ರಾಜ್ಯಮಟ್ಟದ ನೆಟ್ ಬಾಲ್ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಶಿಲ್ಪ ನಾಗ್ ರವರಿಂದ ವಿದ್ಯುಕ್ತ ಚಾಲನೆ
ಚಾಮರಾಜ ನಗರ, ಡಿಸೆಂಬರ್ 12 (ಸಂಜೆ ಮಿತ್ರ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ನೆಟ್ ಬಾಲ್ ಅಸೊಸಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ 14 ಮತ್ತು 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ರಾಜ್ಯಮಟ್ಟದ ಮೂರು ದಿನಗಳ ನೆಟ್ ಬಾಲ್ ಪಂದ್ಯಾವಳಿಗೆ ಇಂದು ನಗರದಲ್ಲಿ ಚಾಲನೆ ದೊರೆಯಿತು.
ನಗರದ ಡಾ. ಬಿ.ಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದಿನಿಂದ ಡಿಸೆಂಬರ್ 14ರವರೆಗೆ ನಡೆಯಲಿರುವ ನೆಟ್ ಬಾಲ್ ಪಂದ್ಯಾವಳಿಗೆ ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ ಅವರು ಚೆಂಡು ಎಸೆಯುವ ಮೂಲಕ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸಮಾರಂಭ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ನೆಟ್ ಬಾಲ್ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಾಗಿದ್ದು, ಇದನ್ನು ಆಡುವುದೇ ಒಂದು ರೋಮಾಂಚನಕಾರಿ. 128 ವರ್ಷಗಳ ಹಿಂದೆ ಇಂಗ್ಲೇಡ್ ನಲ್ಲಿ ಆರಂಭವಾಯಿತು. ನೆಟ್ ಬಾಲ್ ಅಸೋಸಿಯೇಷನ್ ನಲ್ಲಿ 2 ಕೋಟಿ ಸದಸ್ಯರು ಇದ್ದಾರೆ ಎಂಬುದು ಗಮನಾರ್ಹ ಎಂದರು.
ಜಿಲ್ಲಾ ಕೇಂದ್ರದಲ್ಲಿ ಆಯೋಜನೆಯಾಗಿರುವ ನೆಟ್ ಬಾಲ್ ಪಂದ್ಯಾವಳಿಯಲ್ಲಿ ರಾಜ್ಯದ 25 ಜಿಲ್ಲೆಗಳಿಂದ 1200 ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಕ್ರೀಡಾ ಮನೋಭಾವದಿಂದ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡುವ ಮೂಲಕ ಕೀರ್ತಿ ತರಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹಾರೈಸಿದರು.
ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ ಅವರು ಮಾತನಾಡಿ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ರಾಜ್ಯಮಟ್ಟದ ನೆಟ್ ಬಾಲ್ ಪಂದ್ಯಾವಳಿ ಆಯೋಜನೆ ಮಾಡಿರುವುದು ಹೆಮ್ಮೆಯ ಸಂಗತಿ. ಆತಿಥ್ಯ ವಹಿಸಿರುವ ನಮ್ಮ ಜಿಲ್ಲೆಯಲ್ಲಿ ಕ್ರೀಡಾ ಸ್ಪರ್ಧಿಗಳಿಗೆ ಯಾವುದೇ ಕೊರತೆಯಾಗದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕಿದೆ. ಕ್ರೀಡೆಯಲ್ಲಿ ಭಾಗವಹಿಸಿರುವ ಮಕ್ಕಳು ಸ್ಪರ್ಧಾ ಮನೋಭಾವದಿಂದ ಭಾಗವಹಿಸಬೇಕು ಎಂದರು.
ಜಿಲ್ಲಾ ನೆಟ್ ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀನಿವಾಸ್ ಪ್ರಸಾದ್ ಅವರು ಮಾತನಾಡಿ ಯಾವುದೇ ಕ್ರೀಡಾಕೂಟ ನಡೆಯಬೇಕಾದರೆ ಎಲ್ಲರ ಸಹಕಾರ ಅಗತ್ಯ. ವಿವಿಧ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟಗಳಿಗೆ ಹೆಚ್ಚಿನ ಅನುದಾನ ಅಗತ್ಯವಿದೆ. ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕಿದೆ ಎಂದರು.
ಜಿಲ್ಲಾ ಪಂಚಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಸ್. ಚಂದ್ರಪಾಟೀಲ್, ಡಯಟ್ ಪ್ರಾಂಶುಪಾಲರಾದ ಕಾಶಿನಾಥ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಆರ್. ಶಂಕರ್, ಜಿಲ್ಲಾ ನೆಟ್ ಬಾಲ್ ಅಸೋಸಿಯೇಷನ್ ನ ಗೌರವ ಅಧದ್ಯಕ್ಷರದ ನರ್ಗೀಸ್ ಬಾನು, ಜಿಲ್ಲ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಶ್ವನಾಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ. ಸುರೇಶ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


