಳಿಗೆ ಟೆಂಟ್ ಗ್ರಂಥಾಲಯವನ್ನು ತೆರೆಯಲಾಗಿದ್ದು, ಮುಂದಿನ ವರ್ಷಗಳಲ್ಲಿ ಆಚರಿಸುವ ದಸರಾ ಮಹೋತ್ಸವದಲ್ಲೂ ಸಹ ಟೆಂಟ್ ಗ್ರಂಥಾಲಯ ತೆರೆಯಲಾಗುವುದು ಎಂದರು. 
ಮಕ್ಕಳಿಗೆ ಪುಸ್ತಕ ಪ್ರಪಂಚದ ಪರಿಚಯ ಮಾಡಿಸುವುದು,ಕಥೆ ಹೇಳುವುದು, ಪುಸ್ತಕಗಳ ಪರಿಚಯ, ಪುಸ್ತಕಗಳ ಬಳಕೆ, ಪುಸ್ತಕಗಳನ್ನು ಗುರುತಿಸುವುದು, ಪುಸ್ತಕ ಸಂಗ್ರಹಣೆ ಮುಂತಾದ ಹಲವಾರ ವಿಷಯಗಳಲ್ಲಿ ಮಾಹಿತಿ ನೀಡುವುದು ಈ ಟೆಂಟ್ ಗ್ರಂಥಾಲಯದ ಚಟುವಟಿಕೆಯಾಗಿರುತ್ತದೆ. ಟೆಂಟ್ ಗ್ರಂಥಾಲಯದಲ್ಲಿ ತರಬೇತಿ ಹೊಂದಿದ ವೃತ್ತಿಪರ ಗ್ರಂಥಪಾಲಕರು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಸೆಪ್ಟೆಂಬರ್ 1 ರಂದು ಕಥೆ ಹೇಳುವುದು, 2 ರಂದು ಪುಸ್ತಕಗಳ ಪರಿಚಯ, 3 ರಂದು ಚಿತ್ರಗಳ ಪುಸ್ತಕಗಳು, 4 ರಂದು ದಿನಪತ್ರಿಕೆಗಳ ಓದು, 5 ರಂದು ಪುಸ್ತಕ ಓದುವ ಕೌಶಲ್ಯ, 6 ರಂದು ಕಾಮಿಕ್ಸ್, 8 ರಂದು ನಿಯತಕಾಲಿಕೆಗಳು(ಪುರವಣಿಗೆ), 9 ರಂದು ಮಕ್ಕಳ ಪುಸ್ತಕಗಳ ವಿವಿಧ ಮಾದರಿಗಳು, 10 ರಂದು ವನ್ಯಜೀವಿ ಕುರಿತ ಪುಸ್ತಕಗಳು, 11 ರಂದು ಡ್ರಾಯಿಂಗ್ (ರೇಖಾ ಚಿತ್ರಗಳು), 12 ರಂದು ನಕ್ಷೆಗಳು ಮತ್ತು ಭೂಪಟಗಳು, 13 ರಂದು ಗಟ್ಟಿಯಾಗಿ ಪುಸ್ತಕ ಓದುವಿಕೆ, 15 ರಂದು ಪುಸ್ತಕಗಳನ್ನು ಗುರುತಿಸುವಿಕೆಯ ಆಟ, 16 ರಂದು ಪುಸ್ತಕಗಳ ನಿರ್ವಹಣೆ, 17 ರಂದು ಕಾಗದವನ್ನು ಮಡಿಸುವ ಜಪಾನೀಯರ ಕಲೆ, 18 ರಂದು ಪುಸ್ತಕಗಳ ಪಟ್ಟಿಯ ಸಿದ್ದತೆ, 19 ರಂದು ಪ್ರಸಿದ್ದ ಜನರ ಕುರಿತ ಜೀವನ ಚರಿತ್ರೆಗಳು, 20 ರಂದು ಚಿತ್ರಗಳ ನಿಘಂಟುಗಳು, 22 ರಂದು ನಾಟಕ ಪುಸ್ತಕಗಳು, 23 ರಂದು ಜೇಡಿಮಣ್ಣು ಕಲೆ, 24 ರಂದು ಮಕ್ಕಳ ಕವಿತೆಗಳು, 25 ರಂದು ಬುಕ್ ಮಾರ್ಕ್ ತಯಾರಿ, 26 ರಂದು ಕುತೂಹಲಕಾರಿ ಪುಸ್ತಕಗಳು, 27 ರಂದು ಗ್ರಂಥಾಲಯ ಪ್ರವಾಸ, 29 ರಂದು ಪುಸ್ತಕಗಳನ್ನು ಆರಿಸಿ-ಮಕ್ಕಳ ಚಟುವಟಿಕೆ, 30 ರಂದು ಮಕ್ಕಳಿಂದ ಕತೆ ಓದುವಿಕೆ ಕಾರ್ಯಕ್ರಮಗಳು ನಡೆಯಲಿವೆ.
ದಸರಾ ಕಾರ್ಯಕ್ರಮಗಳು
ಸೆಪ್ಟೆಂಬರ್ 2 ರಂದು ಕೌನ್ಸಿಲಿಂಗ್      
ಮೈಸೂರು,ಸೆ.1.ಸೇವಾ ಪುಸ್ತಕ ಪರಿಶೀಲನೆಯಾಗಿರುವ ಶಿಕ್ಷಕರಿಗೆ ಮುಖ್ಯಶಿಕ್ಷಕರ ಹುದ್ದೆಯಿಂದ ಪದವೀಧರೇತರ ಮುಖ್ಯಶಿಕ್ಷಕರ (ಕನ್ನಡ) ಹುದ್ದೆಗೆ ಹಾಗೂ ಉರ್ದು ಸಹಶಿಕ್ಷಕರ ಹುದ್ದೆಯಿಂದ ಮುಖ್ಯಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಉಪನಿರ್ದೇಶಕರ ಕಛೇರಿ, ಮೈಸೂರು ಇಲ್ಲಿ ದಿನಾಂಕ: 02.09.2014 ರಂದು ಅಪರಾಹ್ನ 2.00 ಗಂಟೆಗೆ ಕೌನ್ಸಿಲಿಂಗ್ ನಡೆಸಲಾಗುವುದು. ಸಂಬಂಧಿಸಿದ ಶಿಕ್ಷಕರು ಬಿ.ಇ.ಒ.ರವರಿಂದ ಸೇವಾ ಮಾಹಿತಿ ಪತ್ರ ಪಡೆದು ತಪ್ಪದೆ ಕೌನ್ಸಿಲಿಂಗ್‍ಗೆ ಹಾಜರಾಗುವುದು. ಅಂತಿಮ ಜೇಷ್ಠತಾ ಪಟ್ಟಿಯನ್ನು ಜಿಲ್ಲೆಯ ಎಲ್ಲಾ ಬಿ.ಇ.ಒ. ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಪ್ರಸನ್ನಕೃಷ್ಣಸ್ವಾಮಿ ಬ್ರಹ್ಮೋತ್ಸವ ಹಾಗೂ  ಕೃಷ್ಣೋತ್ಸವ
   ಮೈಸೂರು.ಸೆ.01.ಮೈಸೂರಿನ ಅರಮನೆ ಕೋಟೆ ಶ್ರೀ ಪ್ರಸನ್ನಕೃಷ್ಣಸ್ವಾಮಿ ದೇವಾಲಯದಲ್ಲಿ ಸೆಪ್ಟೆಂಬರ್ 5 ರಿಂದ 16 ರವರೆಗೆ ಬ್ರಹ್ಮೋತ್ಸವ ಹಾಗೂ ಸೆಪ್ಟೆಂಬರ್ 17 ರಿಂದ ಸೆಪ್ಟೆಂಬರ್ 25 ರವರೆಗೆ ಕೃಷ್ಣೋತ್ಸವ ಜರುಗಲಿದೆ.
