ಸಾವಯವ ಕೃಷಿಗೆ ಉತ್ತೇಜನ ನೀಡಲು ಸೂಚನೆ: ಎಂ.ಕೃಷ್ಣಪ್ಪ
ಮಂಡ್ಯ ಮೇ.19. ರಾಸಾಯನಿಕ ಗೊಬ್ಬರವನ್ನು ಕೃಷಿಯಲ್ಲಿ ಕಡಿಮೆ ಮಾಡುವ ಸಲುವಾಗಿ ನೈಸರ್ಗಿಕ, ಸಾವಯವ ಕೃಷಿಯನ್ನು ರೈತರಿಗೆ ಪರಿಚಯಿಸಿ ಉತ್ತೇಜನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಕೃಷ್ಣಪ್ಪ ಅವರು ತಿಳಿಸಿದರು.
ಅವರು ಇಂದು ಶುಕ್ರವಾರ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ಮುಂಗಾರು ಮಳೆ ಉತ್ತಮವಾಗಿದ್ದು, ರಾಸಾಯನಿಕ ಹಾಗೂ ಬಿತ್ತನೆ ಬೀಜಗಳಿಗೆ ತೊಂದರೆಯಾಗದಂತೆ ಕೃಷಿ ಅಧಿಕಾರಿಗಳು ಮುಂಜಾಗ್ರತ ಕ್ರಮ ವಹಿಸಬೇಕೆಂದು ಕೃಷಿ ಅಧಿಕಾರಿಗೆ ಸೂಚಿಸಿದ ಸಚಿವರು ರಾಸಾಯನಿಕ ಗೊಬ್ಬರವನ್ನು ಕೃಷಿಯಲ್ಲಿ ಕಡಿಮೆ ಮಾಡುವ ಸಲುವಾಗಿ ನೈಸರ್ಗಿಕ, ಸಾವಯವ ಕೃಷಿಯನ್ನು ರೈತರಿಗೆ ಪರಿಚಯಿಸಿ ಎಂದು ಅವರು ತಿಳಿಸಿದರು.
ವಿವಿಧ ಇಲಾಖೆಗಳಿಂದ ರೈತರು, ಅರ್ಹರಿಗೆ ರೂಪಿಸಲಾಗಿರುವ ಯೋಜನೆಗಳ ಬಗ್ಗೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಸಾರ್ವಜನಿಕ ಹಾಗೂ ಪ್ರಮುಖ ಸ್ಥಳಗಳನ್ನು ಗುರುತಿಸಿ ಅಲ್ಲಿ ವಿವಿಧ ಯೋಜನೆಗಳ ಬಗ್ಗೆ ಹೋಬಳಿ ಕೇಂದ್ರಗಳಲ್ಲಿ ದೊಡ್ಡ ದೊಡ್ಡ ಫ್ಲೆಕ್ಸ್ ಹಾಕುವುದರೊಂದಿಗೆ ಜನರಿಗೆ ತಿಳಿಯಪಡಿಸುವಂತೆ ಸಲಹೆ ನೀಡಿದರು.
ಜಂಟಿ ಕೃಷಿ ನಿರ್ದೇಶಕಿ ರಾಜಾ ಸುಲೋಚನಾ ಪ್ರತಿಕ್ರಿಯಿಸಿ ಮಾತನಾಡಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಈಗಾಗಲೇ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಸಬ್ಸಿಡಿ ದರದಲ್ಲಿ ದ್ವಿದಳ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಲಾಗುತ್ತಿದೆ. ರಾಗಿ ಬಿತ್ತನೆ ಬೀಜ ಕೊರತೆ ಇದ್ದು, ಪೂರೈಕೆಗೆ ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು.
ಅರಣ್ಯ ಇಲಾಖೆಯಿಂದ ಹಸಿರ ವನಸಿರಿ ಬೆಳೆಸುವ ಸಲುವಾಗಿ ಸೀಡ್‍ಬಾಲ್ ವಿಶೇಷ ಅಭಿಯಾನ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಅದರ ಪೂರ್ವ ತಯಾರಿಗೆ ಸಾಕಷ್ಟು ಖರ್ಚು, ಸಮಯ ವ್ಯರ್ಥವಾಗುತ್ತದೆ. ಅದಕ್ಕಾಗಿ ಬೆಟ್ಟ-ಗುಡ್ಡ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಹೆಲಿಕಾಪ್ಟರ್ ಮೂಲಕ ಮರಗಳ ಬಿತ್ತನೆ ಬೀಜ ಚೆಲ್ಲುವಂತೆ ಮಾಡುವುದರಿಂದ ಹಸಿರ ವನಸಿರಿಯನ್ನು ವೃದ್ಧಿಸಬಹುದು ಎಂದು ಸಚಿವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಳವಳ್ಳಿ ಕ್ಷೇತ್ರದ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ಅವರು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ಎಷ್ಟೋ ದಶಕಗಳಿಂದ ಒಣಗಿರುವ ಮರಗಳಿವೆ. ಗಾಳಿಯ ರಭಸಕ್ಕೆ ಮರದ ಕೊಂಬೆಗಳು ಮುರಿದು ಬೀಳುತ್ತಿವೆ.