Sunday, 4 January 2015

ಲೋಕ್ ಅದಾಲತ್‍ನಲ್ಲಿ 15.63 ಲಕ್ಷ ಪ್ರಕರಣಗಳು ಇತ್ಯರ್ಥ

                                          ಲೋಕ್ ಅದಾಲತ್‍ನಲ್ಲಿ 15.63 ಲಕ್ಷ ಪ್ರಕರಣಗಳು ಇತ್ಯರ್ಥ
     ಮೈಸೂರು,ಜ.3.ರಾಜ್ಯದಲ್ಲಿ ನಡೆದ ಲೋಕ್ ಅದಾಲತ್ ಕಲಾಪದಲ್ಲಿ ಒಟ್ಟು 15.63 ಲಕ್ಷ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ತಿಳಿಸಿದ್ದಾರೆ.
    ಮೈಸೂರು ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಮತ್ತು ವಕೀಲರ ಸಂಘದ  ಸಂಯುಕ್ತ ಆಶ್ರಯದಲ್ಲಿ ಮಳಲವಾಡಿದಲ್ಲಿ ಹಮ್ಮಿಕೊಳ್ಳಲಾಗಿದ್ದ ಎ.ಡಿ.ಆರ್ ಕಟ್ಟಡ ಹಾಗೂ ನ್ಯಾಯಾಧೀಶರ ವಸತಿ ಗೃಹಗಳ ಉದ್ಘಾಟನಾ ಕಾರ್ಯವನ್ನು ನೆರವೇರಿಸ ಅವರು ಮಾತನಾಡಿದರು.
     ನ್ಯಾಯಾಲಯಗಳಲ್ಲಿ ದಾಖಲಾದ ಪ್ರಕರಣಗಳಿಗೆ ಶೀಘ್ರ ಪರಿಹಾರ ಕೊಡಿಸುವುದು ಲೋಕ್ ಅದಾಲತ್ ಕಲಾಪದ ಮುಖ್ಯ ಉದ್ದೇಶವಾಗಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ರಾಜ್ಯದಲ್ಲಿ 2.63 ಲಕ್ಷ ಇತರೆ ಹಾಗೂ 13 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಲೋಕ್ ಅದಾಲತ್ ಅವಧಿಯಲ್ಲಿ ತೀರ್ಮಾನಿಸಲಾಗಿದ್ದು, ಹೆಚ್ಚಿನ ಪ್ರಕರಣಗಳು ಮಧ್ಯಮ ಹಾಗೂ ಬಡ ವರ್ಗದ ಕುಟುಂಬದವರಿಗೆ ಸೇರಿರುತ್ತವೆ ಎಂದರು.
     ಮಧ್ಯಮವರ್ಗದವರು, ಬಡತನ ರೇಖೆಗಿಂತ ಕೆಳಗಿನವರು ಕೋರ್ಟ್‍ಗೆ ಅಲೆದಾಡಿ ಸಾಕಾಗಿ ಹೋಗಿರುತ್ತಾರೆ. ದುಡಿದ ಹಣವನ್ನು ಕೋರ್ಟ್‍ಗೆ ಖರ್ಚು ಮಾಡಿ ನಿರಾಶೆ ಅನುಭವಿಸುತ್ತಾರೆ. ಅಂತಹವರು ಲೋಕ್ ಅದಾಲತ್‍ನ ಪ್ರಯೋಜನಪಡೆಯಬೇಕು. ರಾಜೀ ಸಂಧಾನಕ್ಕೆ ಬರುವಾಗ ಇಬ್ಬರು ಮುಖ ದೂರ ಮಾಡಿಕೊಂಡಿರುತ್ತಾರೆ. ಇತ್ಯರ್ಥವಾದ ಮೇಲೆ ಪರಸ್ಪರ ನಗುಮುಖದಿಂದಲೇ ತೆರಳುತ್ತಾರೆ. ಆದ್ದರಿಂದ ಈ ಬಗ್ಗೆ ವ್ಯಾಪಕ ಅರಿವು ಮೂಡಿಸಬೇಕಾಗಿದೆ ಎಂದರು.
   ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ನ್ಯಾಯಾಂಗ ಇಲಾಖೆಯ ಅಭಿವೃದ್ಧಿ ಅವಲಂಬಿಸಿದ್ದು, ಈ ಎರಡೂ ಸರ್ಕಾರಗಳು ಸಮಾಜದಲ್ಲಿ ಪ್ರಮುಖ ಕೆಲಸ ನಿರ್ವಹಿಸುತ್ತಿರುವ ನ್ಯಾಯಾಲಯಗಳು ಹಾಗೂ ನ್ಯಾಯಾಂಗ ಇಲಾಖೆಗೆ ಅಗತ್ಯವಿರುವ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸುವ ಜವಾಬ್ದಾರಿ ಹೊಂದಿವೆ. ನಿಗದಿತ ಸಮಯದಲ್ಲಿ ಕಾಮಗಾರಿಗಳು ಪೂರ್ಣಗೊಂಡರೆ ಯೋಜನೆಯ ಉದ್ದೇಶ ಸಫಲವಾದಂತೆ. ಕಟ್ಟಡಗಳ ನಿರ್ಮಾಣದ ಜೊತೆಯಲ್ಲಿ ನಿರ್ವಹಣೆಯು ಮುಖ್ಯ ಪಾತ್ರವಹಿಸುತ್ತದೆ ಎಂದು ಹೇಳಿದರು.
     ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಉಸ್ತುವರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು  ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನ್ಯಾಯಾಂಗ ಪ್ರಮುಖವಾದದ್ದು. ಇತ್ತೀಚೆನ ದಿನಗಳಲ್ಲಿ ಸಾಕಷ್ಟು ಸುಧಾರಣೆ ತಂದಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ತೀರಾ ಹಿಂದುಳಿದ ಜನರಿಗೆ ನೆರವಾಗಲು ವಿಶೇಷ ಅನುಕೂಲ ಮಾಡಿಕೊಟ್ಟಿದೆ ಎಂದರು.
    ಲೋಕ ಅದಾಲತ್ ಮಾದರಿಯಲ್ಲಿ ಪಿಂಚಣಿ ಅದಾಲತ್, ಕಂದಾಯ ಅದಾಲತ್ ಆರಂಭಿಸಿದ ಬಳಿಕ ಸಾಕಷ್ಟು ಯಶಸ್ವಿಯಾಗಿದೆ. ಹಲವು ವರ್ಷದಿಂದ ಖಾತೆ, ಪಹಣಿ ದಾಖಲೆಗಾಗಿ ಅಲೆದಾಡುತ್ತಿದ್ದರು. ರಾಜ್ಯದಲ್ಲಿ 1.61 ಕೋಟಿ ಆರ್‍ಟಿಸಿ ಇದ್ದು, ಅದರಲ್ಲಿ ಕೈಬರಹದಿಂದಾಗಿ ಶೇ.50ರಷ್ಟು ದೋಷದಿಂದ ಕೂಡಿತ್ತು. ಎಲ್ಲವನ್ನು ಕಂಪ್ಯೂಟರೀಕರಣಗೊಳಿಸಿ ಸರಿಪಡಿಸಲಾಗಿದೆ. ಪಿಂಚಣಿ ಅದಾಲತ್ ಶುರು ಮಾಡಿದ ಮೇಲೆ ಫಲಾನುಭವಿಗಳು ತಹಸೀಲ್ದಾರ್ ಕಚೇರಿಗೆ ಅಲೆಯುವುದು ತಪ್ಪಿದೆ ಎಂದು ಹೇಳಿದರು.
     ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಶೋಕ ಜಿ. ನಿಜಗಣ್ಣವರ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಸ್.ಮುದಗಲ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಸಿ.ಎಂ.ಜಗದೀಶ್, ಅಪ್ಪಾಜಿಗೌಡ ಮತ್ತು ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರ ಸಿ.ಸತ್ಯನಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