     ಕಾರ್ಯಕ್ರಮದ ವಿವರ ಇಂತಿದೆ. ಸೆಪ್ಟೆಂಬರ್ 5 ರಂದು ಸಂಜೆ ಮೃತ್ತಿಕಾ ಸಂಗ್ರಹಣ, ಅಂಕುರಾರ್ಪಣೆ, 6 ರಂದು ಸಂಜೆ 4-30 ರಿಂದ 6-30 ಗಂಟೆಯವರೆಗೆ ಅಧಿವಾಸರ, ರಕ್ಷಾಬಂಧನ, ಕಲ್ಯಾಣೋತ್ಸವ, 7 ರಂದು ಬೆಳಿಗ್ಗೆ 5 ಗಂಟೆಗೆÀ ಧ್ವಜಾರೋಹಣ, ಸಂಜೆ 1ನೇ ತಿರುನಾಳ್ ಭೇರಿತಾಡನ, ತಿರುಪ್ಪರೈ, ಹಂಸವಾಹನ ಉತ್ಸವ ಯಾಗಶಾಲಾ ಪ್ರವೇಶ. 8  ರಂದು ಸಂಜೆ 2ನೇ ತಿರುನಾಳ್. ಶೇಷವಾಹನ ಉತ್ಸವ, ಪಡಿಯೇತ್ತ. 9 ರಂದು ಸಂಜೆ 3ನೇ ತಿರುನಾಳ್. ನಾಗವಲ್ಲೀ ಮಹೋತ್ಸವ, ನರಾಂದೋಳಿಕಾರೋಹಣ ಚಂದ್ರಮಂಡಲ ವಾಹನ(ಪಡಿಯೇತ್ತ). 10 ರಂದು ಸಂಜೆ 4ನೇ ತಿರುನಾಳ್. ಮುಡಿ ಉತ್ಸವ. ಪಡಿಯೇತ್ತ, 11 ರಂದು ಸಂಜೆ 5ನೇ ತಿರುನಾಳ್, ಪ್ರಹ್ಲಾದ ಪರಿಪಾಲನೆ, ಬೆಳ್ಳಿಗರುಡೋತ್ಸವ, ವಿಶೇಷ ಪಡಿಯೇತ್ತ, 12 ರಂದು ಸಂಜೆ 6ನೇ ತಿರುನಾಳ್, ಗಜೇಂದ್ರಮೋಕ್ಷ, ಆನೆವಸಂತ, ಕುದುರೆ ವಾಹನ, ಆನೆ ವಾಹನ, ವಿಶೇಷ ಪಡಿಯೇತ್ತ. 13 ರಂದು  7ನೇ ತಿರುನಾಳ್, ಬೆಳಿಗ್ಗೆ ರಥಸ್ನಪನ, ರಥಬಲಿ, ಯಾತ್ರಾದಾನ ಪೂರ್ವಕ ಮಧ್ಯಾಹ್ನ 1-01 ರಿಂದ 1-31 ರೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಉಭಯನಾಚ್ಚಿಯಾರ್ ಸಹಿತ ಶ್ರೀ ಪ್ರಸನ್ನ ಕೃಷ್ಣಸ್ವಾಮಿಯವರಿಗೆ ಬ್ರಹ್ಮರಥೋತ್ಸವ ಮತ್ತು ಶ್ರೀಪೆರುಂದೇವಿ ಅಮ್ಮನವರಿಗೆ ಪ್ರತ್ಯೇಕವಾಗಿ ರಥೋತ್ಸವ. 14 ರಂದು 8ನೇ ತಿರುನಾಳ್, ರಾತ್ರಿ ತೆಪ್ಪೋತ್ಸವ, ಡೋಲೋತ್ಸವ, ಕುದುರೆ ವಾಹನ, ಕಳ್ಳರಸುಲಿಗೆ ಉತ್ಸವ. 15 ರಂದು 9ನೇ ತಿರುನಾಳ್, ಬೆಳಿಗ್ಗೆ ನಗರ ಶೋಧನೆ, ಸಂಧಾನಸೇವೆ, ಚೂರ್ಣಾಭಿಷೇಕ, ಅವಭೃತ ಸ್ನಾನ, ಸಂಜೆ ಗೋವಿಂದ ಪಟ್ಟಾಭಿಷೇಕ, ಪಡಿಮಾಲೈ, ಪೂರ್ಣಾಹುತಿ, ಮಹಾಕುಂಭ ಪ್ರೋಕ್ಷಣೆ, 16 ರಂದು ಬೆಳಿಗ್ಗೆ ಮಹಾಭಿಷೇಕ, ಸಂಜೆ ಪುಷ್ಪಯಾಗ, ದ್ವಾದಶಾರಾಧನೆ, ಹನುಮಂತ ವಾಹನ, ಧ್ವಜಾವರೋಹಣ, ಉದ್ಯಾಸನ ಪ್ರಬಂಧ, ಶ್ರೀ ಕೃಷ್ಣಜಯಂತಿ, ಮೂಕಬಲಿ.
    ಸೆಪ್ಟೆಂಬರ್ 17 ರಂದು ಶಿಕ್ಯೋತ್ಸವ, 18 ರಂದು ಪೂತನಿ ಸಂಹಾರ, 19 ರಂದು ಶಕಟಾಸುರ ಸಂಹಾರ, 20 ರಂದು ಬಕಾಸುರ ವಧೆ, 21 ರಂದು ಯಮಳಾರ್ಜುನ ಮೋಕ್ಷ, 22 ರಂದು ಮೋಹಿನಿ ಅಲಂಕಾರ, 23 ರಂದು ಮಲ್ಲಯುದ್ಧ,  24 ರಂದು ರಾಸಕ್ರೀಡೆ (ಗೋವಿಗೆ ಕಾಮಧೇನು ಅಲಂಕಾರ), 25 ರಂದು ರುಕ್ಮಿಣೀ ಕಲ್ಯಾಣೋತ್ಸವ (ದೇವಸ್ಥಾನದೊಳಗೆ ನಡೆಯುತ್ತದೆ) ಈ ಕಾರ್ಯಕ್ರಮಗಳು ಸಂಜೆ 6 ಗಂಟೆಗೆ ನಡೆಯಲಿದೆ.
   ಸೆಪ್ಟೆಂಬರ್ 24 ರಂದು ರಾತ್ರಿ 8 ಗಂಟೆಗೆ ಕಂಸವಧೆ (ದೇವಸ್ಥಾನದಲ್ಲಿ) ನಡೆಯಲಿದೆ.
     ಉತ್ಸವಗಳ ಸಂದರ್ಭದಲ್ಲಿ ಹೆಚ್ಚಿನ ಭಕ್ತಾದಿಗಳು ಆಗಮಿಸಬೇಕೆಂದು ಅರಮನೆ ಮುಜರಾಯಿ ಸಂಸ್ಥೆಗಳ ವ್ಯವಸ್ಥಾಪಕ ಗೋವಿಂದರಾಜು ಎಸ್. ಅವರು  ಕೋರಿದ್ದಾರೆ.

ಸೆ. 2 ರಂದು ಸಾಂಸ್ಕøತಿಕ ಸೌರಭ
   ಮೈಸೂರು.ಸೆ.01.ಮೈಸೂರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಸಾಂಸ್ಕøತಿಕ ಸೌರಭವನ್ನು ಸೆಪ್ಟೆಂಬರ್ 2 ರಂದು ಬೆಳಿಗ್ಗೆ 11 ಗಂಟೆಗೆ ಹೆಚ್.ಡಿ.ಕೋಟೆ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಚಿಕ್ಕಮಾದು ಅಧ್ಯಕ್ಷತೆ ವಹಿಸುವರು.