ಇದರಿಂದ ಸಾಕಷ್ಟು ಅಪಾಯ ಸೃಷ್ಟಿಯಾಗುವ ಸಾಧ್ಯತೆಗಳಿದ್ದು ಆ ಮರಗಳನ್ನು ಕೂಡಲೇ ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ನರೇಗಾ ಯೋಜನೆಯಡಿ ತೋಟಗಾರಿಕೆ, ಅರಣ್ಯ, ಕೃಷಿ ಸೇರಿದಂತೆ ಅನೇಕ ಇಲಾಖೆಗಳಡಿ ಕಾಮಗಾರಿಗಳನ್ನು ತೆಗೆದುಕೊಳ್ಳುವುದಕ್ಕೆ ಅವಕಾಶಗಳಿವೆ. ಆದರೆ, ಪಿಡಿಒಗಳು ಪಂಚಾಯಿತಿ ಕಾಮಗಾರಿಗಳಿಗಷ್ಟೇ ಆದ್ಯತೆ ನೀಡುತ್ತಿದ್ದಾರೆ. ಇದರ ಅಗತ್ಯ ಕ್ರಮವಹಿಸುವಂತೆ ಸಭೆಯಲ್ಲಿ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಶರತ್ ಅವರು ಜಿಲ್ಲೆಯಲ್ಲಿರುವ 234 ಗ್ರಾಮ ಪಂಚಾಯಿತಿಗಳ ಪೈಕಿ 55 ಪಿಡಿಒ ಹುದ್ದೆಗಳು ಖಾಲಿ ಇವೆ. ಇದರಿಂದ ಹಲವು ಕಡೆಗಳಲ್ಲಿ ಒಬ್ಬ ಪಿಡಿಒಗೆ ಎರಡೆರಡು ಪಂಚಾಯಿತಿಗಳಿಗೆ ಉಸ್ತುವಾರಿ ವಹಿಸಲಾಗಿದ್ದು ವಿವಿಧ ಇಲಾಖೆಗಳಡಿ ಕಾಮಗಾರಿಗಳನ್ನು ತೆಗೆದುಕೊಳ್ಳುವುದಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿಗಳಾದ ಎಸ್. ಜಿಯಾವುಲ್ಲಾ, ಪೊಲೀಸ್ ವರಿಷ್ಠಾಧಿಕಾರಿಗಳಾದ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಜಿ.ಪ್ರೇಮಾ ಕುಮಾರಿ, ನಗರಸಭೆ ಅಧ್ಯಕ್ಷರಾದ ಬೋರೆಗೌಡ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಗಾಯಿತ್ರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದರು.
ಮೇ.20 ರಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರ ಪ್ರವಾಸ
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ.ಆರ್.ವೆಂಕಟೇಶ, ಸದಸ್ಯರಾದ ಮೀನಾಕ್ಷಮ್ಮ, ಗೋಕುಲನಾರಾಯಣಸ್ವಾಮಿ ಅವರು ಮೇ 20 ರಂದು ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಅವರು ಅಂದು ಬೆಳಿಗ್ಗೆ 9 ಗಂಟೆಗೆ ಪೌರಕಾರ್ಮಿಕರ ಕಾಲೋನಿಗಳಿಗೆ ಭೇಟಿ ನೀಡುವರು ನಂತರ ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಪೌರಕಾರ್ಮಿಕರ ಪ್ರಗತಿ ಪರಿಶೀಲನಾ ಸಭೆ ನಡೆಸುವರು ಎಂದು ಪ್ರಕಟಣೆ ತಿಳಿಸಿದೆ.
ಮೇ 20 ರಂದು ವಿದ್ಯುತ್ ವ್ಯತ್ಯಯ
ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 20 ರಂದು ಬೆಳಿಗ್ಗೆ 9 ರಿಂದ ಸಂಜೆ 2 ಗಂಟೆಯ ವರೆಗೆ ಈ ಕೆಳಗೆ ತಿಳಿಸಿರುವ ಪ್ರದೇಶಗಳಲ್ಲಿ ವಿದ್ಯುತ್‍ನಲ್ಲಿ ಅಡಚಣೆವುಂಟಾಗುವುದರಿಂದ ಕಂಪನಿಯೊಂದಿಗೆ ಸಹಕರಿಸಬೇಕೆಂದು ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವ್ಯತ್ಯಯ ಉಂಟಾಗುವ ಪ್ರದೇಶಗಳ ವಿವರ ನಗರ ಪ್ರದೇಶಗಳಾದ ಕಲ್ಲಹಳ್ಳಿ, ಚಾಮುಂಡೇಶ್ವರಿ ನಗರ, ಮರಿಗೌಡ ಬಡಾವಣಿ, ಶಂಕರನಗರ, ಇಂಡುವಾಳು, ಕಿರಗಂದೂರು, ಕ್ಯಾತುಂಗೆರೆ ಗ್ರಾಮಾಂತರ ಪ್ರದೇಶಗಳಾದ ಪಣಕನಹಳ್ಳಿ, ತಂಡಸನಹಳ್ಳಿ, ಕೊತ್ತತ್ತಿ, ಮೊತ್ತಹಳ್ಳಿ, ಬೇವಿನಹಳ್ಳಿ, ಎ. ಹುಲ್ಲುಕೆರೆ, ಬಿ.ಹುಲ್ಲುಕೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳು.
No comments:
Post a Comment