                                          ಸ್ವಚ್ಫತಾ ಅಭಿಯಾನಕ್ಕೆ ಚಾಲನೆ
     ಮೈಸೂರು,ಜ.3-ಸೇವನೆಯಿಂದ ಸುಮಾರು 15ಕ್ಕೂ ಹೆಚ್ಚು ಜಾನುವಾರುಗಳು ಮರಣ ಹೊಂದಿರುತ್ತವೆ ಎಂಬುದಾಗಿ ಪತ್ರಿಕೆಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಪಶುಪಾಲನಾ ಇಲಾಖಾವತಿಯಿಂದ ಇಂದು ಮೈಸೂರು-ನಂಜನಗೂಡು ಮುಖ್ಯ ರಸ್ತೆಯಿಂದ ಉತ್ತನಹಳ್ಳಿಗೆ ಹೋಗುವ ರಸ್ತೆಯ ಅಸುಪಾಸಿನಲ್ಲಿ ಹಮ್ಮಿಕೊಳ್ಳಲಾಗಿದ್ದ ‘’ಸ್ವಚ್ಛತಾ ಅಭಿಯಾನ’’ ಅಭಿಯಾನಕ್ಕೆ ಜಿಲ್ಲಾ ಪಂಚಾಯತ್‍ನ ಸಾಮಾನ್ಯ ಸ್ಧಾಯಿ ಸಮಿತಿ ಅಧ್ಯಕ್ಷರಾದ ಪಟೇಲ್ ಜವರೇಗೌಡ, ಅವರು ಚಾಲನೆ ನೀಡಿದರು.
    ಇದೇ ಸಂದರ್ಭದಲ್ಲಿ ಜಿಲ್ಲೆಯ ಪಶುಪಾಲನಾ ಇಲಾಖೆಯ ಜಂಟಿ ನಿರ್ದೇಶಕರು, (ರಾಜ್ಯ ವಲಯ) ಉಪ ನಿರ್ದೇಶಕರು, ಅಧಿಕಾರಿಗಳು ಹಾಗೂ ಮೈಸೂರು ತಾಲ್ಲೂಕಿನ ಎಲ್ಲಾ ವೃಂದದವರು  ಮತ್ತು ಹೊಸಹುಂಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ವರ್ಗದವರೆಲ್ಲಾರೂ ಸೇರಿ ಸುಮಾರು 200ಕ್ಕೂ ಅಧಿಕ ಮಂದಿ ಸದರಿ ‘’ಸ್ವಚ್ಛತಾ ಅಭಿಯಾನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಸದರಿ ಕಾರ್ಯಕ್ರಮವು  ಯಶಸ್ವಿಗೊಳಿಸಲು ಕಾರಣೀಭೂತರಾದರು.

ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಅರ್ಜಿ ಆಹ್ವಾನ
    ಮೈಸೂರು,ಜ.3.-ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪದಲ್ಲಿರುವ ಡುಂಗ್ರಿಗರಾಸಿಯಾ ಕಾಲೋನಿಯ ಅಲೆಮಾರಿ ನಿವಾಸಿ ಗ್ರಂಥಾಲಯದಲ್ಲಿ ಖಾಲಿ ಇರುವ ಮೇಲ್ವಿಚಾರಕ ಹುದ್ದೆಯನ್ನು ಗೌರವ ಸಂಭಾವನೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸದರಿ ಹುದ್ದೆಯು ಪರಿಶಿಷ್ಟ ಪಂಗಡ ವರ್ಗಕ್ಕೆ ಮೀಸಲಿರುತ್ತದೆ.
   ಆಯ್ಕೆಯಾದ ಅಭ್ಯರ್ಥಿಗೆ ರೂ. 2,500/- ಗೌರವ ಸಂಭಾವನೆ ನೀಡಲಾಗುವುದು. ಆಸಕ್ತರು ನಿಗಧಿತ ಅರ್ಜಿಯನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಜನವರಿ 31 ರೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2425875 ಯನ್ನು ಸಂಪರ್ಕಿಸುವುದು.
ಸರ್ಕಾರಿ ಶಾಲೆ ನಿವೃತ್ತ ಶಿಕ್ಷಕರ ನಿಯೋಜನೆ
ಮೈಸೂರು,ಜ.3.ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೈದ್ಯಕೀಯ ರಜೆ, ಅನಧಿಕೃತ ಗೈರು ಹಾಜರಿ, ದೀರ್ಘಕಾಲಿಕ ರಜೆಯ ಅವಧಿಯಲ್ಲಿ ನಿವೃತ್ತ ಶಿಕ್ಷಕರನ್ನು ಮಾತ್ರ ತೆಗೆದುಕೊಳ್ಳಲು ಹಾಗೂ ಕರ್ತವ್ಯ ನಿರ್ವಹಿಸಿದ ದಿನವೊಂದಕ್ಕೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರೂ. 100/- ಗಳು ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ರೂ. 150/-ಗಳನ್ನು ನೀಡಲಾಗುವುದು.
ಆಸಕ್ತ ಸರ್ಕಾರಿ ಶಾಲೆಗಳ ನಿವೃತ್ತ ಶಿಕ್ಷಕರು ಸಂಬಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 0821-2490025ನ್ನು ಸಂಪರ್ಕಿಸಬಹುದು.

No comments:

Post a Comment