ಲೋಕಸಭಾ ಸದಸ್ಯ ಆರ್. ಧ್ರುವನಾರಾಯಣ್, ವಿಧಾನಪರಿಷತ್ ಸದಸ್ಯರಾದ ಎಸ್.ನಾಗರಾಜು, ಸಿ.ಹೆಚ್.ವಿಜಯಶಂಕರ್, ಗೋ. ಮಧುಸೂದನ್, ,  ಮರಿತಿಬ್ಬೇಗೌಡ, ಆರ್. ಧರ್ಮಸೇನ, ಹೆಚ್.ಡಿ.ಕೋಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹೆಚ್.ಎನ್. ಉಮಾಶಂಕರ್, ಉಪಾಧ್ಯಕ್ಷೆ ಸುಹಾಸಿನಿ ಕೆ.ಎಲ್.,  ಹೆಚ್.ಡಿ.ಕೋಟೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಲ್ಲೇಶ್ವರಿ ತಂಗವೇಲು, ಉಪಾಧ್ಯಕ್ಷ ಕೆ.ಎಸ್.ಬಾಲಚಂದ್ರ, ಹೆಚ್.ಡಿ.ಕೋಟೆ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ರವಿಕುಮಾರ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆ ನಿರ್ಮಾಣ: ರಾಜೀವ್ ರಿನ್ ಯೋಜನೆಯಡಿ ಅರ್ಜಿ ಆಹ್ವಾನ
ಮೈಸೂರು.ಸೆ.01.ಟಿ.ನರಸೀಪುರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಪಟ್ಟಣದ ಆರ್ಥಿಕವಾಗಿ ದುರ್ಬಲ ವರ್ಗದವರು ಇಡಬ್ಲೂಎಸ್ ಮತ್ತು ಕಡಿಮೆ ಆದಾಯ ಹೊಂದಿರುªವರು ಎಲ್‍ಐಜಿ ಹೊಸಮನೆ ನಿರ್ಮಿಸಿಕೊಳ್ಳಲು, ಖರೀದಿಸಲು ಅಥವಾ ಇರುವ ಮನೆಗೆ ಹೆಚ್ಚುವರಿಯಾಗಿ ಕೊಠಡಿ, ಅಡುಗೆ ಮನೆ, ಶೌಚಾಲಯ, ನಿರ್ಮಿಸಿಕೊಳ್ಳಲು ‘ರಾಜೀವ್ ರಿನ್’ ಯೋಜನೆಯಡಿ ಸೌಲಭ್ಯ ದೊರೆಯಲಿದೆ.
ಈ ಯೋಜನೆ ಸಾಲದ ಮೊತ್ತಕ್ಕೆ ವಿಧಿಸಲಾಗುವ ಬಡ್ಡಿಯ ಮೇಲೆ ಶೇ. 5 ರಷ್ಟು ನಿಗಧಿತ ಬಡ್ಡಿ ಸಹಾಯಧನವನ್ನು ಒದಗಿಸುತ್ತದೆ. ಈ ಸೌಲಬ್ಯ  ನೀಡಿಕೆಯಲ್ಲಿ ಮಹಿಳೆಯರು ಪ.ಜಾತಿ/ಪ.ಪಂ, ಅಲ್ಪಸಂಖ್ಯಾತರು, ವಿಕಲಚೇತನರಿಗೆ ಮೊದಲ ಆದ್ಯತೆ. ವಾರ್ಷಿಕ 1ಲಕ್ಷರೂ. ಆದಾಯ ಹೊಂದಿರುವ ಕುಟುಂಬಗಳಿಗೆ 21ಚ.ಮೀ. ಗಳವರೆಗೆ ಮನೆ ಕಟ್ಟಲು ಗರಿಷ್ಟ 5ಲಕ್ಷ ರೂಗಳ ಸಾಲ ನೀಡಲಿದ್ದು. ಇದರ ಬಡ್ಡಿಯಲ್ಲಿ ಶೇ. 5ರಷ್ಟು ಬಡ್ಡಿ ಸಹಾಯಧನ ದೊರೆಯಲಿದೆ. ಮರುಪಾವತಿಗೆ 15 ರಿಂದ 20ವರ್ಷ ಅವಧಿ ಇರುತ್ತದೆ.
    ವಾರ್ಷಿಕ 1 ರಿಂದ 2 ಲಕ್ಷ ರೂ. ಆದಾಯ ಹೊಂದಿರುವ ಕುಟುಂಬಗಳಿಗೆ 28ಚ.ಮೀ.ಗಳವರೆಗೆ ಮನೆ ನಿರ್ಮಿಸಲು ಗರಿಷ್ಟ 8 ಲಕ್ಷ ರೂ ಸಾಲ ನೀಡಲಾಗುತ್ತದೆ. ಆದರೆ  5 ಲಕ್ಷಕ್ಕಿಂತ ಮೇಲ್ಪಟ್ಟ ಹೆಚ್ಚುವರಿ ಸಾಲಕ್ಕೆ ಯಾವುದೆ. ಬಡ್ಡಿ ಸಹಾಯದನ ದೊರೆಯುವುದಿಲ್ಲ. ಮರುಪಾವತಿಗೆ 15 ರಿಂದ 20 ವರ್ಷಗಳ ಅವಧಿ ಇರುತ್ತದೆ.
    ಫಲಾಭವಿಯ ಹೆಸರಿನಲ್ಲಿ ನಿವೇಶನ ಮಾಲಿಕತ್ವದ ದಾಖಲೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಇಂದಿನವರೆವಿಗೂ ಆಸ್ತಿ ತರಿಗೆ ಪಾತಿಸಿರುವ ದಾಖಲೆಗಳು, ಪಡಿತರಚೀಟಿ, ಮತದಾರರ ಗುರುತಿನ ಚೀಟಿ, ಆದಾರ್‍ಕಾರ್ಡ್ ಕಟ್ಟಡ ನಿರ್ಮಾಣದ ಪರವಾನಿಗೆ ಅಂದಾಜು ವೆಚ್ಚ ಮತ್ತು ನಕ್ಷೆ, ಅಂಗವಿಕಲರಾಗಿದ್ದರೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.
    ಪ್ರಾಥಮಿಕ ಭದ್ರತೆಗಾಗಿ ಮನೆಯನ್ನು ಅಡಮಾನವಾಗಿ ಪರಿಗಣಿಸಲಾಗುತ್ತದೆ. ಈ ಯೋಜನೆಗೆ ಸರ್ಕಾರದಿಂದ ನೇಮಕ ಮಾಡಲಾದ ಬ್ಯಾಂಕುಗಳ ಮೂಲಕ ಸಾಲ ಮಂಜೂರು ಮಾಡಲಾಗುತ್ತದೆ. ನಿಗದಿತ ಸಾಲದ ಅರ್ಜಿ ನಮೂನೆಯನ್ನು ದಿನಾಂಕ- 10-09-2014 ರವರೆಗೆ ನೀಡಲಾಗುತ್ತದೆ. ಅರ್ಜಿಯನ್ನು ನಿಗದಿಪಡಿಸಿರುವ ದಾಖಲೆಗಳ ಸಮೇತ ಸಲ್ಲಿಸಲು ಕಡೆ ದಿನಾಂಕ 15-09-2014.  ಹೆಚ್ಚಿನ ಮಾಹಿತಿಗಾಗಿ ರಾಜೀವ್ ರಿನ್ ಯೋಜನೆಯ ಶಾಖೆ ಪಟ್ಟಣ ಪಂಚಾಯಿತಿ  ಟಿ. ನರಸೀಪುರ ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಕ್ರೀಡಾಕೂಟ ಮುಂದೂಡಿಕೆ
    ಮೈಸೂರು.ಸೆ.01.ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 04-09-2014 ರಂದು ತಾಲ್ಲೂಕು ಕ್ರೀಡಾಂಗಣ, ಪಿರಿಯಾಪಟ್ಟಣ ಇಲ್ಲಿ ಏರ್ಪಡಿಸಲಾಗಿದ್ದ,  ಪಿರಿಯಾಪಟ್ಟಣ ತಾಲ್ಲೂಕುಮಟ್ಟದ ದಸರಾ ಕ್ರೀಡಾಕೂಟ ಮತ್ತು ಆರ್‍ಜಿಕೆಎ ಮಹಿಳಾ ಕ್ರೀಡಾಕೂಟವನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಕ್ರೀಡಾಕೂಟವು ದಿನಾಂಕ 06-09-2014 ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷ್ಣರಾಜಪೇಟೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ದಳ್ಳಾಳಿಗಳ ಹಾವಳಿಯಿಂದ ಮುಕ್ತಗೊಳಸಿ ಪಾರದರ್ಶಕ ಆಡಳಿತವನ್ನು ನೀಡುತ್ತಿರುವ ಎಪಿಎಂಸಿ ಆಡಳಿತ ಮಂಡಳಿಯು ತೆಂಗಿನಕಾಯಿ ವಹಿವಾಟನ್ನು ಮುಂದಿನ ವಾರದ ಕಾಯಿ ಸಂತೆಯಿಂದ ಬಹಿರಂಗ ಹರಾಜು ಮೂಲಕ ಮಾರಾಟ ಮಾಡಿಸಿಕೊಟ್ಟು ರೈತರಿಗೆ ಹೆಚ್ಚಿನ ಬೆಳೆಯನ್ನು ಕೊಡಿಸಿ ಕೊಡಲು ತೀರ್ಮಾನಿಸಿತು.
ಎಪಿಎಂಸಿಯ ಅಧ್ಯಕ್ಷರಾದ ಆಲೇನಹಳ್ಳೀ ಮಹೇಶ್ ಅವರ ಕಛೇರಿಯಲ್ಲಿ ನಡೆದ ವರ್ತಕರ ಸಭೆಯಲ್ಲಿ ಸಾಧಕ-ಬಾಧಕಗಳು ಹಾಗೂ ಆಗು-ಹೋಗುಗಳನ್ನು ಗಮದಲ್ಲಿಟ್ಟುಕೊಂಡು ಲಕ್ಷಗಟ್ಟಲೆ ವಹಿವಾಟು ನಡೆಯುವ ತೆಂಗಿನಕಾಯಿ ವ್ಯಾಪಾರವನ್ನು ಬಹಿರಂಗ ಹರಾಜಿನ ಮೂಲಕ ಮಾರಾಟ ಮಾಡಲು ನಿರ್ಧರಿಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪನಿರ್ದೇಶಕಿ ಡಿ.ಆರ್.ಪುಷ್ಪ, ಕಾರ್ಯದರ್ಶಿ ಕೃಷ್ಣಮೂರ್ತಿ, ಉಪಾಧ್ಯಕ್ಷ ಶಂಕರನಾಯ್ಕ್, ನಿರ್ದೇಶಕರಾದ ಆನೆಗೊಳ ರಾಮೇಗೌಡ, ವಿಠಲಾಪುರ ಚೆಲುವೇಗೌಡ, ಚಂದ್ರೇಗೌಡ, ರಾಯಸಮುದ್ರ ಪಾಪೇಗೌಡ, ಮಾವಿನಕೆರೆ ರಾಮಸ್ವಾಮಿ, ಶಿವಣ್ಣ ಸರ್ಕಾರತದ ನಿರ್ದೇಶನದಂತೆ ಬಹಿರಂಗ ಹರಾಜಿನ ಮೂಲಕ ಮಾರಾಟ ಮಾಡಲು ಒಪ್ಪಿಗೆ ಸೂಚಿಸಿದರೆ ಸಭೆಯಲ್ಲಿ ಹಾಜರಿದ್ದ ತಾಲೂಕು ಮತ್ತು ಪಕ್ಕದ ತಾಲೂಕುಗಳ ವರ್ತಕರು ಒಲ್ಲದ ಮನಸ್ಸಿನಲ್ಲಿಯೇ ಒಪ್ಪಿಗೆ ನೀಡಿದರು.
ಪ್ರಸ್ತುತ ನೂರು ವರ್ತಕರು ಎಪಿಎಂಸಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರೆ ಕಾಯಿ ಸಂತೆಯೊಳಗೆ ಕಾಲಿಡಲು ಜಾಗವಿಲ್ಲದಷ್ಟು ದಳ್ಳಾಳಿಗಳೇ ತುಂಬಿದ್ದು ರೈತರಿಗೆ ನ್ಯಾಯಯುತವಾದ ಬೆಲೆಯನ್ನು ದೊರಕಿಸಿಕೊಡದೇ ರೈತರ ಉತ್ಪನ್ನಗಳನ್ನು ಮಾರಾಟ ಮಾಡಿ ಸ್ಥಳದಲ್ಲಿಯೇ ಸಾವಿರಾರು ರೂ ಹಣವನ್ನು ಕಮಿಷನ್ ಪಡೆಯುವ ಮೂಲಕ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಕೆ.ಜಿ ತೆಂಗಿನಕಾಯನ್ನು 25ರೂಗಳಿಗೆ ಖರೀದಿಸಿ 28ರೂಗಳಿಗೆ ಇಂದಿನ ಸಂತೆಯಲ್ಲಿ ಮಾರಾಟ ಮಾಡಿದ್ದಾರೆ ರೈತರಿಗೆ ಕಣ್ಣ ಮುಂದೆಯೇ ಪ್ರತೀ ಕೆಜಿ ತೆಂಗಿನಕಾಯಿಗೆ 3ರೂ ನಷ್ಠವಾಗಿದೆ. ಈ ಬಗ್ಗೆ ಅಧಿಕಾರಿಗಳು ಮತ್ತು ರೈತ ಮುಖಂಡರೊಂದಿಗೆ ಸಾಧಕ-ಭಾಧಕಗಳನ್ನು ಅವಲೋಕಿಸಿ ಇನ್ನು ಮುಂದಿನ ದಿನಗಳಲ್ಲಿ ತೆಂಗಿನಕಾಯಿಯ ವ್ಯಾಪಾರವನ್ನು ಬಹಿರಂಗ ಹರಾಜು ಮೂಲಕವೇ ಇತ್ಯರ್ಥ ಮಾಡಲು ಸರ್ವ ಸಮ್ಮತವಾಗಿ ನಿರ್ಧರಿಸಲಾಯಿತು. ರೈತ ಬಂಧುಗಳು ಇನ್ನುಮುಂದೆ ದಳ್ಳಾಳಿಗಳಿಗೆ ತಮ್ಮ ಕೃಷಿ ಪದಾರ್ಥಗಳನ್ನು ನೀಡದೇ ಬಹಿರಂಗ ಹರಾಜಿನಲ್ಲಿಯೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಸರ್ಕಾರವು ಜಾರಿಗೆ ತಂದಿರುವ ರೈತ ಪರವಾದ ನಿರ್ಣಯಕ್ಕೆ ಬೆಂಬಲ ನೀಡಬೇಕು ಎಂದು ಎಪಿಎಂಸಿ ಅಧ್ಯಕ್ಷ ಆಲೇನಹಳ್ಳಿ ಮಹೇಶ್ ಮನವಿ ಮಾಡಿದರು.
ಎಲೆಕ್ಟ್ರಾನಿಕ್ ವೇಬ್ರಿಡ್ಜ್: ರೈತರು ಸಂತೆಗೆ ಮಾರಾಟ ಮಾಡಲು ತರುವ ವಸ್ತುಗಳ ತೂಕದಲ್ಲಿ ಮೋಸವಾಗದಂತೆ ತಡೆಯಲು 25ಲಕ್ಷರೂಗಳ ವೆಚ್ಚದಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಸ್ಥಾಪಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗಿದೆ. ವ್ಯಾಪಾರ ವಹಿವಾಟಿನಲ್ಲಿ ಭಾಗವಹಿಸುವ ವರ್ತಕರುಗಳಿಂದ ರೈತ ಬಂಧುಗಳಿಗೆ ಮೋಸವಾಗದಂತೆ ಎಚ್ಚರ ವಹಿಸಲಾಗಿದೆ ಎಂದು ಹೇಳಿದ ಮಹೇಶ್ ಕೃಷ್ಣರಾಜಪೇಟೆ ಎಪಿಎಂಸಿಯ ಎಳನೀರು ವಹಿವಾಟು ಹೊಸ ದಾಖಲೆಯನ್ನು ನಿರ್ಮಿಸಿದೆ. ನಮ್ಮ ತಾಲೂಕಿನ ಎಳನೀರು ದೇಶದ ಎಲ್ಲಾ ಮಾರುಕಟ್ಟೆಗಳಲ್ಲಿಯೂ ಬೇಡಿಕೆಯನ್ನು ಹೊಂದಿದೆ. ಬಲ್ಲೇನಹಳ್ಳಿಯಲ್ಲಿನ ಸೇವಂತಿಗೆ ಹೂವಿನ ಮಾರುಕಟ್ಟೆಗೆ ಹೈಟೆಕ್ ರೂಪನೀಡಿ ರೈತರಿಗೆ ಅನುಕೂಲ ಮಾಡಿಕೊಡಲು ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ತಾಲೂಕಿನ ರೈತರು ಯಾವುದೇ ದಳ್ಳಾಳಿ ಹಾಗೂ ವರ್ತಕರಿಂದ ತಮಗೆ ಹಣಕಾಸಿನ ವ್ಯವಹಾರ, ಇಲ್ಲವೇ ತೂಕದಲ್ಲಿ ವಂಚನೆ ಮಾಡಿದರೆ ಲಿಖಿತ ದೂರು ನೀಡಿದರೆ ಅಂತಹ ವರ್ತಕರ ಲೈಸೆನ್ಸ್ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪನಿರ್ದೇಶಕಿ ಡಿ.ಆರ್.ಪುಷ್ಪ, ಕಾರ್ಯದರ್ಶಿ ಕೃಷ್ಣಮೂರ್ತಿ, ಉಪಾಧ್ಯಕ್ಷ ಶಂಕರನಾಯ್ಕ್, ನಿರ್ದೇಶಕರಾದ ಆನೆಗೊಳ ರಾಮೇಗೌಡ, ವಿಠಲಾಪುರ ಚೆಲುವೇಗೌಡ, ಚಂದ್ರೇಗೌಡ, ರಾಯಸಮುದ್ರ ಪಾಪೇಗೌಡ, ಮಾವಿನಕೆರೆ ರಾಮಸ್ವಾಮಿ, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

  ಸಂಸ್ಕøತಿಯಿಂದ ಅನಂತಮೂರ್ತಿಗೆ ಶ್ರದ್ಧಾಂಜಲಿ
         
      ಮಂಡ್ಯ : ಇಲ್ಲಿನ ಸಾಮಾಜಿಕ ಮತ್ತು ಸಾಂಸ್ಕøತಿಕ ಸಂಘಟನೆ ‘ಸಂಸ್ಕøತಿ’ ವತಿಯಿಂದ ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಯು.ಆರ್.ಅಂತಮೂರ್ತಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.ಸಂಸ್ಕøತಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎರಡು ನಿಮಿಷ ಮೌನ ಪ್ರಾರ್ಥನೆಯ ನಂತರ ಮಾತನಾಡಿದ ಸಂಸ್ಕøತಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಂ.ವಿ.ಧರಣೇಂದ್ರಯ್ಯ ಮಾತನಾಡಿ ನೇರ ದಿಟ್ಟ ನಡೆಯನ್ನು ಹೊಂದಿದ್ದ ಅನಂತಮೂರ್ತಿಯವರು ವಿವಾದಗಳ ನಡುವೆಯೂ ತಮ್ಮತನ ಬಿಟ್ಟುಕೊಡದೆ ಚಿಂತನಶೀಲ ಮನಸುಗಳಿಗೆ ಸ್ಫೂರ್ತಿದಾಯಕರಾಗಿದ್ದರು.ಹಲವು ಸರ್ಕಾರಗಳಿಗೆ ಮಾರ್ಗದರ್ಶಕರಾಗಿದ್ದಲ್ಲದೆ ಚುನಾವಣೆಗೆ ನಿಲ್ಲುವ ಮೂಲಕ ರಾಜಕೀಯದ ಅನುಭವವನ್ನೂ ಸಹ ಪಡೆದುಕೊಂಡಿದ್ದರು.ಇಂತಹ ರತ್ನವೊಂದನ್ನು ನಮ್ಮ ಸಾಮಾಜಿಕ ಕ್ಷೇತ್ರ ಕಳೆದುಕೊಂಡಿದೆ.ಕೇವಲ ಸಾಹಿತಿಯಾಗಿ ಮಾತ್ರ ಇರದ ಅವರು ಎಲ್ಲಾ ಕ್ಷೇತ್ರಗಳ್ಲೂ ತಮ್ಮ ಛಾಪು ಮೂಡಿಸಿದ್ದರು ಎಂದು ಅವರ ಗುಣಗಾನ ಮಾಡಿದರು.ಸಭೆಯಲ್ಲಿ ಸಂಸ್ಕøತಿ ಅಧ್ಯಕ್ಷ ಕೆ.ಪ್ರಹ್ಲಾದರಾವ್,ಕಾರ್ಯದರ್ಶಿಗಳಾದ ಬಿ.ಜಿ.ಉಮಾŒಷೌಕತ್ ಆಲಿ,ಪತ್ರಿಕಾ ಕಾರ್ಯದರ್ಶಿ ಹೊಳಲು ಶ್ರೀಧರ್,ಪ್ರಮೀಳಾ ಧರಣೇಂದ್ರಯ್ಯ,ಎನ್.ರಮೇಶ್ ಉಪಸ್ಥಿತರಿದ್ದರು.

ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಎನ್.ಅಜಯ್ ನಾಗಭೂಷಣ್ ಅವರ ಅಧ್ಯಕ್ಷತೆಯಲ್ಲಿ ಎನ್‍ಎಸ್‍ಎಲ್ ಕಂಪನಿಯ ಅಧಿಕಾರಿಗಳು ಮತ್ತು ರೈತಸಂಘದ ಮುಖಂಡರ ಸಭೆ ನಡೆಯಿತು. ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಕೊಪ್ಪ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಚಂದಗಾಲು ಶಂಕರೇಗೌಡ, ಎಪಿಎಂಸಿ ಸದಸ್ಯರಾದ ಎಂ.ಸಿ.ಕುಮಾರ್, ಸುರೇಶ್, ರೈತ ಮುಖಂಡರಾದ ಕೋಣಸಾಲೆ ನರಸರಾಜು, ರಾಮಕೃಷ್ಣಯ್ಯ, ಚಿಕ್ಕೋನಹಳ್ಳಿ ತಮ್ಮಯ್ಯ, ಕೊಪ್ಪ ಪುಟ್ಟರಾಜು, ಎನ್‍ಎಸ್‍ಎಲ್ ಕಂಪನಿ ಎಜಿಎಂ ಮಂಜುನಾಥ್, ಉಪಾಧ್ಯಕ್ಷ ನಾಯಕ್, ದೀಪಕ್ ಮತ್ತಿತರರಿದ್ದರು.




 ಕೃಷ್ಣರಾಜಪೇಟೆ. ಕರ್ತವ್ಯದಲ್ಲಿ ಶಿಸ್ತು ಮತ್ತು ಬದ್ಧತೆಯನ್ನು ಅಳವಡಿಸಿಕೊಂಡು ರೈತ ಪರವಾಗಿ ದಕ್ಷತೆಯಿಂದ ಕೆಲಸ ಮಾಡಿ ಯಾವುದೇ ಒಂದು ಕಪ್ಪು ಚುಕ್ಕೆಯಿಲ್ಲದಂತೆ ಸೇವೆಯಿಂದ ನಿವೃತ್ತರಾಗುತ್ತಿರುವ ಬಸವರಾಜಆರಾಧ್ಯ ಅವರ ಕಾರ್ಯವೈಖರಿಯು ಸರ್ಕಾರಿ ನೌಕರರಿಗೆ ಮಾದರಿಯಾಗಿದೆ ಎಂದು ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪನಿರ್ದೇಶಕಿ ಡಿ.ಆರ್.ಪುಷ್ಪ ಹೆಮ್ಮೆಯಿಂದ ಹೇಳಿದರು.
ಅವರು ಇಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ರೈತರು ಮತ್ತು ವರ್ತಕರು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಆರಾಧ್ಯ ಅವರನ್ನು ಇಲಾಖೆಯ ವತಿಯಿಂದ ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ಸರ್ಕಾರಿ ನೌಕರರೆಂದರೆ ಕೇವಲ ಸರ್ಕಾರವು ನೀಡುವ ಸಂಬಳದ ಹಣಕ್ಕಾಗಿ ಕಾಟಾಚಾರಕ್ಕೆ ದುಡಿಯುವವರು ಎಂಬ ಅಪವಾದವಿದೆ. ಆದರೆ ಈ ಅಪವಾದವನ್ನು ಸುಳ್ಳು ಮಾಡಿದ ಆರಾಧ್ಯರು ರೈತರ ಪರವಾಗಿ ಕೆಲಸ ಮಾಡಿ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿದ್ದಾರೆ. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆಯು ಸಿಗುವಂತೆ ನೋಡಿಕೊಂಡರಲ್ಲದೇ ದಳ್ಳಾಳಿಗಳ ಹಾವಳಿಯನ್ನು ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ನಿಯಂತ್ರಿಸಿ ವರ್ತಕರು ಮತ್ತು ರೈತ ಬಂಧುಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಸರಳ ವ್ಯಕ್ತಿತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಆರಾಧ್ಯರು ಮಾರುಕಟ್ಟೆಯ ದಿನಗಳಂದು 18ಗಂಟೆಗಳಿಗೂ ಹೆಚ್ಚಿನ ಕಾಲ ಸೇವೆ ಸಲ್ಲಿಸಿ ಸರ್ಕಾರದ ತೆರಿಗೆ ಹಣವು ಸೋರಿಹೋಗದಂತೆ ಕರ್ತವ್ಯ ನಿರ್ವಹಿಸಿ ಮಾರುಕಟ್ಟೆಯ ಅಭಿವೃಧ್ಧಿಯಲ್ಲಿ ತಮ್ಮ ಕಾಣಿಕೆಯನ್ನು ನೀಡಿದ್ದಾರೆ. ಶ್ರೀಯುತರ ನಿವೃತ್ತಿ ಜೀವನವು ಸುಖಮಯವಾಗಿರಲಿ ದಯಾಮಯನಾದ ಭಗವಂತನು ಶಾಂತಿ, ನೆಮ್ಮದಿಯನ್ನು ಕರುಣಿಸಲಿ ಎಂದು ಶುಭ ಹಾರೈಸಿ ಬೀಳ್ಕೊಟ್ಟರು.
ಎಪಿಎಂಸಿ ಅಧ್ಯಕ್ಷ ಆಲೇನಹಳ್ಳಿ ಮಹೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಯದರ್ಶಿ ಕೃಷ್ಣಮೂರ್ತಿ, ಉಪಾಧ್ಯಕ್ಷ ಎಸ್.ಎಸ್.ಶಂಕರನಾಯ್ಕ್, ನಿರ್ದೇಶಕರಾದ ವಿ.ಸಿ.ಚೆಲುವೇಗೌಡ, ಆನೆಗೊಳ ರಾಮೇಗೌಡ, ಚಂದ್ರೇಗೌಡ, ರಾಯಸಮುದ್ರ ಪಾಪೇಗೌಡ, ಮುಖಂಡರಾದ ಸೋಮೇನಹಳ್ಳಿ ಕೃಷ್ಣೇಗೌಡ, ಶಕೀಲ್‍ಅಹಮದ್, ರಾಜೇಗೌಡ, ತಮ್ಮಯ್ಯ, ವೇಣುಗೋಪಾಲ್, ಶಿವಣ್ಣ, ಮಂಜುನಾಥ, ಗಿರೀಗೌಡ, ಭಾಗ್ಯಮ್ಮ, ರವಿ ಮತ್ತಿತರರು ಭಾಗವಹಿಸಿದ್ದರು.
ಎಪಿಎಂಸಿ ಕಛೇರಿಯ ಪ್ರಥಮ ದರ್ಜೆ ಸಹಾಯಕರಾದ ನವೀನ್ ಸ್ವಾಗತಿಸಿದರು, ಸತೀಶ್ ವಂದಿಸಿದರು. ಭಾಗ್ಯಲಕ್ಷ್ಮೀ ಮತ್ತು ಸತೀಶ್ ಕಾರ್ಯಕ್ರಮ ನಿರೂಪಿಸಿದರು.
ವಿಧಾನ ಪರಿಷತ್ ಸದಸ್ಯರ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರ
ಪ್ರವಾಸ ಕಾರ್ಯಕ್ರಮ
ಮಂಡ್ಯ, ಸೆ.01 ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಕೆ.ಎಸ್.ಈಶ್ವರಪ್ಪ ಹಾಗೂ ವಿಧಾನ ಪರಿಷತ್ ಸದಸ್ಯರಾದ ಅಶ್ವಥನಾರಾಯಣ ಅವರು ಸೆಪ್ಟೆಂಬರ್ 2 ರಂದು ನಾಗಮಂಗಲ, ಮಂಡ್ಯ ಹಾಗೂ ಮದ್ದೂರು ತಾಲ್ಲೂಕಿನ ಕೆಲವು ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈದ್ಯಾಧಿಕಾರಿ ನೇಮಕಕ್ಕೆ ಅರ್ಜಿ ಆಹ್ವಾನ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯ ಅಧೀನದಲ್ಲಿರುವ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ 9 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಮೆರಿಟ್ ಕಂ ರೋಸ್ಟರ್ ಪದ್ಧತಿ ಅನುಸರಿಸಿ ನೇಮಕಾತಿ ಮಾಡಿಕೊಳ್ಳಲು ಎಂ.ಬಿ.ಬಿ.ಎಸ್. ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಸೆಪ್ಟೆಂಬರ್ 15 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08232-224027 ಯನ್ನು ಸಂಪರ್ಕಿಸುವುದು.
ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ
ಸೆಪ್ಟೆಂಬರ್ 1 ರಿಂದ 20 ರವರೆಗೆ ಮಂಡ್ಯ ತಾಲ್ಲೂಕಿನಾದ್ಯಂತ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ನಿಗದಿಯಾಗಿದ್ದು, ಸೋಮವಾರ ಬೆಳಿಗ್ಗೆ 6.00 ಗಂಟೆಗೆ ಮಂಡ್ಯ ತಾಲ್ಲೂಕು ಕಸಬಾ ಹೋಬಳಿಯ ಹೊಸಬೂದನೂರು ಗ್ರಾಮದಲ್ಲಿ ಮಂಡ್ಯ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಶಂಕರೇಗೌಡ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
 ನಾಳೆ ಕೆ.ಎಸ್.ಈಶ್ವರಪ್ಪ ಜಿಲ್ಲಾ ಪ್ರವಾಸ
ಮಂಡ್ಯ: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನಾಳೆ (ಸೆ.2) ಮಂಡ್ಯ ನಗರ ಸೇರಿದಂತೆ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ನಾಳೆ ಮಧ್ಯಾಹ್ನ 1 ಗಂಟೆಗೆ ಮಂಡ್ಯ ನಗರಕ್ಕೆ ಆಗಮಿಸಲಿರುವ ಅವರು, ಬಿಜೆಪಿ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ನಂತರ 3 ಗಂಟೆಗೆ ನಾಗಮಂಗಲದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಲಿದ್ದಾರೆ.
ಸಂಜೆ 4ಗಂಟೆಗೆ ಅಕ್ರಮ ಮರಳು ಮಾಫಿಯಾ ನಡೆಯುತ್ತಿರುವ ನಾಗಮಂಗಲದ ಅರಕೆರೆ, ದೇವಲಾಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಡಿವೈಎಸ್ಪಿ ಸವಿತಾ ಹೂಗಾರ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.
ನಂತರ ಮಂಡ್ಯ ನಗರದ ಅಂಬೇಡ್ಕರ್ ಭವನದ ಕಾಮಗಾರಿ ವೀಕ್ಷಣೆ ನಡೆಸಲಿರುವ ಅವರು, ಮದ್ದೂರಿನ ತೈಲಕೆರೆಗೆ ಭೇಟಿ ನೀಡಿ, ನಂತರ ವಿವಿಧೆಡೆ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ವಕ್ತಾರ ಹಾಗೂ ವಿಧಾನಪರಿಷತ್ ಸದಸ್ಯ ಅಶ್ವತ್‍ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
ಭಾರತೀನಗರ.ಸೆ.1- ಕಾರ್ಖಾನೆ ಪ್ರಾರಂಭ ಹಾಗೂ ಬೆಲೆ ನಿಗಧಿ ಸಂಬಂಧ ಶಾಸಕ ಡಿ.ಸಿ.ತಮ್ಮಣ್ಣನವರ  ಅಧ್ಯಕ್ಷತೆಯಲ್ಲಿ    ರೈತರ ಸಭೆ ಸೋಮವಾರ ನಡೆಯಿತು.
  ಇಲ್ಲಿನ ಡಿ.ಸಿ.ತಮ್ಮಣ್ಣ ನಿವಾಸದ ಆವರಣದಲ್ಲಿ ನಡೆದ ಸಭೆಯಲ್ಲಿ ರೈತರು ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಿಳಿಸಿದರು.
 ಕೆ.ಪಿ.ದೊಡ್ಡಿ ಕೆ.ಎಲ್.ಶಿವರಾಮು, ಎಚ್.ಎಂ.ಮರಿಮಾದೇಗೌಡ, ರಾಜಣ್ಣ, ಕುಮಾರ್‍ರಾಜು ಸೇರಿದಂತೆ ಇತರರು ಮಾತನಾಡಿ, ವ್ಯವಸಾಯದ ಖರ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಪ್ರತಿಟನ್ ಕಬ್ಬಿಗೆ 2500 ರೂ ಮುಂಗಡ ಹಣ ನೀಡುವಂತೆ ಜೊತೆಗೆ 100 ರೂ ಬಾಕಿಯನ್ನು ಪಾವತಿಸುವಂತೆ ಶಾಸಕ ಡಿ.ಸಿ.ತಮ್ಮಣ್ಣನವರು ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಬೇಕೆಂದು ತಿಳಿಸಿದರು.
     ನಂತರ ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಸಚಿವ ಮಹದೇವ್ ಪ್ರಸಾದ್‍ರವರೊಂದಿಗೆ ಈಗಾಗಲೇ ಸುದೀರ್ಘವಾಗಿ ಒಂದು ಗಂಟೆಗಳ ಕಾಲ ರೈತರ ಸಮಸ್ಯೆಗಳ ಬಗ್ಗೆ  ಚರ್ಚೆ ನಡೆಸಿದ್ದೇನೆ. ಕಳೆದ ಸಾಲಿನಲ್ಲಿ ಬಾಕಿ ಇರುವ 100 ರೂ ಕೊಡಿಸಿಕೊಡುವುದರ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
    ಸಕ್ಕರೆ ಸಚಿವರು ಸೆ.8 ರಂದು ಕಬ್ಬು ಬೆಲೆ ನಿಗಧಿ ಸಂಬಂಧವಾಗಿ ಕಾರ್ಖಾನೆ ಅಧಿಕಾರಿಗಳನ್ನು ಬೆಂಗಳೂರಿನಲ್ಲಿ ಸಭೆಗೆ ಕರೆದಿದ್ದಾರೆ. ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ನಂತರ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವುದರ ಬಗ್ಗೆ  ರೈತರು ಮತ್ತು ಕಾರ್ಖಾನೆ ಅಧಿಕಾರಿಗಳ ಸಮ್ಮುಖದಲ್ಲಿ ಬಹಿರಂಗ ಸಭೆ ಕರೆದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
     ಉಪಘಟಕಗಳನ್ನು ಪ್ರಾರಂಭಿಸಿದರೆ ಇತರೆ ಕಾರ್ಖಾನೆಗಳಿಗಿಂತ ಪ್ರತೀ ಟನ್ ಕಬ್ಬಿಗೆ ಹೆಚ್ಚು ಹಣ ನೀಡುವುದಾಗಿ ಕಾರ್ಖಾನೆ ಆಡಳಿತ ಮಂಡಳಿ ಅಧಿಕಾರಿಗಳು ತಿಳಿಸಿದ್ದರು.  ರೈತರ ಹಿತ ದೃಷ್ಠಿಯಿಂದ ಕಾರ್ಖಾನೆಗೆ ಡಿಸ್ಟಿಲರಿ ಘಟಕ ಮತ್ತು ವಿದ್ಯುತ್ ಘಟಕವನ್ನು ಪ್ರಾರಂಭಿಸಲು ಸರ್ಕಾರದಿಂದ ಲೈಸನ್ಸ್ ಕೊಡಿಸಿದೆ. ಆದರೂ ಕೂಡ ಇವರು ರೈತರಿಗೆ ಅನ್ಯಾಯ ವೆಸಗುತ್ತಾ ಬಂದಿದ್ದಾರೆಂದು ಗುಡುಗಿದರು. ಕಷ್ಟಪಟ್ಟು ಕಬ್ಬು ಬೆಳೆದರೂ ಕೂಡ ರೈತರು ಭಿಕ್ಷೆ ಬೇಡುವಂತಾಗಿದೆ, ರೈತರು ಒಗ್ಗಟಿನಿಂದ ಇಲ್ಲದಿರುವುದರಿಂದಲೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ. ರೈತರು ಒಗ್ಗಟ್ಟಿನಿಂದ ಇದ್ದರೆ ಯಾರನ್ನು ಬೇಕಾದರೂ ಎದುರಿಸಬಹುದಿತ್ತು. ರೈತರ ಗುಂಪುಗಾರಿಕೆ ಮತ್ತು ಸಡಿಲಿಕೆಯನ್ನು ಮನಗಂಡ ಕಾರ್ಖಾನೆ ಅಧಿಕಾರಿಗಳು ರೈತರ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದು ಕಿಡಿಕಾರಿದರು.
   ರೈತರು ಕಬ್ಬಿನ ಜೊತೆ ಇತರೆ ಬೆಳೆಗಳನ್ನು ಬೆಳೆಯುವುದರ ಮೂಲಕ ಲಾಭವನ್ನು ತಂದುಕೊಳ್ಳಬೇಕು. ಸಂಬಂಧ ಪಟ್ಟ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಸಮಗ್ರವಾಗಿ ಮಾಹಿತಿ ಕೊಡಿಸಲಾಗುವುದು. ರೈತರು ಇದನ್ನು ಸಮರ್ಪಕವಾಗಿ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
  ಸೆ.8ರ ನಂತರ ಕಾರ್ಖಾನೆ ಪ್ರಾರಂಭ ಹಾಗೂ ಬೆಲೆ ನಿಗಧಿಗಾಗಿ ಕರೆಯಲಾಗುವ ಬಹಿರಂಗ ಸಭೆಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಮಸ್ಯೆ ಬಗೆಹರಿವಿಕೆಗೆ ಪ್ರಮುಖ ಪಾತ್ರವಹಿಸಬೇಕು. ನಿಮ್ಮ ಹೋರಾಟಕ್ಕೆ ನಾನು ಬದ್ದನಾಗಿರುತ್ತೇನೆಂದು ತಿಳಿಸಿದರು.
  ಇದೇ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ವೆಂಕಟೇಶ್, ತಾ.ಪಂ ಸದಸ್ಯ ಪುಟ್ಟಸ್ವಾಮಿ, ಕ್ಯಾತಘಟ್ಟದ ಗಿರೀಶ್, ತಿಮ್ಮರಾಜು, ಮೆಣಸಗೆರೆ ಮಧು, ಇಂದ್ರಕುಮಾರ್, ಜಿ.ಎಸ್.ಸಿದ್ದೇಗೌಡ, ಚನ್ನಶೆಟ್ಟಿ, ಸಬ್ಬನಹಳ್ಳಿ ಹೊನ್ನೇಗೌಡ, ಮುಟ್ಟನಹಳ್ಳಿ ಆನಂದ್, ಬೊಪ್ಪಸಮುದ್ರ ರಾಜಣ್ಣ, ತಿಟ್ಟಮಾರನಹಳ್ಳಿ ಶ್ರೀನಿವಾಸ್, ಚಂದೂಪುರ ಶಿವರಾಜು  ಸೇರಿದಂತೆ ಇತರರು ಉಪಸ್ಥಿತರಿದ್ದರು.

 ದಸರಾ ಕಾರ್ಯಕ್ರಮಗಳು
ಹಾರ-ತುರಾಯಿಬೇಡ : ಪುಸ್ತಕ-ಕಲಾಕೃತಿ , ಸಸಿಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಸೂಚನೆ
 


ಮೈಸೂರು,ಸೆ.1.ಈ ವರ್ಷದ ದಸರಾ ಕಾರ್ಯಕ್ರಮಗಳನ್ನು ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಸರಾ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಹಾಗೂ ಅನಗತ್ಯ ವೆಚ್ಚಕ್ಕೆ ಬ್ರೇಕ್ ಹಾಕುವ ದೃಷ್ಟಿಯಿಂದ ದಸರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಅತಿಥಿಗಳಿಗೆ ದುಬಾರಿ ಹಾರ-ತುರಾಯಿ, ನೆನಪಿನ ಕಾಣಿಕೆ ಅರ್ಪಿಸುವ ಬದಲು ಪುಸ್ತಕ, ಕಲಾಕೃತಿ, ಸಸಿಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಸೂಚನೆ ನೀಡಿದ್ದಾರೆ.
     ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಅಮರನಾಥ್ ಅವರು ಸಹ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದ್ದು ಪರಿಸರಕ್ಕೆ ಪೂರಕವಾಗುವಂತೆ ಅತಿಥಿಗಳಿಗೆ ಸಸಿಗಳನ್ನು ವಿತರಣೆ ಮಾಡಬೇಕೆಂದು ವಿನಂತಿಸಿದ್ದಾರೆ.
     ಚಿತ್ರಕಲಾ ಸಮಿತಿಯಿಂದ ದಸರಾ ಆರಂಭಕ್ಕೆ ಮುನ್ನವೇ ಚಿತ್ರಕಲಾ ಶಿಬಿರ ಏರ್ಪಡಿಸಿ. ಶಿಬಿರದಲ್ಲಿ ರಚನೆಯಾಗುವ ಕಲಾಕೃತಿಗಳನ್ನು ಅತಿಥಿಗಳಿಗೆ ನೆನಪಿನ ಕಾಣಿಕೆಯಾಗಿ ನೀಡಬಹುದು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಕಟಿಸಿರುವ ಪುಸ್ತಕಗಳನ್ನು ನೀಡಬಹುದು ಹಾಗೆಯೇ ಮೂಲಿಕಾ ದಸರಾ ಸಮಿತಿಯವರು ಗಿಡಗಳನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದ್ದಾರೆ. ವಿವಿಧ ಸಮಿತಿಗಳು ತಮ್ಮ ಬೇಡಿಕೆಗಳನ್ನು ತಿಳಿಸಿದಲ್ಲಿ ನೆನಪಿನ ಕಾಣಿಕೆ ಒದಗಿಸಿಕೊಡಲಾಗುವುದು, ಜಿಲ್ಲಾ ಪಂಚಾಯತ್ ಉಪನಿರ್ದೇಶಕ ಮಹದೇವ್ ಅವರನ್ನು ಈ ಕಾರ್ಯಕ್ಕೆ ನೋಡಲ್ ಅಧಿಕಾರಿಯಾಗಿ ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಸಮಿತಿಗಳಿಗೆ ಅನುದಾನ ನಿಗಧಿಪಡಿಸುವ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ವೆಚ್ಚಗಳ ಪುನರಾವರ್ತನೆ ಆಗುವುದನ್ನು ತಪ್ಪಿಸಬೇಕು, ವಿವಿಧ ಸಮಿತಿಗಳು ತಮಗೆ ಅಗತ್ಯವಿರುವ ವಸತಿ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರೆ ವಸತಿ ಸಮಿತಿಯಿಂದ ಅನುಕೂಲ ಕಲ್ಪಿಸಲಾಗುವುದು. ಅದೇ ರೀತಿ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ತಂಡಗಳನ್ನು ಸಾಂಸ್ಕøತಿಕ ಸಮಿತಿಯಿಂದ ಪಡೆದುಕೊಳ್ಳಬೇಕು ಎಂದರು.
    ದಸರಾ ಸಮಿತಿಗಳು ತಮಗೆ ನಿಗಧಿಪಡಿಸಿದ ಅನುದಾನದ ಮಿತಿಯಲ್ಲಿಯೇ ಕಾರ್ಯಕ್ರಮ ರೂಪಿಸಬೇಕು. ಸಾಧ್ಯವಿರುವ ಕಡೆ ಇಲಾಖಾ ಅನುದಾನ ಹಾಗೂ ಪ್ರಾಯೋಜಕತ್ವ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
    ದಸರಾ ಕಾರ್ಯಕ್ರಮಗಳಿಗೆ ಸರ್ಕಾರ 12 ಕೋಟಿ ರೂ. ನಿಗಧಿಪಡಿಸಿದ್ದು ಈ ಪೈಕಿ ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳಿಗೆ ತಲಾ ಒಂದು ಕೋಟಿ ರೂ. ನಿಗಧಿಪಡಿಸಲಾಗಿದೆ ಎಂದರು.
    ಕ್ರೀಡಾ ಸಮಿತಿಗೆ 1 ಕೋಟಿ, ಚಲನಚಿತ್ರ 13 ಲಕ್ಷ, ಮಹಿಳಾ ದಸರಾ 6 ಲಕ್ಷ, ಮಕ್ಕಳ ದಸರಾ 7 ಲಕ್ಷ, ಸ್ವಾಗತ ಸಮಿತಿ 3 ಲಕ್ಷ, ಆಹಾರ ಮೇಳ 1 ಲಕ್ಷ, ಯೋಗ ದಸರಾ 7 ಲಕ್ಷ, ಕುಸ್ತಿ 35 ಲಕ್ಷ ಹಾಗೂ ಲಲಿತ ಕಲಾ ಮತ್ತು ಕರಕುಶಲ ಸಮಿತಿಗೆ 6 ಲಕ್ಷ ನಿಗಧಿಪಡಿಸಲಾಗುವುದು ಎಂದು ಅವರು ತಿಳಿಸಿದರು.
   ಹೆಚ್ಚಿನ ಅನುದಾನದಿಂದಷ್ಟೇ ಉತ್ತಮ ಕಾರ್ಯಕ್ರಮ ರೂಪಿಸಲಾಗುವುದಿಲ್ಲ, ಅಧಿಕಾರಿಗಳು ಶ್ರದ್ದೆಯಿಂದ, ಬದ್ದತೆಯಿಂದ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಗುಣಮಟ್ಟದ ಕಾರ್ಯಕ್ರಮ ರೂಪಿಸಬಹುದು. ಪಾರದರ್ಶಕವಾಗಿ, ಕಾರ್ಯನಿರ್ವಹಿಸಿ ಅರ್ಥಪೂರ್ಣ ಕಾರ್ಯಕ್ರಮ ರೂಪಿಸುವಂತೆ ಅವರು ಸಲಹೆ ಮಾಡಿದರು.
    ಹೆಚ್ಚುವರಿ ಜಿಲ್ಲಾಧಿಕಾರಿ ಅರ್ಚನಾ, ಮುಡಾ ಆಯುಕ್ತ ಪಾಲಯ್ಯ, ಸೇರಿದಂತೆ ವಿವಿಧ ಉಪಸಮಿತಿಗಳ ಕಾರ್ಯಾಧ್ಯಕ್ಷರು, ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು.